ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗುಜ್ಜಾರ್


 ಗುಜ್ಜಾರ್ 


ಗುಜ್ಜಾರ್ ನಾಡಿನ ಹೆಸರಾಂತ ರೇಖಾಚಿತ್ರ ಕಲಾವಿದರು.  ನಾಡಿನ ಪ್ರಸಿದ್ಧ ಲಂಕೇಶ್ ಪತ್ರಿಕೆ ಮತ್ತು ಪ್ರಜಾವಾಣಿ ಬಳಗಳಲ್ಲಿ ಹಾಗೂ ಸಹಸ್ರಾರು ಪುಸ್ತಕಗಳಲ್ಲಿ  ಅವರು ಮೂಡಿಸಿರುವ  ಚಿತ್ರಗಾರಿಕೆ ಸ್ಮರಣೀಯವೆನಿಸಿವೆ. 

ಗುಜ್ಜಾರ್ ಎಂದು ಪ್ರಸಿದ್ಧರಾಗಿರುವ  ಗುಜ್ಜಾರಪ್ಪ ಅವರು 1955ರ  ಜೂನ್ 3ರಂದು ತುಮಕೂರು ಜಿಲ್ಲೆಯ ದೊಡ್ಡ ಬಾಣಗೆರೆ ಎಂಬ ಹಳ್ಳಿಯಲ್ಲಿ ಜನಿಸಿದರು. ಕೃಷಿಗಾಗಿ ಮಳೆಯ ಕೃಪೆಯನ್ನು ಅವಲಂಬಿಸಿದ್ದ  ಬಹಳ ದೊಡ್ಡ ಕೂಡು ಕುಟುಂಬ ಇವರ ತಂದೆಯವರದ್ದು . ಬೇಸಾಯ ನಂಬಿ ಬದುಕುವುದು ಬಲು ಕಷ್ಟದ ಬದುಕಾಗಿತ್ತು.  ಇವರ ನಾಲ್ಕನೆಯ ಚಿಕ್ಕಪ್ಪ ಸರ್ಕಾರಿ ನೌಕರರಾಗಿ ಸಂಬಳ ತರುವ ಕೆಲಸದಲ್ಲಿದ್ದರು. ಇವರೇ  ಗುಜ್ಜಾರಪ್ಪನವರಿಗೆ ಬೆಂಬಲವಾಗಿದ್ದರು.  ಅವರು ವರ್ಗವಾಗಿ ಹೋದಲ್ಲೆಲ್ಲ ಹೋಗಿ, ಅವರೊಂದಿಗಿದ್ದು ಸ್ಕೂಲು ಕಾಲೇಜು ಕಲಿತರು.  ಎಂಟನೇ ತರಗತಿ ಓದಲು ಗುಜ್ಜಾರಪ್ಪ ತುಮಕೂರಿಗೆ ಬಂದರು. ನಗರ ಪ್ರದೇಶ, ಸರ್ವೋದಯ ಶಾಲೆ, ಭಾರೀ ಸಂಖ್ಯೆಯ ಹುಡುಗ-ಹುಡುಗಿಯರು, ಇಂಗ್ಲಿಷ್ ಮೀಡಿಯಂ ಕಂಡು ಕಂಗಾಲಾದರು. ಏನೂ ಅರ್ಥವಾಗದೆ ಒಬ್ಬರೇ ಕೂತು ಅತ್ತರು. ಅನಾಥಪ್ರಜ್ಞೆ ಕಾಡತೊಡಗಿತು.  ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬರುತ್ತಿದ್ದ ಕಾರ್ಟೂನ್ ಚಿತ್ರಗಳನ್ನು ಕಾಪಿ ಮಾಡತೊಡಗಿದರು. ದಿನಗಳುರುಳಿದಂತೆ ಗೆರೆಗಳೇ ಗೆಳೆಯರಾಗಿ, ಚಿತ್ರಗಳೇ ಚಿತ್ತವನ್ನಾವರಿಸಿ, ಹಗಲು ರಾತ್ರಿ ಗೆರೆಗಳೊಂದಿಗೆ ಗುದ್ದಾಡುವುದು ಬೇಸರ ನೀಗಿತು. ಗುಜ್ಜಾರಪ್ಪನವರ ಚಿತ್ರಗಳ ಬಗೆಗಿನ ಕಕ್ಕುಲತೆ ಕಂಡ ಮೇಸ್ಟ್ರು ಸ್ಕೂಲ್ ನೋಟಿಸ್ ಬೋರ್ಡ್ಗೆ ಬೇಕಾದ ಚಾರ್ಟ್ ಮಾಡಿಕೊಡಲು ಸೂಚಿಸಿದರು. ಬಹುಮಾನ ಕೊಟ್ಟು ಹುರಿದುಂಬಿಸಿದರು. ಆಸಕ್ತಿ ಅತ್ತ ಹೊರಳಿತು. ವಿದ್ಯೆ ದೂರ ಉಳಿಯಿತು. ಚಿಕ್ಕಪ್ಪನಿಗೆ ಬೆಂಗಳೂರಿಗೆ ವರ್ಗವಾಯಿತು. ಅವರ ಹಿಂದೆ ಹೊರಟುನಿಂತ ಗುಜ್ಜಾರಪ್ಪ 10 ನೇ ತರಗತಿಗೆ ಬೆಂಗಳೂರಿಗೆ ಬಂದರು. ಇಲ್ಲೂ ಕೂಡ ಗುಜ್ಜಾರಪ್ಪನವರು ಚಿತ್ರಗಳ ಹಿಂದೆಯೇ ಬಿದ್ದರು. ಹೇಗೋ ಕಷ್ಟಬಿದ್ದು ಎಸ್ಎಸ್ಎಲ್ಸಿ ಪಾಸು ಮಾಡಿದ ಗುಜ್ಜಾರಪ್ಪ, ಪಿಯುಸಿಗೆ ಮಲ್ಲೇಶ್ವರದ ಎಂಇಎಸ್ ಕಾಲೇಜು ಸೇರಿದರು.  