ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಮನ್ ಕಲ್ಯಾಣ್ಪುರ್


ಸುಮನ್ ಕಲ್ಯಾಣ್ಪುರ್


ಸುಮನ್ ಹೆಮ್ಮಾಡಿ ಎಂಬ ಹೆಸರಿನ ಕನ್ನಡಿಗರ ಮಗಳಾದ ಸುಮನ್ ಕಲ್ಯಾಣ್ಪುರ್ ಭಾರತೀಯ ಚಿತ್ರರಂಗ ಕಂಡ ಮಹಾನ್ ಹಿನ್ನೆಲೆ ಗಾಯಕಿ. ಬಹುತೇಕವಾಗಿ ಲತಾ ಮಂಗೇಶ್ಕರ್ ಅವರ ಧ್ವನಿಯನ್ನು ಹೋಲುತ್ತಿದ್ದ ಅವರ ಧ್ವನಿಯಲ್ಲಿ ಮೂಡಿದ ಅನೇಕ ಹಾಡುಗಳನ್ನು ಜನ ಲತಾ ಹಾಡಿದ್ದು ಎಂದೇ ಕಲ್ಪಿಸುವುದಿದೆ.  

1960-70ರ ದಶಕದ ಪ್ರಸಿದ್ಧ ಹಿನ್ನೆಲೆ ಗಾಯಕಿಯಾಗಿದ್ದ ಸುಮನ್ ಕಲ್ಯಾಣ್ಪುರ್  ಅವರ ಸಾಧನೆ ಚಿತ್ರರಂಗದ ಶ್ರೇಷ್ಠ ಹಿನ್ನೆಲೆಗಾಯಕರ ಸಾಲಿನದ್ದೆಂದು ಗೌರವ ಪಡೆದಿದೆ.  ಹಿಂದೀ, ಕನ್ನಡ, ಮರಾಠಿ, ಕೊಂಕಣಿ, ಭಾಷೆಗಳೇ ಅಲ್ಲದೆ ಅಸ್ಸಾಮಿ, ಗುಜರಾಥಿ, ಮೈಥಿಲಿ, ಭೋಜ್ಪುರಿ, ರಾಜಾಸ್ಥಾನಿ, ಬೆಂಗಾಲಿ, ಒಡಿಯಾ ಮತ್ತು ಪಂಜಾಬಿ ಮುಂತಾದ  ಭಾಷೆಗಳಲ್ಲೂ ಅವರ ಗಾಯನ ಹರಿದಿದೆ. ಅವರು ಹಾಡಿರುವ ಒಟ್ಟು ಚಿತ್ರಗೀತೆಗಳ ಸಂಖ್ಯೆ 857.

ಸುಮನ್ ಹೆಮ್ಮಾಡಿ 1937ರ ಜನವರಿ 28ರಂದು ಢಾಕ್ಕಾದಲ್ಲಿ ಜನಿಸಿದರು. ತಂದೆ ಶಂಕರರಾವ್ ಹೆಮ್ಮಾಡಿ ಮಂಗಳೂರಿನ ಮೂಲದ ಸಾರಸ್ವತ ಕುಟುಂಬಕ್ಕೆ ಸೇರಿದವರಾಗಿದ್ದರು.  ಹೆಮ್ಮಾಡಿ ಎಂಬುದು ಕುಂದಾಪುರ ತಾಲ್ಲೂಕಿನ ಒಂದು ಹಳ್ಳಿ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ಅಧಿಕಾರಿಗಳಾಗಿದ್ದ ಶಂಕರರಾವ್ ಹೆಮ್ಮಾಡಿ ಅವರು ಸ್ವಾತಂತ್ರ್ಯಪೂರ್ವದಲ್ಲಿ ಬಹುಕಾಲ ಢಾಕಾದಲ್ಲಿ ಕೆಲಸ ಮಾಡಿದರು. ಸುಮನ್ ಅವರ ತಾಯಿಯ ಹೆಸರು ಸೀತಾ ಹೆಮ್ಮಾಡಿ.  ಈ ದಂಪತಿಗಳ 5 ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗು ಕುಟುಂಬದಲ್ಲಿ ಸುಮನ್ ಹಿರಿಯರು. 1943ರಲ್ಲಿ ಈ ಕುಟುಂಬ ಮುಂಬೈಗೆ ಬಂತು.

ಕೊಲಂಬಿಯಾ ಹೈಸ್ಕೂಲಿನಲ್ಲಿ ಓದಿದ ನಂತರ ಮುಂಬೈನ ಪ್ರತಿಷ್ಠಿತ ಜೆ ಜೆ ಕಲಾಶಾಲೆಯ ವಿದ್ಯಾರ್ಥಿಯಾಗಿದ್ದ ಸುಮನ್ ಹೆಮ್ಮಾಡಿ, ಕಲೆಯ ಜೊತೆಗೆ ಸಂಗೀತವನ್ನು ಪಂಡಿತ್ ಕೇಶವರಾವ್ ಭೋಲೆ ಅವರಿಂದ ಕಲಿಯತೊಡಗಿದರು.  ಸಂಗೀತದಲ್ಲಿ ಆಸಕ್ತಿ ಹೆಚ್ಚುತ್ತಾ ಹೋಗಿ ಅಬ್ದುಲ್ ರೆಹ್ಮಾನ್ ಮತ್ತು ಗುರೂಜಿ ಮಾಸ್ಟರ್ ನವರಂಗ್ ಅವರಲ್ಲಿ ಹೆಚ್ಚಿನ ಸಂಗೀತಾಭ್ಯಾಸ ನಡೆಸಿದರು. ಸುಮನ್ ಅವರ ತಂಗಿ ಶ್ಯಾಮಾ ಹೆಮ್ಮಾಡಿ ಸಹಾ ಗಾಯಕಿಯಾಗಿದ್ದರು.

ಸುಮನ್ ಹೆಮ್ಮಾಡಿ ಅವರು ಮುಂಬೈ ಮೂಲದ ವ್ಯಾಪರಸ್ಥರಾದ ರಮಾನಂದ್ ಕಲ್ಯಾಣ್ಪುರ್ ಅವರನ್ನು ವಿವಾಹವಾಗಿ ಸುಮನ್ ಕಲ್ಯಾಣ್ಪುರ್ ಎಂದಾದರು.

ತಲತ್ ಮಹಮೂದ್ ಅವರು ಸುಮನ್  ಅವರ ಗಾಯನ ಕೇಳಿ ಚಿತ್ರರಂಗದ ಮಂದಿಗೆ ಪರಿಚಯಿಸಿದರು. ಸುಮನ್ ಕಲ್ಯಾಣ್ಪುರ್ 1954ರಲ್ಲಿ 'ಮಂಗು' ಚಿತ್ರಕ್ಕೆ ಹಾಡಿದ ನಂತರ ನೌಷಾದ್ ಸಂಗೀತ ಸಂಯೋಜನೆಯ 'ದರ್ವಾಜಾ' ಚಿತ್ರಕ್ಕೆ 5 ಹಾಡು ಹಾಡಿದರು. 'ದರ್ವಾಜಾ' ಚಿತ್ರ ಮೊದಲು ತೆರೆಕಂಡಿತು. ಅದೇ ವರ್ಷ ಓ ಪಿ ನಯ್ಯರ್ ಅವರ ಪ್ರಸಿದ್ಧ ಸಂಯೋಜನೆಯ  'ಮೊಹಬ್ಬತ್ ಕರ್ ಲೊಅಜಿ ಕಿಸ್ನೆ ರಕಾ ಹೈ' ಗೀತೆಗೆ ಮಹಮ್ಮದ್ ರಫಿ ಮತ್ತು ಗೀತಾ ದತ್ ಅವರೊಂದಿಗೆ ಧ್ವನಿಯಾದರು. ಮುಂದೆ ಮಿಯಾನ್ ಬಾತ್ ಏಕ್ ರಾತ್ ಕಿ, ದಿಲ್ ಏಕ್ ಮಂದಿರ್, ದಿಲ್ ಹೈ ತೊ ಹೈ, ಶಾಗೂನ್, ಜಹಾನ್ ಅರ, ಸಂಜ್ಹ್ ಔರ್ ಸವೇರಾ, ನೂರ್ ಜಹಾನ್, ಸಾಥಿ, ಪಾಕೀಜಾ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ಅನೇಕ ಶ್ರೇಷ್ಠ ಸಂಗೀತ ನಿರ್ದೇಶಕರ ನಿರ್ದೇಶನದಲ್ಲಿ ಸುಮನ್  ಹಾಡಿದರು. ಎಲ್ಲಾ ಹಿನ್ನೆಲೆ ಗಾಯಕರೊಂದಿಗೆ ಹಾಡಿದ ಸುಮನ್ ಕಲ್ಯಾಣ್ಪುರ್ ಮಹಮ್ಮದ್ ರಫಿ ಅವರೊಂದಿಗೇ ಸುಮಾರು 140 ಗೀತೆಗಳನ್ನು ಹಾಡಿದರು. ಚಿತ್ರ ಸಂಗೀತವಲ್ಲದೆ ಅನೇಕ ಭಕ್ತಿಗೀತೆಗಳನ್ನೂ ಹಾಡಿದರು.

ಸುಮನ್ ಕಲ್ಯಾಣ್ಪುರ್ ಕನ್ನಡದಲ್ಲಿ ಹಾಡಿದ ಕಲ್ಪವೃಕ್ಷ ಚಿತ್ರದ 'ತಲ್ಲಣ ನೂರು ಬಗೆ', ಮನ್ನಾಡೆ ಅವರ 'ಜಯತೆ ಜಯತೆ' ಗೀತೆಗೆ ಸಹಧ್ವನಿ ಮತ್ತು ಕಲಾವತಿ ಚಿತ್ರದ ‘ಒಡನಾಡಿ ಬೇಕೆಂದು’ ಗೀತೆಗಳು ಸಹಾ ನೆನಪಾಗುತ್ತವೆ.

ಸುಮನ್ ಕಲ್ಯಾಣ್ಪುರ್ ಅವರಿಗೆ ಪದ್ಮಭೂಷಣ ಪ್ರಶಸ್ತಿಮೂರು ಬಾರಿ ಸುರ್ ಸಿಂಗಾರ್ ಸಂಸದ್ ಪ್ರಶಸ್ತಿ, ಮಹಾರಾಷ್ಟ್ರ ಸರ್ಕಾರದ ಲತಾ ಮಂಗೇಶ್ಕರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

ಹಿರಿಯರಾದ ಸುಮನ್ ಕಲ್ಯಾಣ್ಪುರ್ ಅವರ ಹಿರಿತನದ ಬದುಕು ಹಿತಕರವಾಗಿರಲಿ.

On the birthday of great playback singer Suman Kalyanpur

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