ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ಪ್ರೇಮಲತ


 ಬಿ.  ಪ್ರೇಮಲತ


ವಿದೇಶದಲ್ಲಿ ನೆಲೆಸಿರುವ ಡಾ. ಬಿ. ಪ್ರೇಮಲತ ಅವರು ವೃತ್ತಿಯಲ್ಲಿ ದಂತವೈದ್ಯರಾಗಿದ್ದು, ಕನ್ನಡ ಸಾಹಿತ್ಯಪ್ರೇಮಿಯಾಗಿ,  ಬರಗಾರ್ತಿಯಾಗಿ ಹೆಸರು ಮಾಡಿದ್ದಾರೆ. 

ಜೂನ್ 15, ಪ್ರೇಮಲತ ಅವರ ಜನ್ಮದಿನ. ಇವರು  ತುಮಕೂರು ಮೂಲದವರು.  ಬೆಂಗಳೂರಿನ ಸರ್ಕಾರಿ ದಂತವೈದ್ಯಕೀಯ ಕಾಲೇಜಿನಲ್ಲಿ ಪದವಿ ಮತ್ತು ಇಂಗ್ಲೆಂಡಿನ ಮ್ಯಾಂಚೆಸ್ಟರ್‌ ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಡೆಂಟಲ್‌ ಇಂಪ್ಲಾಂಟಜಿಸ್ಟ್‌ ಆಗಿ  ಇಂಗ್ಲೆಂಡಿನ ಹಲವು ದಂತ ಚಿಕಿತ್ಸಾಲಯಗಳಲ್ಲಿ ಕೆಲಸಮಾಡುತ್ತಿದ್ದಾರೆ. ಪ್ರಸ್ತುತ  'ಲಿಂಕನ್‌' ಎನ್ನುವ ನಗರದಲ್ಲಿ ನೆಲೆಸಿದ್ದಾರೆ.

ಕನ್ನಡ ಮತ್ತು ಕನ್ನಡ ಸಾಹಿತ್ಯದಲ್ಲಿ ಅಪಾರ ಒಲವುಳ್ಳ ಪ್ರೇಮಲತ ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬರೆಯುತ್ತ ಬಂದಿದ್ದಾರೆ. ಅವರ ಕಥೆ, ಕವನ, ಪ್ರಬಂಧ, ಅಂಕಣ, ಪ್ರವಾಸ  ಮುಂತಾದ  ವೈವಿಧ್ಯ ಬರಹಗಳು  ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಮತ್ತು ಅಂತರಜಾಲ ಮಾಧ್ಯಮಗಳಲ್ಲಿ ಮೂಡುತ್ತ ಬಂದಿವೆ. 

ʼಐದುಬೆರಳುಗಳುʼ(2022), ʼತಿರುವುಗಳುʼ (2022), ʼನಂಬಿಕೆಯೆಂಬ ಗಾಳಿಕೊಡೆʼ (2023) ಪ್ರೇಮಲತ ಅವರ  ಪ್ರಕಟಿತ ಕಥಾಸಂಕಲನಗಳು. ʼಭಿಕ್ಷೆಗೆ ಬೀಳದ ಬದ್ಧತೆʼ (2024) ಇವರ ಪ್ರಕಟಿತ ಕವನ ಸಂಕಲನ. ʼಕೋವಿಡ್‌ ಡೈರಿʼ (2021) ಎನ್ನುವುದು ಅಂಕಣ ಬರಹಗಳ ಸಂಗ್ರಹದ ಪುಸ್ತಕವಾಗಿದೆ.  ʼಬಾಯೆಂಬ ಬ್ರಂಹಾಂಡʼ (2018) ವೈದ್ಯಕೀಯ ಬರಹಗಳ ವೃತ್ತಿಪರ  ಕಿರು ಪುಸ್ತಕವಾದರೆ ʼರಮ್ಯಪ್ರೀತಿ, ವಿಜ್ಞಾನ ಮತ್ತು ಪ್ರಕೃತಿʼ (2024) ಇವರ ವಿಷ್ಲೇಶಣಾತ್ಮಕ ಕೃತಿಯಾಗಿದೆ. ಇವರು ಹೊಸ ಪುಸ್ತಕ 'ಒಡಲು ಮತ್ತು ಸೃಷ್ಠಿ' ( 2025) ಈಗ ಅಚ್ಚಿನಲ್ಲಿದೆ.

