ಶ್ರೀನಿವಾಸ ವೈದ್ಯ
ಶ್ರೀನಿವಾಸ ವೈದ್ಯ
ಶ್ರೀನಿವಾಸ ವೈದ್ಯರು ಕನ್ನಡ ಸಾಹಿತ್ಯ ಲೋಕದ ಅವಿಸ್ಮರಣೀಯ ಕಥೆಗಾರರು.
ಶ್ರೀನಿವಾಸ ವೈದ್ಯರು 1936ರ ಏಪ್ರಿಲ್ 4ರಂದು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಜನಿಸಿದರು. ತಂದೆ ಬಿ.ಜಿ. ವೈದ್ಯರು ಸುಪ್ರಸಿದ್ಧ ವಕೀಲರು. ತಾಯಿ ಸುಂದರಬಾಯಿ. ತಾಯಿಯ ತಂದೆ ನರಗುಂದಕರ್ ರಾಮರಾವ್ ಕರ್ನಾಟಕದ ಸಪ್ತರ್ಷಿಗಳಲ್ಲೊಬ್ಬರು ಎಂದು ಪ್ರಸಿದ್ಧರಾದವರು.
ತಮ್ಮ ವಿದ್ಯಾಭ್ಯಾಸವನ್ನೆಲ್ಲಾ ಧಾರವಾಡದಲ್ಲೇ ನಡೆಸಿದ ಶ್ರೀನಿವಾಸ ವೈದ್ಯರು 1959ರಲ್ಲಿ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರದ ಸ್ನಾತಕೋತ್ತರ ಪದವಿಯನ್ನೂ, ಬ್ಯಾಂಕಿಂಗ್ ಕ್ಷೇತ್ರದ ಪರೀಕ್ಷೆಗಳಲ್ಲಿ ಉತೀರ್ಣತೆಯನ್ನೂ, ಭಾರತೀಯ ವಿದ್ಯಾಭವನದ ಪತ್ರಿಕೋದ್ಯಮ ಡಿಪ್ಲೋಮಾ ಪದವಿಯನ್ನೂ ಪಡೆದುಕೊಂಡರು. ಶ್ರೀನಿವಾಸ ವೈದ್ಯರ ತಾಯಿ ಬಿಡುವಿನ ವೇಳೆಯಲ್ಲೆಲ್ಲಾ ಕೈಯಲ್ಲೊಂದು ಕಾದಂಬರಿ ಹಿಡಿದು ಓದಿನಲ್ಲಿ ಮಗ್ನರಾಗಿರುತ್ತಿದ್ದರು. ಇದೇ ಪ್ರಭಾವ ಶ್ರೀನಿವಾಸ ವೈದ್ಯರಲ್ಲೂ ಮೂಡತೊಡಗಿತು.
ಹೈಸ್ಕೂಲಿನ ದಿನಗಳಲ್ಲಿ ಶ್ರೀನಿವಾಸ ವೈದ್ಯರು ಕೈಬರೆಹ ಪತ್ರಿಕೆಯಾದ ‘ನಂದಾದೀಪ’ವನ್ನು ಪ್ರಾರಂಭಿಸಿದರು. ಕಾಲೇಜಿನ ಸಂಚಿಕೆಗಳಲ್ಲೆ ಅವರ ಮೊದಲ ಕತೆಯೂ ಪ್ರಕಟವಾಗಿತ್ತು. ಇದಕ್ಕೆ ಅವರೊಡಗೂಡಿ ಸಹ ಸಂಪಾದಕರಾಗಿದ್ದವರು ಮಹಾದೇವ ಬಣಕಾರರು. ಕಾಲೇಜಿನ ದಿನಗಳಲ್ಲಿ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರು ಸಕ್ರಿಯರಾಗಿದ್ದರು. ಗಗ್ಗಯ್ಯನ ಗಡಿಬಿಡಿ, ದಾಂಪತ್ಯದ ಬೊಂಬೆ, ತಿರುವು-ಮುರುವು ಮುಂತಾದ ಅನೇಕ ನಾಟಕಗಳಲ್ಲಿ ಅವರು ಪಾತ್ರ ವಹಿಸಿದ್ದರು. ವಿದ್ಯಾವರ್ಧಕ ಸಂಘದವರು ಏರ್ಪಡಿಸುತ್ತಿದ್ದ ಸಾಹಿತ್ಯ ಸ್ಪರ್ಧೆಗಳಲ್ಲಿ ಅವರು ಹಲವಾರು ಬಹುಮಾನಗಳನ್ನು ಗಳಿಸಿದ್ದರು.
