ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಂಡಿಕಲ್ ರಾಮಶಾಸ್ತ್ರಿ


 ಮಂಡಿಕಲ್ ರಾಮಶಾಸ್ತ್ರಿ


ವಿದ್ವಾನ್ ಮಂಡಿಕಲ್ ರಾಮಶಾಸ್ತ್ರಿಗಳು ಮೈಸೂರಿನ ಅತ್ಯಂತ ಗೌರವಾನ್ವಿತ ಸಂಸ್ಕೃತ ವಿದ್ವಾಂಸರಾಗಿದ್ದರು.

ರಾಮಶಾಸ್ತ್ರಿಗಳು  ಕೋಲಾರ ಜಿಲ್ಲೆಯ ಮಂಡಿಕಲ್ ಗ್ರಾಮದಲ್ಲಿ 1849 ರಲ್ಲಿ ಜನಿಸಿದರು. ಅವರ ತಂದೆ ವೆಂಕಟಸುಬ್ಬಾ ಶಾಸ್ತ್ರಿ.  ತಾಯಿ ಅಕ್ಕಮಾಂಬ. ಅವರಿಗೆ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ. 

ಬಾಲ್ಯದಲ್ಲ ತುಂಬಾ ಚುರುಕಾಗಿದ್ದ ರಾಮಶಾಸ್ತ್ರಿಗಳು  ಎಂಟನೇ ವಯಸ್ಸಿನಲ್ಲೇ  ಸಂಸ್ಕೃತದಲ್ಲಿ ಅಧ್ಯಯನ ಮಾಡಲು ಮೈಸೂರಿಗೆ ಬಂದರು. ಎಂಟು ವರ್ಷಗಳ ಕಾಲ ಋಗ್ವೇದವನ್ನು ಅಧ್ಯಯನ ಮಾಡಿದರು.  ತಂದೆಯ ಮರಣದ ನಂತರ ಮಂಡಿಕಲ್‌ಗೆ ಹಿಂತಿರುಗಿ ಮುಂದಿನ ನಾಲ್ಕು ವರ್ಷಗಳ ಕಾಲ ಅಲ್ಲಿಯೇ  ಅಧ್ಯಯನ ಮಾಡಿದರು. 

ಮಹಾರಾಜ ಮುಮ್ಮುಡಿ ಕೃಷ್ಣರಾಜ ಒಡೆಯರ್ ಅವರ ಕೋಶಾಧಿಕಾರಿಗಳಾಗಿದ್ದ  ಭಕ್ಷಿ ನರಸಪ್ಪನವರು ರಾಮಶಾಸ್ತ್ರಿಗಳಿಗೆ  ಮೈಸೂರಿನಲ್ಲಿ ಉನ್ನತ ವ್ಯಾಸಂಗಕ್ಕೆ ಪೋಷಣೆ  ನೀಡಿದರು. ರಾಮಶಾಸ್ತ್ರಿಗಳು  ತಮ್ಮ ಕಠಿಣ ಪರಿಶ್ರಮ, ತೀಕ್ಷ್ಣತೆ, ಚುರುಕುತನ ಮತ್ತು ಧಾರ್ಮಿಕ ಸ್ವಭಾವದಿಂದ ನರಸಪ್ಪನವರ ನೆಚ್ಚಿನ ವ್ಯಕ್ತಿಯಾದರು. ಕಾಶಿಗೂ ಕೆಲಕಾಲ ಹೋಗಿ   ತರ್ಕ, ವ್ಯಾಕರಣ ಮತ್ತು ಅಲಂಕಾರ ಶಾಸ್ತ್ರಗಳಲ್ಲಿ ಮನ್ನಣೆಯನ್ನು ಪಡೆದರು. ಕಾಶಿಯ ರಾಜರ ಕೋರಿಕೆಯ ಮೇರೆಗೆ, ಅಲ್ಲಿನ ಆಸ್ಥಾನದ ವಿದ್ವಾಂಸರೊಂದಿಗೆ ಕೆಲಸ ಮಾಡಲು ಹಲವಾರು ತಿಂಗಳುಗಳ ಕಾಲ ಅಲ್ಲಿಯೇ ಇದ್ದರು. 

