ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರುಕ್ಮಿಣಿ ಮಾಲಾ


 ರುಕ್ಮಿಣಿ ಮಾಲಾ


ರುಕ್ಮಿಣಿ ಮಾಲಾ ಅಂದರೆ ಲವಲವಿಕೆಯ ವ್ಯಕ್ತಿತ್ವ ಕಣ್ಣೆದುರು ಮೂಡುತ್ತೆ.   

ಮಾರ್ಚ್ 29 ರುಕ್ಮಿಣಿ ಮಾಲಾ ಅವರ ಜನ್ಮದಿನ. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ.  ಅಮ್ಮ ಭಾರತಿ, ಅಪ್ಪ ಕೃಷ್ಣಭಟ್. ಪಿ.ಯು.ಸಿ.ಯಲ್ಲಿ ಇರುವಾಗಲೇ ಕನ್ನಡ ಸಾಹಿತ್ಯ ಮತ್ತು ವಿಜ್ಞಾನ ಲೋಕದ ಮಹಾನ್ ಬರಹಗಾರ ಜಿ. ಟಿ. ನಾರಾಯಣರಾವ್ ಅವರ ಸುಪುತ್ರ ಅನಂತವರ್ಧನ ಅವರ ಪತ್ನಿಯಾಗಿ ಮೈಸೂರು ನಿವಾಸಿಯಾದರು. 

ಸಾಹಿತ್ಯ, ಸಂಗೀತ, ನೃತ್ಯ, ಕ್ರೀಡೆ, ಸಂಸ್ಕೃತಿ ಮಾತ್ರವಲ್ಲದೆ ಯಾವುದೇ ಸಂಗತಿಗಳೂ ರುಕ್ಮಿಣಿ ಮಾಲಾ ಅವರ ಆಪ್ತ ಕಣ್ಣೋಟದ ಮುಗುಳ್ನಗೆಯ ಲಹರಿಯಿಂದ ತಪ್ಪಿಸಿಕೊಳ್ಳುವುದಿಲ್ಲ.  ಅವರು ಬದುಕಿನ ಒಂದೊಂದಂಶವನ್ನೂ ಆಪ್ತ ಮಂದಹಾಸದಿಂದ ನೋಡುತ್ತಾರೆ.  

ಮಾಲಾ ಹೊಟ್ಟೆಪಕ್ಷ,  ಸಭೆ ಸಮಾರಂಭ, ಚಿತ್ರ ನಮ್ಮದು ಶೀರ್ಷಿಕೆ ನಿಮ್ಮದು, ಕನಸು ಮೇಲೋಗರ, ಚಿಂತನೆ, ಗಾದೆಯ ಗದ್ದುಗೆ, ಪುಟ್ಟನ ಪುಟ್ಟ ಕಥೆಗಳು, ನಿಸರ್ಗ, ಮಾಲಾ ಪುಸ್ತಕ ನೋಟ, ವಿಡಿಯೋ ಸಂಗ್ರಹ, ಒಡಹುಟ್ಟು - ಕುಟುಂಬ - ನೆಂಟರಿಷ್ಟರು, ಸೂರ್ಯ - ಚಂದ್ರ - ಆಕಾಶ, ಮಾಲಾ ದೇಗುಲ ದರ್ಶನ, ಮಾಲಾ ನಾಟಕ ನೋಟ, ಮಾಲಾ ಸೋಜಿಗ, ಪ್ರಾಣಿ - ಪಕ್ಷಿ - ಕೀಟಗಳ ಸಾಮ್ರಾಜ್ಯ, ಸಂಸ್ಕೃತಿಯಾನ, ಸಾಹಸ, ಜಾತ್ರೆ, ಕುಂದು ಕೊರತೆ ನಿವಾರಣೆ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಕಥೆ ಕಥೆ ಚಾರಣ, ಸೈಕಲ್ ಸವಾರಿ, ಯಕ್ಷ ಕಿನ್ನರರು ...... ಹೀಗೆ ಹಲವಾರು ಆಕರ್ಷಕವಾದ ರುಕ್ಮಿಣಿ ಮಾಲಾ ಅವರ ಟ್ಯಾಗುಳ್ಳ ಬರಹಮಾಲೆಗಳು ಇಲ್ಲವೇ ಚಿತ್ರಮಾಲೆಗಳು, ಅವರ ಬರಹ ಮತ್ತು ವಿಶಾಲ ವ್ಯಾಪ್ತಿಯ ಆಸಕ್ತಿಗಳನ್ನು ಹೇಳುತ್ತ ಬಂದಿವೆ. 

