ಮಾಲತೇಶ ಬಡಿಗೇರ
ಮಾಲತೇಶ ಬಡಿಗೇರ ಅವರು ರಂಗಭೂಮಿಯ ಬಹುಮುಖಿ ಸಾಧಕ ಕರ್ಮಯೋಗಿ.
ಏಪ್ರಿಲ್ 1 ಮಾಲತೇಶ ಬಡಿಗೇರ ಅವರ ಜನ್ಮದಿನ. ಗದಗ ಜಿಲ್ಲೆಯ ಕೊಂಚಿಗೇರಿ ಅವರ ಊರು. ಎಸ್‌ಎಸ್‌ಎಲ್‌ಸಿ ನಂತರ ಐದು ವರ್ಷಗಳ ಕಾಲ ಕಲಿತಿದ್ದು ಚಿತ್ರಕಲೆಯಲ್ಲಿ ಡಿಪ್ಲೋಮಾ. 1995ರಲ್ಲಿ ನೀನಾಸಂ ನಲ್ಲಿ ರಂಗಭೂಮಿ ಕುರಿತು ಒಂದು ವರ್ಷದ ಡಿಪ್ಲೋಮಾ ಮುಗಿಸಿ, ಮತ್ತೊಂದು ವರ್ಷ ರಂಗ ತಿರುಗಾಟದಲ್ಲಿ ಭಾಗವಹಿಸಿ ನಾಟಕದ ಹಲವು ಆಯಾಮಗಳಲ್ಲಿ ತರಬೇತಿ ಪಡೆದರು.
ಬದುಕು ಹುಡುಕಿಕೊಂಡು ಬೆಂಗಳೂರಿಗೆ ಬಂದ ಮಾಲತೇಶ ಬಡಿಗೇರ ಅವರು ಪೋಸ್ಟರ್ ಬರೆಯುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು. ತದನಂತರ ರಂಗಭೂಮಿಯನ್ನೇ ಬದುಕಾಗಿಸಿಕೊಂಡು, ಕಳೆದ ಎರಡೂವರೆ ದಶಕಗಳಿಂದ ರಂಗಪ್ರಕಾರದ ಎಲ್ಲಾ ವಿಭಾಗಗಳಲ್ಲಿ ತೊಡಗಿಕೊಂಡಿದ್ದಾರೆ.
ಮಾಲತೇಶ ಬಡಿಗೇರ ಕನ್ನಡ ರಂಗಭೂಮಿಯಲ್ಲಿ ರಂಗನಿರ್ದೇಶಕರಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಬೆಳಕು, ಪ್ರಸಾಧನ, ವೇದಿಕೆ, ರಂಗಪರಿಕರ, ವಸ್ತ್ರ ವಿನ್ಯಾಸ ಹೀಗೆ ರಂಗಭೂಮಿಗೆ ಸಂಬಂಧಿಸಿದ ಎಲ್ಲ ಕೆಲಸಗಳಲ್ಲೂ ಅವರಿಗೆ ಪರಿಣತಿ ಇದೆ.
