ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ಡಿ. ಇಂಚಲ


 ಎಸ್. ಡಿ. ಇಂಚಲ


ಶಿವಪುತ್ರಪ್ಪ ದೇವಪ್ಪ ಇಂಚಲ ಅವರು ನಾಡಿನ ಕವಿಗಳಾಗಿ ಪ್ರಸಿದ್ಧರು.

ಇಂಚಲ ಅವರು ಹಿರೇಬಾಗೇವಾಡಿಯಲ್ಲಿ 1913ರ ಏಪ್ರಿಲ್ 1ರಂದು ಜನಿಸಿದರು. ತಂದೆ ದೇವಪ್ಪ ಚಿನ್ನಪ್ಪ ಇಂಚಲ. ತಾಯಿ ಬಸವಂತವ್ವ.
ಸವದತ್ತಿ ತಾಲ್ಲೂಕಿನ ಇಂಚಲ ಗ್ರಾಮದಿಂದ ನಾಲ್ಕು ತಲೆಮಾರುಗಳ ಹಿಂದೆಯೇ ಇವರ ವಂಶಸ್ಥರು ಹಿರೇಬಾಗೇವಾಡಿಗೆ ಬಂದು ನೆಲೆಸಿದವರು. ತಂದೆ ದೇವಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರು. ಎಸ್.ಡಿ. ಇಂಚಲರವರ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಹಿರೇಬಾಗೇವಾಡಿಯಲ್ಲಿ ನಡೆಯಿತು.‍ ಮುಂದೆ ಮುಗುಟಗಾನ ಹುಬ್ಬಳ್ಳಿಯಲ್ಲಿ ಓದಿ
ಬೆಳಗಾವಿಯ ಗಿಲಗಂಜಿ ಅರಟಾಳ ಹೈಸ್ಕೂಲು ಸೇರಿದರು.  

ಇಂಚಲ ಅವರು ಅಂದಿನ ದಿನಗಳಲ್ಲೇ ನಾಟಕಕಾರ ಕೃಷ್ಣಕುಮಾರ ಕಲ್ಲೂರರ ಪ್ರೋತ್ಸಾಹದಿಂದ ಉತ್ತಮಗ್ರಂಥಗಳನ್ನು ಓದತೊಡಗಿದರು. ಬೇಂದ್ರೆ, ಮಧುರ ಚೆನ್ನರ ಕಾವ್ಯಗಳ ಅಭ್ಯಾಸದಲ್ಲಿ ತೊಡಗಿದಂತೆ 1930ರ ಸುಮಾರಿಗೆ ಕವನಗಳನ್ನು ಬರೆಯಲು ಪ್ರಾರಂಭಿಸಿದರು. ಮೆಟ್ರಿಕ್ ಪಾಸಾದ ನಂತರ ಕೊಲ್ಲಾಪುರದ ರಾಜಾರಾಮ ಕಾಲೇಜು ಸೇರಿದರು. ಅಲ್ಲಿ ಪ್ರೊ. ಕೆ.ಜಿ. ಕುಂದಣಗಾರ, ಟಿ.ಸಿ. ಇಟಗಿ ಮುಂತಾದವರ ಶಿಷ್ಯತ್ವ ಲಭಿಸಿತು. ಕಾಲೇಜಿನ ಕರ್ನಾಟಕ ಸಂಘದ ಮೂಲಕ ಹಲವಾರು ಪ್ರಖ್ಯಾತ ಸಾಹಿತಿಗಳ ಪರಿಚಯವಾಯಿತು. ಕಾವ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುದಲ್ಲದೆ ಕಾಲೇಜಿನ ಮಾಸಿಕ ಪತ್ರಿಕೆ ‘ರಾಜಾರಾಮಿಯನ್’ನಲ್ಲೂ ಹಲವಾರು ಕವನಗಳನ್ನು ಪ್ರಕಟಿಸಿದರು.1934ರಲ್ಲಿ ಬೆಳಗಾವಿಯಲ್ಲಿ ಶಿ.ಶಿ. ಬಸವನಾಳರ ಮಾರ್ಗದರ್ಶನದಲ್ಲಿ ನಾಡಹಬ್ಬವನ್ನು ಅದ್ದೂರಿಯಾಗಿ ಆಚರಿಸುವಲ್ಲಿ ಶ್ರಮಿಸಿದರು. ಈಶ್ವರ ಸಣಕಲ್ಲ, ಡಿ.ಎಸ್. ಕರ್ಕಿ, ವಿ.ಕೆ. ಕರಡಿ, ಬ.ಗಂ. ತುರಮರಿ ಮುಂತಾದ ಗೆಳೆಯರೆಲ್ಲರೂ ಸೇರಿ ಕಿರಿಯರ ಬಳಗವನ್ನು ಪ್ರಾರಂಭಿಸಿದರು. 

ಇಂಚಲರು 1938ರಲ್ಲಿ ಬಿ.ಎ. ಪದವಿ ಪಡೆದ ನಂತರ ಶಿಕ್ಷಕರಾಗಿ ವೃತ್ತಿಯನ್ನಾರಂಭಿಸಿದರು. ಮುಖ್ಯೋಪಾಧ್ಯಾಯರಾಗಿ, ಸಹಾಯಕ ಶಿಕ್ಷಣ ಅಧಿಕಾರಿಯಾಗಿ, ಬೆಳಗಾವಿ ಮತ್ತು ಹುಬ್ಬಳ್ಳಿಯ ಗುರುಸಿದ್ದೇಶ್ವರ ಕೆಪಿಟಿ ಕಾಲೇಜಿನ ಪ್ರಿನ್ಸಿಪಾಲರಾಗಿ, ಬೆಳಗಾವಿಯ ಜಿ.ಎ. ಜ್ಯೂನಿಯರ್‌ ಕಾಲೇಜಿನ ಪ್ರಿನ್ಸಿಪಾಲರಾಗಿ ನಿವೃತ್ತರಾದರು. 

