ತೋಂಟದಾರ್ಯ ಸಂಪಿಗೆ
ತೋಂಟದಾರ್ಯ ಸಂಪಿಗೆ
ಪ್ರೊ. ಎಸ್. ಆರ್. ತೋಂಟದಾರ್ಯ ಅವರು ಸಂಪಿಗೆ ತೋಂಟದಾರ್ಯ ಎಂದು ನಾಡಿನ ವಿಜ್ಞಾನ, ಸಾಹಿತ್ಯ, ರಂಗಭೂಮಿ, ಡಾಕ್ಯುಮೆಂಟರಿ ಚಿತ್ರಗಳ ಲೋಕದಲ್ಲಿ ಪ್ರಖ್ಯಾತ ಹೆಸರು.
ಸಂಪಿಗೆ ತೋಂಟದಾರ್ಯ ಅವರು 1944ರ ಫೆಬ್ರುವರಿ 18ರಂದು (ದಾಖಲೆಗಳಲ್ಲಿ 19.5.1943) ತುಮಕೂರು ಜಿಲ್ಲೆ ಸಂಪಿಗೆಯಲ್ಲಿ ಜನಿಸಿದರು. ಆಚಾರ್ಯ ಬಿಎಂಶ್ರೀ ಅವರು ಜನಿಸಿದ ಊರಿದು.
ಸಂಪಿಗೆ, ತುಮಕೂರು ಮತ್ತು ಧಾರವಾಡಗಳಲ್ಲಿ ತೋಂಟದಾರ್ಯ ಅವರ ವಿದ್ಯಾಭ್ಯಾಸ ನಡೆಯಿತು.
ಸಂಪಿಗೆ ತೋಂಟದಾರ್ಯ ಅವರು 1964ರಲ್ಲಿ ತುಮಕೂರು ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ, 1967ರಿಂದ ಮೊದಲ್ಗೊಂಡಂತೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ, ಒಟ್ಟು ಸುಮಾರು 35 ವರ್ಷಗಳ ಕಾಲ ಶಿಕ್ಷಣ ಕೇತ್ರದಲ್ಲಿ ಸೇವೆ ಸಲ್ಲಿಸಿದರು. ಬೋಧನೆ ಮತ್ತು ಸಂಶೋಧನೆಗಳನ್ನು ಜವಾಬ್ದಾರಿಯುತವಾಗಿ ಕೈಗೊಂಡರು. ಅವರು ತಮ್ಮ ಗುರು ಉಮಾಕಾಂತರಿಂದ ಪ್ರಭಾವಿತರಾಗಿ, ತಮ್ಮ ಸಂಶೋಧನೆಗಳನ್ನು ಪಿಎಚ್.ಡಿ ಪದವಿ ಗಳಿಕೆಗೆ ಮಾಡಹೋಗದೆ, ತಮ್ಮ ಬೋಧನೆಗಳಿಗೆ ಬೇಕಾದ ಅರಿವಿನ ಆಳದ ಗಳಿಕೆ ಮತ್ತು ತಮ್ಮ ವಿದ್ಯಾರ್ಥಿಗಳಿಗೆ ಸಮರ್ಥ ಮಾರ್ಗದರ್ಶನ ನಿಡುವ ನಿಟ್ಟಿನಲ್ಲಿ ಕೇಂದ್ರೀಕರಿಸಿದರು. ಇವರು ಸುಮಾರು 35 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರತಿಷ್ಢಿತ ಸಂಶೋಧನಾ ಜರ್ನಲ್‍ಗಳಲ್ಲಿ ಪ್ರಕಟಿಸಿದ್ದಾರೆ.