ರಾಮಶಾಸ್ತ್ರಿಗಳು  ಮೈಸೂರು ಸಂಸ್ಕೃತ ಕಾಲೇಜು ಪ್ರಾರಂಭವಾದ ವರ್ಷದಲ್ಲಿ ಅಲ್ಲಿನ ಮೊದಲ ವಿದ್ವಾನ್ ಆದರು. ರಾಜಮನೆತನದ ಮಹಿಳೆಯರೂ  ಸೇರಿದಂತೆ ರಾಜಮನೆತನದವರಿಗೆ ಸಂಸ್ಕೃತ ಕಲಿಸಿದ ಕೀರ್ತಿ ಇವರದಾಗಿತ್ತು.  ಅದ್ವೈತ  ಸಿದ್ಧಾಂತದ ಪ್ರತಿಪಾದಕರಾಗಿದ್ದ ಅವರು, ಶೃಂಗೇರಿ ಪೀಠದ ಜಗದ್ಗುರು  ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮೀಜಿ  ಅವರಿಂದ ಆಶೀರ್ವಚನ ಪಡೆದರು. ಮೈಸೂರಿನ ಚಾಮರಾಜ ಮೊಹಲ್ಲಾದ ಗೀತಾ ರಸ್ತೆಯಲ್ಲಿರುವ  ಪ್ರಸನ್ನ ವಿಶ್ವೇಶ್ವರ ಸ್ವಾಮಿ ದೇವಸ್ಥಾನವನ್ನು ಸ್ಥಾಪಿಸಿ ಅದರ ಪ್ರತಿಷ್ಠಾಪನೆ ಮಾಡಿದ ಕೀರ್ತಿ ಇವರದು.

ಸಂಸ್ಕೃತದಲ್ಲಿ ವಿದ್ವತ್ ಮುಗಿಸಿದ ತಕ್ಷಣ ರಾಮಶಾಸ್ತ್ರಿಗಳನ್ನು  1885ರಲ್ಲಿ ಪ್ರಾರಂಭವಾದ ಶಾರದ ವಿಲಾಸ ಹೈಸ್ಕೂಲ್‌ನಲ್ಲಿ ಮೊದಲ ಮುಖ್ಯ ಶಿಕ್ಷಕರಾಗಲು ಕೇಳಿಕೊಳ್ಳಲಾಯಿತು. 1899 ರಲ್ಲಿ ಅವರು ಹಿರಿಯ ಪಂಡಿತರಾಗಿ ಮಹಾರಾಜ ಸಂಸ್ಕೃತ ಕಾಲೇಜಿಗೆ ಬಂದು  ನಂತರ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಅವರು ತಮ್ಮ ಜೀವನದುದ್ದಕ್ಕೂ ಉನ್ನತ ಸಂಸ್ಕೃತದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಪೋಷಿಸಿದರು. ಅವರು ಮೈಸೂರು ರಾಜಮನೆತನದ ಅತ್ಯಂತ ಗೌರವಾನ್ವಿತ ಆಸ್ಥಾನ ವಿದ್ವಾನ್ ಆಗಿದ್ದರು