ಕಾಲೇಜು ವ್ಯಾಸಂಗದ ಸಮಯದಲ್ಲಿ ವಿ. ಕೃ ಗೋಕಾಕರಿಂದ ಪ್ರಭಾವಿತರಾಗಿದ್ದ ಶ್ರೀನಿವಾಸ ವೈದ್ಯರು ಪಿಎಚ್.ಡಿ ಪಡೆಯಲು ಮುಂಬೈಗೆ ತೆರಳಿದರಾದರೂ 1959ರಲ್ಲಿ ಮುಂಬಯಿಯಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಯಾಗಿ ಸೇರಿ, ಬೆಳಗಾವಿ, ಗೋವಾ, ಧಾರವಾಡ, ದೆಹಲಿ, ಚೆನ್ನೈ ಮತ್ತು ಬೆಂಗಳೂರುಗಳಲ್ಲಿ ಕಾರ್ಯನಿರ್ವಹಿಸಿ 1996ರಲ್ಲಿ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದರು.
1984ರ ಸುಮಾರಿನಲ್ಲಿ ಪ್ರಸಿದ್ಧ ಹಾಸ್ಯ ಬರಹಗಾರರಾದ ರಾಶಿ (ಡಾ. ಶಿವರಾಂ) ಅವರು ನಿಧನರಾದ ಸಂದರ್ಭದಲ್ಲಿ ಅವರ ಮಗ ಶಿವಕುಮಾರ್ ಅವರಿಗೆ ಬರೆದ ಸಾಂತ್ವನ ಪತ್ರದ ಭಾಷೆ, ಭಾವನೆಗಳನ್ನು ಮೆಚ್ಚಿದ ಶಿವಕುಮಾರ್ ಅವರು, ಶ್ರೀನಿವಾಸ ವೈದ್ಯರನ್ನು ಅಪರಂಜಿ ಪತ್ರಿಕೆಗೆ ಬರೆಯಲು ಪ್ರೇರೇಪಿಸಿದರು. ಹಾಸ್ಯ ಬರೆಹಗಳಿಗೆ ಮೀಸಲಾದ ಅಪರಂಜಿ ಪತ್ರಿಕೆಗೆ ಮುಂಬೈನಲ್ಲಿ ಕಂಡ ನಿತ್ಯ ಬದುಕಿನ ಸಂಗತಿಗಳಿಗೆ ನಗೆಲೇಪ ಹಚ್ಚುತ್ತಾ ಬರೆಯತೊಡಗಿದರು. ಹೀಗೆ ಶ್ರೀನಿವಾಸ ವೈದ್ಯರು ಬರೆದ ಪ್ರಥಮ ಲೇಖನ ‘ಸ್ಯಾರಿಗಾರ್ಡ್’. ಮುಂದೆ 1994ರ ವರ್ಷದಲ್ಲಿ ಇಂಥ ಲೇಖನಗಳ ಸಂಕಲನ ರೂಪವಾಗಿ ‘ತಲೆಗೊಂದು ತರತರ’ ಪ್ರಕಟಗೊಂಡಿತು. ಧಾರವಾಡ ಭಾಷೆಯನ್ನು ವಿಶಿಷ್ಟ ರೀತಿಯಲ್ಲಿ ಉಪಯೋಗಿಸಿಕೊಂಡ ಈ ಕೃತಿ ವೈದ್ಯರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು.