ಕಾಲೇಜಿಗೆ ಹೋಗುತ್ತಿದ್ದ ಗುಜ್ಜಾರಪ್ಪ, ಆಗಾಗ  ಚಿತ್ರಕಲಾ ಪರಿಷತ್ತಿಗೆ ಹೋಗಿ ಕೂರುತ್ತಿದ್ದರು. ಅಲ್ಲಿಗೆ ಬರುತ್ತಿದ್ದ ಕಲಾವಿದರು, ಅವರ ಚಿತ್ರರಚನೆ, ಮಾತುಕತೆ ಮನಸ್ಸಿಗೆ ಹಿತವಾಗುತ್ತಿದ್ದವು. ಲಾಲ್ಭಾಗ್ನಲ್ಲಿ ಆಯೋಜಿಸಿದ್ದ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಗಡಿನಾಡ ಗಾಂಧಿ ಎಂದೇ ಹೆಸರಾದ ಖಾನ್ ಅಬ್ದುಲ್ ಗಫಾರ್ ಖಾನ್ ಕ್ಯಾರಿಕೇಚರ್ ಬರೆದು ಮೂರನೇ ಬಹುಮಾನ ಗಳಿಸಿದರು. ಚಿತ್ರಕಲಾ ಪರಿಷತ್ತಿನ ಪ್ರಿನ್ಸಿಪಾಲರಾದ ಪ್ರೊ.ಎಂ.ಎಸ್. ನಂಜುಂಡರಾವ್. ಹುಡುಗನಲ್ಲಿದ್ದ ಕಲೆಯನ್ನು ಗುರುತಿಸಿ ನಂಜುಂಡರಾವ್  ಪ್ರೋತ್ಸಾಹಿಸಿದರು.   ಕಲೆ ಕಡೆ ಒಲವು ಹೆಚ್ಚಾಗಿ ಪಿಯುಸಿ ಫೇಲಾಯಿತು. ಒಂದಲ್ಲ, ಎರಡಲ್ಲ ಮೂರುವರ್ಷವಾದರೂ ಪಾಸಾಗಲಿಲ್ಲ. ವಿಧಿ ಇಲ್ಲದೆ ಊರಿಗೆ ಎಮ್ಮೆ ಮೇಯಿಸಲು ಹೋದರು. ಮನೆಯಲ್ಲಿ 15-20 ಎಮ್ಮೆ ಇದ್ದೋ. ಎಮ್ಮೆ ಮೇಯಿಸಲು ಹೋಗುತ್ತಿದ್ದ ಗುಜ್ಜಾರಪ್ಪ, ಚಿಕ್ಕಪ್ಪ ತಂದುಕೊಡುತ್ತಿದ್ದ `ರೀಡರ್ಸ್ ಡೈಜೆಸ್ಟ್’ ಪತ್ರಿಕೆಯಲ್ಲಿ ಬರುವ ಚಿತ್ರಗಳನ್ನು ಕಾಪಿ ಮಾಡುತ್ತಾ, ನಿಧಾನವಾಗಿ ಓದುವ ಹವ್ಯಾಸಕ್ಕೆ ಬಿದ್ದು, ಕಷ್ಟಪಟ್ಟು ಇಂಗ್ಲಿಷ್ ಕಲಿತರು.  ಕೊನೆಗೆ ಹೇಗೋ ಏದುಸಿರುಬಿಡುತ್ತಾ ಪಿಯುಸಿ ಪಾಸು ಮಾಡಿದರು.  ಬಿಎ ಓದಲಿಕ್ಕೆ ಸೆಂಟ್ರಲ್ ಕಾಲೇಜ್ ಸೇರಿದರು. ಅಲ್ಲಿ ಹಲವು ಪ್ರತಿಭಾನ್ವಿತರ ಪರಿಚಯವಾಯಿತು. ವಯಸ್ಸು ಮತ್ತು ಉಲ್ಲಸಿತ ವಾತಾವರಣದಿಂದ ವಾರಕ್ಕೊಂದು ಕಾರ್ಟೂನ್ ಬರೆದು, ಕಾಲೇಜಿನ ನೋಟಿಸ್ ಬೋರ್ಡ್ ಮೇಲೆ ಹಾಕುವುದು ರೂಢಿಯಾಯಿತು. ಅದನ್ನು ಗೆಳೆಯ ಪೊನ್ನಪ್ಪ 'ಸಂಜೆವಾಣಿ’ಯಲ್ಲಿ ಪ್ರಕಟಿಸಿ ಪ್ರಚಾರ ಕೊಟ್ಟರು. ಮತ್ತೊಬ್ಬ ಹಿರಿಯ ಸಾಹಿತಿ ಮಿತ್ರರಾದ ಶೂದ್ರ ಶ್ರೀನಿವಾಸ್, ತಮ್ಮ 'ಶೂದ್ರ’ ಪತ್ರಿಕೆಯಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿದರು. ಈ ನಡುವೆ ಕವಿ ಕ.ವೆಂ.ರಾಜಗೋಪಾಲ್, ಗುಜ್ಜಾರಪ್ಪನವರ ಕಲಾಸಕ್ತಿಯನ್ನು ಗಮನಿಸಿ ಆರ್.ಕೆ. ಲಕ್ಷ್ಮಣ್ ಅವರ ಪುಸ್ತಕವನ್ನು ಉಡುಗೊರೆ ನೀಡಿದರು. ಇವರ ಇಷ್ಟದ ಮೂರ್ತಿಯವರ ಕಲಾ ಪ್ರದರ್ಶನ ನೋಡಲು ವಿಧಾನಸೌಧಕ್ಕೆ ಹೋಗಿದ್ದು, ಆತ್ಮವಿಶ್ವಾಸ ತುಂಬಿತು. ಇವುಗಳ ನಡುವೆಯೇ ಎಂಎ ಕೂಡ ಮುಗಿಸಿದರು.  

