ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ವಿ. ನಾಗರಾಜಮೂರ್ತಿ


 ಕೆ. ವಿ. ನಾಗರಾಜಮೂರ್ತಿ


ಕೆ. ವಿ. ನಾಗರಾಜಮೂರ್ತಿ ಅನನ್ಯ ರಂಗ ಸಂಘಟನಕಾರ, ಕಲಾವಿದ, ರಂಗಕರ್ಮಿ, ಕನ್ನಡಪರ ಹೋರಾಟಗಾರ ಹೀಗೆ ಬಹುಮುಖಿ ಸಾಧಕರು. "ಕೆ.ವಿ.ನಾಗರಾಜ ಮೂರ್ತಿಯವರು ಮಗುವಾಗಿದ್ದಾಗ ತೊಟ್ಟಿಲಲ್ಲಿ ಸರಿಯಾಗಿ ಮಲಗುತ್ತಿರಲಿಲ್ಲವಂತೆ. ದಿನದ ಇಪ್ಪತ್ನಾಲ್ಕು ಗಂಟೆ ಕೈಕಾಲು ಬಡಿಯುತ್ತಲೇ ಇರುತ್ತಿದ್ದರಂತೆ. ಆಗ ಹಾಗಿದ್ದವರು ಈಗಲೂ ಅದನ್ನು ನಿಲ್ಲಿಸಿಲ್ಲವಂತೆ. ದಿನದ ಇಪ್ಪತ್ನಾಲು ಗಂಟೆ ಕೈಕಾಲು ಬಡಿಯುತ್ತ ಓಡಾಡುತ್ತಿರುತ್ತಾರೆ." ಹೀಗೆ ಒಮ್ಮೆ ಇವರ ಕುರಿತು ಬಣ್ಣಿಸಿದವರು  ಜಾನಪದ ತಜ್ಞ ನಾಡೋಜ ಗೊ.ರು. ಚನ್ನಬಸಪ್ಪನವರು.  

ಕೆ. ವಿ. ನಾಗರಾಜಮೂರ್ತಿ ಅವರು 1958ರ ಮಾರ್ಚ್ 7ರಂದು ಜನಿಸಿದರು.  ತಂದೆ ವಿರೂಪಾಕ್ಷಯ್ಯ ರೈತರು ಮತ್ತು ಜವಳಿ ವ್ಯಾಪಾರಿಗಳು. ತಾಯಿ ರುದ್ರಮ್ಮ.  ಬೆಂಗಳೂರಿನ ದಾಸರಹಳ್ಳಿ ಸಮೀಪದ ಕನ್ನಲ್ಲಿ ಗ್ರಾಮ ಇವರ ಊರು.  

ನಾಗರಾಜಮೂರ್ತಿ ಅವರಿಗೆ ಬಾಲ್ಯದಲ್ಲೆ ನಾಟಕಗಳಲ್ಲಿ ಆಸಕ್ತಿ ನಾಟಿತ್ತು.  ನಾಲ್ಕನೇ ತರಗತಿಯಲ್ಲಿರುವಾಗ ಜಯಮ್ಮ ಟೀಚರ್ ಇವರಿಂದ  ಶೂರ್ಪಣಕಿ ಪಾತ್ರ ಮಾಡಿಸಿದ್ದು ಎಲ್ಲರಿಂದ ಮೆಚ್ಚುಗೆ ಗಳಿಸಿದರೂ,  ತಂದೆ ನಾಟಕ ಮಾಡಿ ಕೆಟ್ಟ ಕೆಲಸ ಮಾಡ್ತೀಯ ಅಂತ, ದೊಣ್ಣೆ ಏಟು ಕೊಟ್ಟರು.  ನಾಗರಾಜಮೂರ್ತಿ ಅವರಿಗೆ, ಅದರಲ್ಲೇನು ತಪ್ಪಿದೆ ಎಂದು ಪ್ರಶ್ನೆ ಮೂಡಿ ಕ್ರಮೇಣ ಅದಕ್ಕೇ ಆಕರ್ಷಿತರಾದರು.  ಜೊತೆಗೆ ಮನೆಯಲ್ಲಿ ತಂದೆಯವರಿಗಿದ್ದ ರಾಜಕೀಯ ಸ್ನೇಹ ಮತ್ತು ಸುತ್ತಲಿನ ವಾತಾವರಣ ಇವರನ್ನು ಸಮಾಜಮುಖಿಯಾದ ರಾಜಕೀಯ ಚಿಂತನೆಗಳತ್ತ ಪ್ರೇರಿಸಿತು.  ರಾಜಾಜಿನಗರದ ಬಸವೇಶ್ವರ ಹೈಸ್ಕೂಲು ಓದುವ ದಿನಗಳಲ್ಲಿ ಉತ್ತಮ ಚರ್ಚಾಪಟುವಾಗಿ ಬಹುಮಾನ ಗೆದ್ದರು. 