ತೋಂಟದಾರ್ಯ ಅವರದು ಸಮುದಾಯದ ಒಳಿತಿಗಾಗಿ ದುಡಿಯುವ ಮನಸ್ಸು. ಅವರು ವಿಜ್ಞಾನದ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಮತ್ತು ವೈಜ್ಞಾನಿಕ ಚಟವಟಿಕೆಗಳಲ್ಲಿ ಕ್ರಿಯಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡು ಬಂದರು. ಭಾರತ ಜ್ಞಾನ ವಿಜ್ಞಾನ ಸಮಿತಿ ಉಪಾಧ್ಯಕ್ಷರಾಗಿ , ಸಮಿತಿಯ ಜ್ಞಾನ ವಿಜ್ಞಾನ ಜಾಥಾ ದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದರು. ಸಹ ಮನಸ್ಕರೊಂದಿಗೆ ರ್‍ಯಾಡಿಕಲ್
ಹ್ಯೂಮಾನಿಸ್ಟ್ ಅಸೋಸಿಯೇಷನ್ ಸಂಘ ಸ್ಥಾಪಿಸಿದರು. ಸಿಲೋನಿನ ಡಾ.ಕೋವೂರ ಅವರನ್ನೂ ಅವರ ತಂಡವನ್ನೂ ಧಾರವಾಡ ಹುಬ್ಬಳ್ಳಿಗಳಿಗೆ ಕರೆಸಿ ಪವಾಡ ಪುರುಷರ ಮಾಂತ್ರಿಕತೆ ವಿರುದ್ಧ ಭಾಷಣ ಪ್ರದರ್ಶನ ಏರ್ಪಡಿಸಿದ್ದರು. ಅಂತೆಯೇ ಅವರಿಗೆ ಜಯಪ್ರಕಾಶ ನಾರಾಯಣ ಅವರ ಕುರಿತು ಅಪಾರ ಪ್ರೀತಿ. ಎಪ್ಪತ್ತರ ದಶಕದ ಆದಿಯಿಂದ ಪ್ರಾರಂಭವಾಗಿ ಕೊನೆವರೆಗೂ ಸಾಹಿತ್ಯ ರಂಗಭೂಮಿ ಸಾಮಾಜಿಕ, ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಶೂದ್ರ ಬರಹಗಾರ ಕಲಾವಿದರ ಒಕ್ಕೂಟದ ಸದಸ್ಯರಾಗಿದ್ದ ಇವರು, ಮುಂದೆ ಎಮ್. ಡಿ. ನಂಜುಂಡಸ್ವಾಮಿ ನೇತೃತ್ವದ ನವ ನಿರ್ಮಾಣ ಸಮಿತಿಯ ಸದಸ್ಯರಾಗಿ ಜೆ.ಪಿ. ಚಳುವಳಿಯೂ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಜೆ.ಪಿ.ಯವರ ವಿಚಾರ ಧಾರೆಗಳಿಂದ ಪ್ರಭಾವಿತರಾಗಿದ್ದ ಇವರು, ಆಗ ಧಾರವಾಡದಲ್ಲಿ ನಡೆದ ಜೆ.ಪಿ. ಅವರ ಸಾರ್ವಜನಿಕ ಸಭೆಗೆ, ಜೆ.ಪಿ. ಅವರನ್ನು ಸಮಿತಿ ಪ್ರತಿನಿಧಿಯಾಗಿ ಆಹ್ವಾನಿಸಲು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೋಗಿ ಮಾಲೆ ಹಾಕಿ ಸ್ವಾಗತಿಸಿದ್ದು ಇವರ ಬದುಕಿನಲ್ಲಿ ಒಂದು ಮರೆಯಲಾಗದ ಸಂಗತಿಯಾಯಿತು. ಅದೇ ವರ್ಷ ಜನಿಸಿದ ತಮ್ಮಮಗನಿಗೆ ಜಯಪ್ರಕಾಶ ಎಂದು ಹೆಸರಿಟ್ಟು ತಮ್ಮ ಪ್ರೀತಿ ಅಭಿಮಾನವನ್ನು ತೋರಿದ್ದರು. ಹಾಗಾಗಿ ಅವರ ನಾಟಕಗಳಲ್ಲಿ, ಬರವಣಿಗೆಗಳಲ್ಲಿ ಜೆ.ಪಿ. ಅವರ ವಿಚಾರಧಾರೆಯ ಪ್ರಭಾವ ಹೆಚ್ಚಾಗಿದೆ.