ಗುಜ್ಜಾರಪ್ಪ  ಕನಕಪುರದ ಕಾಲೇಜಿನಲ್ಲಿ 6 ತಿಂಗಳು ಉಪನ್ಯಾಸಕನಾಗಿ ಕೆಲಸ ಮಾಡಿದರು. ನಂತರ ಅದನ್ನು ಬಿಟ್ಟು ಐಐಎಂನಲ್ಲಿ ತಿಂಗಳಿಗೆ ರೂ. 500 ಸಂಬಳದ ಡಾಕ್ಯುಮೆಂಟೇಷನ್ ಡ್ರಾಯಿಂಗ್ ಕೆಲಸಕ್ಕೆ ಸೇರಿ ಎರಡು ವರ್ಷ ದೂಡಿದರು. 
ಈ ನಡುವೆ ಸಾಹಿತಿ ಶೂದ್ರ ಶ್ರೀನಿವಾಸ್ ಹುಡುಕಿಕೊಂಡು ಬಂದು,  "ಲಂಕೇಶ್ ಮೇಸ್ಟ್ರು ಪತ್ರಿಕೆ ಶುರು ಮಾಡ್ತಿದಾರೆ, ಅವರಿಗೆ ನಿನ್ನ ಬಗ್ಗೆ ಹೇಳಿದ್ದೇನೆ, ಹೋಗಿ ನೋಡು’’ ಎಂದರು. ಇವರ ಚಿತ್ರಗಳನ್ನು ನೋಡಿ ಖುಷಿಗೊಂಡ ಲಂಕೇಶ್, ಆ ತಕ್ಷಣವೆ 500 ರೂ. ಕೊಟ್ಟರು. ಐಐಎಂನಲ್ಲಿ ತಿಂಗಳೆಲ್ಲ ದುಡಿದರೂ ಸಿಗುತ್ತಿದ್ದ 500 ರೂ., ಇಲ್ಲಿ ಒಂದೆ ದಿನಕ್ಕೆ ಸಿಕ್ಕಿದ್ದು ಕಂಡು ಗುಜ್ಜಾರ್ ಗರಬಡಿದುಹೋದರು. ಬೆಳಗ್ಗೆ ಐಐಎಂನಲ್ಲಿ ಕೆಲಸ, ಸಂಜೆ ಲಂಕೇಶರೊಂದಿಗೆ ಮಾತುಕತೆ ಶುರುವಾಯಿತು. 

