ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೃಷ್ಣ ವಾಗೀಶ್


ಕೃಷ್ಣ ವಾಗೀಶ್

ಡಾ. ಕೃಷ್ಣ ವಾಗೀಶ್ ಪ್ರಸಿದ್ಧ ಸಂಗೀತಕಾರರು ಹಾಗೂ ಪ್ರಸಾರ ಭಾರತಿಯ ನಿವೃತ್ತ ಡೆಪ್ಯುಟಿ ಡೈರೆಕ್ಟರ್ ಜನರಲ್.

ಮೈಸೂರಿನವರಾದ ಕೆ. ವಾಗೀಶ್ 1954ರ ಫೆಬ್ರುವರಿ 7ರಂದು ಜನಿಸಿದರು.

ಹೆಸರಾಂತ ಟೈಗರ್ ವರದಾಚಾರ್ಯರ ಸಂಗೀತ ಕಲಾಪದ್ಧತಿಗೆ ಸೇರಿದ ಕೆ ವಾಗೀಶ್ ಅವರು ಸಂಗೀತ, ಸಂಸ್ಕೃತ ಮತ್ತು ಸಾಂಪ್ರದಾಯಿಕ ಮೌಲ್ಯಗಳಿಂದ ಸಮೃದ್ಧವಾದ ನೈಸರ್ಗಿಕ ಪರಿಸರದಲ್ಲಿ ಬೆಳೆದರು. ಇದು ಅವರ (ತಾಯಿಯ ಸಹೋದರಿ) ಚಿಕ್ಕಮ್ಮ, ಸಂಗೀತವಿದುಷಿ ಖ್ಯಾತ ಕರ್ನಾಟಕ ಗಾಯಕಿ ಎಚ್. ಎಸ್. ಮಹಾಲಕ್ಷ್ಮೀ ಅವರಿಂದ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತದಲ್ಲಿ ದೀಕ್ಷೆ ಪಡೆಯಲು ಬಲವಾದ ನೆಲೆಯನ್ನು ಒದಗಿಸಿತು. ಮಹಾಲಕ್ಷ್ಮಿ ಅವರು ವಾಗೀಶರಿಗೆ ಅತ್ಯಂತ ವ್ಯವಸ್ಥಿತವಾದ ತರಬೇತಿ ನೀಡಿ ಬೆಳೆಸಿದರು. 

ಸಂಗೀತದ ಜೊತೆಗೆ ವಾಗೀಶ್ ತಮ್ಮ ಶೈಕ್ಷಣಿಕ ಅಧ್ಯಯನವನ್ನೂ ಮುಂದುವರೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ವಿಜ್ಞಾನದಲ್ಲಿ ಪದವಿ ಪಡೆದರು. ಜೊತೆಗೆ ಯೂನಿವರ್ಸಿಟಿ ಆಫ್ ಫೈನ್ ಆರ್ಟ್ಸ್ ಮೈಸೂರಿನಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮಾಡಿ  ಚಿನ್ನದ ಪದಕದೊಂದಿಗೆ ಪ್ರಪ್ರಥಮ ಸ್ಥಾನದ ಸಾಧನೆ ಮಾಡಿದರು. ದೆಹಲಿ ವಿಶ್ವವಿದ್ಯಾಲಯಕ್ಕೆ ಮಹಾನ್ ಸಂಗೀತಕಾರ ಟಿ. ಎನ್. ಕೃಷ್ಣನ್ ಅವರ ಮಾರ್ಗದರ್ಶನದಲ್ಲಿ "Aspects of Mantra, Tantra, yantra and Agama in the compositions of Muthuswamy Deekshitar” ಎಂಬ ಮಹಾಪ್ರಬಂಧ ಮಂಡಿಸಿ ಡಾಕ್ಟೊರೇಟ್ ಗಳಿಸಿದರು. ಭಾರತೀಯ ವಿದ್ಯಾಭವನದಿಂದ ಸಾರ್ವಜನಿಕ ಸಂಪರ್ಕ ಮತ್ತು ಆಡಳಿತ ಶಾಸ್ತ್ರದಲ್ಲಿ ಉನ್ನತ ದರ್ಜೆಯಲ್ಲಿ  ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಪದವಿಯನ್ನೂ ತಮ್ಮದಾಗಿಸಿಕೊಂಡರು. 

