ಅಪರ್ಣಾ ರಾವ್
ಅಪರ್ಣಾ ರಾವ್
ಅಪರ್ಣಾ ರಾವ್ ಫೇಸ್ಬುಕ್ನಲ್ಲಿ 'ಮಹಿಳಾ ಮಾರುಕಟ್ಟೆ' ಪರಿಕಲ್ಪನೆಯ ಮೂಲಕ ಸಂಚಲನ ಮೂಡಿಸಿದವರು. ಹಲವು ಪ್ರತಿಭೆಗಳ ಸಂಗಮರಾದ ಇವರ ಕಾರ್ಯದಿಂದ ಸಹಸ್ರಾರು ಮಂದಿ ಮಹಿಳೆಯರು ಪ್ರೇರಣೆ ಹೊಂದಿ ಸ್ವಾವಲಂಬಿಗಳಾಗಿದ್ದಾರೆ. ಅಪರ್ಣಾ ರಾವ್ ಉತ್ತಮ ಬರಹಗಾರ್ತಿ. ಚಿತ್ರಕಲೆ, ರಂಗಭೂಮಿ, ಕನ್ನಡ ಸಂಘಟನೆ ಹೀಗೆ ಎಲ್ಲೆಡೆ ಅವರ ಗಮನಾರ್ಹ ಸಾಧನೆಯಿದೆ.
ಮಾರ್ಚ್ 7 ಅಪಾರ್ಣಾ ರಾವ್ ಅವರ ಜನ್ಮದಿನ. ಇವರು ಚಿತ್ರದುರ್ಗದ ಹೊರಕೆರೆಯ ದೇವಪುರ ಮೂಲದವರು. ಇವರು ಹುಟ್ಟಿದ್ದು ತುಮಕೂರಿನ ತಾಯಿಯ ಮನೆಯಲ್ಲಿ. ಇವರ ತಾತ ಶಾನುಭೋಗ ರಾಮರಂಗಪ್ಪ. ತಂದೆ ಶಾಂಡಿಲ್ಯಶರ್ಮ. ತಂದೆಯವರ ಕೆಲಸದ ಕಾರಣ ಒಂದೊಂದು ವರ್ಷ ಒಂದೊಂದು ಊರಲ್ಲಿ ಅಪರ್ಣಾ ಅವರ ಪ್ರಾಥಮಿಕ ಶಿಕ್ಷಣ ಸಾಗಿ, ಮುಂದೆ ಬೆಂಗಳೂರಿನಲ್ಲಿ ಪದವಿಯವರೆಗೆ ಓದಿ ಬೆಳೆದರು.
ಅಪರ್ಣಾ ಅವರಿಗೆ ಮೊದಲಿನಿಂದಲೂ ಸಾಹಿತ್ಯ, ನಾಟಕ, ಚಿತ್ರಕಲೆ ಆಸಕ್ತಿಯ ಕ್ಷೇತ್ರಗಳಾಗಿದ್ದವು. ಶಾಲಾ ದಿನಗಳಿಂದಲೂ ಒಂದಲ್ಲಾ ಒಂದು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಿದ್ದರು. ಎನ್ಎಸ್ವಿಕೆ ಹೈಸ್ಕೂಲಿನಲ್ಲಿ ಸಂಸ್ಕೃತ ಶಿಕ್ಷಕ ಶ್ರೀರಾಮ್ ಭಟ್ ಅವರು ಇವರನ್ನು ನಾಟಕಕ್ಕೆ ಕರೆತಂದರು. ‘ಹಸಿರೇ ಉಸಿರು’ ನಾಟಕದಲ್ಲಿ ಅಮೃತಾದೇವಿಯ ಪಾತ್ರ, 'ಕೆರೆಗೆ ಹಾರ’ದಲ್ಲಿ ಭಾಗೀರಥಿ ಪಾತ್ರದಂತಹ ನೆನಪಿನಲ್ಲುಳಿಯವ ಪಾತ್ರಗಳನ್ನು ನಿರ್ವಹಿಸಿದ್ದರು. ನ್ಯಾಶನಲ್ ಕಾಲೇಜು ಸೇರಿದಾಗ ಗೀತಾ ರಾಮಾನುಜಂ ಅವರಿಂದ ತರಬೇತಿ ಪಡೆದರು. ಮೊತ್ತಮೊದಲಿಗೆ ‘ನಿರ್ಧಾರ’ ನಾಟಕದಲ್ಲಿ ಗಂಡಸಿನ ಪಾತ್ರವನ್ನು ಮಾಡಿದ್ದರು. ಆ ನಾಟಕಕ್ಕೆ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿತಲ್ಲದೆ ಇವರಿಗೆ 'ಅತ್ಯುತ್ತಮ ನಟಿ’ ಪ್ರಶಸ್ತಿಯೂ ಸಂದಿತು. ಅವರದ್ದೇ ಮಾರ್ಗದರ್ಶನದಲ್ಲಿ ‘ಅಡ್ಡಗೋಡೆಯ ಮೇಲೆ ದೀಪ’ ನಾಟಕವನ್ನು ನಿರ್ದೇಶಿಸಿ ನಟಿಸಿ ಮೂರನೆ ಬಹುಮಾನ ಗಳಿಸಿದರು. ಮುಂದೆ ‘ನಿಜಗಲ್ಲಿನ ರಾಣಿ’ ನಾಟಕದಲ್ಲಿ ಮತ್ತೆ ಗಂಡುವೇಷ ಮಾಡಿದರು. ಹೀಗೆ ಸುಮಾರು ನಾಟಕಗಳಲ್ಲಿ ಪಾತ್ರವಹಿಸಿದರು. ಅಂದಿನ ದಿನಗಳಲ್ಲಿ ನಾಟಕ ಮಾಡುವುದರೊಂದಿಗೆ ಅತ್ಯುತ್ತಮ ನಾಟಕಗಳನ್ನು ಕೇವಲ ಒಂದು ರೂಪಾಯಿ ಟಿಕೇಟಿಗೆ ನೋಡಲು ಅವಕಾಶವೂ ನ್ಯಾಶನಲ್ ಕಾಲೇಜಿನಲ್ಲಿ ಸಿಗುತ್ತಿತ್ತು. ಆ ಸಮಯದಲ್ಲೇ ಶಂಕರ್ ನಾಗ್, ಸಿ. ಆರ್. ಸಿಂಹ, ಮಾಸ್ಟರ್ ಹಿರಣ್ಣಯ್ಯ ಅಂಥವರನ್ನೆಲ್ಲಾ ಹತ್ತಿರದಿಂದ ನೋಡುತ್ತಿದ್ದರು. ಶರತ್ ಲೋಹಿತಾಶ್ವ , ಋತ್ವಿಕ್ ಸಿಂಹ ಇವರೊಂದಿಗೆ ಅಭಿನಯಿಸಿದರು.
ತಮ್ಮ ಪುಸ್ತಕದ ಕಡೇ ಪೇಜಿನಲ್ಲಿ ಚಿತ್ರ ಬರೆಯುವ ಅಭ್ಯಾಸ ಇದ್ದ ಅಪರ್ಣಾ ತುಮಕೂರಿನ ರವೀಂದ್ರ ಕಲಾನಿಕೇತನ ಸೇರಿಕೊಂಡು ಸುಮಾರು ಒಂದೂವರೆ ವರ್ಷ ಚಿತ್ರಕಲೆ ಅಭ್ಯಾಸವನ್ನೂ ನಡೆಸಿದರು. ಅವರು ಜೇಡಿಮಣ್ಣಿನಿಂದ ಸುಂದರ ಮೂರ್ತಿಗಳನ್ನೂ ಮೂಡಿಸುತ್ತಾರೆ.
ಮುಂದೆ ಅಪರ್ಣಾ ಮದುವೆಯಾಗಿ ಮುಂಬೈ ಸೇರಿದರು. ನಾಟಕ, ಸ್ಟೇಜು, ಕಲೆ ಇತ್ಯಾದಿಗಳಲ್ಲಿ ಮುಳುಗಿದ್ದವರಿಗೆ ಮದುವೆಯಾಗಿ ಮನೆ ಜವಾಬ್ದಾರಿ, ಮಕ್ಕಳ ಲಾಲನೆ ಪೋಷಣೆ ಇತ್ಯಾದಿ ಕೌಟುಂಬಿಕ ಜವಾಬ್ದಾರಿಗಳು ಮೂಡಿಬಂತು.