ಪಿಯುಸಿ ಓದುವ ವೇಳೆಗೆ ಬೀದಿ ನಾಟಕಗಳು 
ನಾಗರಾಜಮೂರ್ತಿ ಅವರನ್ನಾಕರ್ಷಿಸಿತ್ತು.   ವೈ ಎಸ್ ವಿ ದತ್ತ ಅವರೊಂದಿಗೆ ಜೊತೆಗೂಡಿ ಎರಡೆರೆಡು ಪಾತ್ರಗಳ ನಾಟಕಗಳಲ್ಲಿ ಅಭಿನಯಿಸಲು ತೊಡಗಿದರು.  ಇಂಜಿನಿಯರಿಂಗ್ ಓದಲು ಅಂಕಗಳಿದ್ದೂ,  ಅಪ್ಪ ಫೀಸ್ ಕಟ್ಟಿ ಬಂದರೂ ಹಠಹಿಡಿದ ನಾಗರಾಜಮೂರ್ತಿ,  ಆ ಓದಿಗೆ ಹೋಗಲಿಲ್ಲ.  ಸರ್ಕಾರಿ ವಿಜ್ಞಾನ ಮತ್ತು ಕಲಾ ಶಾಲೆಯಲ್ಲಿ  ಭೂಗರ್ಭ ಶಾಸ್ತ್ರ ಪದವಿ, ರಂಗಕಲೆ ಪದವಿ ಮತ್ತು ಔಷದಶಾಸ್ತ್ರ ಪದವಿ ಎಂಬ ಮೂರು ಪದವಿಗಳ ಅವಧಿಗೆ ಅಲ್ಲೇ ಓದಿದರು. ಅವರನ್ನು ಅಲ್ಲಿಯೇ ನಿಲ್ಲಿಸಿದ ಆಕರ್ಷಣೆ ವಿದ್ಯಾರ್ಥಿ ಸಂಘಟನೆಯಲ್ಲಿ ಅವರಿಗೆ ಮೂಡಿದ ಒಲವು ಮತ್ತು ಅವರಿಗೆ ಸಿಕ್ಕ ಜನಪ್ರಿಯತೆ.  ಹೀಗೆ ಓದುವ ದಿನಗಳಲ್ಲಿ ರಂಗ ಚಟುವಟಿಕೆ ಮತ್ತು ವಿದ್ಯಾರ್ಥಿ ಸಂಘಟನೆ ಅವರ ಪ್ರಮುಖ ಆಸಕ್ತಿ ಕೇಂದ್ರಗಳಾಗಿ ರೂಪುಗೊಂಡವು.  ವಿದ್ಯಾರ್ಥಿ ಸಂಘಟನೆಯಲ್ಲಿರುವಾಗ ಇವರ ಸಕ್ರಿಯ 
ಹೋರಾಟ ಚಿಂತನೆ,  ದೇವರಾಜ ಅರಸು ಅವರ ಮೆಚ್ಚುಗೆ ಮತ್ತು ಇವರ ಹೋರಾಟಕ್ಕೆ ಪರಿಹಾರ ಬೆಂಬಲದ ಯಶಸ್ಸು  ಕೂಡ ತಂದುಕೊಟ್ಟಿತು. 

