ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದೀಪ್ತಿ ನವರತ್ನ


 ದೀಪ್ತಿ ನವರತ್ನ


ಡಾ. ದೀಪ್ತಿ ನವರತ್ನ ಅವರು ಸಂಗೀತಗಾರ್ತಿ ಮತ್ತು ನರವಿಜ್ಞಾನಿಯಾಗಿದ್ದು, ಕರ್ನಾಟಕ ಸಂಗೀತವನ್ನು ಒಳಗೊಂಡ ಶಬ್ದಗಳ ರಸವಿದ್ಯೆಯಲ್ಲಿ ಆಳವಾಗಿ ಆಸಕ್ತಿ ಹೊಂದಿದ್ದಾರೆ.  ಬೆಂಗಳೂರಿನವರಾದ ದೀಪ್ತಿ ಅವರ  ಕೀರ್ತಿ ವಿಶ್ವವ್ಯಾಪ್ತಿಯಾಗಿದೆ. 

ಜೂನ್ 15 ದೀಪ್ತಿ ನವರತ್ನ ಅವರ ಜನ್ಮದಿನ. 
ದೀಪ್ತಿ ಅವರು ನರವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಯನ್ನು ಹೊಂದಿದ್ದಾರೆ.  ಅವರು  ಇಪ್ಪತ್ತಕ್ಕೂ ಹೆಚ್ಚು ಮೂಲ ವೈಜ್ಞಾನಿಕ ಸಂಶೋಧನಾ ಪ್ರಬಂಧಗಳನ್ನು, ಹಲವಾರು ಪುಸ್ತಕ ಅಧ್ಯಾಯಗಳನ್ನು ಬರೆದಿದ್ದಾರೆ.  500 ಕ್ಕೂ ಹೆಚ್ಚು ಉಲ್ಲೇಖಗಳ ಕೀರ್ತಿ ಅವರ ಹೆಸರಿನೊಂದಿಗಿದೆ.

ದೀಪ್ತಿ ಅವರು ಕರ್ನಾಟಕ ಭಕ್ತಿ ಸಂಗೀತ ಮತ್ತು ಲಘು ಶಾಸ್ತ್ರೀಯ ಸಂಗೀತದ ವಿಭಾಗಗಳಲ್ಲಿ ಆಕಾಶವಾಣಿಯ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದವರು. ಹೀಗಾಗಿ ಅವರು 2001 ರಿಂದಲೇ  ಆಕಾಶವಾಣಿಯ ಎ-ಗ್ರೇಡ್ ಕಲಾವಿದರಾಗಿದ್ದಾರೆ.  ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದ ನಾಲ್ಕು ಆಲ್ಬಂಗಳನ್ನು ಬಿಡುಗಡೆ ಮಾಡಿದ್ದಾರೆ.  2013 ರಲ್ಲಿ ಬಿಡುಗಡೆಯಾದ 'ಕಾ', ಅಮೆರಿಕದ  ಮೂಲದ 'ಬೋಸ್ಟನ್ ಮ್ಯೂಸಿಕಾ ವಿವಾ' ಎಂಬ ಸಮಕಾಲೀನ ಸಂಗೀತ ಸಂಯೋಜನೆಯೊಂದಿಗೆ ಧ್ವನಿಮುದ್ರಣಗೊಂಡ ಕರ್ನಾಟಕ ಶಾಸ್ತ್ರೀಯ  ಸಂಗೀತವನ್ನು ಒಳಗೊಂಡಿದೆ. ಅವರ ಇತ್ತೀಚಿನ ಆಲ್ಬಂ 'ಕರ್ನಾಟಿಕ್ ಕ್ಯಾಡೆನ್ಜಾಸ್' (2018) ಸಮಕಾಲೀನ ಶಾಸ್ತ್ರೀಯ ವಾದ್ಯವೃಂದದೊಂದಿಗೆ ಭಾರತರತ್ನ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಅಮರ ಹಾಡುಗಳನ್ನು ಮರುರೂಪಿಸಿದೆ. 2019 ರಲ್ಲಿ, ಭಾರತರತ್ನ ಸಿಎನ್ಆರ್ ರಾವ್ ಅವರು ಇವರ ಆಲ್ಬಂ 'ಎಕೋಸ್ ಆಫ್ ರಾಯಲ್ ಮೈಸೂರು' ಅನ್ನು ಬಿಡುಗಡೆ ಮಾಡಿದರು. ಇದು ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಅಪರೂಪದ ಕೃತಿಗಳನ್ನು ಒಳಗೊಂಡಿದೆ. ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಬದುಕಿನ ಚರಿತ್ರೆಯಾದ 'The Maverick Maharaja’ ಎಂಬ ಇವರ ಗ್ರಂಥ ಕೂಡ ಪ್ರಕಟಗೊಂಡಿದೆ.

