ಮಲೆಯೂರು ಗುರುಸ್ವಾಮಿ
ಮಲೆಯೂರು ಗುರುಸ್ವಾಮಿ
ಪ್ರೊ. ಮಲೆಯೂರು ಗುರುಸ್ವಾಮಿ ಪ್ರಾಧ್ಯಾಪಕರಾಗಿ, ಸಂಘಟಕರಾಗಿ ಮತ್ತು ಬರಹಗಾರರಾಗಿ ಹೆಸರಾಗಿದ್ದವರು.
ಗುರುಸ್ವಾಮಿ ಅವರು ಚಾಮರಾಜನಗರ ತಾಲ್ಲೂಕಿನ ಮಲೆಯೂರು ಗ್ರಾಮದಲ್ಲಿ 1947ರ ಮಾರ್ಚ್ 1ರಂದು ಜನಿಸಿದರು. ತಂದೆ ಶಿವಣ್ಣ, ತಾಯಿ ಮರೆಮ್ಮ.
ಗುರುಸ್ವಾಮಿ ಅವರು ಚಾಮರಾಜನಗರ, ನಂಜನಗೂಡು ಮತ್ತು ಮೈಸೂರಿನ ಜೆಎಸ್‌ಎಸ್ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ನಿವೃತ್ತಿಯ ಬಳಿಕ ಒಂದು ವರ್ಷ (2012) ಮೈಸೂರು ವಿವಿಯ ಬಸವಪೀಠದ ಸ್ಥಾಪಕ
ಪ್ರಾಧ್ಯಾಪಕರಾಗಿದ್ದರು.
ಮಲೆಯೂರು ಗುರುಸ್ವಾಮಿ ಅವರು ಕಾದಂಬರಿಕಾರರಾಗಿ, ವಿಮರ್ಶಕರಾಗಿ, ವಾಗ್ಮಿಯಾಗಿ ಹೆಸರಾಗಿದ್ದರು. ಪವಾಡ ಪುರುಷ ಮಲೆ ಮಹದೇಶ್ವರರ ಕುರಿತ ‘ಮಹಾಯಾತ್ರಿಕ’, ಮೈಸೂರು ಯದುವಂಶಸ್ಥರಲ್ಲಿ ಪ್ರಸಿದ್ಧರಾದ ಚಿಕ್ಕದೇವರ ಒಡೆಯರ ಕುರಿತಾದ ‘ಅಪ್ರತಿಮ ವೀರ’, ರಾಜ ಪ್ರಭುತ್ವದ ಕಾಲದಲ್ಲಿದ್ದ ಸಾಮಾಜಿಕ ಸ್ಥಿತಿಗತಿಗಳನ್ನು ಬಿಂಬಿಸುವ ‘ಚರಿತ್ರೆಯ ಪುಟ್ಟಕ್ಕೆ ಒಂದು ಟಿಪ್ಪಣಿ’, ಗಾಯಕಿ ಮತ್ತು ನರ್ತಕಿ ನಾಗರತ್ನಮ್ಮ ಜೀವನಾಧಾರಿತ ‘ಕಪಿಲೆ ಹರಿದಳು ಕಡಲಿಗೆ’, ನಾಟಕಕಾರ ಸಂಸ ಕುರಿತ ‘ಸಂಸ’, ಶ್ರೀರಂಗಪಟ್ಟಣದ ಬಳಿ ಇರುವ ಬಂಗಾರದೊಡ್ಡಿ ನಾಲೆಯ ಕುರಿತ ‘ಬಂಗಾರದೊಡ್ಡಿ’ ಮುಂತಾದವು ಅವರ ಪ್ರಮುಖ ಕಾದಂಬರಿಗಳಲ್ಲಿ ಸೇರಿವೆ. ಮಾತೆಂಬುದು ಜ್ಯೋತಿರ್ಲಿಂಗ ವಚನ ಸಾಹಿತ್ಯ, ಶ್ರೀ ಕಾರ್ಯಸ್ವಾಮಿ ಮಠದ ಕ್ಷೇತ್ರ ಚರಿತ್ರೆ, ಶರಣ ಕಿರಣ ವ್ಯಕ್ತಿ ಚಿತ್ರ, ಪ್ರಭುಲಿಂಗ ಲೀಲೆ, ಬಸವಣ್ಣ, ಮುಂತಾದ ಕೃತಿಗಳನ್ನೂ ರಚಿಸಿದ್ದರು. ಮೂಡಲ ಸೀಮೆಯ ಕಥೆಗಳು, ಕಾಡಂಚಿನ ಕೋಗಿಲೆಗಳ ಕಲರವ, ಕಪಿಲಾ ನದಿಯ ಎಡಬಲದಿ, ಹೆಜ್ಜಿಗೆ ಅಕ್ಕ, ಛಂದೋನಿಜಗುಣ, ರಾಜಪಥ, ಸೋಮಸಿರಿ, ಶಿವಪ್ರಭೆ, ಶಿವಯೋಗ, ಹೊನ್ನಹೊಳೆ, ಶಿವಸಂಪದ ಸೇರಿದಂತೆ ಅನೇಕ ಕೃತಿಗಳನ್ನು ಸಂಪಾದಿಸಿದ್ದರು. 'ಕಪಿಲೆ ಹರಿದಳು ಕಡಲಿಗೆ’ ಕಾದಂಬರಿಯನ್ನು ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ‘ಬೆಂಗಳೂರು ನಾಗರತ್ನಮ್ಮ' ಹೆಸರಿನಲ್ಲಿ ರಂಗಭೂಮಿಗೆ ತಂದಿದ್ದರು.
ಮಲೆಯೂರು ಗುರುಸ್ವಾಮಿ ಅವರು ಸಂಘಟಕರಾಗಿಯೂ ಅಪಾರ ಕೆಲಸ ಮಾಡಿದ್ದರು. 1997ರಲ್ಲಿ ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾದ ನಂತರ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೆ ಶ್ರಮಿಸಿದ್ದರು. ಜಿಲ್ಲಾ ಕಸಾಪದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಅವರು, ನಂತರವೂ ಎರಡು ಅವಧಿಗೆ ಜಿಲ್ಲಾ ಕಸಾಪದ ಜವಾಬ್ದಾರಿ ಹೊತ್ತಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು.
ಮಲೆಯೂರು ಗುರುಸ್ವಾಮಿ ಅವರಿಗೆ ಮಹಾಕವಿ ಷಡಕ್ಷರ ದೇವ ಸ್ಮಾರಕ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರೋಟರಿ ರಾಜ್ಯೋತ್ಸವ ಪ್ರಶಸ್ತಿ, 2010ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿ, ಪುರಸ್ಕಾರಗಳು ಸಂದಿದ್ದವು. 2014ರಲ್ಲಿ ಚಾಮರಾಜನಗರ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.
ಮಲೆಯೂರು ಗುರುಸ್ವಾಮಿ ಅವರು 2023ರ ಮಾರ್ಚ್ 8ರಂದು ಈ ಲೋಕವನ್ನಗಲಿದರು.
Respects to departed soul writer Prof. Maleyur Guruswamy
ಕಾಮೆಂಟ್‌ಗಳು