ಸಾಲಾರ್ ಜಂಗ್
ಸಾಲಾರ್ ಜಂಗ್
ಸಾಲಾರ್ ಜಂಗ್ ಎಂದರೆ ತಕ್ಷಣ ನೆನಪಾಗುವುದು ಹೈದರಾಬಾದಿನಲ್ಲಿರುವ ಭವ್ಯ ಮ್ಯೂಸಿಯಮ್. ಇಲ್ಲಿನ ಅದ್ಬುತ ಸಂಗ್ರಹಗಳನ್ನು ಮಾಡಿದವರು ಮೀರ್ ಯೂಸುಫ್ ಅಲಿ ಖಾನ್ ಸಾಲಾರ್ ಜಂಗ್. ಅವರು ಸಲಾರ್ ಜಂಗ್ ಎಂದೇ ಪ್ರಸಿದ್ಧರು.
ಸಾಲಾರ್ ಜಂಗ್ ಕುಟುಂಬವು ಪ್ರಪಂಚದಾದ್ಯಂತದ ಅಪರೂಪದ ಕಲಾ ವಸ್ತುಗಳ ಸಂಗ್ರಹಕ್ಕೆ ಕಾರಣವಾಗಿದೆ. ಈ ಕುಟುಂಬವು ಡೆಕ್ಕನ್ ಇತಿಹಾಸದಲ್ಲಿನ ಅತ್ಯಂತ ಸುಪ್ರಸಿದ್ಧ ಕುಟುಂಬಗಳಲ್ಲಿ ಒಂದಾಗಿತ್ತು. ಈ ಕುಟುಂಬದ ಐದು ಮಂದಿ ಹೈದರಾಬಾದ್-ಡೆಕ್ಕನ್ ಪ್ರಾಂತ್ಯದ ನಿಜಾಮರ ಆಳ್ವಿಕೆಯಲ್ಲಿ ಪ್ರಧಾನ ಮಂತ್ರಿ ಅಥವಾ ದಿವಾನರಾಗಿದ್ದರು.
ಮೂರನೇ ಸಾಲಾರ್ ಜಂಗ್ ಎನಿಸಿದ ಮೀರ್ ಯೂಸುಫ್ ಅಲಿ ಖಾನ್ 1889 ಜೂನ್ 4 ರಂದು ಪುಣೆಯಲ್ಲಿ ಜನಿಸಿದರು. ಇವರನ್ನು 1912 ರಲ್ಲಿ ಏಳನೆಯ ನವಾಬ್ ಮೀರ್ ಓಸ್ಮಾನ್ ಅಲಿ ಖಾನ್ ನಿಜಾಮ್ ಅವರು ಪ್ರಧಾನ ಮಂತ್ರಿಯಾಗಿ ನೇಮಿಸಿದರು. ಮೂರನೇ ಸಾಲಾರ್ ಜಂಗ್ ಅವರು ನವೆಂಬರ್ 1914 ರಲ್ಲಿ ದಿವಾನ್ ಅಥವಾ ಪ್ರಧಾನ ಮಂತ್ರಿ ಹುದ್ದೆಯನ್ನು ತ್ಯಜಿಸಿದರು. ತಮ್ಮ ಕಲಾರಾಧಾಕರಾದ ಅವರು ತಮ್ಮ ಕಲಾ ಸಂಪತ್ತನ್ನು ಶ್ರೀಮಂತಗೊಳಿಸುವತ್ತ ನಿರಂತರ ಗಮನಾರೂಢರಾಗಿದ್ದರು. ಕಲೆ ಮತ್ತು ಸಾಹಿತ್ಯ ಅವರ ಆಪ್ತ ಹವ್ಯಾಸಗಳಾಗಿದ್ದವು. ಕಲೆಯ ಮೇಲಿನ ಅವರ ಉತ್ಕಟ ಪ್ರೀತಿಯ ಸುದ್ದಿಯು ದೂರ ದೂರದವರೆಗೆ ವ್ಯಾಪಿಸಿತ್ತು. ಅವರ ಪೂರ್ವಜರ ಅರಮನೆ, ದಿವಾನ್ ಮಹಲುಗಳು ಪ್ರಪಂಚದ ಮೂಲೆ ಮೂಲೆಗಳಿಂದ ಸರಕುಗಳ ಮಾರಾಟಗಾರರಿಂದ ನಿರಂತರವಾಗಿ ತುಂಬಿರುತ್ತಿತ್ತು. ಅವರು ವಿದೇಶದಲ್ಲಿ ಏಜೆಂಟರುಗಳಿಂದ ಮತ್ತು ಪ್ರಸಿದ್ಧ ಪುರಾತನ ವಸ್ತುಗಳ ವಿತರಕರಿಂದ ಕ್ಯಾಟಲಾಗ್‌ಗಳು ಮತ್ತು ಪಟ್ಟಿಗಳನ್ನು ತರಿಸಿಕೊಂಡಿದ್ದರು. ಅವರು ತಮ್ಮ ಖರೀದಿಗಳನ್ನು ಈ ಮೂಲಗಳಿಗೆ ಮಾತ್ರ ಸೀಮಿತಗೊಳಿಸಲಿಲ್ಲ. ಯುರೋಪ್ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ಹೋಗಿದ್ದ ಪ್ರವಾಸಗಳ ಸಮಯದಲ್ಲಿ ವೈಯಕ್ತಿಕವಾಗಿ ಖರೀದಿಗಳನ್ನು ಮಾಡಿದರು. ಅವರು ಪ್ರಾಚೀನ ವಸ್ತುಗಳು, ಕಲೆ ಮತ್ತು ಅಪರೂಪದ ಹಸ್ತಪ್ರತಿಗಳ ಮಹಾನ್ ಸಂಗ್ರಾಹಕರಾಗಿದ್ದರು ಮಾತ್ರವಲ್ಲದೆ, ಕವಿಗಳು, ಬರಹಗಾರರು ಮತ್ತು ಕಲಾವಿದರನ್ನು ಪೋಷಿಸಿದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದರು. ಅವರು ತಮ್ಮ ಸ್ವಂತ ಕುಟುಂಬದ ಸದಸ್ಯರ ಮೇಲೆ ಅನೇಕ ಪುಸ್ತಕಗಳ ಪ್ರಕಟಣೆಗೆ ಕಾರಣರಾಗಿದ್ದರು.
ಸಾಲಾರ್ ಜಂಗ್ ಅವರು 1949ರ ಮಾರ್ಚ್ 2ರಂದು ನಿಧನರಾಗುವವರೆಗೂ ನಲವತ್ತು ವರ್ಷಗಳ ಕಾಲ ತಮ್ಮ ಸಂಗ್ರಹ ಕಾರ್ಯವನ್ನು ನಡೆಸಿದ್ದರು. ಅವರ ನಿಧನದ ಸಂದರ್ಭದಲ್ಲಿ ಅವರ ಸಂಪೂರ್ಣ ಸಂಗ್ರಹವು ಉತ್ತರಾಧಿಕಾರಿಯಿಲ್ಲದೆ ಉಳಿಯಿತು. ದಿವಂಗತ ನವಾಬನ ಕುಟುಂಬದ ಸದಸ್ಯರು ಈ ಅಸಾಧಾರಣ ಸಂಗ್ರಹವನ್ನು ದೇಶಕ್ಕೆ ಉಡುಗೊರೆಯಾಗಿ ನೀಡಲು ಒಗ್ಗೂಡಿದರು. ಹೀಗೆ ಇದನ್ನು ವಸ್ತುಸಂಗ್ರಹಾಲಯದ ರೂಪದಲ್ಲಿ ದಿವಂಗತ ಜಂಗ್ ಅವರ ಮನೆಯಾದ ದಿವಾನ್ ದಿಯೋಡಿಯಲ್ಲಿ 1951 ರ ಡಿಸೆಂಬರ್ 16 ರಂದು ತೆರೆಯಲಾಯಿತು. ಪಂಡಿತ್ ಜವಾಹರಲಾಲ್ ನೆಹರು ಅವರು ಇದನ್ನು ಸಾರ್ವಜನಿಕರಿಗೆ ತೆರೆದರು. ನಂತರ ನಿಜಾಮ್ ಕುಟುಂಬ ಸದಸ್ಯರ ಒಪ್ಪಿಗೆಯೊಂದಿಗೆ ಭಾರತ ಸರ್ಕಾರವು ಒಪ್ಪಂದ ಪತ್ರದ ಮೂಲಕ ಔಪಚಾರಿಕವಾಗಿ ವಸ್ತುಸಂಗ್ರಹಾಲಯವನ್ನು ಸ್ವಾಧೀನಪಡಿಸಿಕೊಂಡು, ಈ ಮ್ಯೂಸಿಯಂ ಅನ್ನು ಭಾರತ ಸರ್ಕಾರದ ವೈಜ್ಞಾನಿಕ ಸಂಶೋಧನೆ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವಾಲಯದ ಅಧೀನಕ್ಕೆ ತಂದಿತು. 1961 ರಲ್ಲಿ ಸಂಸತ್ತಿನ ಕಾಯಿದೆ ಮೂಲಕ ಸಲಾರ್ ಜಂಗ್ ವಸ್ತುಸಂಗ್ರಹಾಲಯವನ್ನು ಅದರ ಗ್ರಂಥಾಲಯದೊಂದಿಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಎಂದು ಘೋಷಿಸಲಾಯಿತು.