ಸರ್ಕಾರಿ ಕಾಲೇಜಿನಿಂದ ನಾಗರಾಜಮೂರ್ತಿ ಅವರು ಮೊದಲು ಮಾಡಿಸಿದ ನಾಟಕ ತುರ್ತುಪರಿಸ್ಥಿತಿ ವಾತಾವರಣದಲ್ಲಿ 'ಧನ್ವಂತರಿ ಚಿಕಿತ್ಸೆ'.  ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಸಂಘ ಕಟ್ಟಿ ಪ್ರಾರಂಭಿಕ ಅಧ್ಯಕ್ಷರಾಗಿಯೂ ಅಪಾರ ಕೆಲಸ ಮಾಡಿದರು. ಇವರು ಅಂದಿನ ದಿನದಲ್ಲಿ ನಿರ್ದೇಶಿಸಿದ 'ಕಟ್ಟು' ಅಂತಹ ನಾಟಕಗಳೂ ಗಮನ ಸೆಳೆದಿದ್ದವು. 

ನಾಗರಾಜಮೂರ್ತಿ ಅವರು ಜಯಪ್ರಕಾಶ್ ನಾರಾಯಣ್ ಅವರ ಕೂಗಿಗೆ ಒಲಿದು ಜನತಾ ಪಕ್ಷದ ಕಾರ್ಯಕರ್ತರಾದರು.  ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟಗಳಲ್ಲಿ ಸಕ್ರಿಯರಾದರು.  1980ರ ವೇಳಗೆ ಜನತಾ ಪಕ್ಷ ಹಲವು ಭಾಗಗಳಾಗಿ ಒಡೆದಾಗಲೂ ಜನತಾಪಕ್ಷದಲ್ಲಿ ಉಳಿದರು. 1983ರ ವೇಳೆಗೆ ದೊಡ್ಡಬಳ್ಳಾಪುರದಲ್ಲಿ ಜರುಗಿದ ಜನತಾಪಕ್ಷದ ಸಮಾವೇಶದ ಮೇಲ್ವಿಚಾರಣೆ ನಾಗರಾಜ ಮೂರ್ತಿ ಅವರದಿತ್ತು.  ಆ ಸಮಾವೇಶಕ್ಕೆ ಆಗಮಿಸಿದ್ದ ಮಾಜಿ ಪ್ರಧಾನಿ ಚಂದ್ರಶೇಖರ್ ಅವರಿಗೆ ನಾಗರಾಜಮೂರ್ತಿ ಅವರಲ್ಲಿ ವಿಶೇಷ ಒಲವು ಮೂಡಿತ್ತು.  ಮುಂದೆ ಚಂದ್ರಶೇಖರ್ ಅವರ 6 ತಿಂಗಳ ಭಾರತ ಯಾತ್ರೆಯ ಸಂಘಟನೆಯ ಆಯೋಜನೆಯಲ್ಲೂ ನಾಗರಾಜ ಮೂರ್ತಿ ಅವರ ಪ್ರಮುಖ ಪಾತ್ರವಿತ್ತು. ಅದಕ್ಕೆ ಹೊಂದಿಕೊಂಡಂತೆ ಚುನಾವಣೆಗಳು ನಡೆದು ಕರ್ನಾಟಕದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂತು. ನಾಗರಾಜಮೂರ್ತಿ ಅವರಿಗೆ ಕಾರ್ಪೊರೇಷನ್ ಚುನಾವಣೆಗಳಲ್ಲಿ ಟಿಕೆಟ್‍ ಸಿಕ್ಕರೂ ಮನೆಯಲ್ಲಿ ತಂದೆ ತಾಯಿಗಳು ಒಪ್ಪದೆ ಅವರ ರಾಜಕೀಯದಲ್ಲಿನ ಅಧಿಕಾರದೆಡೆಗಿನ ಪಯಣ ಸಾಗಲಿಲ್ಲ. 

