ಅನ್ನಪೂರ್ಣ ಕುರಬೇಟ
ಅನ್ನಪೂರ್ಣ ಕುರಬೇಟ
ಅನ್ನಪೂರ್ಣ ಕುರಬೇಟ ಅವರು ಶಿಕ್ಷಣ ಕ್ಷೇತ್ರ, ಸ್ಕೌಟ್ಸ್, ಸಾಹಿತ್ಯ, ಸಂಸ್ಕೃತಿ ಹೀಗೆ ಬಹುಮುಖಿ ನೆಲೆಗಳಲ್ಲಿ ಸಾಧನೆ ಮತ್ತು ಸೇವೆಗಳನ್ನು ಮಾಡುತ್ತ ಬಂದಿದ್ದಾರೆ.
ಆಗಸ್ಟ್ 23, ಅನ್ನಪೂರ್ಣ ಕುರಬೇಟ ಅವರ ಜನ್ಮದಿನ. ಇವರು ಹುಟ್ಟಿದ ಊರು, ತಾಯಿಯ ತವರೂರು ಹುಕ್ಕೇರಿ ತಾಲೂಕಿನ ಹುಲ್ಲೋಳಿ. ತಂದೆ ಗೋಕಾಕ ತಾಲೂಕಿನ ಮೇಲ್ಮನಹಟ್ಟಿಯ ಬಸವರಾಜ ಕುರಬೇಟ. ಅನ್ನಪೂರ್ಣ ಅವರ ಪ್ರಾಥಮಿಕ ಶಿಕ್ಷಣ ಧಾರವಾಡದ ಪಾಠಾಭ್ಯಾಸ ಆದರ್ಶ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರೌಢಶಾಲಾ ಶಿಕ್ಷಣ, ಧಾರವಾಡದ ಪ್ರಸಂಟೇಶನ್ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆಯಿತು. ಪಿಯುಸಿ ರಾಜಾ ಲಖಮಗೌಡ ಸರದೇಸಾಯಿ ಕಾಲೇಜಿನಲ್ಲಿ ನಡೆಸಿದರು. ಆಂಗ್ಲ ಸಾಹಿತ್ಯ ಪದವಿ ಶಿಕ್ಷಣವನ್ನು ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ನಡೆಸಿದರು. ಸ್ನಾತಕೋತ್ತರ ವ್ಯಾಸಂಗದಲ್ಲಿ ಆಂಗ್ಲಸಾಹಿತ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಇವರದ್ದು ಮೂರನೇ ರ್‍ಯಾಂಕ್ ಗಳಿಕೆಯ ಸಾಧನೆ. ಮಂಗಳೂರಿನ ಸೇಂಟ್ ಆನ್ಸ್ ಕಾಲೇಜಿನಲ್ಲಿ ಬಿ.ಎಡ್ ಪದವಿ ಹಾಗೂ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎಡ್ ಪದವಿ ಗಳಿಸಿದರು.
ಅನ್ನಪೂರ್ಣ ಕುರಬೇಟ ಅವರು ಧಾರವಾಡ ಜಿಲ್ಲೆಯ ನವೋದಯ ವಿದ್ಯಾಲಯ, ಕಿತ್ತೂರಿನ ಬಾಲಕಿಯರ ವಸತಿ ವಿದ್ಯಾಲಯ, ಗೋಕಾಕದ ಫೋರ್ಬ್ಸ್ ಅಕಾಡಮಿ, ಹೊಸಪೇಟೆಯ ಸ್ಮಯೋರ್ ಪದವಿಪೂರ್ವ ಕಾಲೇಜು, ಬಳ್ಳಾರಿಯ ಸರಕಾರಿ ಪ್ರೌಢಶಾಲೆ, ಬೆಳಗಾವಿ ಜಿಲ್ಲೆಯ ಖನಗಾವಿಯ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯ, ಈ ಎಲ್ಲ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಸರಕಾರಿ ಪದವಿಪೂರ್ವ ಕಾಲೇಜು, ಗೋಕಾಕದಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅನ್ನಪೂರ್ಣ ಅವರು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ, ಅಲ್ಲಿ ಪಾಠ ಮಾಡುತ್ತಿದ್ದ ಹ. ರಾ. ನಿಕಂ ಎಂಬ ಗುರುಗಳು ಬಾಲ ಭಾಷೆಯಲ್ಲಿ ಇವರು ಬರೆದ ಸ್ವರಚಿತ ಕವಿತೆಗಳನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದರು. ಮುಂದೆ ಪ್ರೌಢಶಾಲೆಯಲ್ಲಿಯೂ ಶಿಕ್ಷಕರ ಪ್ರೋತ್ಸಾಹದಿಂದ ಕವಿತೆಗಳ ರಚನೆ ಮುಂದುವರೆಯಿತು. ಕಾಲೇಜಿನ ಮ್ಯಾಗಜಿನ್ ಗಳು ಅಭಿವ್ಯಕ್ತಿಗೆ ಅವಕಾಶ ನೀಡಿದವು. ಮಯೂರ ಮಾಸಪತ್ರಿಕೆಯ 'ಕಲ್ಪನೆ' ವಿಭಾಗ ಚಿತ್ರಕ್ಕೆ ಹೊಂದುವ ಕವಿತೆ ಬರೆಯುವಿಕೆ ವಿದ್ಯಾರ್ಥಿ ಜೀವನದಲ್ಲಿ ಇವರ ಆಸಕ್ತಿದಾಯಕ ಹವ್ಯಾಸವಾಗಿತ್ತು. ಕರ್ನಾಟಕ ಮಹಾವಿದ್ಯಾಲಯದಲ್ಲಿ ಗುರುಗಳಾದ ಡಾ. ಕೆ. ಎಸ್. ನಾರಾಯಣಾಚಾರ್ಯ, ಪ್ರೊ. ವಿ. ಎಸ್. ಕುಲಕರ್ಣಿ, ಡಾ. ವೀಣಾ ಶಾಂತೇಶ್ವರ, ಪ್ರೊ. ಆರಾಧ್ಯಮಠ, ಪ್ರೊ. ಮಾಡ್ಥಾ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗುರುಗಳಾಗಿದ್ದ ಡಾ. ಸಿ. ವಿ. ವೇಣುಗೋಪಾಲ, ಡಾ. ರಾಜಶೇಖರ್ ಮನ್ಸೂರ್, ಡಾ. ಕೀರ್ತಿನಾಥ ಕುರ್ತಕೋಟಿ, ಡಾ. ಗಿರಡ್ಡಿ ಗೋವಿಂದರಾಜ, ಡಾ. ಚಂದ್ರಶೇಖರ ಪಾಟೀಲ, ಇವರೆಲ್ಲ ಸಾಹಿತ್ಯದ ಕುರಿತು ತೀವ್ರವಾದ ಆಸಕ್ತಿಯನ್ನು ಹುಟ್ಟಿಸಿದರು. ಸಾಹಿತಿ ನೇಮಿಚಂದ್ರ ಅವರು ಬರೆದ ಕಥೆಗಳು ಇವರ ಮೇಲೆ ತುಂಬ ಪ್ರಭಾವ ಬೀರಿದವು. ಈ ರೀತಿ ಸಾಹಿತ್ಯದಲ್ಲಿ ಅಪಾರ ಆಸಕ್ತಿ, ಓದುವ ಹವ್ಯಾಸ ಬೆಳೆಯಿತು.
