ರಾಮನಾಥ ಗೋಯೆಂಕಾ
ರಾಮನಾಥ ಗೋಯೆಂಕಾ
ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕಾ ಬಳಗವನ್ನು ಹುಟ್ಟುಹಾಕಿದ ರಾಮನಾಥ ಗೋಯೆಂಕಾ ಭಾರತೀಯ ಪತ್ರಿಕೋದ್ಯಮದ ದೊಡ್ಡ ಹೆಸರು. ಅವರೊಬ್ಬ ಪ್ರಮುಖ ಪತ್ರಿಕೋದ್ಯಮಿ ಮತ್ತು ಉದ್ಯಮಪತಿ.
ರಾಮನಾಥ ಗೋಯೆಂಕಾ 1904ರ ಏಪ್ರಿಲ್ 3ರಂದು ಬಿಹಾರದ ದರ್ಭಾಂಗದಲ್ಲಿ ಜನಿಸಿದರು. 1926ರಿಂದ 1936 ಅವಧಿಯಲ್ಲಿ ಬ್ರಿಟಿಷ್ ವಹಿವಾಟು ಸಂಸ್ಥೆಯೊಂದಿಗೆ ಚಿನ್ನ, ಬೆಳ್ಳಿ, ಹತ್ತಿ ಮುಂತಾದವನ್ನು ಆಮದು ಮಾಡಿಕೊಳ್ಳುವ ಸಂಸ್ಥೆಯ ನೌಕರರಾಗಿ, ಏಜೆಂಟರಾಗಿ, ಸಹ ಹೂಡಿಕೆದಾರರಾಗಿ ಬೆಳೆದರು. 1926-30ರಲ್ಲಿ ಮದ್ರಾಸ್ ವಿಧಾನ ಮಂಡಲದ ಸದಸ್ಯರಾಗಿದ್ದರು. 1927ರಲ್ಲಿ ವಿಧಾನಮಂಡಲದಲ್ಲಿ ಇಂಡಿಪೆಂಡೆಂಟ್ ಪಾರ್ಟಿಯ ಕಾರ್ಯದರ್ಶಿಯಾದರು. ಭಾರತದ ಪ್ರಥಮ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಸದಸ್ಯರಾಗಿದ್ದರು.
ಪತ್ರಿಕೋದ್ಯಮವನ್ನು ಒಂದು ಯಶಸ್ವಿ ಉದ್ದಿಮೆಯಾಗಿ ಪರಿವರ್ತಿಸಿದ ಭಾರತೀಯರಲ್ಲಿ ಗೋಯೆಂಕಾ ಪ್ರಮುಖರು. ಚೆನ್ನೈನಲ್ಲಿನ ಫ್ರೀ ಪ್ರೆಸ್ ಜರ್ನಲ್ನಲ್ಲಿ ವಿಲೇವಾರಿ ಜವಾಬ್ದಾರಿಯನ್ನು ನಿರ್ವಹಿಸಿದರು. 1932ರ ವರ್ಷ ಪಿ. ವರದರಾಜ ನಾಯ್ದು ಎಂಬುವರು ಸ್ಥಾಪಿಸಿದ 'ದ ಇಂಡಿಯನ್ ಎಕ್ಸ್ಪ್ರೆಸ್' ಮಂದೆ ಸದಾನಂದ್ ಎಂಬುವರ ಒಡೆತನಕ್ಕೆ ಬಂದು 1936ರ ವೇಳೆಗೆ ಗೋಯೆಂಕಾ ಅವರ ಪೂರ್ಣ ಸುಪರ್ದಿಗೆ ಬಂತು.