ತೋಂಟದಾರ್ಯ ಅವರಿಗೆ ರಂಗ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ. 1968ರಲ್ಲಿ ಡಾ. ಬಿ. ಎನ್. ವಿಶ್ವನಾಥ ಅವರೊಡಗೂಡಿ 'ಕಲಾದೇಗುಲ' ನಾಟಕ ತಂಡವನ್ನು ಹುಟ್ಟುಹಾಕಿ ನಿರಂತರವಾಗಿ ನಾಟಕ ಪ್ರಯೋಗಗಳ ಮೂಲಕ ರಂಗಾಸಕ್ತರ ಸಮುದಾಯವನ್ನು ಪೋಷಿಸಿ ಬೆಳೆಸಿದರು. ಬಿ. ವಿ. ಕಾರಂತರ ಪ್ರಭಾವದಿಂದಾಗಿ 'ಅಂತರಂಗ' ನಾಟಕ ಕೂಟವನ್ನು ಶಾಂತಿನಾಥ ದೇಸಾಯಿ ಅವರ ನೇತೃತ್ವದಲ್ಲಿ ಹುಟ್ಟುಹಾಕಿದವರಲ್ಲಿ ಮತ್ತು ಮುಂದುವರೆಸಿದ ಪ್ರಮುಖರಲ್ಲಿ ತೋಂಟದಾರ್ಯ ಅವರೂ ಒಬ್ಬರು.
ಆ ಮೂಲಕ ಚಂದ್ರಶೇಖರ ಪಾಟೀಲ, ಸಿದ್ದಲಿಂಗಪಟ್ಟಣ ಶೆಟ್ಟಿ, ಮುರಿಗೆಪ್ಪ ಸೇರಿದಂತೆ ಅನೇಕ ಉತ್ಸಾಹಭರಿತರ ಜೊತೆಗಾರರಾಗಿ ಕೆಲಸ ಮಾಡಿದರು. ಅನೇಕ ಹೊಸಬಗೆಯ - ಅಸಂಗತ - ನಾಟಕಗಳನ್ನು ನಿರ್ದೇಶಿಸಿದರು. ಕಲಾದೇಗುಲದ ಮೂಲಕ ರಂಗಾಸಕ್ತರ ದೊಡ್ಡ ಗುಂಪೇ ನಿರ್ಮಾಣವಾಗುವ ಹಾಗೆ ಮಾಡಿದರು. ಧಾರವಾಡ ಹುಬ್ಬಳ್ಳಿಯ ರಂಗಕರ್ಮಿಗಳಲ್ಲಿ ಅಪಾರ ಉತ್ಸಾಹ ಮೂಡಿಸಿದರು. ಆಕಾಶವಾಣಿ ನಾಟಕಗಳ ರಾಷ್ಟ್ರೀಯ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರಥಮ ಪ್ರಶಸ್ತಿ ಪಡೆದ ನಾಟಕಗಳಲ್ಲಿ ತೋಂಟದಾರ್ಯ ಮುಖ್ಯ ಪಾತ್ರದಲ್ಲಿ ಇದ್ದರು. ಒಂದು ನಾಟಕದಲ್ಲಿ ಕೆ. ಎಸ್. ಅಶ್ವಥ್ ಇವರೊಂದಿಗೆ ನಟಿಸಿದ್ದರು. ಈ ನಾಟಕಗಳನ್ನು ಯಮುನಾ ಮೂರ್ತಿ ನಿರ್ದೇಶಿಸಿದ್ದರು.
ತೋಂಟದಾರ್ಯ ಅವರು ನಾಟಕ ರಂಗದಲ್ಲಿ ನಿರ್ದೇಶಕರಾಗಿ ನಾಲ್ಕು ದಶಕಗಳ ಕಾಲದಿಂದ ದುಡಿದಿದ್ದಾರೆ. 1995ರಲ್ಲಿ ಅವರಿಗೆ ಕರ್ನಾಟಕ ಸರ್ಕಾರ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿತು. ಅವರನ್ನು 2000-2004 ಅವಧಿಗೆ ನಾಟಕ ಅಕಾಡೆಮಿ ಸದಸ್ಯರನ್ನಾಗಿ ನೇಮಿಸಲಾಗಿತ್ತು.