ಸಾಲಾರ್ ಜಂಗ್ ವಸ್ತುಸಂಗ್ರಹಾಲಯವನ್ನು ಅದರ ಈಗಿನ ಪ್ರಸ್ತುತ ಕಟ್ಟಡಕ್ಕೆ 1968 ರಲ್ಲಿ ವರ್ಗಾಯಿಸಲಾಯಿತು. ಭಾರತದ ಅಂದಿನ ರಾಷ್ಟ್ರಪತಿಗಳಾದ ಡಾ. ಜಾಕೀರ್ ಹುಸೇನ್ ಅವರು ಅದನ್ನು ಉದ್ಘಾಟಿಸಿದರು. ಅದರ ಆಡಳಿತವನ್ನು ಸ್ವಾಯತ್ತ ಮಂಡಳಿಗೆ ವರ್ಗಾಯಿಸಲಾಯಿತು.
ಮ್ಯೂಸಿಯಂನಲ್ಲಿ 39 ಗ್ಯಾಲರಿಗಳಿವೆ. ಸೆಂಟ್ರಲ್ ಬ್ಲಾಕ್, ಈಸ್ಟರ್ನ್ ಬ್ಲಾಕ್ (ಮೀರ್ ಲೈಕ್ ಅಲಿ ಖಾನ್ ಭವನ) ಮತ್ತು ವೆಸ್ಟರ್ನ್ ಬ್ಲಾಕ್ (ಮೀರ್ ತುರಾಬ್ ಅಲಿ ಖಾನ್ ಭವನ) ವಿಭಾಗಗಳ ಎರಡು ಮಹಡಿಗಳಲ್ಲಿ ಮೂರು ಕಟ್ಟಡಗಳಲ್ಲಿ ಸಂಗ್ರಹಾಲಯ ಹರಡಿಕೊಂಡಿವೆ. 26 ಗ್ಯಾಲರಿಗಳೊಂದಿಗೆ ಸೆಂಟ್ರಲ್ ಬ್ಲಾಕ್ (ನೆಲ ಮಹಡಿ 13 ಗ್ಯಾಲರಿಗಳು, ಮೊದಲ ಮಹಡಿ 13 ಗ್ಯಾಲರಿಗಳು), 7 ಗ್ಯಾಲರಿಗಳೊಂದಿಗೆ ವೆಸ್ಟರ್ನ್ ಬ್ಲಾಕ್ ಮತ್ತು 6 ಗ್ಯಾಲರಿಗಳೊಂದಿಗೆ ಈಸ್ಟರ್ನ್ ಬ್ಲಾಕ್ ಇದೆ. ವಸ್ತುಸಂಗ್ರಹಾಲಯವು ಶಿಕ್ಷಣ ವಿಭಾಗ, ರಾಸಾಯನಿಕ ಸಂರಕ್ಷಣಾ ಪ್ರಯೋಗಾಲಯ, ಫೋಟೋ ವಿಭಾಗ, ಪ್ರದರ್ಶನ ವಿಭಾಗ, ಸ್ವಾಗತ ಮತ್ತು ಮಾರಾಟದ ಕೌಂಟರ್‌ನಂತಹ ಅನೇಕ ಸಮನ್ವಯ ವಿಭಾಗಗಳನ್ನು ಹೊಂದಿದೆ. ಮ್ಯೂಸಿಯಂ ಭದ್ರತೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ನೋಡಿಕೊಳ್ಳುತ್ತಿದೆ.
Salar Jung a great name behind great collections
ಕಾಮೆಂಟ್‌ಗಳು