ಪ್ರೇಮಲತ ಅವರಿಗೆ ಸುಧಾ ಯುಗಾದಿ ಪ್ರಬಂಧ ಸ್ಪರ್ಧೆ (2024) ಮತ್ತು ವಾಣಿ ಕೌಟುಂಬಿಕ ಕಥಾ ಸ್ಪರ್ಧೆ(2024)ಗಳಲ್ಲಿ ಮೆಚ್ಚುಗೆಯ ಬಹುಮಾನ, ಸಮಾಜಮುಖಿ ಕಥಾ ಸ್ಪರ್ಧೆಯ ಬಹುಮಾನ (2023), ಲೇಖಿಕಾ ಸಂಘದ ತ್ರಿವೇಣಿ ಸ್ಮೃತಿ ಮನೋ ವೈಜ್ಞಾನಿಕ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ (2021), 3K ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ(2021) , ಯು.ಎ.ಇ.ಯ ಧ್ವನಿ ಪ್ರತಿಷ್ಠಾನದವರು ಆಯೋಜಿಸಿದ್ದ ಜಾಗತಿಕ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ  (2021),  ಕಹಳೆ ಕಥಾ  ಸ್ಪರ್ಧೆಯ ಅತ್ಯುತ್ತಮ ಕಥೆ (2021 ಮತ್ತು 2020), ಕರ್ನಾಟಕ ಲೇಖಕಿಯರ ಸಂಘದ ಕವನ ಸ್ಪರ್ಧೆಯಲ್ಲಿ  ನಿರ್ಮಲ ಎಲಿಗಾರ್‌ ದತ್ತಿ ಪ್ರಥಮ ಬಹುಮಾನ (2019), ಸುಧಾ ಪತ್ರಿಕೆಯ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ (2019), ಪ್ರಜಾವಾಣಿ  ಪ್ರೇಮ ಪತ್ರ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ (2017), ಸಿಂಗಾಪೂರ್ ನಡೆಸಿದ ಸಿಂಚನ ಕಥಾ ಸ್ಪರ್ಧೆಯಲ್ಲಿ ಪ್ರಥಮ (2016) ಮತ್ತು ಕವನ ಸ್ಪರ್ದೆಯಲ್ಲಿ  ದ್ವಿತೀಯ ಬಹುಮಾನ  (2017), ತುಷಾರ ಚಿತ್ರಕವನ ಸ್ಪರ್ಧೆಯ ಸಮಾಧಾನಕರ ಬಹುಮಾನಗಳು (1997) ದೊರೆತಿವೆ. 