ತೋಂಟದಾರ್ಯ ಅವರು ಧಾರವಾಡ ಜಿಲ್ಲಾ ಸಂಪೂರ್ಣ ಸಾಕ್ಷರತಾ ಕಾರ್ಯಕ್ರಮದ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿ ಜಿಲ್ಲೆಯಾದ್ಯಂತ ನಡೆಸಿದ ತರಬೇತಿಗಳು ಮತ್ತು ತುಂಬಿದ ಉತ್ಸಾಹ ವಾತಾವರಣ ಸ್ಮರಣೀಯವಾದದ್ದು.
ಪ್ರೊ. ತೋಂಟದಾರ್ಯ ಅವರು ಅನೇಕ ಸಾಕ್ಷ್ಯಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ರಮಣ ಮಹರ್ಷಿಗಳ ಕುರಿತ ಧಾರಾವಾಹಿಗೆ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಇದು ಪ್ರಸಾರಗೊಂಡು ಮೆಚ್ಚುಗೆ ಗಳಿಸಿದ್ದರಿಂದ ಭಾರತದ ಇತರ ಭಾಷೆಗಳಿಗೂ ಡಬ್ ಆಗಿ ಆಯಾ ಭಾಷೆಯ ದೂರದರ್ಶನ ಚಾನೆಲ್‍ಗಳಲ್ಲಿ , ನಂತರ ಖಾಸಗಿ ಚಾನೆಲ್‍ಗಳಲ್ಲಿ ಪ್ರಸಾರವಾಯಿತು. ಹೆಚ್.ಟಿ. ನಾಗೇಂದ್ರ ಅವರು ಇದರ ನಿರ್ದೇಶಕರು. ತೋಂಟದಾರ್ಯ ಅವರು ಪ್ರಸಿದ್ಧ ಚಲನಚಿತ್ರ ಸಂಕಲನಕಾರರಾದ ಎಮ್.ಎನ್.ಸ್ವಾಮಿ ಅವರಿಗಾಗಿ ಚನ್ನಗಿರಿ ತಾಲೂಕಿನ ತಾಲೂಕಿನ ಬಸವನ ಪಟ್ಟಣದ ಶ್ರೀ. ರಾಘವೇಂದ್ರ ಗುರೂಜಿ ಎಂದು ಹೆಸರಾಗಿರುವ ರಾಘವೇಂದ್ರ ರಾವ್ ಅವರ
ಕುರಿತ ಸಾಕ್ಷ್ಯಚಿತ್ರಕ್ಕೆ ವಿಡಿಯೋ ಸ್ಕ್ರಿಪ್ಟ್ , ಸಾಹಿತ್ಯ ರಚಿಸಿದ್ದಾರೆ. ಮೈಸೂರಿನ ಸಿ.ಐ.ಐ.ಎಲ್. ನ ಭಾಷಾ ಭಾರತಿ ಪ್ರಾಜೆಕ್ಟ್ ಅಡಿ ತಯಾರಾಗಿರುವ ಡಜನ್ನಿಗೂ ಹೆಚ್ಚು ಚಿತ್ರಗಳಿಗೆ ವಿಡಿಯೋ ಸ್ಕ್ರಿಪ್ಟ್ ನಿರೂಪಣಾ ಸಾಹಿತ್ಯ ರಚಿಸಿದ್ದಾರೆ. ತುಮಕೂರು ವಿಜ್ಞಾನ ಕೇಂದ್ರದವರಿಗಾಗಿ , ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಹಯೋಗದೊಂದಿಗೆ , ಕಾಲೇಜು ವಿದ್ಯಾರ್ಥಿಗಳನ್ನು ಮೂಲಭೂತ ವಿಜ್ಞಾನ ವಿಷಯಗಳಲ್ಲಿ ಸಂಶೋಧನೆ ಮಾಡಲು ಪ್ರೇರೇಪಿಸುವ ಸಲುವಾಗಿ "ಬೆಂಗಳೂರಿನ ರಾಷ್ಟ್ರೀಯ ವಿಜ್ಞಾನ ಸಂಶೋಧನಾ ಮಂದಿರಗಳು" ಎಂಬ ನಲವತ್ತೈದು ನಿಮಿಷಗಳ ಕನ್ನಡ ಸಾಕ್ಷ್ಯಚಿತ್ರ ಮತ್ತು ಇಂಗ್ಲಿಷ್ ನಲ್ಲಿ ಇದರ ಸಂಕ್ಷಿಪ್ತ ರೂಪ ನಿರ್ಮಿಸಿ ಕೊಟ್ಟಿದ್ದಾರೆ. ಡಾ.