ವೆಂಕಟರಮಣ ಭಟ್
ಶಿಲ್ಪಿಗಳಾದ ರತ್ನಾ ಭಟ್ ಮತ್ತು ಸುರಾಲು ವೆಂಕಟರಮಣ ಭಟ್ ದಂಪತಿಗಳು
ದಂಪತಿಗಳಾದ ರತ್ನಾ ಭಟ್ ಮತ್ತು ಸುರಾಲು ವೆಂಕಟರಮಣ ಭಟ್ ಶ್ರೇಷ್ಠ ಶಿಲ್ಪಿಗಳು. ಹೊಯ್ಸಳ ಶೈಲಿಯ ಶಿಲ್ಪಕಲೆಯನ್ನು ಪುನಃ ಬಳಕೆಗೆ ತಂದ ಸಾಧನೆ ಈ ಕಲಾದಂಪತಿಗಳದಾಗಿದೆ.
ಏಪ್ರಿಲ್ 15 ಸುರಾಲು ವೆಂಕಟರಮಣ ಭಟ್ ಅವರ ಜನ್ಮದಿನ. ವೆಂಕಟರಮಣ ಭಟ್ ಅವರು ಉಡುಪಿ ಜಿಲ್ಲೆಯ ಸುರಾಲು ಎಂಬ ಪುಟ್ಟ ಹಳ್ಳಿಯಲ್ಲಿ ಪುರೋಹಿತರ ಕುಟುಂಬದಲ್ಲಿ ಜನಿಸಿದರು. ಬಾಲ್ಯದಲ್ಲಿ ಶ್ಲೋಕಗಳು, ಮಂತ್ರಗಳು ಮತ್ತು ಪೂಜೆಯ ಬಗ್ಗೆ ಕಲಿತ ಅವರು ಕುಟುಂಬ ವೃತ್ತಿಯನ್ನು ಕೈಗೊಂಡರು. ಉನ್ನತ ಪ್ರಾಥಮಿಕ ಶಿಕ್ಷಣದ ನಂತರ 2 ವರ್ಷಗಳ ಕಾಲ ಸಂಸ್ಕೃತ ಕಾವ್ಯ ಮತ್ತು ಸಾಹಿತ್ಯವನ್ನು ಪೂರ್ಣಗೊಳಿಸಿ, 3 ವರ್ಷಗಳ ಕಾಲ ವೇದಗಳನ್ನು ಅಧ್ಯಯನ ಮಾಡಿದರು. ಕುಟುಂಬದ ಐವರು ಪುತ್ರರಲ್ಲಿ ಇವರೇ ಮೊದಲಿಗರಾಗಿದ್ದರಿಂದ ಕುಟುಂಬದ ಅರ್ಚಕ ವೃತ್ತಿಯನ್ನು ಕೈಗೊಳ್ಳುವುದು ಇವರಿಗೆ ಅನಿವಾರ್ಯವಾಗಿತ್ತು. ಈ ಕುರಿತು ಅವರೊಳಗೆ ಅತೃಪ್ತಿಯಿತ್ತು. ಹೀಗಾಗಿ ಅಂಚೆಯ ಮೂಲಕ ಹೈಯರ್ ಸೆಕೆಂಡರಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ತಮ್ಮನ್ನು ಇನ್ನೇನೊ ದೊಡ್ಡದು ಕರೆಯುತ್ತಿದೆ ಎಂಬ ಅನಿಸಿಕೆ ಅವರಲ್ಲಿ ಮೂಡತೊಡಗಿತ್ತು.
