ಬಿ. ಎ. ಮಧು
ಬಿ. ಎ. ಮಧು
ನಮ್ಮ ನಡುವೆ ಅತ್ಯಂತ ಸರಳ ವ್ಯಕ್ತಿಯಂತಿರುವ ಬಿ. ಎ. ಮಧು ಕನ್ನಡ ಚಿತ್ರರಂಗದ ಮಹಾನ್ ಸಾಧಕರಲ್ಲೊಬ್ಬರು ಎಂದರೆ ಜನರಿಗೆ ಅಚ್ಚರಿಯಾಗುತ್ತದೆ. ತೆರೆಯಮೇಲೆ ಕಾಣುವ ಕೆಲವೇ ಸ್ಟಾರ್'ಗಳನ್ನು ವೈಭವೀಕರಿಸಿ ಕಾಣುವ ನಾವುಗಳು ಚಿತ್ರರಂಗಕ್ಕೆ ಬೇಕಾದ ಚಿತ್ರಕಥಾನಕಗಳನ್ನು ಸೃಜಿಸಿದವರನ್ನು ಕಾಣಯತ್ನಿಸುವುದಿಲ್ಲ. ಕನ್ನಡ ಚಿತ್ರರಂಗದ ಅನೇಕ ಯಶಸ್ವೀ ಚಿತ್ರಗಳಿಗೆ ಕಾರಣರಾಗಿರುವ ಬಿ.ಎ. ಮಧು ಅವರು ಸಂಭಾಷಣೆ/ಚಿತ್ರಕಥೆ ನೀಡಿರುವ ಸಂಖ್ಯೆ ಸುಮಾರು 150 ಎಂದರೆ ವಿಸ್ಮಯವಾಗುತ್ತದೆ. ಅವರು ಅನೇಕ ಕಥೆ, ಕವಿತೆ, ಕಾದಂಬರಿಗಳನ್ನೂ ರಚಿಸಿದ್ದಾರೆ.
ಮಧು ಅವರು 1958ರ ಏಪ್ರಿಲ್ 30ರಂದು ಜನಿಸಿದರು. ಚಾಮರಾಜನಗರ ಜಿಲ್ಲೆ ಬಸವನಪುರ ಎಂಬ ಗ್ರಾಮ ಇವರ ಹುಟ್ಟೂರು. ತಂದೆ ಅಜ್ಜೇಗೌಡ. ತಾಯಿ ಪುಟ್ಟನಂಜಮ್ಮ. ಇವರಿಗೆ ಒಬ್ಬ ತಮ್ಮ, ಇಬ್ಬರು ತಂಗಿಯರು. ಅನಕ್ಷರಸ್ಥ ಕುಟುಂಬ. ವೃತ್ತಿ ವ್ಯವಸಾಯ. ಮಧು ಚಾಮರಾಜನಗರದಲ್ಲೇ ಓದಿ ಬಿ.ಎ. ಪದವಿ ಪಡೆದರು.
ಮಧು ಅವರಿಗೆ ಅವರ ಗುರುಗಳಾದ ತ.ಹ. ನಾಗರಾಜನ್ ಸಾಹಿತ್ಯದಲ್ಲಿ ಆಸಕ್ತಿ ಮೂಡಲು ಕಾರಣರಾದರು. ನಾಗರಾಜನ್ ಅವರು ಟಿ.ಎಸ್ ವೆಂಕಣ್ಣಯ್ಯ, ತ.ಸು.ಶಾಮರಾಯರ ತಮ್ಮನ ಮಗ. ತರಾಸು ಅವರ ತಮ್ಮ. ಸ್ವತಃ ಅವರೂ ಸಾಹಿತಿ. ಮಧು ಅವರು ನಾಗರಾಜನ್ ಅವರಿಂದ ಪ್ರೇರಿತರಾಗಿ ಸಾಹಿತ್ಯದತ್ತ ಒಲವು ಬೆಳೆಸಿಕೊಂಡರು.
ಎಂಟನೇ ತರಗತಿಯಲ್ಲಿ ಓದುವಾಗಲೇ ಮಧು ಅವರ ಮೊದಲ ಕವನ 'ಕರ್ಮವೀರ'ದಲ್ಲಿ ಪ್ರಕಟಗೊಂಡಿತು. ನಂತರ ಇವರ ಹಲವಾರು ಕತೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಇವರ ಮೊದಲ ಕಾದಂಬರಿ 'ಅಶೋಕಗಾನ' 1983ರಲ್ಲಿ ಪ್ರಕಟಗೊಂಡಿತು. ಇದುವರೆವಿಗೆ ಇವರ ಐವತ್ತಕ್ಕೂ ಹೆಚ್ಚು ಸಣ್ಣ ಕಥೆಗಳು, 28 ಕಾದಂಬರಿಗಳು, 8 ವಯಸ್ಕರ ಶಿಕ್ಷಣ ಕೃತಿಗಳು, ಒಂದು ನಾಟಕ ಪ್ರಕಟಗೊಂಡಿವೆ.