ವಿಶ್ವನಾಥ್ ಅವರಿಗಾಗಿ ಬಿ.ಎ.ಎಸ್.ಎಫ್. ಕಂಪೆನಿಯ ಬಾವಿಸ್ಟಿನ್ ಎಂಬ ಭತ್ತದ ಕೀಟನಾಶಕ ಕುರಿತ ಒಂದು ಗಂಟೆ ಅವಧಿಯ ಪ್ರಚಾರ ಸಿನಿಮಾ ಒಂದಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಮಾಡಿಕೊಟ್ಟಿದ್ದು, ಅದನ್ನು ಮೆಚ್ಚಿದ ಕಂಪೆನಿ ಭಾರತದ ವಿವಿಧ ಭಾಷೆಗಳಿಗೆ ಡಬ್ ಮಾಡಿಸಿಕೊಂಡು ಬಳಸಿತು. ಆಪ್ತರಾದ ನಾಗೇಂದ್ರ ಅವರ ಒತ್ತಾಸೆಯ ಮೇರೆಗೆ ವಿವೇಕಾನಂದರ ವಿಚಾರಧಾರೆ ಕುರಿತ ನಾಲ್ಕು ಸಾಕ್ಷ್ಯಚಿತ್ರ ಸರಣಿಗೆ ನಿರೂಪಣಾ ಸಾಹಿತ್ಯ ರಚಿಸಿದ್ದಾರೆ.
ತೋಂಟದಾರ್ಯ ಅವರು ತಮಗೆ ಆಪ್ತರಾಗಿದ್ದ ಕೆ.ವಿ.ಜಯರಾಮ್ ಅವರಿಗೆ ಅಪಾರ ಯಶಸ್ಸು ಕಂಡ 'ಬಾಡದಹೂ' ಚಲನಚಿತ್ರಕ್ಕೆ ಚಿತ್ರಕಥೆ ರಚಿಸಿದರು. ಆದಾಗ್ಯೂ , ಕೆಲವೊಂದು ಪವಾಡ ಸದೃಶ ತೋರ್ಪಡಿಕೆಯ ಅಳವಡಿಕೆಯನ್ನು ಚಿತ್ರ ತಂಡ ಸೇರಿಸಿಕೊಂಡಿದ್ದರಿಂದ, ಅದು ತಮ್ಮ ನಿಲುವುಗಳಿಗೆ ವಿರೋಧವಾಗಿರುವುದರಿಂದ, ತಮ್ಮ ಹೆಸರನ್ನು ಚಿತ್ರದ ಕ್ರೆಡಿಟ್ ಕಾರ್ಡ್ ನಲ್ಲಿ ಸೇರಿಸುವುದನ್ನು ಒಪ್ಪಲಿಲ್ಲ.
ನೊಬೆಲ್ ಪ್ರಶಸ್ತಿ ವಿಜೇತ ಪ್ತೊ. ಎಸ್. ಚಂದ್ರಶೇಖರ್ ಅವರ ಜೀವನ ಚರಿತ್ರೆಯಾದ 'ಚಂದ್ರ' ಕೃತಿಯನ್ನು ಕನ್ನಡಕ್ಕೆ ತಂದ ಕೀರ್ತಿ ತೋಂಟದಾರ್ಯ ಅವರದ್ದು. ಅದನ್ನು ಮೂಲ ಇಂಗ್ಲಿಷಿನಲ್ಲಿ ಪ್ರೊ. ಕೆ.ಸಿ.ವಾಲಿ ಅವರು ಬರೆದಿದ್ದು ಇದು ಚಂದ್ರ ಅವರ ಅಧಿಕೃತ ಜೀವನ ಚರಿತ್ರೆ ಎಂದು ಪರಿಗಣಿತವಾಗಿದೆ. ಇದು ಸುಮಾರು 530 ಪುಟಗಳ ಕನ್ನಡದಲ್ಲಿನ ಅಚ್ಚುಕಟ್ಟಾದ ಹೆಸರಾಂತ ವಿಜ್ಞಾನ ಕೃತಿಯಾಗಿದೆ.
