ಭೂದಾನ
ಭೂದಾನ ಚಳವಳಿ
ಭಾರತದ ಭೂಹೀನರ ಸಮಸ್ಯೆಯನ್ನು ಗಾಂಧಿ ಮಾರ್ಗದಲ್ಲಿ ಸತ್ಯ ಮತ್ತು ಅಹಿಂಸಾ ತತ್ತ್ವಗಳ ಮೂಲಕ ಪರಿಹರಿಸುವ ಒಂದು ಪ್ರಯತ್ನ. ಗಾಂಧೀಜಿಯವರ ಹಿರಿಯ ಅನುಯಾಯಿ ಆಚಾರ್ಯ ವಿನೋಬಾ ಭಾವೆಯವರು ಹೈದರಾಬಾದಿನ ಶಿವರಾಮಪಲ್ಲಿಯಲ್ಲಿ 1951 ಮಾರ್ಚ್ 8 ರಂದು ಈ ಚಳವಳಿ ಪ್ರಾರಂಭಿಸಿದರು.
ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮದಲ್ಲಿ ನಿರತರಾಗಿದ್ದ ಆಚಾರ್ಯ ವಿನೋಬಾ ಭಾವೆಯವರು ಸ್ವಾತಂತ್ರ್ಯೋತ್ತರ ಭಾರತದ ಕ್ಲಿಷ್ಟ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಅಹಿಂಸಾತ್ಮಕ ಪರಿಹಾರದ ಶೋಧನೆಯಲ್ಲಿದ್ದರು. ಈ ಶೋಧನೆಯ ಮಧ್ಯದಲ್ಲಿ ಭೂದಾನದ ಆವಿರ್ಭಾವವಾಯಿತು. ಇದನ್ನು ಭೂದಾನ ಯಜ್ಞವೆಂದು ಕರೆದರು.
ಹಿಂದಿನ ಹೈದರಾಬಾದು ರಾಜ್ಯದ ತೆಲಂಗಾಣ ಭಾರತದ ಅತಿ ಹಿಂದುಳಿದ ಪ್ರದೇಶಗಳಲ್ಲಿ ಒಂದಾಗಿತ್ತು. ಅಲ್ಲಿ ಜಮೀನ್ದಾರಿ ಪದ್ಧತಿ ವ್ಯಾಪಕವಾಗಿದ್ದು, ಹಲವು ಮಂದಿ ಜಮೀನ್ದಾರರು ಅಲ್ಲಿಯ ಇಡೀ ಭೂಮಿಯಮೇಲೆ ಸರ್ವಸ್ವಾಮ್ಯ ಪಡೆದಿದ್ದರು. ಲಕ್ಷಾಂತರ ಭೂಹೀನ ಕಾರ್ಮಿಕರೂ ಗೇಣಿದಾರರೂ ಬಡತನ, ಶೋಷಣೆಗಳಿಂದ ಕಷ್ಟ ಪರಿಸ್ಥಿತಿಯಲ್ಲಿದ್ದರು. ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಕೆಲವರು ರೈತರನ್ನು ಹಿಂಸಾಮಾರ್ಗಕ್ಕೆ ಪ್ರಚೋದಿಸಿದರು. ಅನೇಕ ಕಡೆ ಜಮೀನ್ದಾರರ ಕೊಲೆ, ಆಸ್ತಿಪಾಸ್ತಿಗಳ ಲೂಟಿ ಆದುವು. ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರ ವಿಶೇಷ ಪೊಲೀಸ್ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ಕೈಗೊಳ್ಳಬೇಕಾಯಿತು. ಹೀಗಾಗಿ ತೆಲಂಗಾಣ ಪ್ರದೇಶ ಹಿಂಸಾಕಾಂಡವಾಗಿ ಜನ ಬಹಳ ಭಯಗ್ರಸ್ತರಾಗಿದ್ದರು. ಈ ಸನ್ನಿವೇಶದಲ್ಲಿ ಅಹಿಂಸೆಯ ಸಂದೇಶವನ್ನು ಬೀರಲು ಮತ್ತು ಪರಿಸ್ಥಿತಿಯ ಅಧ್ಯಯನ ಮಾಡಲು ಆಚಾರ್ಯ ವಿನೋಬಾ ಭಾವೆಯವರು ನಾಲ್ಕೈದು ಮಂದಿ ಶಿಷ್ಯರೊಡಗೂಡಿ ಕಾಲ್ನಡಿಗೆಯಲ್ಲಿ ತೆಲಂಗಾಣದ ಪ್ರವಾಸ ಕೈಗೊಂಡರು. ಹೋದೆಡೆಯಲೆಲ್ಲ ಹಿಂಸಾಮಾರ್ಗ ಯಾವ ಸಮಸ್ಯೆಯನ್ನೂ ಬಗೆಹರಿಸುವುದಿಲ್ಲ ಎಂದು ಹೇಳಿ ಅಹಿಂಸಾತತ್ತ್ವದ ಅನುಸರಣೆಯ ಅಗತ್ಯತೆಯನ್ನು ಬೋಧಿಸಿದರು.