ಈ ಮಧ್ಯೆ ಚಿದಾನಂದ ಮೂರ್ತಿ ಅವರ ನೇತೃತ್ವದಲ್ಲಿ ಸಣ್ಣ ರೀತಿಯಲ್ಲಿ ನಡೆಯುತ್ತಿದ್ದ ಗೋಕಾಕ್ ಚಳವಳಿಗೆ ಮೊದಲ ಬಾರಿಗೆ ಒಂದು ಸಾವಿರಕ್ಕೂ ಹೆಚ್ಚಿನ ಜನರ ಬಲದ ಕಾವು ದೊರೆತದ್ದು ನಾಗರಾಜಮೂರ್ತಿ ಅವರ ನೇತೃತ್ವದ ಸರ್ಕಾರಿ ಕಾಲೇಜಿನ ಸಂಘಟನೆಯಿಂದ.  ಮುಂದೆ ರಾಜಕುಮಾರ್ ಆಗಮನದಿಂದ ಆ ಹೋರಾಟ ದೊಡ್ಡ ವ್ಯಾಪ್ತಿ ಪಡೆದದ್ದು ಇತಿಹಾಸ.  ನಾಗರಾಜಮೂರ್ತಿ ಇತರ ಪ್ರಮುಖ ಕನ್ನಡ ಹೋರಾಟಗಳಲ್ಲೂ ಸಕ್ರಿಯರಾಗಿದ್ದರು. ಕ್ರಿಕೆಟ್ ಟೂರ್ನಮೆಂಟಿನಲ್ಲಿ ಉತ್ತಮ ಸ್ಪಿನ್ ಬೌಲರ್ ಆಗಿ ಸಾಧನೆ ತೋರಿ ಲ್ಯಾನ್ಸ್ ಗಿಬ್ಸ್ ಎಂಬ ಹೋಲಿಕೆಯೊಂದಿಗೆ ಇವರು 'ಗಿಬ್ಸ್' ಎಂದೇ ಪ್ರಸಿದ್ಧರಾಗಿದ್ದರು. 