ಈ ಜವಾಬ್ದಾರಿ ನಿರ್ವಹಣೆಗಳ ನಡುವೆಯೂ ತಮ್ಮ ಹವ್ಯಾಸಗಳನ್ನು ಜೀವಂತವಾಗಿರಿಸಿಕೊಳ್ಳುವ ಪ್ರಯತ್ನ ಅಪರ್ಣಾ ಅವರಲ್ಲಿ ನಡೆದೇ ಇತ್ತು. ಇವರ ಮಾವನವರಾದ ಶಂಕರ್ ರಾವ್ ಗೋರೇಗಾಂವ್ ಅವರು ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಕಾರಣ ಆಗಾಗ ಅಲ್ಲಿನ ಕಾರ್ಯಕ್ರಮಗಳಿಗೆ ಹೋಗಲು ಇವರಿಗೆ ಅವಕಾಶ ಒದಗಿ ಬರುತ್ತಿತ್ತು.
ಹೀಗೆ ಅಪರ್ಣಾ ಅವರು ಕೌಟುಂಬಿಕ ಜೀವನದಲ್ಲಿ ಇಪ್ಪತ್ತು ವರ್ಷಗಳು ಕಳೆಯುವ ಹೊತ್ತಿಗೆ ಜವಾಬ್ಧಾರಿಗಳು ಕಡಿಮೆಯಾಗಿ ಸ್ನಾತಕೋತ್ತರ ಪದವಿ ಓದಬೇಕೆಂಬ ಎಷ್ಟೋ ವರ್ಷಗಳ ಆಸೆಯನ್ನು ಕನ್ನಡ ಎಂ. ಎ. ಮಾಡುವುದರ ಮೂಲಕ ಪೂರೈಸಿಕೊಂಡರು. ಅದರ ನಡುವೆಯೇ ಕಂಡಿದ್ದನ್ನೆಲ್ಲಾ ಕಲಿಯುವ ಆಸೆ ಕೂಡ ಇವರ ಜೊತೆಗೂಡಿತ್ತು. ಐಸ್ಕ್ರೀಂ ಕ್ಲಾಸ್, ಕ್ಯಾಂಡಲ್ ಮೇಕಿಂಗ್ ಕ್ಲಾಸ್, ರೇಖಿ ಎಲ್ಲದರಲ್ಲೂ ತೊಡಗಿಕೊಂಡಿದ್ದರು. ಅನೇಕರಿಗೆ ಸಹಾಯ ಮಾಡುವುದೂ ಇವರಲ್ಲಿದ್ದ ಗುಣವಾಗಿತ್ತು. ಬದುಕಿನಲ್ಲಿ ಕುಟುಂಬಕ್ಕೆ ಉಂಟಾದ ಕೆಲವು ಆರ್ಥಿಕ ಅನುಭವಗಳು ಅಪರ್ಣಾ ಅವರಲ್ಲಿ ಸ್ವಂತದ ದುಡಿಮೆ ಬೇಕು ಎಂಬ ನಿರ್ಧಾರವನ್ನು ಮೂಡಿಸಿತು.