ಪೋಚಂಪಳ್ಳಿ ಎಂಬ ಊರಿಗೆ ಹೋದಾಗ ಅಲ್ಲಿಯ ಭೂಹೀನ ಹರಿಜನರ ಬಡತನದ ಭೀಕರತೆ ಕಂಡು ಆ ಸಂಜೆ ಗ್ರಾಮಸ್ಥರ ಸಭೆಯಲ್ಲಿ ಸಮಸ್ಯೆಯನ್ನು ಪ್ರಸ್ತಾವಿಸಿ ಎಂಬತ್ತು ಎಕರೆ ಜಮೀನನ್ನು ಯಾಚಿಸಿದರು. ಆಗ ಸಭೆಯಲ್ಲಿದ್ದ ಜಮೀನ್ದಾರ್ ಶ್ರೀರಾಮಚಂದ್ರರೆಡ್ಡಿ ಒಂದು ನೂರು ಎಕರೆ (40.47 ಹೆಕ್ಟೇರ್‍ಗಳು) ಭೂಮಿಯನ್ನು ದಾನ ಮಾಡಿದರು. ಆ ಭೂಮಿಯ ಹಂಚಿಕೆಯೂ ಆಯಿತು. ಅದೊಂದು ರೋಮಾಂಚಕಾರಿ ಘಟನೆ. ಅದೇ ಭೂ ಸಮಸ್ಯೆಯ ನಿವಾರಣೆಗೆ ಒಂದು ನೂತನ ವಿಧಾನವಾಗಿ ಪರಿಣಮಿಸಿತು. ವಿನೊಬಾ ಭಾವೆಯವರು ಮಾರನೆದಿನ ಮತ್ತೊಂದು ಹಳ್ಳಿಗೆ ಹೋದರು. ಹಿಂದಿನ ದಿನದ ತಮ್ಮ ಅನುಭವವನ್ನು ತಿಳಿಸಿದರು. ಅಲ್ಲಿಯೂ ಭೂದಾನ ದೊರಕಿತು. ಈ ರೀತಿ ಎರಡು ತಿಂಗಳ ಕಾಲ ತೆಲಂಗಾಣದಲ್ಲಿ ಅವರು ಕಾಲ್ನಡಿಗೆಯಲ್ಲಿ ಪ್ರವಾಸಮಾಡಿದರು. ಭೂದಾನದ ಸಂದೇಶವನ್ನು ಬೀರಿದರು. ಗಾಳಿ ನೀರು, ಆಕಾಶ ಹೇಗೆ ಭಗವಂತನ ಸಾಮ್ಯಕ್ಕೆ ಒಳಪಟ್ಟವೋ ಭೂಮಿಯೂ ಹಾಗೆಯೇ ದೇವರ ಸ್ವತ್ತು. ಭಗವಂತನ ಕೊಡುಗೆಯಾದ ಭೂಮಿಯ ಮೇಲೆ ಸರ್ವರಿಗೂ ಹಕ್ಕಿದೆ. ಭೂಮಿಯುಳ್ಳವರು ಭೂಹೀನರಿಗೆ ಒಂದು ಭಾಗವನ್ನು ಹಂಚಿಕೊಡಬೇಕು. ನಿಮ್ಮ ಕುಟುಂಬದಲ್ಲಿ ಐದು ಮಕ್ಕಳಿದ್ದರೆ ಭೂಹೀನ ರೈತನನ್ನು ಆರನೆಯ ಮಗನೆಂದು ತಿಳಿಯಿರಿ. ನಿಮ್ಮ ಭೂಮಿಯ ಆಸ್ತಿಯಲ್ಲಿ ಆರನೆಯ ಭಾಗವನ್ನು ಅವನಿಗೂ ಕೊಡಿ ಎಂಬ ಸಂದೇಶವನ್ನು ಪ್ರಸಾರಮಾಡುತ್ತ ನಡೆದರು ವಿನೋಬಾ. ಹೋದೆಡೆಯೆಲ್ಲ ದಾನಗಂಗೆ ಹರಿಯಿತು. ತೆಲಂಗಾಣದಲ್ಲಿ ಪ್ರವಾಸಮಾಡಿದ ಎರಡು ತಿಂಗಳ ಅವಧಿಯಲ್ಲಿ ಒಟ್ಟು ಹನ್ನೆರಡು ಸಾವಿರ ಎಕರೆಯಷ್ಟು (4856.4 ಹೆಕ್ಟೇರ್) ಭೂಮಿಯನ್ನು ದಾನವಾಗಿ ಪಡೆದರು. ಭೂಹೀನರ ಮತ್ತು ಜಮೀನ್ದಾರರ ನಡುವೆ ಸೌಹಾರ್ದ ಮೂಡಿಸಿ ತೆಲಂಗಾಣದಲ್ಲಿ ಶಾಂತಿ ಮತ್ತು ನೆಮ್ಮದಿ ಬಹುಮಟ್ಟಿಗೆ ನೆಲೆಗೊಳ್ಳುವಂತೆ ಮಾಡಿದರು.
ವಿನೋಬಾಭಾವೆಯವರ ಈ ಸಾಧನೆಯ ಫಲಶ್ರುತಿ ದೇಶಾದ್ಯಂತ ಪ್ರಸಿದ್ಧವಾಯಿತು. ದೇಶದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಅಹಿಂಸಾಮಾರ್ಗದ ಶೋಧವಿದೆಂದು ಅನೇಕರು ಹೇಳಿದರೆ ಕೆಲವರು ಉಪಟಳದಿಂದ ಬೇಸತ್ತಿದ್ದ ಜನ ಅನುಸರಿಸಿದ ಪಲಾಯನ ನೀತಿಯಿದು.m, ಬೇರೆ ರಾಜ್ಯಗಳಲ್ಲಿ ಈ ವಿಧಾನ ಯಶಸ್ವಿಯಾಗದು ಎಂದು ಸಂದೇಹಪಟ್ಟರು. ದೆಹಲಿಯಲ್ಲಿ ಎರಡು ತಿಂಗಳ ಅವಧಿಯಲ್ಲಿ ಭೂದಾನಕ್ಕೆ ತೆಲಂಗಾಣದಲ್ಲಿ ದೊರೆತದ್ದಕ್ಕಿಂತ ಹೆಚ್ಚು ಭೂಮಿ ದೊರಕಿತು. ಈ ಸಾಧನೆ ಬೇರೆ ರಾಜ್ಯಗಳ ಕಾರ್ಯಕರ್ತರನ್ನು ಹುರಿದುಂಬಿಸಿತು. ಸರ್ವಸೇವಾ ಸಂಘದ ನೇತೃತ್ವದಲ್ಲಿ ಸರ್ವೋದಯ ಕಾರ್ಯಕರ್ತರು ಭೂದಾನ ಪಡೆಯಲು ಕಾಲ್ನಡಿಗೆಯ ಪ್ರವಾಸವನ್ನು ಎಲ್ಲ ರಾಜ್ಯಗಳಲ್ಲೂ ಕೈಗೊಂಡರು. ಕೆಲವು ತಿಂಗಳುಗಳಲ್ಲೇ ಭೂದಾನ ಸಾರ್ವತ್ರಿಕ ಚಳವಳಿಯೇ ಆಯಿತು.