ಎರಡನೆಯ, ಲಲಿತ ಪ್ರಬಂಧಗಳ ಸಂಕಲನ ‘ಮನಸುಖರಾಯನ ಮನಸು’ (1997), ಮತ್ತು ಮೂರನೆಯ ಹಾಸ್ಯ ಪ್ರಬಂಧಗಳ ಸಂಕಲನ ‘ರುಚಿಗೆ ಹುಳಿಯೊಗರು’ (2003). ಮೇಲಿನ ಮೂರು ಕೃತಿಗಳೂ ಹಲವಾರು ಪುನರ್ಮುದ್ರಣಗಳನ್ನು ಕಂಡಿರುವುದೇ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಕೆ. ವಿ. ಅಕ್ಷರರು ಗುರುತಿಸಿರುವಂತೆ ಲಘು-ಗಂಭೀರ ಬರಹಗಳೆಂದು ವಿಭಾಗ ಮಾಡಲಾಗದ, ಕಥೆ, ಪ್ರಬಂಧಗಳೆಂದು ಪ್ರತ್ಯೇಕಿಸಲಾಗದ ವಿಶಿಷ್ಟ ರೀತಿಯ ಬರೆಹಗಳನ್ನು ಶ್ರೀನಿವಾಸ ವೈದ್ಯರು ಹುಟ್ಟುಹಾಕಿದರು. ನಂತರ ಗಂಭೀರ ಸಾಹಿತ್ಯದತ್ತ ಹೊರಳಿದ ವೈದ್ಯರು ಅನೇಕ ಕಥೆಗಳನ್ನೂ, ಕಾದಂಬರಿಯನ್ನೂ ರಚಿಸಿದರು. ಜಂಟಿ ಕುಟುಂಬದಲ್ಲಿದ್ದ ಹಿರಿಯ ವ್ಯಕ್ತಿತ್ವದ ಅವರ ಅಜ್ಜ ಬೀರಿದ ಪ್ರಭಾವದಿಂದ ಕಾದಂಬರಿ ರಚಿಸಲು ಮುಂದಾಗಿ ಬರೆದ ಕಾದಂಬರಿಯೆ ‘ಹಳ್ಳ ಬಂತು ಹಳ್ಳ’. ಇದು 2004ರ ವರ್ಷದಲ್ಲಿ ಮೂಡಿಬಂತು.
ಅಂಕಿತ ಪುಸ್ತಕ ಪ್ರಕಾಶನವು 2007ರ ವರ್ಷದಲ್ಲಿ ಹೊರತಂದ ಸಣ್ಣ ಕತೆಗಳ ಸಂಕಲನ ‘ಅಗ್ನಿಕಾರ್ಯ’. “ಬರೆವಣಿಗೆ ಎಂದರೆ ಸೋದ್ದಿಶ್ಯವಾದ ಒಂದು ಬಹಿರಂಗ ಬೌದ್ಧಿಕ ಕಸರತ್ತು ಅಥವಾ ತೀರಾ ಖಾಸಗಿಯಾದ ಒಂದು ಆತ್ಮಶೋಧದ ಗೀಳು ಎಂಬ ಎರಡು ಅತಿರೇಕಗಳ ಹಂಗು ಕಳೆದುಕೊಂಡು, ಯಾವ ಹಪಾಹಪಿಯೂ ಇಲ್ಲದೆ, ನಿವೃತ್ತಿಯ ನಂತರವೇ ಬರವಣಿಗೆಯಲ್ಲಿ ತೊಡಗಿಸಿಕೊಂಡ ವೈದ್ಯರ ಕಥೆ, ಕಾದಂಬರಿಗಳನ್ನು ಓದುವುದೆಂದರೆ ಎಲ್ಲೋ ಕಾಣೆಯಾಗಿದ್ದ ಬಂಧು-ಬಳಗದವರನ್ನು ಮತ್ತೆ ಭೇಟಿಯಾದಂತೆ” ಎನ್ನುತ್ತಾರೆ ಜಯಂತ ಕಾಯ್ಕಿಣಿ.
ಕಪ್ಪೆ ನುಂಗಿದ ಹುಡುಗ (ಕತೆಗಳು) 2012 ರಲ್ಲಿ ಮತ್ತು ಕರ್ನಲ್‍ನಿಗೆ ಯಾರೂ ಬರೆಯುವುದೇ ಇಲ್ಲ (ಮಾರ್ಕ್ವೇಝ್‍ನ ’No one writes to the Colonel' ಕಾದಂಬರಿಯ ಅನುವಾದ) 2013 ರಲ್ಲಿ ಪ್ರಕಟಗೊಂಡಿತು.'ಇನ್ನೊಂದು ಸಂತೆ' ಅನುಭವ ಕಥನಗಳು ಮತ್ತು ಇಂಗ್ಲಿಷಿನಲ್ಲಿ 'Handful of Sesame’ ಪ್ರಕಟಗೊಂಡಿತು.