ವೆಂಕಟರಮಣ ಭಟ್ ಹಿರಿಯರ ವಿರೋಧದ ನಡುವೆಯೇ ಮನೆ ತೊರೆದು ಮೈಸೂರಿಗೆ ತೆರಳಿ ಅಲ್ಲಿ ಶಿಲ್ಪಕಲೆಯ ಅಧ್ಯಯನಕ್ಕಾಗಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗೆ ಸೇರಿದರು. ಅಲ್ಲಿ ಶಿಲ್ಪಕಲೆಯಲ್ಲಿ 3 ವರ್ಷಗಳ ಮೂಲಭೂತ ಕೋರ್ಸ್ ಅನ್ನು ಪೂರ್ಣಗೊಳಿಸಿದರು. ಈ 3 ವರ್ಷಗಳಲ್ಲಿ ಅವರು ಸಣ್ಣ ಮೆಸ್ನಲ್ಲಿ ಹೊಟ್ಟೆ ಹೊರೆಯುವುದಕ್ಕೋಸ್ಕರ ಮಾಣಿಯಾಗಿ ಕೆಲಸ ಮಾಡುತ್ತ, ಆ ಕಿರು ಹೋಟೆಲಿನ ಅಟ್ಟದ ಮೇಲೆ ಜೀವಿಸಿದ್ದರು. ಉನ್ನತ ವ್ಯಾಸಂಗ ಮಾಡಲು ಯಾವುದೇ ಸಂಸ್ಥೆಯಲ್ಲಿ ಅವಕಾಶ ಸಿಗದೆ ಮತ್ತೆ 2 ವರ್ಷ ಊರಿಗೆ ಹೋಗಿ ಕೃಷಿ ಕೆಲಸದಲ್ಲಿ ತೊಡಗಿದರು.
1988ರಲ್ಲಿ ವೆಂಕಟರಮಣ ಭಟ್ ಅವರು ತಮ್ಮ ತಂದೆ ತಾಯಿ ಮತ್ತು ಸೋದರಮಾವನವರೊಂದಿಗೆ ಬೆಂಗಳೂರಿಗೆ ಬಂದರು. ಅಲ್ಲಿ ತಮ್ಮ ಸೋದರಮಾವನವರಿಗೆ ಪರಿಚಿತರಾಗಿದ್ದ ಖ್ಯಾತ ಶಿಲ್ಪಿ ದೇವಲಕುಂದ ವಾದಿರಾಜ್ ಅವರೊಡನೆ ಸಂಭವಿಸಿದ ಒಂದು ಭೇಟಿಯು ಅವರ ಜೀವನದ ಮಾರ್ಗವನ್ನು ಬದಲಾಯಿಸಿತು. ಭಟ್ ಅವರಿಗೆ ವಾದಿರಾಜ್ ಅವರಲ್ಲಿ 8 ವರ್ಷಗಳ ಕಾಲ ಗುರುಕುಲ ಪದ್ಧತಿಯಲ್ಲಿ ಕಲಾಭ್ಯಾಸ ಮಾಡುವ ಅವಕಾಶ ದಕ್ಕಿತು. ಈ ವರ್ಷಗಳಲ್ಲಿ ಅವರನ್ನು ಬೇಲೂರು ಹಳೇಬೀಡು ಮತ್ತು ಇತರ ಅನೇಕ ಪ್ರಾಚೀನ ದೇವಾಲಯಗಳಿಗೆ ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿನ ಕಲೆ ಮತ್ತು ವಾಸ್ತುಶಿಲ್ಪವನ್ನು ಕಂಡು ಮಂತ್ರಮುಗ್ಧರಾದ ಭಟ್ 750 ವರ್ಷಗಳ ಹಿಂದೆ ಹೊಯ್ಸಳ ರಾಜವಂಶದೊಂದಿಗೆ ಸ್ಥಗಿತಗೊಂಡ ಈ ಹೊಯ್ಸಳ ಶೈಲಿಯ ವಾಸ್ತುಶಿಲ್ಪವನ್ನು ಪುನಃ ಏಕೆ ಮುಂದುವರಿಸಬಾರದು ಎಂದು ಆಲೋಚಿಸತೊಡಗಿದರು.
ದೇವಲಕುಂದ ವಾದಿರಾಜ್ ಅವರ ಮಾರ್ಗದರ್ಶನದಿಂದ, ವೆಂಕಟರಮಣ ಭಟ್ ಅವರು ಕೆನರಾ ಬ್ಯಾಂಕ್ ಪ್ರಾಯೋಜಿತ ಕುಶಲಕರ್ಮಿಗಳ ಕೌಶಲ್ಯ ತರಬೇತಿಗೆ ಶಿಲ್ಪಕಲಾ ಬೋಧಕರಾಗಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ ವಾದಿರಾಜ್ ಅವರು ಭಟ್ ಅವರನ್ನು ದಕ್ಷಿಣ ಕಾಜುರಾಹೋದಲ್ಲಿನ ಸಾಂಸ್ಕೃತಿಕ ಶಿಬಿರಕ್ಕೆ ಸಹಾಯಕ ನಿರ್ದೇಶಕರನ್ನಾಗಿ ನೇಮಿಸಿದರು. ಅದು ಯಶಸ್ವಿಯಾಗಿ ಪೂರ್ಣಗೊಂಡಿತು.