ತೋಂಟದಾರ್ಯ ಅವರು ಅನೇಕ ನಾಟಕಗಳನ್ನು ರಚಿಸಿದ್ದಾರೆ. ಅವರ ನಾಟಕಗಳು ರಂಗದ ಮೇಲೆ ಹೆಚ್ಚು ಬಂದಿಲ್ಲ . ಬಂದ ಕೆಲವು ನಾಟಕಗಳಾದ ಕರೆಯುತಿದೆ ಯುಗವಾಣಿ, ಮನದ ಮುಂದಣ ಆಸೆ, ಭೇಟೆ ನಾಟಕಗಳು ಪ್ರೇಕ್ಷಕರ ವಿಮರ್ಶಕರ ತುಂಬು ಮೆಚ್ವುಗೆ ಪ್ರಶಂಸೆ ಗಳಿಸಿವೆ. ಅವರ ನಾಟಕಗಳು ಕೃತಿಗಳಾಗಿ ಮಹತ್ವದ್ದೆನಿಸಿವೆ . ವಿಜ್ಞಾನ ನಡೆದು ಬಂದ ದಾರಿ ಕುರಿತ 'ಅರಿವಿನ ಪಯಣ' ಕರ್ನಾಟಕ ವಿಶ್ವವಿದ್ಯಾಲಯದ ಎರಡನೆ ಬಿ.ಎಸ್ಸಿ. ತರಗತಿಗೆ ಕನ್ನಡ ಪಠ್ಯವಾಗಿತ್ತು. ಷೇಕ್ಸ್ಪಿಯರನ 'ಮ್ಯಾಕ್‍ಬೆತ್' ನಾಟಕವನ್ನು ರೂಪಾಂತರಿಸಿ 'ಮನದ ಮುಂದಣ ಆಸೆ' ಎಂಬ ಕೃತಿಯಾಗಿ ಬಯಲಾಟ ಶೈಲಿಯಲ್ಲಿ ಕನ್ನಡಕ್ಕೆ ಕೊಟ್ಟಿದ್ದಾರೆ. ಇವರ ಸ್ವತಂತ್ರ ಕೃತಿಯಾದ 'ಕಾಮನಬಿಲ್ಲು' ರಂಗಕ್ಷೇತ್ರದಲ್ಲಿ ಅಪರೂಪ ಎನಿಸಿರುವ ಪತ್ತೇದಾರಿ ನಾಟಕ. ಕರೆಯುತಿದೆ ಯುಗವಾಣಿ (ನರೇಂದ್ರ) ಸ್ವಾಮಿ ವಿವೇಕಾನಂದರ ಸಂದೇಶ ಉಳ್ಳ ಮಹತ್ವದ ನಾಟಕ. 'ಬೆಳಕ ಬಿತ್ತುವ ಬದುಕು' ಮಹಾಭಾರತ ಕಥೆಯಲ್ಲಿ ಬರುವ ಧರ್ಮವ್ಯಾಧನ ಉಪಾಖ್ಯಾನದಿಂದ ಪ್ರೇರಿತಗೊಂಡ ನವಚಿಂತನೆ. ಹಾಗೇ ಇಷ್ಟರಲ್ಲೆ ಪ್ರಕಟವಾಗಲಿರುವ 'ಸುಮಂತನ ಸೇಡು' ನಾಟಕ ಷೇಕ್ಸ್‌ಪಿಯರನ ಹ್ಯಾಮ್ಲೆಟ್ ನಾಟಕದ ರೂಪಾಂತರವಾಗಿದ್ದು ಇದು ಕಂಪೆನಿ ನಾಟಕ ಶೈಲಿಯಲ್ಲಿ ಇದೆ.