ರಾಮಶಾಸ್ತ್ರಿ  ಅವರು ಸುಬ್ಬಲಕ್ಷಮ್ಮ ಅವರನ್ನು ವಿವಾಹವಾದರು. ಅವರಿಗೆ ಮೂವರು ಹೆಣ್ಣು ಮಕ್ಕಳು (ದೊಡ್ಡ ಪುಟ್ಟಮ್ಮ, ಚಿಕ್ಕ ಪುಟ್ಟಮ್ಮ, ಕಾವೇರಮ್ಮ) ಮತ್ತು ಒಬ್ಬ ಮಗ (ಶ್ರೀಕಾಂತ ಶಾಸ್ತ್ರಿ). ಅವರ ಪತ್ನಿಯ ಅಕಾಲಿಕ ಮರಣದ ನಂತರ, ಮಹಾರಾಜ ಕೃಷ್ಣರಾಜ ಒಡೆಯರ್ ಅವರು ರಾಮಾಶಾಸ್ತ್ರಿಗಳಿಗೆ  ಶೋಪಾಸ್ಕರ ದಾನವನ್ನು ನೀಡಲು ಆಶಿಸಿದ್ದರಿಂದ ಅವರನ್ನು  ಎರಡನೇ ಮದುವೆಗೆ ಒತ್ತಾಯಿಸಲಾಯಿತು. ಹೀಗೆ ಅವರು  ರುಕ್ಮಿಣಮ್ಮ ಅವರನ್ನು ವಿವಾಹವಾದರು.  ಈ ದಂಪತಿಗಳಿಗೆ  ಐದು ಗಂಡು ಮಕ್ಕಳು (ವೆಂಕಟಸುಬ್ಬ ಶಾಸ್ತ್ರಿ, ಕೃಷ್ಣಮೂರ್ತಿ, ಶಂಕರನಾರಾಯಣ, ಲಕ್ಷ್ಮಣರಾವ್ ಮತ್ತು ಸೋಮಸುಂದರಂ) ಮತ್ತು ನಾಲ್ಕು ಹೆಣ್ಣುಮಕ್ಕಳು (ಸುಬ್ಬಲಕ್ಷಮ್ಮ, ಪಾರ್ವತಮ್ಮ, ಶಾರದಮ್ಮ ಮತ್ತು ಅನ್ನಪೂರ್ಣಮ್ಮ). ಈ ಎಲ್ಲಾ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರು.  ವೆಂಟಕಸುಬ್ಬಾಶಾಸ್ತ್ರಿಗಳು ತಮ್ಮ ತಂದೆಯ ಹಾದಿಯನ್ನು ಶಿಕ್ಷಣದಲ್ಲಿ ಅನುಸರಿಸಿ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ,  ನಂತರ ಮಹಾರಾಜ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

ರಾಮಶಾಸ್ತ್ರಿಗಳು ಸಂಸ್ಕೃತದಲ್ಲಿ ಕಾವ್ಯ, ನಾಟಕ, ಚಂಪೂ, ಗದ್ಯ ಮುಂತಾದ ಹಲವಾರು ಸಾಹಿತ್ಯ ಪ್ರಕಾರಗಳ ಮೂಲಕ ತಮ್ಮನ್ನು ಅಭಿವ್ಯಕ್ತಿಸಿದ್ದಾರೆ. ಅವರು  ಸೃಜನಶೀಲ ಕವಿಯಾಗಿ ಗಣನೀಯ ಯಶಸ್ಸನ್ನು ಗಳಿಸಿದರು. ಅವರ ಪ್ರಸಿದ್ಧ ಕೃತಿಗಳಲ್ಲಿ  ಈ ಕೆಳಗಿನವುಗಳು  ಸೇರಿವೆ :

1. ಮೇಘಪ್ರತಿಸಂದೇಶ: ಇದನ್ನು  ಮಹಾಕವಿ ಕಾಳಿದಾಸನ ಮೇಘಸಂದೇಶದ ಉತ್ತರಭಾಗವಾಗಿ ಬರೆಯಲಾಗಿದೆ. ಇದು ರಾಮಶಾಸ್ತ್ರಿಗಳ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದ್ದು, ಅವರಿಗೆ ಸಾಕಷ್ಟು ಮನ್ನಣೆಯನ್ನು ತಂದುಕೊಟ್ಟಿತು.  ಅವರಿಗೆ ‘ಕವಿರತ್ನ’ ಎಂಬ ಬಿರುದನ್ನು ಸಹ ತಂದುಕೊಟ್ಟಿತು.