ವಿನೋಬಾ ಭಾವೆಯವರು ಉತ್ತರ ಪ್ರದೇಶ ರಾಜ್ಯದಲ್ಲಿ ಪ್ರವಾಸಮಾಡಿ ಐದು ಲಕ್ಷ ಎಕರೆಗಳಷ್ಟು ಭೂಮಿ ಸಂಗ್ರಹಿಸಿದರು. ಬಿಹಾರದಲ್ಲಿ ಭೂಸಮಸ್ಯೆಯ ನಿವಾರಣೆಗಾಗಿ ಭೂದಾನ ಯಜ್ಞಕಾರ್ಯವನ್ನು ಇತರ ಕಾರ್ಯಕರ್ತರೊಂದಿಗೆ ವ್ಯಾಪಕವಾಗಿ ಹಾಗು ಸತತವಾಗಿ ಇಪ್ಪತ್ತೆಂಟು ತಿಂಗಳ ಕಾಲ ಕ್ಯೆಗೊಂಡರು. ಈ ಅವಧಿಯಲ್ಲಿ ಒಟ್ಟು ಇಪ್ಪತ್ತುಮೂರು ಲಕ್ಷ ಎಕರೆಗಳನ್ನು ಸಂಗ್ರಹಿಸಿದ್ದು ಒಂದು ಅದ್ಭುತ ದಾಖಲೆಯೇ ಆಯಿತು. ಅಲ್ಲದೆ ವಿನೋಬಾರವರು ಪಶ್ಚಿಮ ಬಂಗಾಳ, ಒರಿಸ್ಸಾ, ಆಂಧ್ರ, ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗುಜರಾತು, ರಾಜಸ್ಥಾನ, ಪಂಜಾಬು, ಕಾಶ್ಮೀರ ಮತ್ತು ಅಸ್ಸಾಂಗಳಲ್ಲಿ ಪಾದಯಾತ್ರೆ ನಡೆಸಿ ಭೂದಾನ ಹಾಗೂ ಸರ್ವೋದಯ ಸಂದೇಶವನ್ನು ಹಳ್ಳಿಹಳ್ಳಿಗೂ ಸಾರಿದರು.
ಭೂದಾನ ಚಳವಳಿ ಆರಂಭವಾದ ಮೇಲೆ ಮೊದಲ ಹತ್ತು ವರ್ಷಗಳಲ್ಲಿ ಸುಮಾರು ಐವತ್ತು ಲಕ್ಷ ಎಕರೆಗಳಷ್ಟು ಜಮೀನು ಸಂಗ್ರಹವಾಯಿತು. ಅನಂತರ ಭೂದಾನ ದೊರಕಿದ ಗ್ರಾಮದಲ್ಲಿ ಗ್ರಾಮಸ್ಥರ ಸಭೆಯನ್ನು ಕರೆದು ಆ ಗ್ರಾಮದ ಭೂಹೀನ ಬಡ ಕೃಷಿ ಕಾರ್ಮಿಕರ ಮಾಹಿತಿ ಸಂಗ್ರಹಿಸಿ ಗ್ರಾಮಸ್ತರ ಅಭಿಪ್ರಾಯದಂತೆ ಅರ್ಹರಾದ ಭೂಹೀನ ಕಾರ್ಮಿಕರಿಗೆ ಭೂಮಿ ಹಂಚುವ ಕೆಲಸ ವ್ಯವಸ್ಥಿತವಾಗಿ ನಡೆಯಿತು. ಈ ಕಾರ್ಯಕ್ಕೆ ಸರ್ಕಾರದ ಸಹಕಾರ ಹಾಗೂ ಕಾನೂನು ಅಂಗೀಕಾರ ದೊರೆಯಿತು. ಹಲವಾರು ರಾಜ್ಯಸರ್ಕಾರಗಳು ಭೂದಾನ ಕಾನೂನುಗಳನ್ನು ಮಾಡಿವೆ. ಭೂದಾನ ಆರಂಭವಾದ ಒಂದು ದಶಕದಲ್ಲಿ ಸುಮಾರು ಮೂರುಲಕ್ಷ ಭೂಹೀನ ಕೃಷಿ ಕಾರ್ಮಿಕ ಕುಟುಂಬಗಳಿಗೆ ಜಮೀನನ್ನು ಹಂಚಲಾಯಿತು.
