ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೆಂಕಟರಾಘವನ್


ವೆಂಕಟರಾಘವನ್

ಶ್ರೀನಿವಾಸರಾಘವನ್ ವೆಂಕಟರಾಘವನ್ ಭಾರತದ ಶ್ರೇಷ್ಠ ಸ್ಪಿನ್ ಚತುಷ್ಟಯ (ಪ್ರಸಿದ್ಧರಾದ ಪ್ರಸನ್ನ- ಚಂದ್ರ-ಬೇಡಿ-ವೆಂಕಟ್) ಕೂಟದಲ್ಲಿ ಒಬ್ಬರು. ಅವರು ವಿಶ್ವ ಶ್ರೇಷ್ಠ ಅಂಪೈರ್ಗಳಲ್ಲಿ ಒಬ್ಬರೆಂದು ಕೂಡಾ ಖ್ಯಾತಿವಂತರು.

ವೆಂಕಟರಾಘವನ್ 1945ರ ಏಪ್ರಿಲ್ 21ರಂದು ಚೆನ್ನೈನಲ್ಲಿ ಜನಿಸಿದರು.  ಅವರು ಇಂಜಿನಿಯರಿಂಗ್ ಪದವಿ ಪಡೆದರು.

ವೆಂಕಟ್ ಅವರು 20ನೇ ವಯಸ್ಸಿನಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಟೆಸ್ಟ್ ರಂಗಕ್ಕೆ ಬಂದರು. ಸರಣಿಯ ಅಂತ್ಯದ ವೇಳೆಗೆ ಅವರು ವಿಶ್ವ ದರ್ಜೆಯ ಸ್ಪಿನ್ನರ್ ಆಗಿ ಹೊರಹೊಮ್ಮಿದರು.  ದೆಹಲಿ ಟೆಸ್ಟ್‌ನಲ್ಲಿ 12 ವಿಕೆಟ್‌ಗಳನ್ನು ಗಳಿಸುವ ಮೂಲಕ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು. ಅವರು 1970-71ರಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಪ್ರವಾಸ ಮಾಡಿದ ಭಾರತೀಯ ತಂಡದ ಉಪನಾಯಕರಾಗಿದ್ದರು. ಭಾರತ ಎರಡೂ ಸರಣಿಗಳನ್ನು ಗೆದ್ದುಕೊಂಡಿತು.  ವೆಂಕಟ್ ಟ್ರಿನಿಡಾಡ್ ಟೆಸ್ಟ್‌ನಲ್ಲಿ ಐದು ವಿಕೆಟ್ ಮತ್ತು ಇಂಗ್ಲೆಂಡ್‌ನಲ್ಲಿ ನಡೆದ ಮೂರು ಟೆಸ್ಟ್‌ಗಳಲ್ಲಿ 13 ವಿಕೆಟ್ ಪಡೆದರು. 

ಭಾರತವು ಒಂದು ದಿನದ ಪಂದ್ಯಗಳ ಕ್ರಿಕೆಟ್ನಲ್ಲಿ ಇನ್ನೂ ಕಣ್ ಕಣ್ ಬಿಡುತ್ತ ಹಾಸ್ಯಾಸ್ಪದವಾಗಿದ್ದ ಯುಗದಲ್ಲಿ ವೆಂಕಟ್ ಅವರು 1975 ಮತ್ತು 1979 ರ ವಿಶ್ವಕಪ್ ಸ್ಪರ್ಧೆಗಳಲ್ಲಿ ಭಾರತ ತಂಡದ ನಾಯಕರಾಗಿದ್ದರು. 1979 ರಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕು ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ನಾಯಕರಾಗಿದ್ದರು. ಇಪ್ಪತ್ತು ವರ್ಷಗಳ ಕಾಲ ಸುದೀರ್ಘ ಅವಧಿಯವರೆಗೆ ಟೆಸ್ಟ್ ಕ್ರಿಕೆಟ್ ಆಟದಲ್ಲಿದ್ದ ಅವರು 57 ಟೆಸ್ಟ್ ಪಂದ್ಯಗಳಲ್ಲಿ 156 ವಿಕೆಟ್ ಗಳಿಸಿದ್ದರು. 

ಪ್ರಸನ್ನ, ಚಂದ್ರಶೇಖರ್, ಬಿಷನ್ ಸಿಂಗ್ ಬೇಡಿ ಅವರುಗಳ ಕಾಲದಲ್ಲೇ ವೆಂಕಟ್ ಅವರು ಕೂಡಾ ಇದ್ದದ್ದರಿಂದ  ಆ ಮೂವರ ಮಧ್ಯದಲ್ಲಿ ಸ್ಥಳ ಮಾಡಿಕೊಳ್ಳುವುದು ಅವರಿಗೆ ಕಷ್ಟಸಾಧ್ಯವಿತ್ತು.  ಅಂದಿನ ದಿನಗಳಲ್ಲಿ ಈ ಮೂವರ ಮಧ್ಯೆ ಅವರಿಗೆ ಸ್ಥಾನ ನೀಡಿದರೆನ್ನುವುದು ಕ್ರಿಕೆಟ್ ಅಭಿಮಾನಿಗಳು ಮತ್ತು ಪತ್ರಿಕಾ ವಲಯದಲ್ಲಿ ಅಪಾರ ಟೀಕೆ ಮತ್ತು ಕ್ರೀಡೆಯಲ್ಲಿನ ರಾಜಕೀಯದ ಮಾತುಗಳಿಗೂ ಆಸ್ಪದವಾಗುತ್ತಿತ್ತು.  

ಮುಂದೆ ವೆಂಕಟರಾಘವನ್ ಅಂಪೈರಿಂಗ್ ಕ್ಷೇತ್ರದಲ್ಲಿ ಶ್ರೇಷ್ಠತೆಗೆ ಹೆಸರಾದರು. ವೆಂಕಟ್ ಅವರು 18 ಜನವರಿ 1993 ರಂದು ಜೈಪುರದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಅಂತರಾಷ್ಟ್ರೀಯ ಅಂತಾರಾಷ್ಟ್ರೀಯ ಅಂಪೈರಿಂಗ್‌ಗೆ ಪಾದಾರ್ಪಣೆ ಮಾಡಿದರು. ಅವರು ಅದೇ ತಿಂಗಳಲ್ಲಿ ಕೋಲ್ಕತ್ತಾದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದೊಂದಿಗೆ ಟೆಸ್ಟ್ ಅಂಪೈರಿಂಗ್‌ಗೆ ಪಾದಾರ್ಪಣೆ ಮಾಡಿದರು. ಅವರು 1994ರಲ್ಲಿ ಪ್ರಾರಂಭವಾದ ಅಂತರರಾಷ್ಟ್ರೀಯ ಅಂಪೈರ್ ಪ್ಯಾನೆಲ್‌ನಲ್ಲಿ ಸ್ಥಾನ ಪಡೆದರು.   ತಟಸ್ಥ ಅಂಪೈರ್ ಆಗಿ ಹೊರದೇಶಗಳ ತಂಡಗಳು ಆಡುವ ಟೆಸ್ಟ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಆಯ್ಕೆಯಾದರು. 2002 ರಲ್ಲಿ ಐಸಿಸಿ ಅಗ್ರ ಎಂಟು ಅಂಪೈರ್‌ಗಳ ಎಲೈಟ್ ಪ್ಯಾನೆಲ್ ಅನ್ನು ರಚಿಸಿದಾಗ ವೆಂಕಟರಾಘವನ್ ಆ ಎಂಟು ಶ್ರೇಷ್ಠರಲ್ಲಿ ಒಬ್ಬರಾಗಿದ್ದರು. ಅವರು ಜನವರಿ 2004 ರಲ್ಲಿ ನಿವೃತ್ತರಾಗುವವರೆಗೂ ಆ ಪ್ಯಾನೆಲ್ ಭಾಗವಾಗಿದ್ದರು.

ವೆಂಕಟ್ ಅವರ ಅಂಪೈರಿಂಗ್ ವೃತ್ತಿಜೀವನದಲ್ಲಿ 1996, 1999 ಮತ್ತು 2003ರ ಪ್ರತಿಷ್ಠಿತ ಆಶಸ್ ಸರಣಿಯ ಆರು ಟೆಸ್ಟ್‌ಗಳು ಮತ್ತು ಮೂರು ವಿಶ್ವಕಪ್‌ಗಳು ಒಳಗೊಂಡಿದ್ದವು.  1996 ಮತ್ತು 1999 ಎರಡೂ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಅವರು ಸೆಮಿ-ಫೈನಲ್‌ನಲ್ಲಿ ಅಂಪೈರಿಂಗಿಗೆ ನಿಲ್ಲಲು ನೇಮಕಗೊಂಡರು ಮತ್ತು 1999ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ
ವಿಶ್ವಕಪ್ ಫೈನಲ್ನಲ್ಲಿ ಮೂರನೇ ಅಂಪೈರ್ ಆಗಿದ್ದರು. ಒಟ್ಟಾರೆಯಾಗಿ ಅವರು ತಮ್ಮ ವೃತ್ತಿಜೀವನದ ಅವಧಿಯಲ್ಲಿ 73 ಟೆಸ್ಟ್ ಪಂದ್ಯಗಳು ಮತ್ತು 52 ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಮೈದಾನದಲ್ಲಿ ತೀರ್ಪುಗಾರರಾಗಿದ್ದರು.

ವೆಂಕಟರಾಘವನ್ ಅವರಿಗೆ ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಗಳು ಸಂದಿವೆ.

1993ರ ವರ್ಷ  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಎದುರಿದ್ದ ನಮ್ಮ ಎಚ್ ಎಮ್ ಟಿ ಕಚೇರಿಗೆ ಪ್ರವೇಶಿಸುತ್ತಿದ್ದ ಸಮಯದಲ್ಲಿ ಯಾರೋ ಎತ್ತರದ ವ್ಯಕ್ತಿ ಒಬ್ಬರು ಅರ್ಜೆಂಟಲ್ಲಿದ್ದವರ ಹಾಗೆ ಬಂದು "is there a near by shop where I can buy cigarettes" ಎಂದಾಗ ನೋಡಿದರೆ ವೆಂಕಟರಾಘವನ್.  ಅಂಪೈರ್ ಕೆಲಸ ನಿರ್ವಹಿಸಲು ಬಂದಿದ್ದ ಅವರಿಗೆ ಆಟ ಆರಂಭವಾಗುವುದರೊಳಗೆ ಸಿಗರೇಟ್ ಕೊಳ್ಳುವ ಆತುರವಿತ್ತು ಅನಿಸುತ್ತದೆ.  ಅಂದಿನ ಆಟಗಾರರ ಈ ಸರಳತೆಯನ್ನು ಇಂದು ಊಹಿಸಲೂ ಕಷ್ಟವೇನೊ.  

On the birthday of great spinner and great umpire Sreenivasa Venkataraghavan 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