2. ಕುಂಭಾಭಿಷೇಕಚಂಪೂ: ಈ ಚಂಪೂ ಕೃತಿಯು ಶೃಂಗೇರಿಯಲ್ಲಿ ಶ್ರೀ ಶಾರದಾಂಬಾ ದೇವಸ್ಥಾನಕ್ಕೆ ನಡೆದ ಕುಂಭಾಭಿಷೇಕ ಆಚರಣೆಯ ಸಾಹಿತ್ಯಿಕ ವಿವರಣೆಯಾಗಿದೆ. ರಾಮಶಾಸ್ತ್ರಿಗಳ ಸಾಹಿತ್ಯಿಕ ಶ್ರೇಷ್ಠತೆಯ ಬಗ್ಗೆ ಅಪಾರ ಮೆಚ್ಚುಗೆ ಹೊಂದಿದ್ದ ಅಂದಿನ  ಶೃಂಗೇರಿಯ ಮಠಾಧೀಶರಾದ ಶ್ರೀ ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿಯವರು, ಕುಂಭಾಭಿಷೇಕ ಸಮಾರಂಭದ ವೈಭವವನ್ನು ವಿವರಿಸುವ ಈ ಕೃತಿಯನ್ನು ರಚಿಸಲು ರಾಮಾಶಾಸ್ತ್ರಿಗಳನ್ನು  ಪ್ರೇರಿಸಿ  ಪ್ರೋತ್ಸಾಹಿಸಿದರು.

3. ಭೈಮಿಪರಿಣಯಂ: ಇದು ಹತ್ತು ಅಂಕಗಳ ನಾಟಕ. ಇದು ಅಮರ ಮಹಾಕಾವ್ಯವಾದ ಮಹಾಭಾರತದ ನಳೋಪಾಖ್ಯಾನವನ್ನು ಆಧರಿಸಿದೆ.

4. ಆರ್ಯಧರ್ಮಪ್ರಕಾಶಿಕ: ರಾಮಾಶಾಸ್ತ್ರಿಗಳು ಈ ಕೃತಿಯನ್ನು  ಮೈಸೂರು ಮಹಾರಾಜರ ಆಶಯದಂತೆ ಸಿದ್ಧಪಡಿಸಿದರು.  ಇದರ ಪೂರ್ವಭಾಗವು ನಾಲ್ಕು ಮಾನವೀಯ ಮೌಲ್ಯಗಳಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ವಿವರಣೆ ಹೊಂದಿದೆ. ಉತ್ತರಭಾಗವು ಚಾರ್ವಾಕ, ಬೌದ್ಧ ಮತ್ತು ಜೈನ ಶಾಖೆಗಳನ್ನು ಒಳಗೊಂಡಂತೆ ಭಾರತೀಯ ತತ್ತ್ವಶಾಸ್ತ್ರದ ವಿವಿಧ ವ್ಯವಸ್ಥೆಗಳ ಸಂಕ್ಷಿಪ್ತ ವಿವರಣೆಯನ್ನು ಒಳಗೊಂಡಿದೆ.

5. ಸಂಸ್ಕೃತ ಕಥಾಸಪ್ತತಿ: ಇದು ಎಪ್ಪತ್ತು ಕಥೆಗಳ ಸಂಗ್ರಹವಾಗಿದೆ. ರಾಮಶಾಸ್ತ್ರಿಗಳು  ಕಥೆಗಳನ್ನು ಮೂಲತಃ ಕನ್ನಡದಲ್ಲಿ ಬರೆದಿದ್ದಾರೆ. ಸಂಸ್ಕೃತ ವಿದ್ಯಾರ್ಥಿಗಳ ಅಗತ್ಯತೆಗಳನ್ನು ಪೂರೈಸಲು ಅವರು ಸರಳ ಸಂಸ್ಕೃತ ಗದ್ಯದಲ್ಲಿಯೂ  ಈ ಕಥೆಗಳನ್ನು ಪುನಃ ಹೇಳಿದ್ದಾರೆ.

6. ಭಗವತ್ಪ್ರಾರ್ಥನೆ: ಈ ಪುಸ್ತಕವು ದೈನಂದಿನ ಪೂಜೆ ಮತ್ತು ಪಾರಾಯಣಕ್ಕಾಗಿ ಸಿದ್ಧಪಡಿಸಲಾದ ಪ್ರಾರ್ಥನೆಗಳ ಸಂಗ್ರಹವನ್ನು ಒಳಗೊಂಡಿದೆ.

