ಎಸ್. ಕೃಷ್ಣಪ್ಪ
ಎಸ್. ಕೃಷ್ಣಪ್ಪ
ಎಸ್. ಕೃಷ್ಣಪ್ಪ ಅವರು ತೈಲವರ್ಣ ಚಿತ್ರಕಲೆಯಲ್ಲಿ ಅಗಾಧ ಸಾಧನೆ ಮಾಡಿದವರು.
ಕೃಷ್ಣಪ್ಪನವರು 1945ರ ಮೇ 18ರಂದು ಬೆಂಗಳೂರು ಜಿಲ್ಲೆಯ ಸರ್ಜಾಪುರದ ನೇಕಾರ ಕುಟುಂಬದಲ್ಲಿ ಜನಿಸಿದರು. ತಂದೆ ಸಂಪಂಗಿರಾಮಯ್ಯ, ತಾಯಿ ನಾರಾಯಣಮ್ಮ.
ಕೃಷ್ಣಪ್ಪನವರು ಸಾಮಾನ್ಯ ವಿದ್ಯಾಭ್ಯಾಸಕ್ಕಿಂತ ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡರು. ಅವರ ಪ್ರಾರಂಭಿಕ ಶಿಕ್ಷಣ ಬೆಂಗಳೂರಿನ ಅ.ನ.ಸುಬ್ಬರಾಯರ ಕಲಾಮಂದಿರದಲ್ಲಿ ನಡೆಯಿತು. ನಂತರ ಮುಂಬಯಿಯ, ಕರ್ನಾಟಕದ ಮೂಲದವರಾದ ದಂಡಾವತಿ ಮಠರವರ ’ನೂತನ ಶಾಲೆ’ಯಲ್ಲಿ ಕಲಾಶಿಕ್ಷಣ ಪಡೆದರು. ಹೆಸರಾಂತ ಕಲಾವಿದರಾದ ಎ.ಎ. ಅಲಮೇಲ್ ಕರ್, ಎಸ್.ಎಮ್.ಜೋಶಿ, ಎಚ್.ಎನ್.ಹಲದನ್‌ಕರ್ ಅವರಲ್ಲಿ ಅಭ್ಯಾಸ ಮುಂದುವರೆಸಿ ಡಿಪ್ಲೊಮಾ ಪಡೆದರು.
ಕೃಷ್ಣಪ್ಪನವರು ಉದ್ಯೋಗಕ್ಕೆ ಸೇರಿದ್ದು ಆರ್ಟ್ ಡಿಸೈನರ್ ಆಗಿ ಬೆಂಗಳೂರಿನ ವೀವರ್ಸ್ ಸರ್ವೀಸ್ ಸೆಂಟರ್‌ನಲ್ಲಿ. ಅವರು 2002 ರಲ್ಲಿ ನಿವೃತ್ತರಾದರು.
ಕೃಷ್ಣಪ್ಪನವರು ಕೃತ್ತಿಕಾ ಆರ್ಟ್‌ಗ್ಯಾಲರಿ, ಗಲ್ಲೇರಿಯಾ ಮುಂಬಯಿ ಮುಂತಾದೆಡೆ ಏಕವ್ಯಕ್ತಿ ಪ್ರದರ್ಶನಗಳನ್ನು ನಡೆಸಿದರು. ಹಲವಾರು ಸಾಂಘಿಕ ಪ್ರದರ್ಶನಗಳಲ್ಲೂ ಭಾಗಿಯಾದರು. ಆರ್ಟ್‌ವಿತ್ ಹಾರ್ಟ್ (ಬೆಂಗಳೂರು) ಮುಂಬಯಿಯಲ್ಲಿ, ದಿ ಎಂಡ್ ಆಫ್ ಸೈಲೆನ್ಸ್ ಚೆನ್ನೈನಲ್ಲಿ; ರಾಷ್ಟ್ರೀಯ ಪ್ರದರ್ಶನ ದೆಹಲಿಯಲ್ಲಿ; ಸಿಮ್ಲಾದ ಲಲಿತ ಕಲಾ ಅಕಾಡಮಿ ಆಫ್ ಆರ್ಟ್ಸ್, ಕರ್ನಾಟಕ ಪೆಯಿಂಟರ್ಸ್ ಎಕ್ಸ್‌ಬಿಷನ್, ಆಲ್ ಇಂಡಿಯಾ ವೀವರ್ಸ್ ಸರ್ವೀಸ್ ಸೆಂಟರ್ ಆರ್ಟಿಸ್ಟ್ಸ್ ಎಕ್ಸಿಬಿಷನ್, ಮಹಾತ್ಮಾಗಾಂಧಿ ಸೆಂಟಿನರಿ ಎಕ್ಸಿಬಿಷನ್ ಮುಂತಾದ ಪ್ರದರ್ಶನಗಳಲ್ಲಿ ದೇಶದಾದ್ಯಂತ ಪ್ರದರ್ಶನ ನೀಡಿದರು. ಮಕ್ಕಳ ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆ, ಬೆಂಗಳೂರಿನಲ್ಲಿ ನಡೆದ ಮಕ್ಕಳ ಚಿತ್ರಕಲಾ ಸ್ಪರ್ಧೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ನ ವಾರ್ಷಿಕ ಚಿತ್ರಕಲಾ ಸ್ಪರ್ಧೆಗಳ ತೀರ್ಪುಗಾರರಾಗಿ, ಅಕಾಡಮಿ ಆಫ್ ಆರ್ಟ್ಸ್‌ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದರು.