ವೆಂಕಟರಮಣ ಭಟ್ ಅವರ ಪತ್ನಿ ಟಿ. ಎನ್. ರತ್ನಾ ಕೂಡ ಪತಿಯೊಂದಿಗೆ ಕೈ ಜೋಡಿಸಿ ಶಿಲ್ಪಿಯಾಗಿ ಕೆಲಸ ಮಾಡುತ್ತಿದ್ದಾರೆ. ರತ್ನಾ ಅವರು ಕಲ್ಪತರು ಜಿಲ್ಲೆ ತಿಪಟೂರಿನ ಅಲಬೂರು ಪಟ್ಟಣದಲ್ಲಿ ಕೇವಲ 200 ಕುಟುಂಬಗಳನ್ನು ಹೊಂದಿರುವ ಅಣಪ್ಪನಹಳ್ಳಿಯಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹಳ್ಳಿಯಲ್ಲಿ, ಪ್ರೌಢ ಶಿಕ್ಷಣವನ್ನು ನೊಣವಿನಕೆರೆಯಲ್ಲಿ ನಡೆಸಿ, ತಿಪಟೂರಿನಲ್ಲಿ ತಮ್ಮ ಕಾಲೇಜು ಓದನ್ನು ಮುಗಿಸಿದರು. 1984ರಲ್ಲಿ ಅವರು ಬೆಂಗಳೂರಿಗೆ ಬಂದು ದೇವಲಕುಂದ ವಾದಿರಾಜ್ ಹಾಗೂ ಬಿ. ಶ್ಯಾಮಾಚಾರ್ಯ ಅವರ ಮಾರ್ಗದರ್ಶನದಲ್ಲಿ 3 ವರ್ಷಗಳ ಕಾಲ ಮರದ ಕೆತ್ತನೆ ಕಲಿತರು.
1989ರಲ್ಲಿ ವಿವಾಹವಾದ ರತ್ನಾ ಮತ್ತು ಸುರಾಲು ವೆಂಕಟರಮಣ ಭಟ್ ಅವರು, ಕಲಾದಂಪತಿಗಳಾಗಿ ತಮ್ಮ ಹೊಸ ಪಯಣವನ್ನು ಆರಂಭಿಸಿದರು. ಇಬ್ಬರಿಗೂ ಇದು ಹೊಸ ಕ್ಷೇತ್ರವಾದ್ದರಿಂದ ಸಾಕಷ್ಟು ಹೋರಾಟಗಳು, ಅಡೆತಡೆಗಳು ಎದುರಾದವು, ಆದರೆ ದಂಪತಿಗಳು ಅದೆಲ್ಲವನ್ನೂ ಬದಿಗಿಟ್ಟು ತಮ್ಮದೇ ಆದ ‘ಕದಂಬ’ ಸಂಸ್ಥೆಯನ್ನು ಆರಂಭಿಸಿದರು.
ದಂಪತಿಗಳು ನೂರಾರು ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ದೇವಾಲಯದ ವಾಸ್ತುಶಿಲ್ಪದ ಬಗ್ಗೆ ಅಧ್ಯಯನ ನಡೆಸಿದರು. ನಂತರ ತಮ್ಮ ಸಂಸ್ಥೆಯ ಮೂಲಕ ಸುಮಾರು 30-35 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಸುಮಾರು 35 ವರ್ಷಗಳ ಕಾಲ, ದಂಪತಿಗಳು ವಿಭಿನ್ನ ಶೈಲಿಯ ಶಿಲ್ಪಗಳ ಬಗ್ಗೆ ಕಲಿತರು. ಉದ್ಯಾನಗಳು, ಆಸ್ಪತ್ರೆಗಳು, ಗ್ರಂಥಾಲಯಗಳು, ಶಾಲೆಗಳು ಮುಂತಾದ ವಿವಿಧ ಕಲಾತ್ಮಕ ಅಪೇಕ್ಷೆಗಳಿಗೆ ಕಲೆಯನ್ನು ಅಳವಡಿಸಲು ಪ್ರಾರಂಭಿಸಿದರು. ಈ ದಂಪತಿಗಳು ಮಾಡಿದ ಶಿಲ್ಪಗಳು ವಿವಿಧ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಸ್ಥಾಪಿಸಲ್ಪಟ್ಟು ಮೆಚ್ಚುಗೆ, ಗೌರವ ಮತ್ತು ಪ್ರಶಸ್ತಿಗಳನ್ನು ಗಳಿಸಿವೆ.