ಇಂಚಲರ ಮೊದಲ ಕವನ ಸಂಕಲನ ‘ತರಂಗಿಣಿ’ 1949ರಲ್ಲಿ ಮಧುರಚೆನ್ನರ ಮುನ್ನುಡಿಯಲ್ಲಿ  ಮೂಡಿಬಂತು.  ಇದರಲ್ಲಿ ಸಂಗ್ರಹಗೊಂಡಿರುವ ಬಹುಪಾಲು ಕವನಗಳು ನಾಡುನುಡಿಗೆ ಸಂಬಂಧಿಸಿದ್ದು ನವೋದಯ ಮಾರ್ಗದಲ್ಲಿ ರಚಿತವಾಗಿವೆ. ಎರಡನೆಯ ಕವನ ಸಂಕಲನ ‘ಸ್ನೇಹಸೌರಭ’ 1956ರಲ್ಲಿ ಡಿ.ಎಸ್. ಕರ್ಕಿಯವರ ಮುನ್ನುಡಿಯಲ್ಲಿ ಮೂಡಿದ್ದು ನಾದಮಯವಾಗುವಂತೆ ರಚಿಸಲ್ಪಟ್ಟ ಕವನಗಳು. ಮೂರನೆಯ ಕವನ ಸಂಕಲನ ‘ಡಿಂಡಿಮ’ 1965ರಲ್ಲಿ ಮೂಡಿಬಂತು. ನಾಡಿನ ಬಗ್ಗೆ ಕೆಚ್ಚುಮೂಡಿಸುವ ಕವನಗಳಿವು  ಎಂದು ಗೋಕಾಕರು ಬರೆದಿದ್ದಾರೆ. ಇವಲ್ಲದೆ ‘ಕಿತ್ತೂರ ಕ್ರಾಂತಿ’ (ಕಿತ್ತೂರ ರಾಣಿ ಚೆನ್ನಮ್ಮ ಸ್ಮಾರಕೋತ್ಸವ ಸಮಿತಿಗಾಗಿ ಬರೆದ ಲಾವಣಿ) ಮತ್ತು 'ಮಹಾಂತೇಶ ಮಹಿಮೆ' ಜಾನಪದ ಗೀತೆಗಳ ಸಂಕಲನವನ್ನು  ಇಂಚಲರು ಹೊರತಂದರು. ಡಾ.ಡಿ.ಎಸ್. ಕರ್ಕಿಯವರೊಡನೆ ಮಕ್ಕಳಿಗಾಗಿ ‘ಬಣ್ಣದ ಚೆಂಡು’ ಕವನ ಸಂಕಲನವನ್ನು ಹೊರತಂದರು. ಇಂಚಲರವರ ಅಪ್ರಕಟಿತ ಕವನಗಳನ್ನು ಸಂಗ್ರಹಿಸಿ 1993ರಲ್ಲಿ  ‘ಭಾವಶ್ರೀ’ಎಂಬ ಸಂಕಲನವಾಗಿ ಹೊರತರಲಾಗಿದೆ.  ಇಂಚಲರು ಸಂಪಾದಿಸಿದ್ದ ‘ಕರ್ನಾಟಕ ದರ್ಶನ’ ಮತ್ತು ಅವರ ಸಮಗ್ರಕಾವ್ಯ ‘ಇಂಚರ’ವು 2007ರಲ್ಲಿ ಪ್ರಕಟಗೊಂಡಿದೆ. ಇಂಚಲರು ಕನ್ನಡ ನಾಡು-ನುಡಿಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದು, ‘ಕನ್ನಡದ ಉಸಿರು ಬೆಳಗಾವಿ, ಬೆಳಗಾವಿಯ ಒಂದಂಗುಲವೂ ಮಹಾರಾಷ್ಟ್ರಕ್ಕೆ ಸೇರಕೂಡದು’ ಎಂದು ಪ್ರತಿಜ್ಞೆ ಮಾಡಿದಂತೆ ರಾಷ್ಟ್ರದ ಭಾವೈಕ್ಯತೆಯ ಬಗ್ಗೆಯೂ ಹಲವಾರು ಕವನಗಳನ್ನು ಬರೆದವರು. 

ಇಂಚಲರು ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದಂತೆ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ, ಧಾರವಾಡದ ಆಕಾಶವಾಣಿ ಕೇಂದ್ರದ ಸಲಹಾ ಸಮಿತಿ ಸದಸ್ಯರಾಗಿ, ಎಸ್.ಎಸ್.ಎಲ್.ಸಿ. ಪರೀಕ್ಷಾಮಂಡಲಿಯ ಸದಸ್ಯರಾಗಿ, ಬೆಳಗಾವಿ ಜಿಲ್ಲಾ ಮುಖ್ಯ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ದುಡಿಯುತ್ತಿದ್ದ ಇಂಚಲ ಅವರಿಗೆ 1964ರಲ್ಲಿ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ ಹಾಗೂ 1966ರಲ್ಲಿ ಆದರ್ಶ ಶಿಕ್ಷಕ ರಾಷ್ಟ್ರಪ್ರಶಸ್ತಿಗಳು ಸಂದವು. 

ಕವಿ ಇಂಚಲರವರು 1974ರ ಏಪ್ರಿಲ್ 7ರಂದು ಈ ಲೋಕವನ್ನಗಲಿದರು.

On the birth anniversary of poet Shivaputrappa Devappa Inchala 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