ತೋಂಟದಾರ್ಯ ಅವರ ಇತರ ಬರಹಗಳಲ್ಲಿ ತಮಾಷೆ ಸುಳಿ (ಹಾಸ್ಯ ಬರಹಗಳು), ದಾಂಪತ್ಯ ಜೋಕಾಲಿ (ಹಾಸ್ಯ ಪ್ರಹಸನ) ಸೇರಿವೆ. ಅವರು ಪ್ರೊ. ಚಂದ್ರಶೇಖರ್ ನಿಧನರಾದಾಗ, ಮಲ್ಲಿಕಾರ್ಜುನ ಮನಸೂರ ಅವರ ಸಂಗೀತ ಕೇಳಿದಾಗ, ಮನಸೂರರು ಅಗಲಿದಾಗ ಬರೆದ ಕವಿತೆಗಳು ಅವರುಗಳ ಕುರಿತಾದ ದಿವ್ಯ ದೃಷ್ಟಿಯನ್ನೇ ಕಟ್ಟಿ ಕೊಡುವಂತಿವೆ. ಇವರು ಮಕ್ಕಳಿಗೆ ಹಿತವಾಗುವ ಹಾಗೆ, ಹಾಸ್ಯ ರೂಪದಲ್ಲಿ ಎಲ್ಲರಿಗೂ ಇಷ್ಟವಾಗುವ ಹಾಗೆ ಹೀಗೆ ಅನೇಕ ರೂಪದ ಕವಿತೆಗಳನ್ನೂ ಬರೆದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿನ ಸುಧಾರಣೆಗಳ ಕುರಿತಂತೆಯೂ ಸೇರಿ ಅವರ ಅನೇಕ ಚಿಂತನೆಗಳು ಲೇಖನ ರೂಪಲ್ಲಿ ಪ್ರಕಟವಾಗಿವೆ.
ಪ್ರೊ. ತೋಂಟದಾರ್ಯ ಅವರ ಚಿಂತನೆಗಳಲ್ಲಿ ಆಧ್ಯಾತ್ಮ ಮತ್ತು ವಿಜ್ಞಾನಗಳಲ್ಲಿನ ಹಲವು ಸಮಾನ ತತ್ವಗಳು, ಚಲನಚಿತ್ರ ರಂಗ, ನಾಟಕ ರಂಗ, ಸಾಮಾಜಿಕ , ಸಾಹಿತ್ಯ, ಹೀಗೆ ಅನೇಕ ವೈಶಿಷ್ಟ್ಯಗಳ ಕುರಿತಾಗಿ ಅನುಭವಯುಕ್ತ, ಯಾವುದನ್ನೂ ಸುಮ್ಮನೆ ಒಪ್ಪದ, ಅಂತೆಯೇ ಸುಮ್ಮನೆ ಯಾವುದನ್ನೂ ತಿರಸ್ಕರಿಸದ ವಿಶಾಲ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ತಳಹದಿಗಳಿವೆ.
ಜೀವನ ಕೆಲವೊಮ್ಮೆ ಅನಿರೀಕ್ಷಿತ ಕೃಪೆಗಳನ್ನು ಕೆಲವೊಂದು ಹಿರಿಯ ಮನೋಧರ್ಮದ ವ್ಯಕ್ತಿತ್ವಗಳ ಪ್ರೀತಿಯ ರೂಪದಲ್ಲಿ ನಮ್ಮ ಮೇಲೆ ವರ್ಷಿಸುತ್ತದೆ. ನನಗೆ ಸಂದಿರುವ ಅಂತಹ ಕೃಪೆಗಳಲ್ಲಿ ತೋಂಟದಾರ್ಯರ ಆಶೀರ್ವಾದ ಭಾಗ್ಯ ಪ್ರಮುಖವಾದದ್ದು.
ಪೂಜ್ಯ ಸಂಪಿಗೆ ತೋಂಟದಾರ್ಯರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಮಸ್ಕಾರ 🌷🙏🌷
Happy birthday to our great scientist, scholar, writer, playwright Prof. Thontadarya Sampige Sir 🌷🙏🌷
ಕಾಮೆಂಟ್‌ಗಳು