6 ಜುಲೈ, 1980ರ  'ಲಂಕೇಶ್ ಪತ್ರಿಕೆ’ಯ ಮೊದಲ ಸಂಚಿಕೆಯ ಮುಖಪುಟದಲ್ಲಿ ನಾಲ್ಕು ಕಾಲಂನ ಬ್ಯಾನರ್ ಹೆಡ್ಡಿಂಗ್ ಮತ್ತು ಚಿತ್ರ ಗುಜ್ಜಾರಪ್ಪನವರದ್ದು. ನಂತರದ ದಿನಗಳಲ್ಲಿ ಲಂಕೇಶ್ ಪತ್ರಿಕೆಯ ಜನಪ್ರಿಯತೆ, ಲಂಕೇಶರ ಸಹವಾಸ, ಪತ್ರಿಕೆಯ ಗೆಳೆಯರು ಹೀಗೆ ಅದೊಂದು ಸುವರ್ಣಯುಗವಾಗಿತ್ತು.  ಗುಜ್ಜಾರಪ್ಪನವರು ಐಐಎಂ ಬಿಟ್ಟು, 1200 ರೂ. ಸಂಬಳ ಸಿಗುವ ಪತ್ರಿಕೆಯೊಂದಿಗೆ ನಿಂತರು. ಪತ್ರಿಕೆ ಗುಜ್ಜಾರ್ ಅವರನ್ನು ನಾಡಿಗೆ ಪರಿಚಯಿಸಿತು.  ಲಂಕೇಶರು ಗುಜ್ಜಾರಪ್ಪ ಹೆಸರನ್ನು ಗುಜ್ಜಾರ್ ಅಂತ ಮಾಡ್ಕೋ ಅಂದರು. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರಿದ್ದ ಮೂಡಿಗೆರೆಗೇ ಹೋಗಿ, 8 ದಿನ ಅವರೊಂದಿಗಿದ್ದು, ಪಾಸಿಟಿವ್ ಮೇಕಿಂಗ್ ಕಲಿತು ಬಂದರು. ಲಂಕೇಶ್, ತೇಜಸ್ವಿ, ಪತ್ರಿಕೆಯೊಂದಿಗಿನ ಆಪ್ತ ಒಡನಾಟದಲ್ಲಿ ಲಂಕೇಶ್ ಪತ್ರಿಕೆಯಲ್ಲಿ  ಎರಡು ವರ್ಷಗಳು ಇದ್ದ ಗುಜ್ಜಾರ್   'ಪ್ರಜಾವಾಣಿ’ ಸೇರಿದರು.
'ಪ್ರಜಾವಾಣಿ’ಯಲ್ಲಿ ಕಲಾವಿದರಾಗಿ ಕೆಲಸಕ್ಕೆ ಸೇರಿದ ಗುಜ್ಜಾರಪ್ಪನವರು, ಕೆಲಕಾಲ ಅನುವಾದಕರಾಗಿ ಕೆಲಸ ಮಾಡಿದರು. ನಂತರ ಎಂ.ಬಿ.ಸಿಂಗ್ ಸೂಚನೆಯ ಮೇರೆಗೆ 'ಸುಧಾ’ ಪತ್ರಿಕೆಯ ಪುಟವಿನ್ಯಾಸಕರಾದರು. ಆ ನಂತರ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಗಳಲ್ಲಿ ಕಾರ್ಟೂನು, ಚಿತ್ರಗಳನ್ನು ಬರೆಯುತ್ತ 16 ವರ್ಷಗಳ ಕಾಲ ಸೇವೆ ಸಲ್ಲಿಸಿ ಮನೆಮಾತಾದರು. ಈ ನಡುವೆ 1983-84ರಲ್ಲಿ ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 'ನಮ್ಮ ನಾಡು’ ಪತ್ರಿಕೆ ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರು .  ಕರ್ನಾಟಕದ ಸಾಂಸ್ಕೃತಿಕ ಜಗತ್ತನ್ನು ಆಳಿದ ಲಂಕೇಶ್, ತೇಜಸ್ವಿ ಮತ್ತು ಎಂಡಿಎನ್ ಜೊತೆ ಹಲವು ವರ್ಷಗಳ ಕಾಲ ಆತ್ಮೀಯವಾಗಿ ಒಡನಾಡಿದ ಗುಜ್ಜಾರಪ್ಪನವರಿಗೆ, ಮೂವರ ಬಗ್ಗೆಯೂ ಅಪಾರ ಪ್ರೀತಿ ಮತ್ತು ಗೌರವ.