ವಾಗೀಶ್ ಶಾಲಾ ಕಾಲೇಜುಗಳಲ್ಲಿ, ಅಂತರ ಕಾಲೇಜು -‍ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಅನೇಕ ಸ್ಪರ್ಧಾ ಬಹುಮಾನಗಳನ್ನು ಗೆಲ್ಲುತ್ತ ಗಮನಾರ್ಹ ಪ್ರತಿಭೆಯಾಗಿ ಬೆಳೆದರು.  ಬೆಂಗಳೂರು ಗಾಯನ ಸಮಾಜ, ಕರ್ನಾಟಕ ಗಾನಕಲಾ ಪರಿಷತ್, ಚೆನ್ನೈ ಮ್ಯೂಸಿಕ್ ಅಕಾಡೆಮಿ ನಡೆಸಿದ ಸಂಗೀತ ಸ್ಪರ್ಧೆಗಳಲ್ಲಿ ಜಯಗಳಿಸಿ ಎಲ್ಲೆಡೆ ಹೆಸರಾದರು. ಅಖಿಲ ಭಾರತ ಆಕಾಶವಾಣಿ ಸ್ಪರ್ಧೆಗಳಲ್ಲಿ ಜಯಗಳಿಸಿ ನೇರ ಆಕಾಶವಾಣಿ ಗ್ರೇಡೆಡ್ ಕಲಾವಿದರೆನಿಸಿ ಮುಂದೆ  ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದರಾಗಿಯೂ ಪರಿಗಣಿತರಾದರು. 

ಪ್ರತಿಷ್ಠಿತ ಬಹುರಾಷ್ಟ್ರೀಯ ಸಂಸ್ಥೆಯೊಂದರ ಸಂಶೋಧನಾ ವಿಭಾಗದಲ್ಲಿ ಹಿರಿಯ ಕೆಮಿಸ್ಟ್ ಹುದ್ದೆಯನ್ನು ಕೆಲಕಾಲ ನಿರ್ವಹಿಸಿದ ವಾಗೀಶ್ ಅವರು ಯುಪಿಎಸ್‍ಸಿ ಮೂಲಕ ಆಯ್ಕೆಗೊಂಡು ದೆಹಲಿ ಆಕಾಶವಾಣಿಯಲ್ಲಿ ಕರ್ನಾಟಕ ಸಂಗೀತ ವಿಭಾಗದ ಪ್ರೋಗ್ರಾಮ್ ಎಕ್ಸಿಕ್ಯೂಟಿವ್  ಆಗಿ ಸೇರಿದರು.  ಆಕಾಶವಾಣಿಯಲ್ಲಿ 34 ವರ್ಷಗಳ ಸೇವೆ ಸಲ್ಲಿಸಿದ ವಾಗೀಶ್ ಅವರು 
ಡೆಪ್ಯೂಟಿ ಡೈರೆಕ್ಟರ್ ಜನರಲ್ ಹುದ್ದೆಯನ್ನಲಂಕರಿಸಿದ್ದರು. ನಿವೃತ್ತಿಯ ನಂತರವೂ ಆಕಾಶವಾಣಿಯ ಸಲಹೆಗಾರರಾಗಿ ಅವರ ಸೇವೆ ಸಂದಿತು. 2002 - 2007 ಅವಧಿಯಲ್ಲಿ ಅವರು ಆಕಾಶವಾಣಿ ತಿರುಚಿ ಕೇಂದ್ರದ ನಿರ್ದೇಶಕರಾಗಿದ್ದರು. 