ಅನ್ನಪೂರ್ಣ ಕುರಬೇಟ ಅವರಿಗೆ ವಿದ್ಯಾರ್ಥಿ ಜೀವನದಲ್ಲಿ ಆದರ್ಶ ವಿದ್ಯಾರ್ಥಿನಿ ಪ್ರಶಸ್ತಿ ದೊರೆಯಿತು. ಕರ್ನಾಟಕ ಸರಕಾರ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗಾಗಿ ನಡೆಸಿದ ಪರೀಕ್ಷೆಯಲ್ಲಿ ಹೈದರಾಬಾದ್ ಕರ್ನಾಟಕ ವಿಭಾಗಕ್ಕೆ 2ನೇ ರ್‍ಯಾಂಕ್ ಗಳಿಸಿದರು. ಉಪನ್ಯಾಸಕರ ನೇಮಕಾತಿಗಾಗಿ ಸರಕಾರ ನಡೆಸಿದ ಪರೀಕ್ಷೆಯಲ್ಲೂ ಉನ್ನತ ಶ್ರೇಣಿಯ ಅಂಕಗಳನ್ನು ಗಳಿಸಿದರು. ಬೆಂಗಳೂರಿನ Regional Institute of English ದಲ್ಲಿ ತರಬೇತಿ ಪಡೆದು, ಆಂಗ್ಲ ಭಾಷಾ ಬೋಧನೆಯಲ್ಲಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಿಗೆ ಹಲವಾರು ಸರಕಾರಿ ತರಬೇತಿ ಕಾರ್ಯಕ್ರಮಗಳಲ್ಲಿ ತರಬೇತಿ ನೀಡಿದರು. ಪಠ್ಯಪುಸ್ತಕ ರಚನಾ ಸಮಿತಿಯಲ್ಲೂ ಪೂರಕ ಕರ್ತವ್ಯ ನಿರ್ವಹಿಸಿದರು. ಇವರ Changing Trends in Teacher Pupil Relationship ಎಂಬ ಪ್ರಬಂಧ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿ ಗೋರಖಪುರದಿಂದ ಕಲ್ಯಾಣ ಕಲ್ಪತರು ಶೈಕ್ಷಣಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಅನ್ನಪೂರ್ಣ ಕುರಬೇಟ ಅವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ವಿದ್ಯಾರ್ಥಿನಿಯರಲ್ಲಿ ಜೀವನಕೌಶಲ್ಯಗಳು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಲು ಅವಕಾಶ ದೊರೆಯಿತು. ರೇಂಜರಿಂಗ್ ವಿಭಾಗದಲ್ಲಿ Pre ALTವರೆಗೂ ತರಬೇತಿ ಪಡೆದಿದ್ದು, ರಾಜ್ಯ ತರಬೇತಿ ಕೇಂದ್ರಗಳಲ್ಲಿ ನಡೆಯುವ ಹಲವಾರು ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆಯಿತು. ಕಾಲೇಜಿನಲ್ಲಿ ಝಾನ್ಸಿ ರಾಣಿ ರೇಂಜರ್ ತಂಡದ ಮೂಲಕ ವಿದ್ಯಾರ್ಥಿನಿಯರಿಗೆ ತರಬೇತಿ ನೀಡುತ್ತಿದ್ದು ಇದುವರೆಗೂ 19 ವಿದ್ಯಾರ್ಥಿನಿಯರಿಗೆ ರಾಜ್ಯಪುರಸ್ಕಾರ ದೊರೆತಿದೆ. ರೇಂಜರಿಂಗ್ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ದೆಹಲಿಯ ಕೇಂದ್ರ ಕಛೇರಿಯಿಂದ ಕಂಚಿನ ಪದಕ ದೊರೆತಿದೆ.
ಅನ್ನಪೂರ್ಣ ಕುರಬೇಟ ಅವರಿಗೆ ಸರಕಾರಿ ನೌಕರರಿಗಾಗಿ ನಡೆಸುವ ಸ್ಪರ್ಧೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾವಗೀತೆ, ಕ್ರೀಡೆಯಲ್ಲಿ ಚದುರಂಗ ಇತ್ಯಾದಿ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ದೊರೆತಿವೆ. ಭರತನಾಟ್ಯದಲ್ಲಿ ಗಂಧರ್ವ ಮಹಾವಿದ್ಯಾಲಯದ ಪ್ರಶಸ್ತಿಪತ್ರ ಪಡೆದಿದ್ದು, ವಿದುಷಿ ಶ್ರೀಮತಿ ನಾಗರತ್ನ ಹಡಗಲಿಯವರಲ್ಲಿ ಅಧ್ಯಯನ ಮುಂದುವರೆದಿದೆ.
ಅನ್ನಪೂರ್ಣ ಕುರಬೇಟ ಅವರು ಗಳಿಸಿದ ಆಸ್ತಿ ಎಂದರೆ ಪ್ರಪಂಚದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ದಕ್ಷವಾಗಿ ಕಾರ್ಯ ನಿರ್ವಹಿಸುತ್ತಿರುವ ಶಿಷ್ಯವೃಂದ. ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ದೊರೆಯಬೇಕು, ಆ ಮೂಲಕ ಸ್ವಸ್ಥ ಸಮಾಜ ನಿರ್ಮಾಣವಾಗಬೇಕು ಎನ್ನುವುದೇ ಇವರ ಸದಾಶಯ.
ಅನ್ನಪೂರ್ಣ ಕುರಬೇಟ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Annapurna Kurabeta,Annapurna Kurabeta
ಕಾಮೆಂಟ್‌ಗಳು