ರುಕ್ಮಿಣಿ ಮಾಲಾ ಅವರಿಗೆ ಎಳೆವೆಯಲ್ಲೇ ಪುಸ್ತಕ ಓದುವ ಹವ್ಯಾಸವಿತ್ತು. ಮೈಸೂರಿಗೆ ಬಂದಮೇಲೆ ವಿಪುಲ ಅವಕಾಶ ದೊರೆಯಿತು. ಬರೆಯಲು ಓದಲು ಮಾವನವರಾದ ಜಿ.ಟಿ.ಎನ್. ಅವರು ನೀಡಿದ ಉತ್ತೇಜನ ಬಹಳವಾಗಿತ್ತು.  ಇವರು ಬಾಲ್ಯದಲ್ಲೇ ಹಾಸ್ಯಪ್ರಿಯೆ. ಹೀಗಾಗಿ ಅವರ ಬದುಕಿನ ಕುರಿತಾದ ನೋಟ ಮತ್ತು ಅಭಿವ್ಯಕ್ತಿಗಳೆರಡರಲ್ಲೂ ಹಾಸ್ಯ ಲಾಲಿತ್ಯವಿದೆ.

ರುಕ್ಮಿಣಿ ಮಾಲಾ ಅವರ ಬರಹಗಳು ಅವರ 'ನಿಸರ್ಗದ ಸೊಬಗು' ಬ್ಲಾಗಲ್ಲಿ, ಸೋಷಿಯಲ್ ಮೀಡಿಯಾದಲ್ಲಿ, ಪತ್ರಿಕಾ ಲೇಖನಗಳಲ್ಲಿ ಹರಿದಿವೆ. ಇವರ ಪ್ರಕಟಿತ ಕೃತಿಗಳಲ್ಲಿ 'ಅಕ್ಷಮಾಲಾ' ಮಕ್ಕಳಕಥೆಗಳು, 'ಮಂದಹಾಸ' ಹಾಸ್ಯಲೇಖನಗಳ ಗುಚ್ಛ, 'ಚಾರಣ ಹೂರಣ' ಚಾರಣ ಲೇಖನಗಳು,
'ಹಿಮಾಲಯದ ಸನ್ನಿಧಿಯಲ್ಲಿ' - ಕೈಲಾಸ ಮಾನಸ ಸರೋವರ, ಚಾರ್ಧಾಮ ಯಾತ್ರೆ ಪ್ರವಾಸ ಕಥನ ಸೇರಿವೆ. 

ಮನೆ, ಸಾಂಸ್ಕೃತಿಕ ಲೋಕ, ಕ್ರೀಡಾಸಕ್ತಿ, ಕುಟುಂಬ ವಾತ್ಸಲ್ಯ, ನಿಸರ್ಗದೊಂದಿಗಿನ ಸಹಬಾಳ್ವೆ, ಲೋಕದೊಂದಿಗಿನ ಸಹಾನುಭೂತಿ - ಸಮರಸ - ಸಾಮಾಜಿಕ ಪ್ರಜ್ಞೆಯ ಹಾಸ್ಯ ಭಾವ ವಿಮರ್ಶೆ ಇವೆಲ್ಲವುಗಳ ಸಮನ್ವಯತೆ ರುಕ್ಮಿಣಿ ಮಾಲಾ ಅವರಿಗೆ ಸಿದ್ಧಿಸಿದೆ.  ಇಷ್ಟಾದರೂ ಅವರು ತಮಗೂ ಸೋಮಾರಿತನಕ್ಕೂ ನಂಟು ಎನ್ನುತ್ತಾರೆ.

ರುಕ್ಮಿಣಿ ಮಾಲಾ ಅವರಿಗೆ ಬದುಕೆಂದರೆ ನಡೆಸಿದಂತೆ ನಡೆಯುತ್ತ ಸಾಗುವುದು. ಬದುಕು ಜಟಕಾಬಂಡಿ ಮಂಕುತಿಮ್ಮನ ಕಗ್ಗದ ಪದ್ಯ ಅವರಿಗೆ  ಬಲು ಪ್ರಿಯ. ಜೀವನದಲ್ಲಿ ಯಾರಿಗೆ ಉಪಕಾರ ಮಾಡಲು ಸಾಧ್ಯವಾಗದಿದ್ದರೂ ಅಪಕಾರ ಎಸಗದಂತೆ ಎಚ್ಚರದಿಂದ ನಡೆಯಬೇಕು ಎನ್ನುತ್ತಾರೆ. 

ರುಕ್ಮಿಣಿ ಮಾಲಾ ಅವರ ಲೋಕವನ್ನು ಕಾಣುವ ನೋಟ, ಗ್ರಹಿಸುವ ಸೂಕ್ಷ್ಮತೆ, ಹೊಳೆದದ್ದನ್ನು ಅಭಿವ್ಯಕ್ತಿಸುವ ಲಾಲಿತ್ಯ, ಲೋಕದೊಂದಿಗೆ ಬೆರೆಯುವ ಮಂದಹಾಸಯುಕ್ತ ಆಪ್ತತೆ ನಮಗೂ ಒಂದಿಷ್ಟು ಸಿದ್ಧಿಸಲಿ ಎಂಬ ಆಶಯದೊಂದಿಗೆ ಅವರಿಗೆ ಆತ್ಮೀಯವಾಗಿ ಹುಟ್ಟುಹಬ್ಬದ ಶುಭಾಶಯಗಳು. 

Happy birthday Rukmini Mala 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