ನಾಗರತ್ನ ಜಿ. ರಾವ್
ನಾಗರತ್ನ ಜಿ ರಾವ್
ವೈದ್ಯರಾದ ಡಾ. ನಾಗರತ್ನ ಜಿ. ರಾವ್ ಅವರು ಬರೆಹಗಾರ್ತಿಯಾಗಿ, ರಂಗಕಲಾವಿದೆಯಾಗಿ, ಬಹುಮಖಿ ಸಾಂಸ್ಕೃತಿಕ ಆಸಕ್ತಿ - ಅಭಿವ್ಯಕ್ತಿ ಉಳ್ಳವರಾಗಿ ಮತ್ತು ಸಮಾಜಮುಖಿಯಾಗಿ ಕಂಗೊಳಿಸುತ್ತಿರುವವರು.
ಮೇ 13 ನಾಗರತ್ನ ಅವರ ಜನ್ಮದಿನ. ಹುಟ್ಟಿದ್ದು ಹಾಸನದಲ್ಲಿ. ತಂದೆ ಎಂ ಗೋವಿಂದರಾವ್ ಬೇಲೂರು ಹೈಸ್ಕೂಲು ಹೆಡ್ಮಾಸ್ಟರ್ ಆಗಿದ್ದವರು. ತಾಯಿ ಪದ್ಮಾವತಮ್ಮ ಅವರು. ನಾಗರತ್ನ ಅವರು
ಸಂಸ್ಕೃತ ಸಾಹಿತ್ಯ ಕಲಿತದ್ದು ಹಾಸನದ ಸೀತಾರಾಮಾಂಜನೇಯ ದೇವಾಲಯದ ಪಾಠಶಾಲೆಯಲ್ಲಿ. ಸಂಗೀತದಲ್ಲಿ ಇವರದ್ದು ಜೂನಿಯರ್ ಸಾಧನೆ. ಮೈಸೂರು ವಿಶ್ವವಿದ್ಯಾಲಯದಿಂದ ಆಯುರ್ವೇದ ಪದವಿ ಗಳಿಸಿದರು. ಕಾಯಚಿಕಿತ್ಸಾ ವಿ.ವಿ ಪ್ರಥಮ ಸ್ಥಾನದ ಸಾಧನೆ ಮಾಡಿದರು. ಜೊತೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಅಲೋಪತಿ ಪದವಿ ಗಳಿಸಿದರು. ಇಂದು ಅವರ ಜನ್ಮದಿನ ಮಾತ್ರವಲ್ಲದೆ ಇವರ ವೃತ್ತಿ ಜೀವನದ 34 ನೇ ವರ್ಷ. ಇಂದಿಗೂ ಬೆಂಗಳೂರು ಶ್ರೀನಗರದಲ್ಲಿ ವೃತ್ತಿನಿರತರಾಗಿದ್ದಾರೆ. ಚೈಲ್ಡ್ ಕೇರ್ ಅಂಡ್ ಕೌನ್ಸಲಿಂಗ್, ಜೀರಿಯಾರ್ಟಿಕ್ ಕೌನ್ಸಲಿಂಗ್ ಇವರ ಕಾಳಜಿಗಳಲ್ಲಿ ಸೇರಿವೆ.
ನಾಗರತ್ನ ಅವರು ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಕ್ರಿಯರು. ಹವ್ಯಾಸಿ ನಾಟಕ, ಚರ್ಚಾಸ್ಪರ್ಧೆಗಳಲ್ಲಿ ಭಾಗಿಯಾಗುತ್ತ ಬಂದರು. ನಾಗರತ್ನ ಅವರ ತಂದೆ ಗೋವಿಂದರಾವ್ ಅವರು ಬೇಲೂರು ಕೃಷ್ಣಮೂರ್ತಿ ಅವರ ಆಪ್ತರಾಗಿ, ಕೈಲಾಸಂರವರ ಎಲ್ಲಾ ನಾಟಕಗಳಲ್ಲಿ ಅಭಿನಯಿಸಿದ್ದವರು. ತಂದೆ ಮತ್ತು ತಮ್ಮಂದಿರಿಬ್ಬರ ಸ್ಪೂರ್ತಿ ಇವರಲ್ಲೂ ನಾಟಕದ ಆಸಕ್ತಿ ಬೆಳೆಸಿತು. 'ಅಂಕ' ಇವರ ಬೀದಿ ನಾಟಕ ತಂಡ. ನಾಗರತ್ನ ಮೂರು ಸಲ ಶ್ರೇಷ್ಠ ನಟಿ ಪ್ರಶಸ್ತಿ ಗಳಿಸಿದರು. 'ಯಾವ ಮೋಹನ ಮುರಳಿ ಕರೆಯಿತೊ' ಕಿರುಚಿತ್ರ ಮೂಡಿಸಿದರು. ಕವನ ಸಂಕಲನ 'ತೆನೆ' ಪ್ರಕಟಿಸಿದರು. 'ಪೇಷಂಟ್ಸ್ ಹಾಗೂ ಇತರ ಹಾಸ್ಯ ಪ್ರಸಂಗಗಳು' ಇವರ ಅನುಭವ ಕಥನ.
ನಾಗರತ್ನ ಅವರಿಗೆ 2019-20 ವೈದ್ಯಕೀಯ ಕ್ಷೇತ್ರ ಶ್ರೇಷ್ಟ ಸಾಧಕಿ ಪ್ರಶಸ್ತಿ ಮತ್ತು ಕರೋನಾ ಸಮಯದ 'ಆಪ್ತಮಿತ್ರ ಪ್ರಶಸ್ತಿ' ಅರಸಿ ಬಂದವು.
ಆತ್ಮೀಯರೂ, ಬಹುಮುಖಿ ಸಾಧಕರೂ ಆದ ಡಾ. ನಾಗರತ್ನ ಜಿ ರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಇವರೂ, ನಾನು ಬೆಳೆದ ಹಾಸನದ ವಾತಾವರಣದಲ್ಲಿ ಬೆಳೆದು ಇಷ್ಟೊಂದು ಸಾಧಿಸಿದ್ದಾರೆ ಎಂಬುದು ನನಗೆ ವಿಶೇಷ ಹೆಮ್ಮೆ 🌷🙏🌷
Happy birthday Dr.Nagarathna G Rao 🌷🌷🌷
ಕಾಮೆಂಟ್‌ಗಳು