ಮಾಲತೇಶ ಐವತ್ತಕ್ಕೂ ಹೆಚ್ಚು ಮಕ್ಕಳ ಹಾಗೂ ದೊಡ್ಡವರ ನಾಟಕಗಳನ್ನು ನಿರ್ದೇಶಿಸಿದ್ದಾರೆ. 1999ರಲ್ಲಿ ಬೀದರ್ ರಂಗಶಿಬಿರದಲ್ಲಿ ‘ಗುಡುಸಲಿನ ಗುಡುದಾಶಿ' ಹಾಗೂ ಮೈಸೂರು ಬ್ಯಾಂಕ್ ಕನ್ನಡ ಬಳಗಕ್ಕೆ ಭೀಷ್ಮ ಸಹಾನಿಯವರ' ಮಾಧವಿ‘ ನಾಟಕವನ್ನು ನಿರ್ದೇಶಿಸುವ ಮೂಲಕ ರಂಗನಿರ್ದೇಶನವನ್ನು ವೃತ್ತಿಯಾಗಿ ಆರಂಭಿಸಿದರು. ತದನಂತರ ರಾವಿನದಿಯ ದಂಡೆಯಲ್ಲಿ, ರಾಕ್ಷಸ, ತಿರುಕರಾಜ, ಸತಹೊಮ ಅರಗಿನ ಬೆಟ್ಟ, ರೋಮಿಯೋ ಜೂಲಿಯೆಟ್, ಅಂಧಯುಗ, ತುಕ್ರನ ಕನಸು, ಹುಲಿಯ ನೆರಳು, ಬೂಟು ಬಂದೂಕುಗಳ ನಡುವೆ, ಕರಿಭಂಟ, ನಮ್ಮೂರ ಗಾಂಧಿ, ಮದುವೆ ಹೆಣ್ಣು, ಮಂಟೇಸ್ವಾಮಿ ಕಥಾ ಪ್ರಸಂಗ, ವೆಂಕಟಿಗನ ಹೆಂಡತಿ, ಸ್ಮಶಾನ ಕುರುಕ್ಷೇತ್ರ, ಮಹಾಮಾರಿ, ಗುಳಿಗೆ ಗುಮ್ಮ, ಶೂದ್ರ ತಪಸ್ವಿ, ಗಿರಿಜಾ ಕಲ್ಯಾಣ, ಸೂರ್ಯಶಿಕಾರಿ, ಸುರ್ಗಿ ಗುಡ್ಡದ ಮರೆಯಲ್ಲಿ, ಗುಣಮುಖ, ಮೇಘದೂತ.... ಹೀಗೆ ಒಂದಾದ ಮೇಲೊಂದರಂತೆ ನಾಟಕಗಳನ್ನು ನಿರ್ದೇಶಿಸುತ್ತ ಸಾಗಿದ್ದಾರೆ. ಮಾಲತೇಶ ಬಡಿಗೇರ ಅವರು 'ಬಹುರೂಪಿ' ಮತ್ತು ‘ಅದಮ್ಯ ರಂಗ ಸಂಸ್ಕೃತಿ’ ಅಂತಹ ರಂಗತಂಡಗಳನ್ನು ಹುಟ್ಟುಹಾಕಿ ಎಲ್ಲೆಡೆ ವ್ಯಾಪಿಸಿದ್ದಾರೆ. ಮಾಲತೇಶ ಬಡಿಗೇರ ಅವರ ಪತ್ನಿ ಛಾಯಾ ಭಾರ್ಗವಿ ಅವರು ಕೂಡಾ ರಂಗಕರ್ಮಿಯಾಗಿ ಅಪಾರ ಕೆಲಸ ಮಾಡುತ್ತಿದ್ದಾರೆ.
ಮಾಲತೇಶ ಬಡಿಗೇರ 1998ರಿಂದ ಸತತವಾಗಿ ಪ್ರತಿ ವರ್ಷವೂ ಮಕ್ಕಳ ರಂಗ ತರಬೇತಿ ಶಿಬಿರಗಳ ನಿರ್ದೇಶಕರಾಗಿ ಕಾರ್ಯಾಗಾರಗಳನ್ನು ನಡೆಸಿಕೊಡುತ್ತಾ ಶಿಬಿರದ ಭಾಗವಾಗಿ ನಾಟಕಗಳನ್ನೂ ಮಕ್ಕಳಿಗೆ ನಿರ್ದೇಶಿಸಿದ್ದಾರೆ. ಶಾಲಾ ಕಾಲೇಜುಗಳು, ಕಾರ್ಖಾನೆಗಳು, ಕಚೇರಿಗಳಿಗೆ ಹೋಗಿ ವಿದ್ಯಾರ್ಥಿಗಳು, ಸಿಬಂದಿವರ್ಗದವರಿಂದ ಯಕ್ಷ ಲೋಕವನ್ನೇ ಸೃಷ್ಟಿಸಿದ್ದಾರೆ. ಹವ್ಯಾಸಿ ರಂಗಭೂಮಿಯಲ್ಲಂತೂ ತಂಡಗಳು, ಊರುಗಳು ಇವೆಲ್ಲ ಸೀಮಿತ ಗಡಿಗಳನ್ನೆಲ್ಲ ಮೀರಿ ನಾಡಿನಾದ್ಯಂತ ಕರೆದಲ್ಲೆಲ್ಲಾ ಹೋಗಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ನಾಟಕ ಅಕಾಡೆಮಿಯ ಸದಸ್ಯರಾಗಿಯೂ ಅವರ ಅಪಾರ ಸೇವೆ ಸಂದಿದೆ.