ರಾಮನಾಥ ಗೋಯೆಂಕಾ 1941ರಲ್ಲಿ ನ್ಯಾಶನಲ್ ನ್ಯೂಸ್ ಪೇಪರ್ ಎಡಿಟರ್ಸ್ ಕಾನ್ಫರೆನ್ಸ್ ಅಧ್ಯಕ್ಷರಾದರು. ಸ್ವಾತಂತ್ರ್ಯೋತ್ತರದಲ್ಲಿ ಅವರ ಮತ್ತು ಅವರ ಕುಟುಂಬದವರ ಒಡೆತನಕ್ಕೆ ಸೇರಿದ ಪತ್ರಿಕೆಗಳು ಸಂಖ್ಯೆ ಹಾಗೂ ಪ್ರಸಾರಣದಲ್ಲಿ ಗಮನಾರ್ಹ ಸಾಧನೆ ಮಾಡಿದ್ದವು. ಆರು ಭಾಷೆಗಳಲ್ಲಿ ಎಂಟು ದಿನಪತ್ರಿಕೆಗಳೂ ಮೂರು ವಾರಪತ್ರಿಕೆಗಳೂ ಅವರ ನಿಯಂತ್ರಣಕ್ಕೆ ಒಳಪಟ್ಟಿದ್ದವು.
ಅಹಮದಾಬಾದ್, ದೆಹಲಿ, ಬೆಂಗಳೂರು, ಮದ್ರಾಸ್, ಮಧುರೈ, ಮುಂಬಯಿ, ಮತ್ತು ವಿಜಯವಾಡಗಳಿಂದ ಏಕಕಾಲಕ್ಕೆ ಪ್ರಕಟವಾಗುತಿದ್ದ ಇಂಡಿಯನ್ ಎಕ್ಸ್ಪ್ರೆಸ್ ಬಹುಕಾಲ ಭಾರತದಲ್ಲಿ ಅತ್ಯಧಿಕ ಪ್ರಸಾರವುಳ್ಳ ಇಂಗ್ಲಿಷ್ ಪತ್ರಿಕೆಯಾಗಿತ್ತು ಫೈನಾನ್ಷಿಯಲ್ ಎಕ್ಸ್ಪ್ರೆಸ್ ವಾಣಿಜೋದ್ಯಮಗಳಿಗೆ ಸಂಬಂಧಿಸಿದ ದಿನ ಪತ್ರಿಕೆ. ಸ್ಕ್ರೀನ್ ಚಲನ ಚಿತ್ರೋದ್ಯಮಕ್ಕೆ ಮೀಸಲಾದ ವಾರಪತ್ರಿಕೆ. ಸಂಡೇ ಸ್ಟ್ಯಾಂಡರ್ಡ್ ಒಂದು ವಾರಪತ್ರಿಕೆ. ಭಾನುವಾರದ ಇಂಡಿಯನ್ ಎಕ್ಸ್ಪ್ರೆಸ್ ಅನ್ನೂ ಇದು ಒಳಗೊಂಡಿತು. ಕನ್ನಡ ಪ್ರಭ (ಕನ್ನಡ), ಆಂಧ್ರ ಪ್ರಭ (ತೆಲಗು), ದಿನಮಣಿ (ತಮಿಳು), ಲೋಕಸತ್ತಾ (ಮರಾಠಿ), ಜನಸತ್ತಾ ಮತ್ತು ಲೋಕಸತ್ತಾ (ಗುಜರಾತಿ), ಆಂಧ್ರಪ್ರಭ (ತೆಲುಗು) ಇವು ಭಾರತೀಯ ಭಾಷಾ ಪತ್ರಿಕೆಗಳು.