ನಾಗರಾಜಮೂರ್ತಿ ಅವರು ನಾಟಕ ರಂಗದಲ್ಲಿ ತಮ್ಮ ಮೂರು ಪದವಿಗಳ ನೆಪದಲ್ಲಿನ ವ್ಯಾಸಂಗದಲ್ಲೂ ನಿರಂತರ ಸಕ್ರಿಯವಾಗಿದ್ದರು. ಆರ್ ಟಿ ರಮಾ, ಬಿ. ಚಂದ್ರಶೇಖರ್, ಸುಧೀಂದ್ರ ಶರ್ಮಾ, ಕ ವೆಂ ರಾಜಗೋಪಾಲ್, ಎಚ್ ಕೆ ರಂಗನಾಥ್ ಹೀಗೆ ಹಲವರ ಪ್ರೇರಣೆ ಇವರ ಜೊತೆಗಿತ್ತು.  ರಮಾ ನಿರ್ದೇಶಿಸಿದ 'ಶಹಜಹಾನ್' ನಾಟಕಕ್ಕೆ ಉತ್ತಮ ಪ್ರತಿಕ್ರಿಯೆ ಬಂದಾಗ ಆ ನಾಟಕವನ್ನು ಕಾಲೇಜು ವೇದಿಕೆಯಿಂದ ರವೀಂದ್ರ ಕಲಾಕ್ಷೇತ್ರದ ವೇದಿಕೆಗೆ ತರಲು ಹೊರಟಾಗ, ನಾಟಕ ಅಕಾಡೆಮಿಯಿಂದ ಸೂಕ್ತ ಬೆಂಬಲ ಸಿಗದಿದ್ದರೂ, 'ಪ್ರಯೋಗರಂಗ' ವೇದಿಕೆ ಮೂಲಕ ರಂಗಭೂಮಿಯ ವಿಶಾಲ ಕ್ಷೇತ್ರಕ್ಕೆ ಅಣಿಯಾದರು.  ಪೂರ್ಣಪ್ರಮಾಣದಲ್ಲಿ ಇವರೊಂದಿಗೆ ನಾಗೇಂದ್ರ ಶಾ, ಕಾಶಿ, ವಾಸು, ಧನಂಜಯ, ರಘು, ಆಚಾರ್ ಮುಂತಾದ ಉತ್ಸಾಹಿಗಳು ಕೈಗೂಡಿಸಿದರು. 'ಪ್ರೇತದ್ವೀಪ' ನಾಟಕ ಎಂ. ಎ. ಸೂರಿ ನಿರ್ದೇಶನದಲ್ಲಿ ಸುಂದರ ಪ್ರಯೋಗವಾಗಿ ಬಾಂಬೆ ದೆಹಲಿ ಸೇರಿ 20 ಕಡೆ ಪ್ರದರ್ಶನ ಆಗಿ ಹೆಸರಾಯ್ತು.  ಶ್ರೀನಿವಾಸ ಪ್ರಭು ನಿರ್ದೇಶನದ  'ಬ್ರಹ್ಮಚಾರಿ ಶರಣಾದ' ನೂರಾರು ಪ್ರದರ್ಶನ ಕಂಡಿತು.  ಸ್ವಯಂ ನಾಗರಾಜಮೂರ್ತಿ ನಿರ್ದೇಶನದಲ್ಲಿ ಯು. ಆರ್. ಅನಂತಮೂರ್ತಿ ನಿರ್ದೇಶನದಲ್ಲಿ 'ಮೌನಿ'  ಮೂಡಿತು. ಎಚ್. ಎಸ್‍. ಶಿವಪ್ರಕಾಶ್ ನೇತೃತ್ವದಲ್ಲಿ ಆರು ತಿಂಗಳ ಕಾಲ ಸಂಶೋಧನಾ ಅಧ್ಯಯನ ನಡೆದು  'ಮಂಟೆ ಸ್ವಾಮಿ ಕಥಾ ಪ್ರಸಂಗ' ನಾಟಕ ರೂಪುಗೊಂಡಿತು.  ಭಾಗೀರಥಿ ಬಾಯಿ ಕದಂ, ಸಂಚಾರಿ ಮಂಗಳ ಅವರುಗಳ ಸಕ್ರಿಯ ಭಾಗವಹಿಕೆ, ಸಿ ಜಿಕೆ ಬೆಳಕು ವಿನ್ಯಾಸ, ಯೋಗಾನರಸಿಂಹ ಸಂಗೀತ, ಕೆರೆಮನೆ ಶಿವಾನಂದ ಹೆಗಡೆ ವಿದ್ಯುತ್ ಸಂಯೋಜನೆ, ಎನ್.ಎಸ್.ಡಿ ಪದವೀಧರ ಸುರೇಶ್ ಶಾನಗಳ್ಳಿ ನಿರ್ದೇಶನ ಹೀಗೆ ದೊಡ್ಡ ಪ್ರತಿಭಾನ್ವಿತ ಸಮೂಹವೆ ದೊಡ್ಡ ಕೆಲಸ ಮಾಡಿತು.  ಇದು ಮಂದೆ 500ಕ್ಕೂ ಹೆಚ್ಚು ಪ್ರದರ್ಶನ ನೀಡಿ ಮುಂದೆ ಸಾಗುತ್ತಿದೆ. ಇದಲ್ಲದೆ ರಾಜಬೇಟೆ, ಸಂತೆಯಲ್ಲಿ ನಿಂತ ಕಬೀರ, ಮುಂತಾದ ಹಲವು ನಾಟಕಗಳ ನಿರ್ಮಾಣ; ಸ್ಮಶಾನದಲ್ಲಿ ಕುರುಕ್ಷೇತ್ರ, ಅಂಬಿಗರ ಚೌಡಯ್ಯ ಮುಂತಾದ ನಿರ್ದೇಶನ; ಅನೇಕ ನಾಟಕಗಳಲ್ಲಿ ಪಾತ್ರ ಹೀಗೆ ನಾಗರಾಜಮೂರ್ತಿ ನಿರಂತರ ರಂಗಭೂಮಿಯಲ್ಲಿದ್ದಾರೆ. ಭಾರತ ಯಾತ್ರಾ ಕೇಂದ್ರ ಸಾಂಸ್ಕೃತಿಕ ಸಂಘಟನೆಯ ಮೂಲಕವೂ ಪುಸ್ತಕ ಪ್ರಕಟಣೆ,  ಕಾಲೇಜು ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರ,  ಬೀದಿ ನಾಟಕಗಳು, ನಾಟಕೋತ್ಸವಗಳು, ವಿದ್ಯಾರ್ಥಿ ನಾಟಕ ಸ್ಪರ್ಧೆಗಳು ಹೀಗೆ ಅವರ ರಂಗ ಚಟುವಟಿಕೆಗಳು ವ್ಯಾಪಕವಾದದ್ದು.   ಪ್ರೇಮ, ಗಣೇಶ್ ಅಂತಹ ಸಿನಿಮಾ ಕಲಾವಿದರು ಕೂಡ ಇಂತ ಶಿಬಿರಗಳಿಂದ ಅರಳಿದರು. ಮಾಸ್ಟರ್ ಹಿರಣ್ಣಯ್ಯ, ಅನಂತನಾಗ್ ಶಂಕರ ನಾಗ್ , ಕ ವೆಂ ರಾಜಗೋಪಾಲ್ ಅಂತಹವರು ಸಹ ಇಲ್ಲಿನ ಶಿಬಿರಗಳಲ್ಲಿ ಮಾರ್ಗದರ್ಶಿಸಿದ್ದರು. ಸಿಜಿಕೆ ನಿರ್ದೇಶಿಸಿದ್ದರು. ನಾಗರಾಜಮೂರ್ತಿ ಸಂಘಟನೆಯನ್ನು ವಹಿಸುತ್ತಿದ್ದರು.  

