ಬಿ. ದೇವೇಂದ್ರಪ್ಪ
ಬಿ. ದೇವೇಂದ್ರಪ್ಪ
ನಾವು ಏಕಲವ್ಯನ ಕಥೆ ಕೇಳಿದ್ದೇವೆ. ನಿಜ ಜೀವನದಲ್ಲೂ ಕರ್ನಾಟಕದ ಮಹಾನ್ ಸಂಗೀತಗಾರರೊಬ್ಬರು ಏಕಲವ್ಯನಂತೆ ಸಂಗೀತ ಸಾಧನೆ ಮಾಡಿ ತಾವು ಮೆಚ್ಚಿದ ಆ ದ್ರೋಣಗುರುವನ್ನು ತಮ್ಮ ಸಂಗೀತದಿಂದ ಮೆಚ್ಚಿಸಿ ಅವರ ಶಿಷ್ಯತ್ವವನ್ನೂ ಪಡೆದರು. ಆ ಮಹಾನ್ ಸಾಧಕರೇ ಬಿ. ದೇವೆಂದ್ರಪ್ಪನವರು.
ಚಿತ್ರದುರ್ಗ ಮದಕರಿ ನಾಯಕನ ವಂಶಕ್ಕೆ ಸೇರಿದ ದೇವೇಂದ್ರಪ್ಪನವರು ಶಿವಮೊಗ್ಗ ಜಿಲ್ಲೆಯ ಅಯನೂರು ಗ್ರಾಮದಲ್ಲಿ 1899ರ ಜೂನ್ 3 ರಂದು ಜನಿಸಿದರು. ಅವರ ತಂದೆ ಬಿ. ಎಸ್. ರಾಮಯ್ಯನವರು ಸಂಗೀತ ಮತ್ತು ಭರತ ನಾಟ್ಯ ಪ್ರವೀಣರಾಗಿದ್ದರು. ತಾಯಿ ತುಳಸಮ್ಮನವರು.
ದೇವೇಂದ್ರಪ್ಪನವರು ತಮ್ಮ ತಂದೆಯಿಂದಲೇ ಸಂಗೀತ ಶಿಕ್ಷಣ ಪಡೆದರು. ಲೋಯರ್ ಸೆಕೆಂಡರಿ ತೇರ್ಗಡೆಯಾದ ನಂತರ ಶಾಲಾ ಶಿಕ್ಷಕರಾಗಿ ಉದ್ಯೋಗಕ್ಕೆ ಸೇರಿಕೊಂಡರು. ಜೊತೆಗೆ ಮನೆಯಲ್ಲಿದ್ದ ದಿಲ್‌ರುಬಾ, ಸಿತಾರ್, ಪಿಟೀಲು, ಗೋಟುವಾದ್ಯ, ಜಲತರಂಗ್ ಮುಂತಾದುವುಗಳನ್ನು ತಾವೇ ಕಲಿತು ನುಡಿಸುವುದರಲ್ಲಿ ಪ್ರಾವೀಣ್ಯತೆ ಪಡೆದರು.
ಬಿಡಾರಂ ಕೃಷ್ಣಪ್ಪನವರ ಗ್ರಾಮಫೋನ್ ರೆಕಾರ್ಡ್ ಕೇಳಿ ಸಂಗೀತ ಕಲಿಯಲು ಪ್ರೇರಿತರಾಗಿ ಮೈಸೂರಿಗೆ ಬಂದರು. ಆದರೆ ಬಿಡಾರಂ ಕೃಷ್ಣಪ್ಪನವರ ಬಳಿ ಸಂಗೀತ ಕಲಿಯಲು ಅನುಕೂಲವಾಗದಿದ್ದ ಕಾರಣ ಬಿಡಾರಂ ಕೃಷ್ಣಪ್ಪನವರ ಫೋಟೋ ಪಡೆದು ಏಕಲವ್ಯನಂತೆ ಸಂಗೀತ ಸಾಧನೆ ಮಾಡಿದರು. ಎಡೆಬಿಡದ ಸಾಧನೆಯಿಂದ ದೇಹಾಲಸ್ಯವುಂಟಾಗಿ ನ್ಯುಮೋನಿಯೋ ರೋಗಕ್ಕೆ ತುತ್ತಾದರೂ ನಿಧಾನವಾಗಿ ತಮ್ಮ ಕಂಠಶ್ರೀಯನ್ನು ಸುಧಾರಿಸಿಕೊಂಡರು.