ಗುಜ್ಜಾರ್ ಅವರು ಈವರೆಗೆ 1400ಕ್ಕೂ ಹೆಚ್ಚು  ಪುಸ್ತಕಗಳಿಗೆ ಚಿತ್ರಗಳಿಗೆ ಚಿತ್ರ ರಚನೆ  ಮಾಡಿದ್ದಾರೆ. MItha Under Magic Shoes ಎಂಬ ಪುಸ್ತಕ ಮಾಲಿಕೆಯಲ್ಲಿ  ಇವರ ಚಿತ್ರಗಳು  16 ರಾಷ್ಟ್ರೀಯ, ಅಂತರಾಷ್ಟ್ರೀಯ ಭಾಷೆಗಳಲ್ಲಿ ಪ್ರಕಟಣೆಗೊಂಡಿವೆ. ಕನಕದಾಸರ ಜೀವನದ ಸಾಧನೆಗಳನ್ನು ಕುರಿತಾದ 6 ವಿವಿಧ ಪುಸ್ತಕಗಳಿಗೆ ಚಿತ್ರ ಮತ್ತು ಸಾಹಿತ್ಯ ರಚನೆ ಮಾಡಿದ್ದಾರೆ. ಮಕ್ಕಳಿಗಾಗಿ ಗಾಂಧೀಜಿಯ ಜೀವನ ಸಂದೇಶದ ಚಿತ್ರ ಸಹಿತದ ಪುಸ್ತಕ ಪ್ರಕಟಣೆ ಮಾಡಿದ್ದಾರೆ. ಮಕ್ಕಳಿಗಾಗಿ ಬುದ್ಧನ ಸಂದೇಶ ಸಾರುವ ಚಿತ್ರ ಸಹಿತ ಪುಸ್ತಕ ಪ್ರಕಟಣೆ ಮಾಡಿದ್ದಾರೆ. ವೈದ್ಯಕೀಯ ರಂಗಕ್ಕೆ ಸಂಬಂಧಿಸಿದ ಕಾಮಿಕ್ಸ್ ಪುಸ್ತಕಗಳಿಗೆ ಚಿತ್ರ ರಚನೆ ಮಾಡಿದ್ದಾರೆ.  ಗ್ರಾಫಿಕ್ ಕನ್ಸಲ್ಟೆಂಟ್ ಆಗಿ ಮಲ್ಟಿಮೀಡಿಯಾಕ್ಕೆ ಕೆಲಸ ಮಾಡಿದ್ದಾರೆ. ಹಲವು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಹೊಸ ಕಲಾವಿದರನ್ನು ಕಲೆಹಾಕಿ ಸಂಘಟಿಸಿ ಪ್ರದರ್ಶನವೇರ್ಪಡಿಸಿದ್ದಾರೆ. ಅವರಿಗೆ ಪ್ರಚಾರ ಪ್ರೋತ್ಸಾಹ ನೀಡಿ, ಅವರ ಬದುಕು ಬಲಗೊಳ್ಳುವಂತೆ ಮಾಡಿದ್ದಾರೆ.  ದೇಶದ ನಾನಾ ಭಾಗಗಳಲ್ಲಿ ವ್ಯಂಗ್ಯಚಿತ್ರ ಕುರಿತ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. 
ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯಲ್ಲಿ  ಟ್ರಸ್ಟೀ ಆಗಿದ್ದಾರೆ. ಇವರು ರಚಿಸಿದ ಅಟಲ್ ಬಿಹಾರಿ ವಾಜಪೇಯಿ ಅವರ ವ್ಯಂಗ್ಯ ಭಾವ ಚಿತ್ರ ಪ್ರಧಾನಿಯವರ ಮನೆಯಲ್ಲಿ ಅನಾವರಣಗೊಂಡಿದೆ.