ನಾಗರಾಜಮೂರ್ತಿ ಮುಕ್ತ ಮುಕ್ತ ಧಾರಾವಾಹಿಯಲ್ಲಿನ ಪ್ರಸಿದ್ಧ ಪಾತ್ರ ನಿರ್ವಹಣೆಯೂ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. 

ನಾಗರಾಜಮೂರ್ತಿ ನಗರ ಜಿಲ್ಲಾ ಶರಣ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ‍ 
ಅಂತರರಾಷ್ಟ್ರೀಯ ಮಟ್ಟದಲ್ಲಿ ಬಸವ ತತ್ವ ಸಮ್ಮೇಳನಗಳನ್ನು ನಡೆಸಿದ್ದಾರೆ.  ನಾಟಕ ಅಕಾಡೆಮಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಅನೇಕ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಅಂಕಣ ಮೂಡಿಸಿದ್ದಾರೆ.  ಸರ್ಕಾರಿ ಸಾಂಸ್ಕೃತಿಕ ಉತ್ಸವಗಳಾದ ಹಂಪಿ ಉತ್ಸವ, ಜಾನಪದ ಜಾತ್ರೆ ಮತ್ತು ಅನೇಕ ರೀತಿಯ ಕಾರ್ಯಕ್ರಮ ಯೋಜನೆಗಳಿಗೆ ಹೊಸ ಸ್ಪರ್ಶವುಳ್ಳ ಸಾಂಸ್ಕೃತಿಕ ಮೆರುಗು ಮೂಡಿಸಿದ್ದಾರೆ. ತಾವೂ ತಮ್ಮ ತಂದೆಯರ ಹೆಸರಲ್ಲಿ ಟ್ರಸ್ಟ್ ಮೂಡಿಸಿ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ರಂಗೋತ್ಸವ, ರಂಗ ಕಲಿಕಾ ಶಿಬಿರ, ರಂಗ ಮಂದಿರ ನಿರ್ಮಾಣ ಮುಂತಾದ ಮಹತ್ವದ ಕೆಲಸಗಳನ್ನೂ ನಡೆಸುತ್ತಿದ್ದಾರೆ. 

ನಾಗರಾಜಮೂರ್ತಿ ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿ ಅನೇಕ ಗೌರವಗಳು ಸಂದಿವೆ. 

ಮಹಾನ್ ರಂಗಕರ್ಮಿ ಕೆ. ವಿ. ನಾಗರಾಜಮೂರ್ತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birthday of great theatre artiste K V Nagaraja Murthy

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