ಅಪರ್ಣಾ ಅವರು ಅದುವರೆಗೂ ಹವ್ಯಾಸವಾಗಿಸಿಕೊಂಡಿದ್ದ ಸೋಪಿನ ತಯಾರಿಕೆಯನ್ನು ಸಣ್ಣ ಆದಾಯದ ಮೂಲವನ್ನಾಗಿಸಿಕೊಳ್ಳುವ ಪ್ರಯತ್ನ ಆರಂಭಿಸಿದರು. ಹೀಗೆ "ಶುಭ್ರಾ ಎಸೆನ್ಶಿಯಲ್ಸ್ " ಬೆಳೆಸಿದ ಅಪರ್ಣಾ ಅವರು ತಮ್ಮ ಹವ್ಯಾಸಗಳ ಖರ್ಚಿಗಾಗುವಷ್ಟು ತಾವೇ ಹೊಂದಿಸಿಕೊಂಡು ಬೆಳೆಯತೊಡಗಿದರು. ತಾವು ಸಂಪಾದನೆ ಮಾಡದಿದ್ದಾಗ ಖರ್ಚು ಮಾಡುವಾಗಲೂ ಪ್ರಶ್ನಿಸದ ತಮ್ಮ ಪತಿರಾಯರು, ಸ್ವಾವಲಂಬಿಯಾಗಿ ಸೃಜನಶೀಲವಾದ ಪ್ರಯತ್ನವನ್ನೂ ಮಾಡಿದಾಗಲೂ ಪ್ರಶ್ನಿಸದೆ ಸಹಕರಿಸಿದ್ದನ್ನು ಅಪರ್ಣಾ ಕೃತಜ್ಞತೆಯಿಂದ ನೆನೆಯುತ್ತಾರೆ. 2018ರ ಆರಂಭದಲ್ಲಿ ಅಪರ್ಣಾ ಸಾಬೂನು ತಯಾರಿಕೆ ಆರಂಭಿಸಿದರು. ಬಣ್ಣಗಳ ಬಗ್ಗೆ ಅರಿವಿದ್ದ ಅವರು ಅವುಗಳನ್ನು ಮನಮೋಹಕವಾಗಿ ಬಳಸುವುದನ್ನು, ಆಕರ್ಷಕವಾಗಿ ಚಿತ್ರಿಸುವುದನ್ನು ಕಲಿತರು. ಅವರ ಕೈಯಲ್ಲಿ ಸಾಬೂನು ಕಲೆಯಾಯಿತು; ಕುಸುರಿಯಾಯಿತು. ಸಾಬೂನು ಒಂದೊಂದೂ ಆರ್ಟ್ ಪೀಸ್‌ನಂತೆ ಮೂಡತೊಡಗಿತು. ಅವರೊಳಗಿನ ಕಲಾವಿದೆ ಇದಕ್ಕಾಗಿ ಹಗಲಿರುಳೂ ದುಡಿದಳು.
ಅಪರ್ಣಾ ರಾವ್ ಅವರು ತಮ್ಮ ಕುರಿತು ಮಾತ್ರವಲ್ಲದೆ ಎಲ್ಲ ಮಹಿಳೆಯರ ಆರ್ಥಿಕ ಸ್ವಾವಲಂಬನೆಯ ಕುರಿತು ಗಂಭೀರವಾಗಿ ಆಲೋಚಿಸತೊಡಗಿದ್ದು ಕೊರೊನಾ ದಿನಗಳಲ್ಲಿ. ಕೌಶಲ್ಯ ಮತ್ತು ಆಸಕ್ತಿ ಇರುವವರಿಗೆ, ಸ್ವಾಭಿಮಾನದಿಂದ ಬದುಕಬೇಕು ಎನ್ನುವವರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವ ಆಲೋಚನೆಯಲ್ಲಿಯೇ ಹುಟ್ಟಿಕೊಂಡಿದ್ದು ಫೇಸ್ಬುಕ್ನಲ್ಲಿನ 'ಧೃತಿ ಮಹಿಳಾ ಮಾರುಕಟ್ಟೆ' ಗ್ರೂಪ್. ಇದು ಇಂದು 50,000 ಸದಸ್ಯರನ್ನು ಮೀರಿದ ದೊಡ್ಡ ಅಂತರಜಾಲ ಸಮೂಹವಾಗಿ ವ್ಯಾಪಿಸಿದೆ. ಇದು 'ಧೃತಿ ಮಹಿಳಾ ಮಾರುಕಟ್ಟೆ' ಎಂದು ನೋಂದಾಯಿತವೂ ಆಗಿದೆ. ಸುಮಾರು