ಎಸ್. ಎಂ. ಕೃಷ್ಣ
ಎಸ್. ಎಂ. ಕೃಷ್ಣ
ಎಸ್. ಎಂ. ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಮತ್ತು ಹಲವು ತೆರದಲ್ಲಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಹೆಸರಾದವರು. ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಿರುವ ಅವರು ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದಲ್ಲೂ ಆಸಕ್ತಿ ತಳೆದವರು.
ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು 1932 ಮೇ 1ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಎಸ್.ಸಿ.ಮಲ್ಲಯ್ಯ. ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆ, ಮಹಾಜನ ಹೈಸ್ಕೂಲುಗಳಲ್ಲಿ ಓದಿ, ಮಹಾರಾಜಾ ಕಾಲೇಜಿನಲ್ಲಿ ಕಲಾ ಪದವಿಯನ್ನು ಪೂರ್ಣಗೊಳಿಸಿದರು. ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಮುಂದೆ ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ದಕ್ಷಿಣ ಮೆಥೋಡಿಸ್ಟ್ ವಿಶ್ವವಿದ್ಯಾಲಯ ಮತ್ತು ಜಾರ್ಜ್ ವಾಷಿಂಗ್‌ಟನ್ ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿಯೂ ಫುಲ್‌ಬ್ರೈಟ್ ವಿದ್ಯಾರ್ಥಿ ವೇತನ ಪಡೆದು ಕಾನೂನು ವ್ಯಾಸಂಗ ಮಾಡಿದರು.
ಎಸ್. ಎಂ. ಕೃಷ್ಣ ಅವರು ಭಾರತಕ್ಕೆ ಮರಳಿದ ನಂತರ 1962ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು. ಸ್ವಯಂ ಜವಾಹರಲಾಲ್ ನೆಹರು ಅವರು ಚುನಾವಣಾ ಪ್ರಚಾರ ಮಾಡಿದ್ದರೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಮುಖ ರಾಜಕಾರಣಿ ಕೆ ವಿ ಶಂಕರ್ ಗೌಡ ಅವರನ್ನು ಸೋಲಿಸಿದರು.
ಮುಂದೆ ಕೃಷ್ಣ ಅವರು ಪ್ರಜಾ ಸೋಷಿಯಲಿಸ್ಟ್ ಪಕ್ಷಕ್ಕೆ ಸೇರಿದರು. 1967ರಲ್ಲಿ ಮದ್ದೂರಿನಿಂದ ಕಾಂಗ್ರೆಸ್‌ನ ಎಂ. ಎಂ. ಗೌಡ ವಿರುದ್ಧ ಸೋತರು. 1968ರಲ್ಲಿ ಹಾಲಿ ಸಂಸದರು ನಿಧನರಾದಾಗ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜಯ ಸಾಧಿಸಿದರು.
1968ರಲ್ಲಿ ಕೃಷ್ಣ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಪ್ರಜಾ ಸಮಾಜವಾದಿ ಪಕ್ಷದ ಸದಸ್ಯರ ನಡುವಿನ ಸಮನ್ವಯದಲ್ಲಿ ಪ್ರಭಾವಶಾಲಿಯಾಗಿದ್ದರು. 1968ರ ಉಪಚುನಾವಣೆಯಿಂದ ಸಮಾಜವಾದಿಯಾಗಿ ಕರ್ನಾಟಕದ ಮಂಡ್ಯ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದರು. ಮುಂದಿನ ಎರಡು ಅವಧಿಗಳಲ್ಲಿ ಕಾಂಗ್ರೆಸ್ಸಿಗರಾಗಿ
1971 ಮತ್ತು 1980 ರಲ್ಲಿ ಚುನಾವಣೆಗಳಲ್ಲಿ ಗೆದ್ದರು.
ಎಸ್ ಎಂ ಕೃಷ್ಣ ಅವರು 1972ರಲ್ಲಿ ಲೋಕಸಭೆಗೆ ರಾಜೀನಾಮೆ ನೀಡಿ ಕರ್ನಾಟಕದಲ್ಲಿ ಎಂಎಲ್ ಸಿ ಆಗಿ ದೇವರಾಜ್ ಅರಸರ ಸರ್ಕಾರದಲ್ಲಿ ಸಚಿವರಾಗಿ ನೇಮಕಗೊಂಡರು.