ರಾಮಶಾಸ್ತ್ರಿಗಳು ಕೃತಿಗಳಲ್ಲಿ ಇನ್ನೂ ಹಲವಾರು ಕೃತಿಗಳನ್ನು ಉಲ್ಲೇಖಿಸಲಾಗಿದೆ, ಅವುಗಳಲ್ಲಿ ಯಾವುದನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ. ಅವುಗಳಲ್ಲಿ
1. ಚಾಮರಾಜ ಕಲ್ಯಾಣ ಚಂಪೂ
2. ಚಾಮರಾಜ ರಾಜ್ಯಾಭಿಷೇಕ ಚರಿತಂ
3. ಕೃಷ್ಣರಾಜ್ಯಬುಧಾಯ 
ಸೇರಿವೆ. 

ರಾಮಶಾಸ್ತ್ರಿಗಳು ಸಂಸ್ಕೃತದ ಮಹಾನ್  ಶಿಕ್ಷಕರಾಗಿದ್ದರು. ಅವರ ಹೆಸರಾಂತ  ವಿದ್ಯಾರ್ಥಿಗಳಲ್ಲಿ ಆರ್. ಶಾಮಾ ಶಾಸ್ತ್ರಿ ಮತ್ತು ವಿ. ಲಕ್ಷ್ಮೀ ಪಥಯ್ಯ ಅವರು ಸೇರಿದ್ದಾರೆ. ಅವರು ಹಲವಾರು ವರ್ಷಗಳ ಕಾಲ ಮಹಾರಾಜರ ಸಂಸ್ಕೃತ ಕಾಲೇಜಿನಲ್ಲಿ ಹಿರಿಯ ಸಂಸ್ಕೃತ ವಿದ್ವಾನ್ ಆಗಿದ್ದರು. ಅವರನ್ನು ಮೈಸೂರು ಮತ್ತು ಬನಾರಸ್‌ನ ಅರಸರು ಮತ್ತು ಶೃಂಗೇರಿ ಶಂಕರಾಚಾರ್ಯ ಮಠ, ಉತ್ತರಾದಿ ಮಠ ಮತ್ತು ರಾಘವೇಂದ್ರ ಮಠದ ಮಠಾಧೀಶರು ಸೇರಿದಂತೆ ವಿವಿಧ ರಾಜರುಗಳು ಮತ್ತು ಮಠಾಧಿಪತಿಗಳು ಇವರನ್ನು ಗೌರವಿಸಿದರು. ಇವರ ಮುಂದಿನ ತಲೆಮಾರಿನ ಅನೇಕರು ಎಂಜಿನಿಯರಿಂಗ್, ಕೈಗಾರಿಕೆ, ವೈದ್ಯಕೀಯ, ಸೈನ್ಯ, ಶಿಕ್ಷಣ ಸೇರಿದಂತೆ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ.  ರಾಮಾಶಾಸ್ತ್ರಿಗಳ ಹೆಸರಿನಲ್ಲಿ  ಅವರ ಕುಟುಂಬದ ಸದಸ್ಯರು ಟ್ರಸ್ಟ್ ರಚಿಸಿದ್ದು, ಲಭ್ಯವಿರುವ ಎಲ್ಲಾ ಕೃತಿಗಳ ಸಂಗ್ರಹ ಮತ್ತು ಮರುಪ್ರಕಟಣೆಗಾಗಿ ಸಹಾ ಶ್ರಮಿಸಿದ್ದಾರೆ.

ರಾಮಾಶಾಸ್ತ್ರಿಗಳು 1929ರಲ್ಲಿ ತಮ್ಮ 81 ನೇ ವಯಸ್ಸಿನಲ್ಲಿ  ಮೈಸೂರಿನಲ್ಲಿ ನಿಧನರಾದರು.

ಕೃತಜ್ಞತೆ: ವಿದ್ವಾನ್ ಮಂಡಿಕಲ್ ರಾಮಾಶಾಸ್ತ್ರಿ 

Great sanskrit scholar Vidwan Mandikal Ramashastri 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