ಸಹಸ್ರ ಉತ್ಪಾದಕರು ನೋಂದಾಯಿಸಿಕೊಂಡಿದ್ದು ಈಗಾಗಲೇ 300ಕ್ಕೂ ಹೆಚ್ಚು ಮಂದಿ ಮಹಿಳೆಯರು ತಮ್ಮ ಅಸ್ತಿತ್ವ ಸ್ಥಾಪಿಸಿಕೊಂಡಿದ್ದಾರೆ. ಇನ್ನೂ ಹಲವು ನೂರು ಜನ ತಮಗೆ ಅನುಕೂಲ ಆದಾಗ ಇಲ್ಲಿ ಭಾಗವಹಿಸುತ್ತಾರೆ.. ಅಪರ್ಣಾ ತಮ್ಮ ಈ ಬೆಳವಣಿಗೆಯಲ್ಲಿ ತಮ್ಮ ಫೇಸ್ಬುಕ್ನ ಅನೇಕ ಆತ್ಮೀಯರ ಪಾಲಿದೆ ಎನ್ನುತ್ತಾರೆ. "ಕಟ್ಟಿದ್ದು ನಾನಾದರೂ ಸಂಘಟಿಸುವಲ್ಲಿ ನನ್ನ ಎಲ್ಲಾ ಸ್ನೇಹಿತೆಯರ ಪಾಲೂ ಇದೆ. ಪ್ರತೀ ಹಂತದಲ್ಲೂ ಅವರುಗಳ ಪ್ರೋತ್ಸಾಹ ಇಲ್ಲದಿದ್ದರೆ ನನಗೆ ಇಷ್ಟು ಆತ್ಮವಿಶ್ವಾಸ ಬೆಳೆಯುತ್ತಿರಲಿಲ್ಲ. ಹೆಣ್ಣುಮಕ್ಕಳು ಒಂದಾಗಿ ನಿಂತರೆ ಏನಾದರೂ ಸಾಧನೆ ಸಾಧ್ಯ ಎಂಬ ನಂಬಿಕೆಗೆ ಬಲ ಕೊಟ್ಟಿದ್ದು ಇವರುಗಳೇ. ಹೊಸ ಹೊಸ ಕನಸು ಕಾಣಲು ಇವರಲ್ಲನೇಕರು ಪ್ರೇರಣೆ ನನಗೆ. ನಮ್ಮ ಇನ್ನಷ್ಟು ಹೊಸ ಆಲೋಚನೆಗಳಿಗೆ ರೆಕ್ಕೆ ಕಟ್ಟಿ ಹಾರುವ ಪ್ರಯತ್ನ ಈಗಷ್ಟೇ ಶುರುವಾಗಬೇಕಿದೆ" ಎಂಬುದು ಅಪರ್ಣಾ ರಾವ್ ಅವರ ಆಪ್ತ ಮಾತು. ಇವೆಲ್ಲವುಗಳ ಸಾಕಾರ ರೂಪವಾಗಿ ಧೃತಿ ಮಹಿಳಾ ಮಾರುಕಟ್ಟೆ 5 ವರ್ಷ ಮೀರಿ ತನ್ನ ಪಯಣವನ್ನು ಮುಂದುವರೆಸಿದ್ದು ಪ್ರತಿವರ್ಷ ಸಂಭ್ರಮೋತ್ಸವಗಳನ್ನೂ ಎಲ್ಲರೂ ಮೆಚ್ಚಿ ನಲಿವಂತೆ ಆಚರಿಸುತ್ತ ಬಂದಿದೆ.
ಅಪರ್ಣಾ ಅವರ ಬರವಣಿಗೆಯೂ ಓದಲು ಹಿತವೆನಿಸುವಂತದ್ದು. ಎಲ್ಲರನ್ನೂ ಗೌರವಿಸಿ, ಎಲ್ಲರ ಬೆಳವಣಿಗೆಯೂ ಆಗಬೇಕು ಎಂದು ಸಮೂಹವನ್ನು ಕಟ್ಟಿ, ಮನಗಳನ್ನು ಬೆಸೆದು, ಈ ಬಂಧವನ್ನು ಉತ್ತಮ ಕ್ರಿಯಾಶೀಲತೆಯ ಔನ್ನತ್ಯದೆಡೆಗೆ ಸಾಗುವಂತೆ ಮಾಡುವ ಅವರ ವಿಶಾಲ ಮನಸ್ಸು ಎಲ್ಲರೂ ಮೆಚ್ಚುವಂತದ್ದು. ಎಲ್ಲರಿಗೂ ಆಪ್ತರಾದ ಅಪರ್ಣಾ ರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Aparna Rao 🌷🌷🌷
ಕಾಮೆಂಟ್‌ಗಳು