ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್,ವಿ. ಆರ್. ಅಯ್ಯಂಗಾರ್


 ಎಚ್.ವಿ.ಆರ್ಅಯ್ಯಂಗಾರ್


ಕನ್ನಡದ ನೆಲದವರಾದ ಹರವು ವೆಂಕಟನರಸಿಂಹ ವರದರಾಜ ಅಯ್ಯಂಗಾರ್ ಅವರು ಭಾರತೀಯ ರಿಸರ್ವ್ ಬ್ಯಾಂಕ್‌ನ ಆರನೇ ಗವರ್ನರ್ ಆಗಿದ್ದರು. 


ಎಚ್.ವಿ. ಆರ್. ಅಯ್ಯಂಗಾರ್ ಅವರು 1902ರ ಆಗಸ್ಟ್ 23 ರಂದು ಜನಿಸಿದರು. ಅವರದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ಸಮೀಪದ ಹರವು ಗ್ರಾಮ. ಅವರ ತಂದೆ ವೆಂಕಟ ನರಸಿಂಹ ಅಯ್ಯಂಗಾರ್.  ತಾಯಿ ಚೊಕ್ಕಮ (ಶ್ರೀರಂಗಮ್ಮ).  ಅಯ್ಯಂಗಾರ್ ಅವರು 1919ರ ಅವಧಿಯಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.  ಮುಂದೆ  ಐಸಿಎಸ್ ಪದವಿ ಗಳಿಸಿ 1926ರ  ಅಕ್ಟೋಬರ್ 20ರಂದು ಭಾರತೀಯ ನಾಗರಿಕ ಸೇವೆಗೆ ಪ್ರವೇಶಿಸಿದರು. 1941ರಲ್ಲಿ ಅವರಿಗೆ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್ (CIE) ಕಂಪ್ಯಾನಿಯನ್ ಗೌರವ ಸಂದಿತು. 


ಸ್ವಾತಂತ್ರ್ಯಕ್ಕೆ ಮುಂಚೆ ಬಾಂಬೆ ರಾಜ್ಯಕ್ಕೆ ಮೊರಾರ್ಜಿ ದೇಸಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಎಚ್. ವಿ. ಆರ್. ಅಯ್ಯಂಗಾರ್ ಅವರು ಗೃಹ ಮಂತ್ರಾಲಯದ ಕಾರ್ಯದರ್ಶಿಗಳಾಗಿದ್ದರು. 


ಎಚ್.ವಿ. ಆರ್. ಅಯ್ಯಂಗಾರ್ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಭಾರತದ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಕಾರ್ಯದರ್ಶಿಗಳಾಗಿ ಪ್ರಧಾನಿ ಅವರ ನಿಕಟ ಸಂಪರ್ಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 


ಎಚ್. ವಿ. ಆರ್. ಅಯ್ಯಂಗಾರ್ ಅವರು 1957 ಮಾರ್ಚ್ 1 ರಿಂದ 1962ರ ಫೆಬ್ರವರಿ 28 ರವರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿದ್ದರು.  ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ನೇಮಕಗೊಳ್ಳುವ ಮೊದಲು ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಕೆಲಕಾಲ ಸೇವೆ ಸಲ್ಲಿಸಿದರು.


ಎಚ್. ವಿ. ಆರ್. ಅಯ್ಯಂಗಾರ್ ಅವರ ಆರ್‍ ‍ಬಿ ಐ ಗೌರ್ನರ್ ಆಗಿದ್ದ ಅಧಿಕಾರಾವಧಿಯಲ್ಲಿ, ಭಾರತೀಯ ನಾಣ್ಯ ವ್ಯವಸ್ಥೆಯು ಹಿಂದಿನ ಪೈ, ಪೈಸೆ ಮತ್ತು ಆಣೆ ಪದ್ಧತಿಗಳಿಂದ ಆಧುನಿಕ ದಶಮಾಂಶ ನಾಣ್ಯ ವ್ಯವಸ್ಥೆಗೆ ಪರಿಷ್ಕೃತಗೊಂಡಿತು. ಅವರ ಅಧಿಕಾರಾವಧಿಯಲ್ಲಿ ಭಾರತದಲ್ಲಿ ಮೊದಲ ಬಾರಿಗೆ ವೇರಿಯಬಲ್ ನಗದು ಮೀಸಲು ಅನುಪಾತ(variable reserve ratio) ಕ್ರೆಡಿಟ್ ನಿಯಂತ್ರಣ (credit control) ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಚಾಲನೆಗೆ ಬಂತು.


ಎಚ್ ವಿ ಆರ್ ಅಯ್ಯಂಗಾರ್ ಅವರಿಗೆ 1962ರಲ್ಲಿ ಪದ್ಮವಿಭೂಷಣ ಗೌರವ ಸಂದಿತು.


ಅಯ್ಯಂಗಾರ್ ಅವರು 4.1.1969 ರಿಂದ 3.1.1972 ರ ನಡುವೆ ಐಐಟಿ ಮದ್ರಾಸ್ ಅಧ್ಯಕ್ಷರಾಗಿದ್ದರು. 


ಎಚ್. ವಿ. ಆರ್. ಅಯ್ಯಂಗಾರ್ ಅವರು 1978ರ ಫೆಬ್ರವರಿ 22ರಂದು ನಿಧನರಾದರು.


On Remembrance Day of H.V.R. Iyengar, Sixth Governor of Reserve Bank of  India


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