ದೀಪ್ತಿ ನವರತ್ನ ಅವರ ಸಂಗೀತ ಕಚೇರಿಗಳು   ವಿಶ್ವದ  ಪ್ರತಿಷ್ಠಿತ  ವೇದಿಕೆಗಳಾದ  ಏಷ್ಯಾ ಸೊಸೈಟಿ (ನ್ಯೂಯಾರ್ಕ್ ಸಿಟಿ), ಸಿಂಫನಿ ಸ್ಪೇಸ್ (ನ್ಯೂಯಾರ್ಕ್ ಸಿಟಿ), ಜೋರ್ಡಾನ್ ಹಾಲ್ (ಬೋಸ್ಟನ್), ಹಾರ್ವರ್ಡ್ ಆರ್ಟ್ಸ್ ಮ್ಯೂಸಿಯಂ (ಕೇಂಬ್ರಿಡ್ಜ್), ಮ್ಯೂಸಿಯಂ ಆಫ್ ಫೈನ್ ಆರ್ಟ್ಸ್ (ಬೋಸ್ಟನ್), ಸೆಂಟ್ರಲ್ ಕನ್ಸರ್ವೇಟರಿ ಆಫ್ ಮ್ಯೂಸಿಕ್, ಬೀಜಿಂಗ್, ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್, ಶ್ರೀಲಂಕಾ, ತ್ಸಿಂಗ್ ಹುವಾ ವಿಶ್ವವಿದ್ಯಾಲಯ, ತೈವಾನ್ ಸೇರಿದಂತೆ ಎಲ್ಲೆಡೆ ಝೇಂಕರಿಸಿದೆ.  ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತದಿಂದ - ಅವಂತ್ ಗಾರ್ಡ್‌ನಿಂದ - ವಿಶ್ವ ಸಂಗೀತದವರೆಗೆ ಅವರ ಸಂಗೀತವು ಬಹುಮುಖತೆ, ಶಾಸ್ತ್ರೀಯ ಬುದ್ಧಿವಂತಿಕೆ ಮತ್ತು ಕೌಶಲ್ಯದ ಅಪರೂಪದ ಮಿಶ್ರಣವನ್ನು ಒಳಗೊಂಡು ತನ್ನದೇ ವಿಶಿಷ್ಟತೆಗೆ ಹೆಸರಾಗಿದೆ.

ದೀಪ್ತಿ ನವರತ್ನ ಅವರಿಗೆ ಕೇಂಬ್ರಿಡ್ಜ್ ಆರ್ಟ್ಸ್ ಕೌನ್ಸಿಲ್ ಎಜುಕೇಶನ್ ಮತ್ತು ಆಕ್ಸೆಸ್ ಗ್ರಾಂಟ್ (2011 & 2015), ಸೇಂಟ್ ಬೊಟೊಲ್ಫ್ ಫೌಂಡೇಶನ್‌ನಿಂದ (2011) ಉದಯೋನ್ಮುಖ ಕಲಾವಿದೆ  ಪ್ರಶಸ್ತಿ ಮತ್ತು ಉತಾಹ್ ಆರ್ಟ್ಸ್ ಕೌನ್ಸಿಲ್ (2009) ನಿಂದ ಸಾಂಪ್ರದಾಯಿಕ ಮತ್ತು ಎಥ್ನಿಕ್ ಆರ್ಟ್ಸ್ ಫೆಲೋಶಿಪ್‌, ಕೇಂಬ್ರಿಡ್ಜ್ ಆರ್ಟ್ಸ್ ಕೌನ್ಸಿಲ್ ಫೆಲೋಶಿಪ್ (2014) ಮುಂತಾದ ಗೌರವಗಳು ಸಂದಿವೆ . 

ದೀಪ್ತಿ ನವರತ್ನ ಅವರು 'ದಿ ಕರ್ನಾಟಿಕ್ ಆಲ್ಕೆಮಿ ಪ್ರಾಜೆಕ್ಟ್' ನಿರ್ದೇಶಕಿಯಾಗಿದ್ದಾರೆ.  ಇದು ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪ್ರಪಂಚದಾದ್ಯಂತದ ವೈವಿಧ್ಯಮಯ ಪ್ರೇಕ್ಷಕರಿಗೆ ಕೊಂಡೊಯ್ಯಲು ಮೀಸಲಾಗಿರುವ ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದೆ. 

ದೀಪ್ತಿ ನವರತ್ನ ಅವರು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ  ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಹತ್ವದ ಸಾಧಕಿ,  ಸಂಶೋಧಕಿ, ಕಲಾವಿದೆ ದೀಪ್ತಿ ನವರತ್ನ ಅವರಿಗೆ ಜನ್ಮದಿನದ ಶುಭಹಾರೈಕೆಗಳು.

Happy birthday to our great musician and  Neuroscientist Dr. Deepti Navaratna

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