ಶ್ರೀನಿವಾಸ ವೈದ್ಯರ ಹಲವಾರು, ಕಥೆ, ಹಾಸ್ಯಬರೆಹಗಳು ನಾಟಕಕ್ಕೆ ಅಳವಡಿತಗೊಂಡು ರಂಗಪ್ರದರ್ಶನಗಳನ್ನು ಕಂಡಿವೆ. ಅವುಗಳಲ್ಲಿ ಶ್ರದ್ಧಾ ಮತ್ತು ಹಣತೆಗಳು, ಬದುಕಲು ಕಲಿಯಿರಿ, ಕ್ರಯಸ್ಥ, ಬಿದ್ದೂರಿನ ಬಿಗ್‌ಬೆನ್, ದತ್ತೋಪಂತನ ಪತ್ತೇದಾರಿ, ಗಂಢಭೇರುಂಡ, ಮನಸುಖರಾಯನ ಮನಸು ಮುಂತಾದವುಗಳು ಸೇರಿವೆ. ಹೆಗ್ಗೋಡಿನ ನಿನಾಸಂ, ಬೆಂಗಳೂರಿನ ವಿನಾಯಕ ಜೋಶಿ ತಂಡ, ಮೈಸೂರಿನ ರಂಗಾಯಣ, ಕುಂದಾಪುರದ ಭಂಡಾರ್ಕರ್ ಕಾಲೇಜು, ಬೆಂಗಳೂರಿನ ಯುಕೊ ಬ್ಯಾಂಕ್ ಕನ್ನಡ ಸಂಘ, ಯುವ ಜನೋತ್ಸವ ಸಂದರ್ಭದಲ್ಲಿ ಧಾರವಾಡದ ತಂಡ ಮುಂತಾದವುಗಳಿಂದ ಇವು ಅಭಿನಯಿಸಲ್ಪಟ್ಟಿವೆ.
ಮನಸುಖರಾಯನ ಮನಸು ಕೃತಿಗೆ 2003ರಲ್ಲಿ ಪರಮಾನಂದ ಪ್ರಶಸ್ತಿ, ‘ಹಳ್ಳ ಬಂತು ಹಳ್ಳ’ ಕಾದಂಬರಿಗೆ 2004ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಮತ್ತು 2008ರ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದವು. 2010ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿತು. ಶ್ರೀನಿವಾಸರು ‘ಸಂವಾದ ಟ್ರಸ್ಟ್’ನ್ನು 1997ರಲ್ಲಿ ಸ್ಥಾಪಿಸಿ, ನಾಡಿನ ಖ್ಯಾತ ಬರೆಹಗಾರರಿಂದ ಉಪನ್ಯಾಸ, ವಾಚನ, ಸಂವಾದ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಕ್ರಿಯಾಶೀಲರಾಗಿದ್ದರು.
ಶ್ರೀನಿವಾಸ ವೈದ್ಯರು 2023ರ ಏಪ್ರಿಲ್ 21ರಂದು ನಮ್ಮನ್ನಗಲಿದರು. ಶ್ರೀನಿವಾಸ ವೈದ್ಯರಂತಹ ಮೌಲ್ಯ ಆಗಾಗ ಉದ್ಭವಿಸುವುದಿಲ್ಲ. ಅವರಿಗೆ ಆರೊಗ್ಯ ಚೆನ್ನಾಗಿರಲಿಲ್ಲ ಎಂದು ಕೆಲವು ವರ್ಷದ ಹಿಂದೆ ಸಮಾರಂಭದಲ್ಲಿ ಕಂಡಾಗ ಅನಿಸುತ್ತಿತ್ತು. ಆದರೆ ಮೊನಚು ಹಾಸ್ಯ ಪರಿಜ್ಞಾನ ಮತ್ತು ಆತ್ಮೀಯ ಗುಣ ಅವರಲ್ಲಿ ಕಿಂಚಿತ್ತೂ ಕುಂದಿರಲಿಲ್ಲ. ಅವರನ್ನು ನೋಡಿ, ಮಾತು ಕೇಳಿ, ಓದಿ ಸವಿದ ನಮ್ಮ ಹೃದಯಗಳು ನಿಜಕ್ಕೂ ಧನ್ಯ.
Srinivasa Vaidya
ಕಾಮೆಂಟ್‌ಗಳು