ಕೃಷ್ಣಪ್ಪನವರು ಸಂಗೀತ ಮತ್ತು ನೃತ್ಯ ಕಲಾಪ್ರಕಾರಗಳನ್ನು ಬಿಂಬಿಸುವ ಅನೇಕ ಚಿತ್ರಗಳನ್ನು ಮೂಡಿಸಿದ್ದಾರೆ. ಅದರಲ್ಲೂ ಕರ್ನಾಟಕ ಜಾನಪದ ಕಲೆಗಳ ಪಟಕುಣಿತ, ಡೊಳ್ಳು ಕುಣಿತ, ಬಸವನ ಆಟ ಮುಂತಾದುವುಗಳನ್ನು ಕುರಿತಾದ ಅವರ ತೈಲವರ್ಣ ಚಿತ್ರಗಳು ಅಪಾರ ಮೆಚ್ಚುಗೆ ಗಳಿಸಿವೆ.
ಕರ್ನಾಟಕ ಲಲಿತಕಲಾ ಅಕಾಡಮಿ, ಆಂಧ್ರ, ಸಿ.ವಿ. ರಾಮನ್ ಇನ್‌ಸ್ಟಿಟ್ಯೂಟ್, ಮ್ಯಾಕ್ಸ್ ಮುಲ್ಲರ್ ಭವನ, ಬಯೋಕಾನ್ ಲಿ. ಮ್ಯಾಕ್‌ಡೊವೆಲ್, ಕಿರ್ಲೋಸ್ಕರ್ ಕಂ. ಮತ್ತು ಖಾಸಗಿ ವ್ಯಕ್ತಿಗಳ ಸಂಗ್ರಹಾಲಯಗಳು ಸೇರಿದಂತೆ ಕೃಷ್ಣಪ್ಪನವರ ಚಿತ್ರಗಳು ವಿಶ್ವವ್ಯಾಪಿಯಾಗಿ ಕಂಗೊಳಿಸುತ್ತಿವೆ.
ಕೃಷ್ಣಪ್ಪನವರಿಗೆ ಚಿತ್ರಕಲಾ ಪರಿಷತ್ತಿನ ರಾಷ್ಟ್ರೀಯ ಪ್ರದರ್ಶನದಲ್ಲಿ ಆರು ಬಾರಿ ಬಹುಮಾನ, ಬಾಪಿ ರಾಜು ಕಲಾಪೀಠಂ ಗೌರವ, ಗಾರ್ಡನ್ ಸಿಟಿ ಜಾಯ್ಸರವರ ಸೃಷ್ಠಿ ಗೌರವ, ದೆಹಲಿಯ AIKSS ಸುವರ್ಣ ಮಹೋತ್ಸವ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡಮಿ ಪ್ರಶಸ್ತಿ, ಜಿ.ಎಸ್. ಶೆಣೈ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಂಧ್ರ ಅಕಾಡಮಿ, ಹ್ಯಾಂಡ್‌ಲೂಮ್ ಎಕ್ಸ್‌ಪೋ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.
ಮಹಾನ್ ಕಲಾವಿದರಾದ ಕೃಷ್ಣಪ್ಪನವರು 2023ರ ಜೂನ್ 9 ರಂದು ನಿಧನರಾದರು. ನಮಸ್ಕಾರ.
S. Krishnappa
ಕಾಮೆಂಟ್‌ಗಳು