1980ರಲ್ಲಿ ಲೋಕಸಭೆಗೆ ಹಿಂತಿರುಗಿ, 1983-84ರ ಅವಧಿಯಲ್ಲಿ ಇಂದಿರಾ ಗಾಂಧಿಯವರ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು. 1984ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸೋತರು. 1996 ಮತ್ತು 2006ವರ್ಷಗಳಲ್ಲಿ ರಾಜ್ಯಸಭೆಯ ಸದಸ್ಯರಾದರು. ಅವರು ವಿವಿಧ ಸಮಯಗಳಲ್ಲಿ ಕರ್ನಾಟಕ ವಿಧಾನಸಭೆ ಮತ್ತು ಪರಿಷತ್ತಿನ ಸದಸ್ಯರಾಗಿದ್ದರು. 1989 ಮತ್ತು 1993ರ ನಡುವೆ ಅವರು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಮತ್ತು 1993 ರಿಂದ 1994ರವರೆಗೆ ಕರ್ನಾಟಕದ ಉಪಮುಖ್ಯಮಂತ್ರಿಯಾಗಿದ್ದರು.
ಎಸ್. ಎಂ. ಕೃಷ್ಣ ಅವರು 1999ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿ 2004ರ ವರೆಗೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು.
ಕೃಷ್ಣ ಅವರು ಕೆಲಕಾಲ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದು 2008ರಲ್ಲಿ ಆ ಹುದ್ದೆಗೆ ರಾಜೀನಾಮೆ ನೀಡಿದರು. ರಾಜ್ಯಸಭೆ ಪ್ರವೇಶಿಸಿ 2009-2012 ಅವಧಿಯಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಕೇಂದ್ರ ಕ್ಯಾಬಿನೆಟ್ ಸಚಿವರಾಗಿ ಕಾರ್ಯನಿರ್ವಹಿಸಿದರು.
ಕಾಂಗ್ರೆಸ್ಸಿನ ರಾಜ್ಯ ರಾಜಕಾರಣದಲ್ಲಿ ಹಲವು ನಾಯಕತ್ವದ ಗೊಂದಲಗಳು, ಸಂಯುಕ್ತ ಸರ್ಕಾರಕ್ಕೆ ಜೊತೆಗೂಡಿದ ಜಾತ್ಯತೀತ ಜನತಾದಳದ ನಾಯಕರಿಗೆ ಇವರ ಕುರಿತಾಗಿದ್ದ ಅಸಹನೆಗಳು, ಗೆಲುವೆಂಬುದು ಮರೀಚೆಕೆಯಾಗಿದ್ದ ಕಾಂಗ್ರೆಸ್ನಲ್ಲಿ ತಮಗೆ ಗೌರವ ಇಲ್ಲದ್ದಿದ್ದದ್ದು ಇತ್ಯಾದಿಗಳನ್ನು ನಿರಂತರ ಕಂಡ ಎಸ್. ಎಂ. ಕೃಷ್ಣ ಅವರು 2017ರಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡಿದ್ದರು.
ಎಸ್. ಎಂ. ಕೃಷ್ಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತಿಗಳನ್ನೂ ಜೊತೆಯಾಗಿಟ್ಟುಕೊಂಡು ಬಂದವರು. ದೊಡ್ಡ ಸ್ಥಾನಗಳಲ್ಲಿದ್ದಾಗಲೂ ಸಾಮಾನ್ಯರಂತೆ ಸಭೆ ಸಮಾರಂಭಗಳಲ್ಲಿ ಅವರು ಪ್ರೇಕ್ಷಕರಾಗಿ ಭಾಗವಹಿಸಿದ್ದಿದೆ. ಅವರ ಜೀವನಾನುಭವ ಆಧರಿಸಿದ 'ಸ್ಮೃತಿವಾಹಿನಿ' ಎಂಬ ಕೃತಿ ಮೂಡಿಬಂದಿದೆ.
On the birth day of Former Chief Minister S. M. Krishna
ಕಾಮೆಂಟ್‌ಗಳು