ಭಾರತೀಯ ಪತ್ರಿಕಾ ಮಾಲೀಕರ ಸಂಘವಾದ ಇಂಡಿಯನ್ ಆಂಡ್ ಈಸ್ಟರ್ನ ನ್ಯೂಸ್‍ಪೇಪರ್ಸ್ ಸೊಸೈಟಿ ಆರಂಭವಾದನಿಂದಲೂ ರಾಮನಾಥ ಗೋಯೆಂಕಾ ಆದರ ಪ್ರಮುಖ ಸದಸ್ಯರಲ್ಲೊಬ್ಬರಾಗಿದ್ದರು. 1957ರಲ್ಲಿ ಈ ಸಂಘದ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ವೃತ್ತಪತ್ರಿಕಾ ಕಾಗದ ಪೂರೈಕೆಯ ಸಂಬಂಧದಲ್ಲಿ 1946ರಲ್ಲಿ ಈ ಸಂಘ ಇಂಗ್ಲೆಂಡ್, ಯೂರೋಪ್, ಕೆನಡ ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳಿಗೆ ಕಳಿಸಿದ್ದ ನಿಯೋಗದಲ್ಲಿ ಗೋಯೆಂಕಾ ಅವರೂ ಒಬ್ಬ ಸದಸ್ಯರಾಗಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ದೇಶದ ಪ್ರಮುಖ ವಾರ್ತಾ ಸಂಸ್ಥೆಯಾಗಿ ಸ್ಥಾಪನೆಯಾದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಕ್ಕೆ ಸುದ್ದಿಯ ಪೂರೈಕೆಯಾಗಿ ರಾಯಿಟರ್ಸ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದ ಇಂಡಿಯನ್ ಅಂಡ್ ಈಸ್ಟರ್ನ್ ನ್ಯೂಸ್‍ಪೇಪರ್ಸ್ ಸೊಸೈಟಿಯ ನಿಯೋಗದಲ್ಲೂ ಇವರು ಸದಸ್ಯರಾಗಿದ್ದರು. ಸ್ವಲ್ಪ ಕಾಲ ಇವರು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ನಿರ್ದೇಶಕರೂ, ನಿರ್ದೇಶಕ ಮಂಡಲಿಯ ಅಧ್ಯಕ್ಷರೂ ಆಗಿದ್ದರು.
ರಾಮನಾಥ ಗೋಯೆಂಕ 1971ರ ಚುನಾವಣೆಯಲ್ಲಿ ವಿದಿಷಾ ಕ್ಷೇತ್ರದಿಂದ ಭಾರತೀಯ ಜನಸಂಘದ ಅಭ್ಯರ್ಥಿಯಾಗಿ ಆರಿಸಿ ಬಂದಿದ್ದರು. ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿ ಹೇರಿಕೆಯನ್ನು ಅವರು ವಿರೋಧಿಸಿದರು.
ಭಾರತದ ಪತ್ರಿಕೋದ್ಯಮದಲ್ಲಿ ತಮ್ಮ ಛಾಪು ಮೂಡಿಸಿದ ರಾಮನಾಥ ಗೋಯೆಂಕ 1991ರ ಅಕ್ಟೋಬರ್ 5ರಂದು ನಿಧನರಾದರು. ಭಾರತದಲ್ಲಿ ಪತ್ರಿಕೋದ್ಯಮದಲ್ಲಿನ ಶ್ರೇಷ್ಠ ಸಾಧನೆಗಾಗಿ ರಾಮನಾಥ ಗೋಯೆಂಕಾ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ರಾಮನಾಥ ಗೋಯೆಂಕಾ ಅವರು ನಿಧನರಾದ 7 ವರ್ಷಗಳಲ್ಲಿ, ಕುಟುಂಬದಲ್ಲಿನ ಬಿರುಕು ವ್ಯಾಜ್ಯಗಳಿಂದ (1998ರ ವರ್ಷದಿಂದ) ಇಂಡಿಯನ್ ಎಕ್ಸ್ಪ್ರೆಸ್ ಸಮೂಹವು ಉತ್ತರ ಭಾರತದಲ್ಲಿ 'ದ ಇಂಡಿಯನ್ ಎಕ್ಸ್ಪ್ರೆಸ್' ಎಂಬ ಹಳೆಯ ಹೆಸರು ಹಾಗೂ ದಕ್ಷಿಣ ಭಾರತದಲ್ಲಿ 'ದ ನ್ಯೂ ಇಂಡಿಯನ್ ಎಕ್ಸ್ಪೆಸ್' ಎಂಬ ಎರಡು ಹೆಸರುಗಳಿಂದ ಇಬ್ಬಾಗವಾಗಿದೆ.
On the birth anniversary of founder of Indian Express Group Ramnath Goenka
ಕಾಮೆಂಟ್‌ಗಳು