ಶಶಿಧರ ಹಾಲಾಡಿ
ಶಶಿಧರ ಹಾಲಾಡಿ
ಶಶಿಧರ ಹಾಲಾಡಿ ಅವರು ಹೆಸರಾಂತ ಬರಹಗಾರರು ಮತ್ತು ವಿಶ್ವವಾಣಿ ಪತ್ರಿಕೆಯ ಪುರವಣಿ ವಿಭಾಗದ ಮುಖ್ಯ ಉಪಸಂಪಾದಕರು.
ಆಗಸ್ಟ್ 22, ಶಶಿಧರ ಹಾಲಾಡಿ ಅವರ ಜನ್ಮದಿನ. ಮೂಲತಃ ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯವರು. ಹಾಲಾಡಿ ಮತ್ತು ಕುಂದಾಪುರಗಳಲ್ಲಿ ಓದಿ ಮುಂದೆ ಮೈಸೂರು ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ಸಾಧನೆಯಲ್ಲಿ ಚಿನ್ನದ ಪದಕದೊಂದಿಗೆ ಎಂ.ಎ. (ಕನ್ನಡ) ಪದವಿ ಗಳಿಸಿದರು. ಇವರು ಮೈಸೂರು ಬ್ಯಾಂಕ್ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ಮುಂದೆ ಪೂರ್ಣ ಪ್ರಮಾಣದಲ್ಲಿ ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಶಶಿಧರ ಹಾಲಾಡಿ ಅವರು ಕಾದಂಬರಿ, ಸಣ್ಣಕಥೆ, ಪ್ರವಾಸ ಕಥನ, ನುಡಿಚಿತ್ರ, ಅಂಕಣ ಬರಹ, ವೈಚಾರಿಕ ಲೇಖನಗಳು ಹೀಗೆ ಬಹುಮುಖಿಯಾಗಿ ಬರೆದಿದ್ದು ಇವರ ಸಾವಿರಕ್ಕೂ ಹೆಚ್ಚು ಬರಹಗಳು ನಾಡಿನ ವಿವಿಧ ಪತ್ರಿಕೆಗಳು ಮತ್ತು ನಿಯತಕಾಲಿಕಗಳನ್ನು ಅಲಂಕರಿಸಿವೆ. ಶಿವಮೊಗ್ಗದ 'ನಾವಿಕ' ದಿನಪತ್ರಿಕೆಯಲ್ಲಿ 12 ವರ್ಷ ಕಾಲ ಅಂಕಣಕಾರರಾಗಿದ್ದರು. ವಿಶ್ವವಾಣಿಯಲ್ಲಿ ಇವರ 'ಶಶಾಂಕಣ' ಮೂಡಿಬಂದಿದೆ. ವಿಶ್ವವಾಣಿ ಪತ್ರಿಕೆಯ ಪುರವಣಿ ವಿಭಾಗದ ಮುಖ್ಯ ಉಪಸಂಪಾದಕರಾಗಿಯೂ ಇವರ ಸೇವೆ ಸಂದಿದೆ.
ಸಾಹಿತ್ಯ ಮಾತ್ರವಲ್ಲದೆ ಛಾಯಾಗ್ರಹಣ, ಪರಿಸರ, ಪಕ್ಷಿವೀಕ್ಷಣೆ, ಚಾರಣ ಮುಂತಾದವು ಕೂಡಾ ಶಶಿಧರ ಹಾಲಾಡಿ ಅವರ ಹವ್ಯಾಸಗಳಲ್ಲಿ ಸೇರಿವೆ. ಹಿಮಾಲಯದಲ್ಲಿ ಚಾರಣ ನಡೆಸಿದ ಅನುಭವ ಇವರೊಂದಿಗಿದೆ. ಛಾಯಾಗ್ರಹಣದಲ್ಲಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಇವರಿಗೆ ಬಹುಮಾನ ಸಂದಿದೆ. ಗ್ರಾಮೀಣ ಬದುಕು ಮತ್ತು ಪರಿಸರ ಚಿಂತನೆಗಳು ಇವರ ಅಂಕಣಗಳಲ್ಲಿ ವ್ಯಾಪಿಸಿವೆ. ಪರಿಸರಕ್ಕೆ ಸಂಬಂಧಿಸಿದ ವಿಷಯವನ್ನು ಒಳಗೊಂಡ ಇವರ 'ಅಬ್ಬೆ' ಕಾದಂಬರಿ ನಾಲ್ಕು ಪ್ರಶಸ್ತಿಗಳಿಗೆ ಭಾಜನವಾಗಿದೆ.