ಪ್ರೇಮಲತ ಅವರ ʼಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್.‌ ಗಿರಿಜಮ್ಮ ಪ್ರಶಸ್ತಿ (2023) ಸಂದಿದೆ.  ತಿರುವುಗಳು ಕಥಾ ಸಂಕಲನಕ್ಕೆ ಧಾರವಾಡದ ವಿದ್ಯಾಧರ ಮುತಾಲಿಕ ದೇಸಾಯಿ ಹಸ್ತಪ್ರತಿ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ (2022)  ದೊರೆತಿದೆ.  ಇವೆರಡೂ ಕೃತಿಗಳು ಛಂದ ಸ್ಪರ್ಧೆಯ ಅಂತಿಮ ಅಂತಿಮ ಸುತ್ತನ್ನು ತಲುಪಿದ್ದವು. ಇವರ ಇನ್ನೊಂದು ಸಣ್ಣ ಕಥೆ 2024 ರ ಬುಕ್‌ ಬ್ರಹ್ಮ ಕಥಾಸ್ಪರ್ಧೆಯ ಅಂತಿಮ ಪಟ್ಟಿಗೆ ಆಯ್ಕೆಯಾಗಿತ್ತು. ಅನಿವಾಸಿ ಕನ್ನಡ ಬರಹಗಾರ್ತಿಯಾಗಿ ಇವರ ಕನ್ನಡ ಸಾಹಿತ್ಯದಲ್ಲಿನ ಆಸಕ್ತಿಗಳನ್ನು ಗಮನಿಸಿದ ಧಾರವಾಡದ 'ಶ್ರಾವಣ ಸಾಹಿತ್ಯ ಬಳಗ'ದವರು 2022 ರಲ್ಲಿ ʼಅನಿವಾಸಿ ಸಾಹಿತ್ಯ ಶ್ರೀʼ ಎನ್ನುವ ಬಿರುದನ್ನು ನೀಡಿ ಗೌರವಿಸಿದ್ದಾರೆ. ಜರ್ಮನಿಯ ಫ್ರಾಂಕ್ಫರ್ಟ್‌ ನಲ್ಲಿ ʼನಾವಿಕʼ ನಡೆಸಿದ 2024 ರ  ನಾವಿಕೋತ್ಸವದಲ್ಲಿ,  ಸಾಹಿತ್ಯ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಯನ್ನು ಗುರುತಿಸಿದ್ದಾರೆ. ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಗರದ ಶಕ್ತಿ ಸಂಸ್ಥೆ 
'ಶಕ್ತಿ ಸಂಗಮಮ್ ಶಕ್ತಿ ಲಿಟರರಿ ಲೀಡರ್ಶಿಪ್ ಅವಾರ್ಡ್' ನೀಡಿದ್ದಾರೆ ( 2024).

ಮುಖಪುಟ ಲೇಖನಗಳೂ ಸೇರಿದಂತೆ ಹಲವು ಸಾಮಾಜಿಕ ಕಳಕಳಿಯ ಲೇಖನಗಳನ್ನು ಬರೆದಿರುವ ಪ್ರೇಮಲತ ಅವರ  ಮತ್ತೊಂದು ಲೇಖನ ʼಮಹಿಳೆ ಮತ್ತು ವಿರಾಮʼ (2022) ಎನ್ನುವ ಸಂಪಾದಿತ ಕೃತಿಯಲ್ಲಿ ಸೇರ್ಪಡೆಯಾಗಿದೆ.  ಹಲವಾರು ಪತ್ರಿಕೆಗಳಲ್ಲಿ ಬಹಳಷ್ಟು ವೈದ್ಯಕೀಯ ಲೇಖನಗಳನ್ನು ಬರೆದಿರುವ ಪ್ರೇಮಲತರ ಹಲವು ಅಧ್ಯಾಯಗಳು, ನವಕರ್ನಾಟಕ ಪಬ್ಲಿಕೇಶನ್ನಿನ ಕನ್ನಡ ಪುಸ್ತಕ ಪ್ರಾಧಿಕಾರದ ʼಪುಸ್ತಕ ಸೊಗಸು ಪ್ರಶಸ್ತಿ ʼ (2022) ಪಡೆದ ʼ ನಮ್ಮ ದೇಹದ ವಿಜ್ಞಾನʼ ಎನ್ನುವ ಪುಸ್ತಕದಲ್ಲಿ ಸೇರ್ಪಡೆಯಾಗಿವೆ. ವಿಜ್ಞಾನಿ ಡಾ. ಅನಂತರಾಮುರವರ ಅಭಿನಂದನ ಗ್ರಂಥ ಮತ್ತು  ಹಲವು ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದ ನಿರ್ದೇಶಕ ಪಿ.ಶೇಷಾದ್ರಿಯವರ ಚಲನಚಿತ್ರಗಳ ಕುರಿತಾದ  ಪುಸ್ತಕಗಳಲ್ಲಿ ಇವರ ಬರಹಗಳು ಸೇರಿವೆ.

ಓದು,ಬರಹ,ನಿರೂಪಣೆ, ಪ್ರವಾಸ, ನಾಟಕ ಪ್ರೇಮಲತ ಅವರ  ಹವ್ಯಾಸಗಳು.

ಪ್ರೇಮಲತ ಅವರಿಗೆ ಹುಟ್ಟುಹಬ್ಬ ಹಾರ್ದಿಕ ಶುಭಹಾರೈಕೆಗಳು.

Happy birthday Premalatha Basavarajaiah 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