ತಮ್ಮ ಮನೆಯಲ್ಲಿಯೇ ನೂರು ಜನ ಕುಳಿತುಕೊಳ್ಳಬಹುದಾದ ಒಂದು ರಂಗಮಂದಿರವನ್ನು ನಿರ್ಮಿಸಿರುವುದು ಮಾಲತೇಶ ಮತ್ತು ಛಾಯಾ ಅವರ ರಂಗಪ್ರೀತಿಗೆ ಒಂದು ನಿದರ್ಶನವಾಗಿದೆ.ಕೆಂಗೇರಿ ಉಪನಗರದ ರಾಮಜ್ಯೋತಿ ನಗರದ ದುಭಾಷಿಪಾಳ್ಯದ ತಮ್ಮ ನಿವಾಸದಲ್ಲಿ ಚಂದ್ರಶೇಖರ ಕಂಬಾರರ ಹೆಸರಿನಲ್ಲಿ ನಿರ್ಮಿಸಲಾಗಿರುವ ಈ ರಂಗ ಮಂದಿರಕ್ಕೆ ‘ಕಲಾಸೌಧ’ ಎಂದು ಹೆಸರಿಟ್ಟಿದ್ದಾರೆ
ಮಾಲತೇಶ ನಿರ್ದೇಶಿಸಿದ ನಾಟಕಗಳು ನಿರಂತರ ರಾಜ್ಯಮಟ್ಟದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿವೆ. 2006 ರಲ್ಲಿ ಕಲಾಗಂಗೋತ್ರಿ ತಂಡವು ಬಡಿಗೇರರ ನೇಪತ್ಯ ಕೌಶಲ್ಯಕ್ಕಾಗಿ ‘ಪದ್ದಣ್ಣ’ ಪ್ರಶಸ್ತಿ ಕೊಟ್ಟು ಗೌರವಿಸಿತು. 2004ರಲ್ಲಿ ‘ರಂಗನಿರಂತರ’ ಪುರಸ್ಕಾರ, 2006ರಲ್ಲಿ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ‘ಅಂತರಂಗ’ ಪ್ರಶಸ್ತಿ, 2007ರಲ್ಲಿ ಗದಗ ಜಿಲ್ಲಾ ಸಾಹಿತ್ಯ ಬಳಗದ ಪ್ರಶಸ್ತಿ, 2008ರಲ್ಲಿ ತುಮಕೂರಿನ ‘ಸಮ್ಮುಖ’ ಪ್ರಶಸ್ತಿ ಮತ್ತು ಮಂಡ್ಯದ ‘ಜನದನಿ’ ಮುಂತಾದ ಅನೇಕ ಪ್ರಶಸ್ತಿಗಳು ಮಾಲತೇಶರ ಪ್ರತಿಭೆಗೆ ಸಂದಿವೆ. 2006 ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ 'ಉಸ್ತಾದ ಬಿಸ್ಮಿಲ್ಲಾ ಖಾನ್’ ಪ್ರಶಸ್ತಿ ಇವರಿಗೆ ಸಂದಿತು. ಕರ್ನಾಟಕ ಸಚಿವಾಲಯ ಕ್ಲಬ್ ಬಡಿಗೇರ ನಿರ್ದೇಶನದ ಏಳು ನಾಟಕಗಳ ನಾಟಕೋತ್ಸವವನ್ನು ಹಮ್ಮಿಕೊಂಡು ಮಾಲತೇಶರವರಿಗೆ ಗೌರವವನ್ನು ಸೂಚಿಸಿತ್ತು.
ರಂಗಭೂಮಿಯ ಕರ್ಮಯೋಗಿ ಮಾಲತೇಶ ಬಡಿಗೇರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Malatesh Badiger
ಕಾಮೆಂಟ್‌ಗಳು