ಭೂದಾನ ಚಳವಳಿ ಗುರಿಯಂತೆ ಭೂಹೀನ ಕೃಷಿ ಕಾರ್ಮಿಕರಿಗೆಲ್ಲ ಭೂಮಿಯನ್ನು ಒದಗಿಸುವ ಕಾರ್ಯದಲ್ಲಿ ಪೂರ್ಣ ಯಶಸ್ಸನ್ನು ಪಡೆಯದಿರಬಹುದಾದರೂ ಈ ಚಳವಳಿ ದೇಶದಲ್ಲಿ ಭೂಸುಧಾರಣೆಗೆ ತಕ್ಕ ವಾತಾವರಣ ಉಂಟುಮಾಡಿದೆ. ಮೇಲಾಗಿ ಭೂದಾನದ ತಾತ್ತ್ವಿಕ ಧ್ಯೇಯಗಳ ಪ್ರಚಾರದಿಂದಾಗಿ ಭೂಮಾಲೀಕತ್ವದ ಕಲ್ಪನೆಬಗ್ಗೆ ಮೌಲಿಕ ಬದಲಾವಣೆಯಾಗಲು ಬಹುಮಟ್ಟಿಗೆ ಕಾರಣವಾಯಿತು. ಭೂದಾನ ಕೇವಲ ಭೂಪ್ರಾಪ್ತಿಯ ಹಾಗೂ ಹಂಚಿಕೆಯ ಕಾರ್ಯಕ್ರಮವಷ್ಟೇ ಅಲ್ಲ; ಶ್ರೇಷ್ಠ ಸಾಮಾಜಿಕ ಹಾಗೂ ಆರ್ಥಿಕ ಮೌಲ್ಯಗಳ ಪ್ರಸಾರ ಹಾಗೂ ಅನ್ವಯದ ಮೂಲಕ ಸಮಾಜದ ಸರ್ವಾಂಗೀಣ ಪ್ರಗತಿಯ ಸಾಧನೆಯೇ ಅದರ ಅಂತಿಮ ಗುರಿ. ಭೂದಾನದ ವಿಸ್ತೃತ ಪ್ರಕಾರಗಳಾಗಿ ಸಂಪತ್ತಿನ ದಾನ, ಶ್ರಮದಾನ, ಬುದ್ಧಿದಾನ ಮತ್ತು ಗ್ರಾಮದಾನ-ಇವು ಬೆಳೆದುಬಂದಿವೆ. ಇವುಗಳೆಲ್ಲದರ ಮೂಲ ಉದ್ದೇಶ ವ್ಯಕ್ತಿಯಲ್ಲಿ ಧರ್ಮದರ್ಶಿತ್ವ ಭಾವನೆಯ ಪ್ರತಿಷ್ಠಾಪನೆ. ವ್ಯಕ್ತ್ತಿ ತನ್ನಲ್ಲಿರುವ ಭೂಮಿ, ಸಂಪತ್ತು, ವಿದ್ಯೆ, ಶಕ್ತಿ ಮುಂತಾದವೆಲ್ಲಕ್ಕೂ ತಾನು ಧರ್ಮದರ್ಶಿಯೆಂದು ಭಾವಿಸಿ ಅವನ್ನು ಸಮಾಜದ ಹಿತಕ್ಕಾಗಿ ಬಳಸಬೇಕು. ಇದರಿಂದಲೇ ವ್ಯಕ್ತಿಯ ವಿಕಾಸ ಮತ್ತು ಸಮಾಜದ ಉನ್ನತಿ. ವಿನೋಬಾರ ಈ ಚಳವಳಿಯನ್ನು 1952ರಲ್ಲಿ ಜಯಪ್ರಕಾಶ ನಾರಾಯಣರು ಸೇರಿ ಮುಂದೆ ಸರ್ವೋದಯ ಸಾಧನೆಗಾಗಿ ದುಡಿದರು.
ಮಾಹಿತಿ ಆಧಾರ: ಮೈಸೂರು ವಿಶ್ವಕೋಶ
Bhudhaan movement, Bhoodaan
ಕಾಮೆಂಟ್‌ಗಳು