ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಕನ್ಯಾ ಕಳಸ


 ಸುಕನ್ಯಾ ಕಳಸ 


ಸುಕನ್ಯಾ ಕಳಸ ಅವರು ಬರಹಗಾರ್ತಿಯಾಗಿ ಮತ್ತು ಬಹುಮುಖಿ ಪ್ರತಿಭೆಯಾಗಿ  ಹೆಸರಾಗಿದ್ದಾರೆ. 

ಮೇ 13 ಸುಕನ್ಯಾ ಅವರ ಜನ್ಮದಿನ.  ಅವರು 
ಚಿಕ್ಕಮಗಳೂರಿನ ಕಳಸದವರು. ತಂದೆ ಎಚ್.ಪುಟ್ಟದೇವರಯ್ಯ.  ತಾಯಿ ನಾಗಮ್ಮ. ಕಳಸದಲ್ಲಿ ಹೈಸ್ಕೂಲುವರೆಗಿನ  ಶಿಕ್ಷಣದ  ನಂತರ ಶಿವಮೊಗ್ಗದಲ್ಲಿ ಹಾಗೂ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಓದಿ ಪದವಿ ಪಡೆದರು. ಮುಂದೆ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು. ಜೊತೆಗೆ ಸೈಕೊಥೆರಪಿ ಕೌನ್ಸೆಲಿಂಗ್ ಕ್ಷೇತ್ರದಲ್ಲಿ  ಎಂ.ಎಸ್. ಮಾಡಿದ್ದಾರೆ.  ಸುಕನ್ಯಾ ಅವರ ಪತಿ ಡಾ. ಮಹಾಬಲೇಶ್ವರ ರಾವ್ ಪ್ರಾಧ್ಯಾಪಕರಾಗಿ, ಶಿಕ್ಷಣ ತಜ್ಞರಾಗಿ ಮತ್ತು ಸಾಹಿತಿಗಳಾಗಿ ಹೆಸರಾಗಿದ್ದಾರೆ.

ಸುಕನ್ಯಾ ಅವರು ಅಂಚೆ ಇಲಾಖೆಯಲ್ಲಿ ಎರಡೂವರೆ ದಶಕಗಳ ಕಾಲ  ಸೇವೆ ಸಲ್ಲಿಸಿ   ಸ್ವಯಂ ನಿವೃತ್ತಿ ಪಡೆದಿದ್ದಾರೆ. 

ಸುಕನ್ಯಾ ಅವರಿಗೆ ಬಾಲ್ಯದಿಂದಲೇ ಸಂಗೀತ ಸಾಹಿತ್ಯಗಳಲ್ಲಿ ಆಸಕ್ತಿ. ನಾಟಕಗಳಲ್ಲಿನ  ಅಭಿನಯ ಮತ್ತು ನಿರ್ದೇಶನದ ಅನುಭವ ಇವರೊಂದಿಗಿದೆ. ಜಾನಪದ ಗೀತಗಾಯನದಲ್ಲಿ ವಿಶೇಷ ಪರಿಶ್ರಮವಿದೆ. ಶಾಸ್ತ್ರೀಯ ಸಂಗೀತದಲ್ಲೂ ಪರಿಣತಿ ಇದೆ. ರೇಡಿಯೋ, ಕಿರುತೆರೆಗಳಲ್ಲಿ ಗಾಯನ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಸುಕನ್ಯಾ ಅವರ ಪ್ರಥಮ ಕವನ ಸಂಕಲನ ‘ಗತದೊಂದಿಗೆ ಸ್ವಗತ’. ಮುಂದೆ ʻಮಗಳು ಹೋಗಿದ್ದಾಳೆ ಶಾಲೆಗೆʼ, 'ಭಾನುವಾರವೆಂದರೆ ಏನಮ್ಮಾ', 'ಹೊಲಿಯುವ ಕೈಗಳು' ಸೇರಿದಂತೆ ಹಲವು ಕವನ ಸಂಕಲನಗಳು ಹಾಗೂ ‘ಕಂಪ್ಯೂಟರ್ ಕುಟ್ಟಿ’ ಅಂತಹ ಪ್ರಬಂಧ ಸಂಕಲನಗಳು ಪ್ರಕಟವಾಗಿವೆ.  ಇವರ  'ಎಮಿಲಿ ಡಿಕಿನ್ಸನ್' ನೂರು ಕವಿತೆಗಳು'ಎಂಬ ಕೃತಿ ಸುಪ್ರಸಿದ್ಧ ಆಂಗ್ಲ ಕವಯಿತ್ರಿ  ಎಮಿಲಿ ಡಿಕಿನ್‌ಸನ್ ಅವರ ಕವಿತೆಗಳ ಅನುವಾದವಾಗಿ ಪ್ರಸಿದ್ಧವಾಗಿದೆ.

ಸುಕನ್ಯಾ ಅವರು  ಬರೆದ ಭಾವಗೀತೆಗಳಿಗೆ ಎಚ್.ಆರ್. ಲೀಲಾವತಿಯವರು  ರಾಗ ಸಂಯೋಜನೆ ಮಾಡಿದ್ದು ಅವು ಮಂಗಳೂರು ಆಕಾಶವಾಣಿಯಿಂದ ಪ್ರಸಾರಗೊಂಡಿವೆ. ಇವರ ಹಲವಾರು ರಚನೆಗಳು ದೂರದರ್ಶನದಲ್ಲಿ ಪ್ರಸ್ತುತಗೊಂಡಿವೆ. ಮೈಸೂರು ದಸರಾ ಕಾವ್ಯಗೋಷ್ಠಿಯೂ ಸೇರಿದಂತೆ ಪ್ರಖ್ಯಾತ ವೇದಿಕೆಗಳಲ್ಲಿ ಇವರು ಕಾವ್ಯ ವಾಚನ ಮಾಡಿದ್ದಾರೆ. 

ಸುಕನ್ಯಾ ಕಳಸಾ ಅವರಿಗೆ ಪ್ರಜಾವಾಣಿ ಪ್ರಬಂಧ ಸ್ಪರ್ಧೆ ಬಹುಮಾನ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. 

ಸುಕನ್ಯಾ ಕಳಸಾ ಅವರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳು. 

Happy birthday Sukanya Kalasa

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