ಡಾ. ಕೃಷ್ಣ ವಾಗೀಶ್ ಅವರು ಕಳೆದ ನಾಲ್ಕು ದಶಕಗಳಿಂದ ದೇಶದ ಎಲ್ಲಾ ಪ್ರತಿಷ್ಠಿತ ವೇದಿಕೆಗಳು ಮತ್ತು ವಿದೇಶಗಳಲ್ಲಿ ಸಂಗೀತ ಕಚೇರಿಗಳನ್ನು ನೀಡುತ್ತ ಬಂದಿದ್ದಾರೆ. ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್, ಸೆಂಟರ್ ಫಾರ್ ಕಲ್ಚರಲ್ ರಿಸೋರ್ಸಸ್ ಅಂಡ್ ಟ್ರೈನಿಂಗ್ ಮುಂತಾದ ಸಂಸ್ಥೆಗಳೊಡನೆ ಅವರ ನಿರಂತರ ಒಡನಾಟವಿದೆ.  ಅನೇಕ ವಿಶ್ವವಿದ್ಯಾಲಯಗಳಿಗೆ ಅವರು ಬಾಹ್ಯ ಪರೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 
ಮೂರು ಬಾರಿ ಆಕಾಶವಾಣಿ ವಾರ್ಷಿಕ ಸ್ಪರ್ಧೆಗಳಲ್ಲಿ ಇವರ  ನವರಸಾಸ್, ನಿಶಃಬ್ದ್ ಮತ್ತು ತನ್ಹೋ ಅಗ್ನಿಃ ಪ್ರಚೋದಯಾತ್ ನಿರ್ಮಾಣಗಳು ಪ್ರಶಸ್ತಿ ಗೆದ್ದಿವೆ.  ವಾಗೀಶರು ಕನ್ನಡ, ತಮಿಳು, ಸಂಸ್ಕೃತ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುಮಾರು ನೂರು ಕೀರ್ತನೆಗಳನ್ನು ರಚಿಸಿದ್ದಾರೆ. ನಿರಂತರ 24 ಗಂಟೆ ಅವಧಿಗಳ ಅನೇಕ ಅಖಂಡ ಸಂಗೀತ ಜ್ಞಾನ ಯಜ್ಞಗಳನ್ನು ನಡೆಸಿದ್ದಾರೆ. ತ್ಯಾಗರಾಜರ ಆರಾಧನೆ ಸಂದರ್ಭದಲ್ಲಿ ಪಂಚರತ್ನ ಕೃತಿಗಳ ಗೋಷ್ಠಿ ಗಾಯನದ ಆಯೋಜನೆಯಲ್ಲದೆ ಪುರಂದರ ದಾಸರು, ನಾರಾಯಣ ತೀರ್ಥರು ಸೇರಿದಂತೆ ಅನೇಕ ಸಂಗೀತಸಂತರ ಕುರಿತಾದ ವಿಶೇಷ ಕಾರ್ಯಕ್ರಮ ಯೋಜನೆಗಳನ್ನು ಸಂಘಟಿಸಿದ್ದಾರೆ. ಆಕಾಶವಾಣಿ ಸಂಗೀತ ಸಮ್ಮೇಳನ, ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳ ರಾಷ್ಟ್ರೀಯ ಕಾರ್ಯಕ್ರಮಗಳು, ಸಂಗೀತ ನಾಟಕ ಅಕಾಡೆಮಿ ಸಂಗೀತ ಉತ್ಸವ, ಐಸಿಸಿಆರ್ ಅಲ್ಲಿ ಜುಗಲ್ಬಂದಿ ಕಚೇರಿ, ಚೆಂಬೈ ಸಂಗೀತ ಉತ್ಸವ, ತಿರುವಾಯೂರು ತ್ಯಾಗರಾಜ ಆರಾಧನಾ ಸೇರಿದಂತೆ ನಾಡಿನ ಎಲ್ಲ ಪ್ರತಿಷ್ಠಿತ ಉತ್ಸವಗಳಲ್ಲಿ ಕಚೇರಿ ನೀಡಿದ್ದಾರೆ. ಫ್ರಾನ್ಸ್ ದೇಶದಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಅನೇಕ ಕಾರ್ಯಕ್ರಮ ನೀಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕಚೇರಿ, ಸಂಗೀತದ ಕುರಿತಾದ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸಗಳನ್ನು ನೀಡಿದ್ದಾರೆ. 
ವಾಗೀಶರ ಸಂಗೀತ ಕಚೇರಿಗಳು ಶಾಸ್ತ್ರಬದ್ಧವಾದ, ಸಾಂಸ್ಕೃತಿಕ ಮೌಲ್ಯಗಳ ತಳಹದಿಯ ಸುಶ್ರಾವ್ಯ ಗಾನ ಮಾಧುರ್ಯಕ್ಕೆ ಹೆಸರಾಗಿವೆ. 

ವಾಗೀಶರಿಗೆ ಮಹಾರಾಜಪುರಂ ಸಂತಾನಂ
ಪ್ರಶಸ್ತಿ, ಬೆಂಗಳೂರು ಗಾಯನ ಸಮಾಜ ಮತ್ತು ಗಾಯನ ಸಮಾಜದ ಸ್ಪರ್ಧಾ ಬಹುಮಾನಗಳು, ಮಹಾರಾಜಪುರಂ ವಿಶ್ವನಾಥ್ ಪ್ರಶಸ್ತಿ, ಚೆನ್ನೈ ಸಂಗೀತ ಅಕಾಡೆಮಿ ಪ್ರಶಸ್ತಿ, ದೆಹಲಿಯ ನಾದ ಬ್ರಹ್ಮ ಕಲಾರತ್ನಂ, ಗೋವಾದ ಗಾನತಿಲಕ, ಕರ್ನಾಟಕ ಕಲಾಶ್ರೀ, ಕಂಚಿ ಕಾಮಕೋಟಿ ಪೀಠದ ಗೌರವಗಳು ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

ಮಹಾನ್ ಸಂಗೀತ ಸಾಧಕರಾದ ಡಾ. ಕೃಷ್ಣ ವಾಗೀಶ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು. 

On the birthday of great musician, scholar and retired Director General AIr, Dr. Krishna Vagesh Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