ರತ್ನಾ - ವೆಂಕಟರಮಣ ಭಟ್ ದಂಪತಿಗಳು ಮೊದಲ ಬಾರಿಗೆ ಹೊಯ್ಸಳ ಶೈಲಿಯ ಶಿಲ್ಪವನ್ನು ಅಮೆರಿಕದಲ್ಲಿ ಬಳಸಿದ ಸಂತೃಪ್ತಿ ಗಳಿಸಿದರು. ಇದು ಮಿಲ್ವಾಕೀ, ಕನೆಕ್ಟಿಕಟ್, ಲಾಸ್ ವೇಗಾಸ್ ಹಿಂದೂ ದೇವಾಲಯದಲ್ಲಿ ಮೂಡಿಬಂತು. 750 ವರ್ಷಗಳ ನಂತರ, ಹೊಯ್ಸಳ ಶೈಲಿಯ ಎಲ್ಲಾ ಕಲಾ ಪ್ರಕಾರಗಳನ್ನು ಒಳಗೊಂಡಂತೆ, ದಂಪತಿಗಳು 2007ರಲ್ಲಿ ಏಕಕೂಟ ಹೊಯ್ಸಳ ದೇವಸ್ಥಾನವನ್ನು ನಿರ್ಮಿಸಿದ ಹೆಮ್ಮೆಯನ್ನು ಪಡೆದರು. ಇದಲ್ಲದೆ ಲಂಡನ್‌ನ ಗ್ರಂಥಾಲಯದಲ್ಲಿ 5 ಅಡಿ ಎತ್ತರದ ತೇಗ ಬೀಟೆ ಶ್ರೀಗಂಧ ಮಂಟಪವನ್ನು ಸ್ಥಾಪಿಸಲಾಗಿದೆ. 10 ಅಡಿ ಧ್ಯಾನ ಬುದ್ಧನನ್ನು ಲೆಬನಾನ್‌ನಲ್ಲಿ ಸ್ಥಾಪಿಸಲಾಗಿದೆ. ಹಲವಾರು ದೇವಾಲಯಗಳು, ವಿಗ್ರಹಗಳು, ಉದ್ಯಾನ ಶಿಲ್ಪಗಳು, ಭಾವಚಿತ್ರಗಳು, ಮಂಟಪಗಳು, ಹೊಯ್ಸಳ, ಚಾಲುಕ್ಯ, ಚೋಳ ಮತ್ತು ಇನ್ನೂ ಅನೇಕ ಶೈಲಿಗಳ ಬೃಂದಾವನಗಳೊಂದಿಗೆ, ಕದಂಬರು "we carve anything and everything" ಎಂಬ ತಮ್ಮ ಸಂಸ್ಥೆಯ ಧ್ಯೇಯವಾಕ್ಯವನ್ನು ಈ ದಂಪತಿಗಳು ಅಕ್ಷರಶಃ ಸಾಧಿಸಿದ್ದಾರೆ.
ರತ್ನಾ ಅವರಿಗೆ 2018 ರಲ್ಲಿ ರಾಜ್ಯ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಸಂದಿದೆ. ಇದಲ್ಲದೆ ಈ ಕಲಾದಂಪತಿಗಳಿಗೆ ದೇಶ ವಿದೇಶಗಳ ಹಲವೆಡೆಗಳಿಂದ ಅನೇಕ ಗೌರವಗಳು ಸಂದಿವೆ.
ರತ್ನ ಮತ್ತು ವೆಂಕಟರಮಣ ಭಟ್ ಅವರ ಸಂಸ್ಥೆಯ ಕುರಿತಾದ ವಿಷಯಗಳು https://kadambaescultura.com ಕೊಂಡಿಯಲ್ಲಿ ಲಭ್ಯವಿದೆ.
ವೆಂಕಟರಮಣ ಭಟ್ಟರಿಗೆ ಹುಟ್ಟುಹಬ್ಬದ ಶುಭಹಾರೈಸುತ್ತ, ರತ್ನಾ ಮತ್ತು ವೆಂಕಟರಮಣ ಭಟ್ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ ಎಂದು ಶುಭಹಾರೈಸೋಣ.
Great art couple Ratna Bhat and Shilpi Suralu Venkataramana Bhat
ಕಾಮೆಂಟ್‌ಗಳು