ಒಮ್ಮೆ ಶ್ರೀಮಂತ ವಜ್ರದ ವ್ಯಾಪಾರಿಯೊಬ್ಬರ ಸ್ನೇಹದಿಂದಾಗಿ, ದೇವೆಂದ್ರಪ್ಪನವರಿಗೆ ಮೈಸೂರು ಮಹಾರಾಜರ ಆಸ್ಥಾನದಲ್ಲಿ ಜಲತರಂಗ್ ಕಾರ್ಯಕ್ರಮ ನಡೆಸಿಕೊಡಲು ಅವಕಾಶ ಒದಗಿತು. ಈ ಸಂದರ್ಭದಲ್ಲಿ ತಮ್ಮ ಗುರುಗಳು ಯಾರೆಂದಾಗ ಅವರು ಬಿಡಾರಂ ಕೃಷ್ಣಪ್ಪನವರ ಹೆಸರನ್ನು ನುಡಿದರು. ಇದನ್ನು ಕೇಳಿ ಆಶ್ಚರ್ಯಭರಿತರಾದ ಬಿಡಾರಂ ಕೃಷ್ಣಪ್ಪನವರು ದೇವೆಂದ್ರಪ್ಪನವರನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕಾರ ಮಾಡಿಕೊಂಡು ಸಂಗೀತದ ಧಾರೆ ಎರೆದರು. ಮುಂದೆ ನವರಾತ್ರಿ ಸಂದರ್ಭಗಳಲ್ಲಿ ದೇವೇಂದ್ರಪ್ಪನವರು ಅರಮನೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡತೊಡಗಿದರು.
1953ರಲ್ಲಿ ದೇವೇಂದ್ರಪ್ಪನವರಿಗೆ ಸಾಂಸ್ಕೃತಿಕ ನಿಯೋಗದೊಡನೆ ಚೀನಾ ಪ್ರವಾಸ ಕೈಗೊಳ್ಳುವ ಅವಕಾಶ ಒದಗಿಬಂತು. ತಮ್ಮ ಸಂಗೀತದಿಂದ ದೇವೇಂದ್ರಪ್ಪನವರು ಹೋದಕಡೆಯೆಲ್ಲಾ ಕರ್ನಾಟಕಕ್ಕೆ ಖ್ಯಾತಿ ತಂದರು. ಅ.ನ.ಕೃ.ರವರು ಅವರ ಶೈಲಿಗೆ ಸಿಂಹ ವೈಖರಿ ಎಂದು ಕೊಂಡಾಡಿದ್ದಾರೆ. ಪ್ರೊ. ಸಾಂಬಮೂರ್ತಿಯವರು ಅವರದ್ದು ಗಂಡು ಹಾಡುಗಾರಿಕೆ ಎಂಬ ಪ್ರಶಂಸೆ ನೀಡಿದ್ದಾರೆ.
ದೇವೇಂದ್ರಪ್ಪನವರಿಗೆ ಸಂದ ಪ್ರಶಸ್ತಿ ಗೌರವಗಳು ಹಲವಾರು. ಮಹಾರಾಜರ ವರ್ಧಂತಿ ಸಂದರ್ಭದಲ್ಲಿ ಗಾನ ವಿಶಾರದ, ಮದರಾಸಿನ ಸಂಗೀತ ಸಭೆಯಲ್ಲಿ ಗಾಯಕ ರತ್ನ, ಹೈದರಾಬಾದಿನಲ್ಲಿ ರಾಗಾಲಾಪನ ಚತುರ, ಬಳ್ಳಾರಿಯಲ್ಲಿ ಗಾನ ಕೇಸರಿ, ರಂಭಾಪುರಿ ಜಗದ್ಗುರುಗಳಿಂದ ಗಾಯಕ ಸಾರ್ವಭೌಮ ಮುಂತಾದ ಹಲವಾರು ಬಿರುದುಗಳಲ್ಲದೆ, ಕೇಂದ್ರ ಸಂಗೀತನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯ ಸರಕಾರದ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಮುಂತಾದ ಹಲವಾರು ಗೌರವಗಳು ದೇವೇಂದ್ರಪ್ಪನವರಿಗೆ ಸಂದವು.
ಈ ಮಹಾನ್ ಸಂಗೀತ ಸಾಧಕ ಡಾ. ಬಿ ದೇವೇಂದ್ರಪ್ಪನವರು 1986ರ ಜೂನ್ 6ರಂದು ಈ ಲೋಕವನ್ನಗಲಿದರು.
On the birth anniversary of great musician B. Devendrappa
ಕಾಮೆಂಟ್‌ಗಳು