ಗುಜ್ಜಾರ್  ಅವರಿಗೆ ಕೆಂಪೇಗೌಡ ಪ್ರಶಸ್ತಿ, ಲಲಿತ ಕಲಾ ಅಕಾಡೆಮಿ ನೀಡಿದ ಜೀವ ಮಾನ ಪ್ರಶಸ್ತಿ,, ಲಲಿತ ಕಲಾ ಅಕಾಡೆಮಿ ನೀಡುವ ವಾರ್ಷಿಕ ಕಲಾ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, Trejon International Cartoon  Contest ನಲ್ಲಿ ಬಹುಮಾನ , Witty World ಪುಸ್ತಕದಲ್ಲಿ ಭಾರತದ ಪರವಾಗಿ 3 ವ್ಯಂಗ್ಯಚಿತ್ರಗಳು ಪ್ರಕಟ ಮುಂತಾದ ಗೌರವಗಳು ಸಂದಿವೆ. 

ಗುಜ್ಜಾರ್  ಅವರಿಗೆ ಸ್ಮಿತಾ, ಹಿತಾ ಎಂಬಿಬ್ಬರು ಮಕ್ಕಳು. ಪತ್ನಿ ಸೂರ್ಯಕಲಾ ಬೆಂಗಳೂರಿನ DRDO ಸಂಸ್ಥೆಯಲ್ಲಿ ವಿಜ್ಞಾನಿ. 

ಕಲಾವಿದರಾದ ಗುಜ್ಜಾರ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.

ಮಾಹಿತಿ ಆಧಾರ: ಬಸವರಾಜು ಮೇಗಲಕೇರಿ
ಕೃತಜ್ಞತೆ:Gurudatta N S Sanketh


Happy birthday B.g. Gujjarappa Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