ಒಂದು ಸಂಜೆ
ಮೌನ ತಬ್ಬಿತು ನೆಲವ
ಜುಮ್ಮನೆ..ಪುಳಕಗೊಂಡಿತು ಧಾರಿಣಿ;
ನೋಡಿ ನಾಚಿತು ಭಾನು
ಸೇರಿತು ಕೆಂಪು ಸಂಜೆಯ ಕದಪಲಿ
ಹಕ್ಕಿಗೊರಲಿನ ಸುರತಗಾನಕೆ
ಬಿಗಿಯು ನಸುವೆ ಸಡಿಲಿತು;
ಬೆಚ್ಚಬೆಚ್ಚನೆಯುಸಿರನಂದದಿ
ಗಾಳಿ ಮೆಲ್ಲನೆ ತೆವಳಿತು
ಇರುಳ ಸೆರಗಿನ ನೆಳಲು ಚಾಚಿತು
ಬಾನು ತೆರೆಯಿತು ಕಣ್ಣನು;
ನೆಲವು ತಣಿಯಿತು,ಬೆವರು ಹನಿಯಿತು
ಭಾಷ್ಪ ನೆನೆಸಿತು ಹುಲ್ಲನು
ಮೌನ ಉರುಳಿತು,ಹೊರಳಿತೆದ್ದಿತು
ಗಾಳಿ ಭೋರನೆ ಬೀಸಿತು;
ತೆಂಗುಗರಿಗಳ ಚಾಮರಕೆ
ಹಾಯೆಂದು ಮೌನವು ಮಲಗಿತು
ಸಾಹಿತ್ಯ: ಎಂ.ಗೋಪಾಲಕೃಷ್ಣ ಅಡಿಗ
Tag: Ondu Sanje, Mouna tabbitu nelava jhummane
ಕಾಮೆಂಟ್‌ಗಳು