ಮಧು ಅವರ 'ಅರಳಿದ ಹೂ ಬಾಡಿತು' ಕಾದಂಬರಿಯನ್ನು ಓದಿ ಮೆಚ್ಚಿ 'ಬಾ ನನ್ನ ಪ್ರೀತಿಸು' ಚಿತ್ರ ಮಾಡಿದವರು ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯನವರು. ಅದಕ್ಕೆ ಸಂಭಾಷಣೆಯೂ ಮಧು ಅವರದೇ. ಚಿತ್ರ ಸೂಪರ್ ಹಿಟ್ ಆಯಿತು. ನಂತರ ಹಿಂದಿರುಗಿ ನೋಡಲಿಲ್ಲ. ಇಲ್ಲಿನ ತನಕ ಮಧು ಅವರು 130 ಚಿತ್ರಗಳಿಗೆ ಸಂಭಾಷಣೆ, 12 ಚಿತ್ರಗಳಿಗೆ ಕತೆ ಮತ್ತು ಚಿತ್ರಕತೆ ರಚನೆ ಮಾಡಿದ್ದಾರೆ. ರಸಿಕ, ಕರ್ಪೂರದ ಗೊಂಬೆ, ಕೌರವ, ಸೈನಿಕ, ಫೆಂಡ್ಸ್, ಸೂರಪ್ಪ, ಕೋಟಿಗೊಬ್ಬ, ಹಬ್ಬ, ಡಕೋಟ ಎಕ್ಸ್ಪ್ರೆಸ್, ತುಂಟಾಟ, ಮೊನಾಲಿಸಾ, ಅಣ್ಣ ತಂಗಿ, ತವರಿಗೆ ಬಾ ತಂಗಿ, ಮ್ಶೆ ಆಟೋಗ್ರಾಫ್, ಜೋಷ್, ಚೆಲ್ಲಾಟ, ಕೃಷ್ಣ ಹೀಗೆ ಇಪ್ಪತ್ತೆರಡು ಚಿತ್ರಗಳು ಶತದಿನೋತ್ಸವ/ಸಿಲ್ವರ್ ಜೂಬ್ಲಿ ಆಚರಿಸಿವೆ. 38 ಚಿತ್ರಗಳು ಅರ್ಧಶತಕ ಪೂರೈಸಿವೆ. 'ಉಘೇ ಉಘೇ ಮಾದೇಶ್ವರ' ಮೆಗಾ ಸೀರಿಯಲ್ಗೂ ಸಂಭಾಷಣೆ ರಚಿಸಿದ್ದಾರೆ. ಒಂದಿಷ್ಟು ವರ್ಷಗಳು ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾರೆ. ನಟರಾದ ಪ್ರಭಾಕರ್, ಎಂಪಿ ಶಂಕರ್ ಅವರ ಸಂಕ್ಷಿಪ್ತ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ.
ಮಧು ಅವರಿಗೆ 'ಸಂತೋಷ' ಚಿತ್ರಕ್ಕಾಗಿ 2004-05 ನೇ ಸಾಲಿನ ಅತ್ಯುತ್ತಮ ಸಂಭಾಷಣಾಕಾರರಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ, 2002ನೇ ಸಾಲಿನ ಅತ್ಯುತ್ತಮ ಕತೆಗಾಗಿ 'ಸೈನಿಕ' ಚಿತ್ರಕ್ಕೆ ದಕ್ಷಿಣ ಭಾರತದ(ಚೆನ್ನೈನ ಚಿತ್ರ ರಸಿಕರ ಪ್ರಶಸ್ತಿ ವತಿಯಿಂದ) ಶ್ರೇಷ್ಠ ಚಿತ್ರ ಪ್ರಶಸ್ತಿ, ಕರ್ನಾಟಕ ರಾಜ್ಯ ಸರ್ಕಾರ ನೀಡುವ ಚಲನಚಿತ್ರ ಕ್ಷೇತ್ರದಲ್ಲಿನ ಜೀವಮಾನ ಸಾಧನೆ ಪ್ರಶಸ್ತಿಗಳಲ್ಲಿ ಸಾಹಿತಿ ಹಣಸೂರು ಕೃಷ್ಣಮೂರ್ತಿ ಅವರ ಹೆಸರಿನ ಪ್ರಶಸ್ತಿ,2012-13 ನೇ ವರ್ಷದ ಚಾಮರಾಜನಗರ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ ಹಾಗೂ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಪುರಸ್ಕಾರಗಳು ಸಂದಿವೆ. ಇವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿಯಿಂದ ಜೀವಮಾನ ಸಾಧನೆ ಗೌರವವೂ ಸಂದಿದೆ.
ತೆರೆಯ ಮರೆಯಲ್ಲಿದ್ದು ಯಾವುದೇ ಪ್ರಚಾರಗಳಿಗೆ ಒಡ್ಡಿಕೊಳ್ಳದೆ ಸರಳತೆ ಸೌಜನ್ಯಗಳಿಂದ ಸಾಧನೆ ಮಾಡುತ್ತ ಬಂದಿರುವ ಮಧು ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಮಧು, ಅವರ ಪತ್ನಿ ಬರೆಹಗಾರ್ತಿ ಲಕ್ಷ್ಮೀ ಮಧು ಮತ್ತು ಅವರ ಕುಟುಂಬದವರ ಬದುಕು ನಿತ್ಯ ಸುಂದರವಾಗಿರಲಿ.
Happy birthday Madhu B A Sir 🌷🌷🌷
ಕಾಮೆಂಟ್‌ಗಳು