ಶಶಿಧರ ಹಾಲಾಡಿ ಅವರ ಪ್ರಕಟಿತ ಕೃತಿಗಳಲ್ಲಿ 'ಕಾಲಕೋಶ', 'ಅಬ್ಬೆ', 'ನದಿ ದಾಟಿ ಬಂದವರು' ಕಾದಂಬರಿಗಳು; 'ಹಾಲಾಡಿಯಲ್ಲಿ ಹಾರುವ ಓತಿ', 'ನಾ ಸೆರೆ ಹಿಡಿದ ಕನ್ಯಾಸ್ತ್ರೀ', 'ಅಮ್ಮಮ್ಮನ ದೀಪಾವಳಿ', 'ಬೆಟ್ಟ ಗುಡ್ಡಗಳ ನಡುವೆ ಪುಟ್ಟ ಮನೆ' ಪ್ರಬಂಧ ಸಂಕಲನಗಳು; 'ಉರುಳಿದ ಕಟ್ಟಡ ಮರಳಿದ ನೆನಪು', 'ಪ್ರಕೃತಿ ಪ್ರಪಂಚ', 'ಓಲಿ ಕೊಡೆ', 'ಮನದ ಹಾಯಿದೋಣಿ'. 'ಚಿತ್ತ ಹರಿದತ್ತ' ಅಂಕಣ ಬರಹಗಳ ಸಂಕಲನಗಳು; 'ಹಿತ್ತಲಿನಿಂದ ಹಿಮಾಲಯಕ್ಕೆ' ಚಾರಣ ಕಥನ; 'ದೇವರು ಎಚ್ಚರಗೊಂಡಾಗ' ಪ್ರವಾಸ ಕಥನ; 'ನ್ಯಾಯಾಶಾಸ್ತ್ರಜ್ಞ ಸರ್ ಬೆನಗಲ್ ನರಸಿಂಗ ರಾವ್' ಜೀವನ ಚರಿತ್ರೆ; 'ಟುವ್ವಿ ಹಕ್ಕಿಯ ಗೂಡು' ಪರಿಸರ ಸಂಬಂಧಿ ಬರಹಗಳು ಸೇರಿದಂತೆ 18 ಕೃತಿಗಳಿವೆ.
ಶಶಿಧರ ಹಾಲಾಡಿ ಅವರಿಗೆ 'ಅಬ್ಬೆ' ಕಾದಂಬರಿಗೆ ಚಡಗ ಕಾದ೦ಬರಿ ಪ್ರಶಸ್ತಿ, ಸ್ವಾಭಿಮಾನಿ ಕರ್ನಾಟಕ ಪುಸ್ತಕ ಪ್ರಶಸ್ತಿ, ಬೆರಗು ಪುಸ್ತಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಸೋಲೂರು ಮುರುಗಾರಾಧ್ಯ ಪ್ರಶಸ್ತಿ; ‘ಉರುಳಿದ ಕಟ್ಟಡ ಮರಳಿದ ನೆನಪು’ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದಿಂದ ಹಾಮಾನ ಪ್ರಶಸ್ತಿ; ‘ಚಿತ್ತ ಹರಿದತ್ತ’ ಕೃತಿಗೆ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ, ಗೆಳೆಯರ ಬಳಗದಿ೦ದ ಹಾಮಾನಾ ಅಂಕಣ ಬರಹ ಪ್ರಶಸ್ತಿ; ಬೆ೦ಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ ನೀಡುವ 'ಕನ್ನಡ ಸೇವಾ ರತ್ನ' ಪ್ರಶಸ್ತಿ, ಜ್ಞಾನಗಂಗಾ ಸಾಹಿತ್ಯ ರಂಗ ನೀಡುವ 'ಕರುನಾಡು ಸೇವಾ ರತ್ನ' ಪ್ರಶಸ್ತಿ ಮು೦ತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಆತ್ಮೀಯ ಜನಪ್ರಿಯ ಚಿಂತಕ ಬರಹಗಾರರಾದ ಶಶಿಧರ ಹಾಲಾಡಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
ಕಾಮೆಂಟ್‌ಗಳು