ಗೋಕುಲ ನಿರ್ಗಮನ 1
ಗೋಕುಲ ನಿರ್ಗಮನ 1
(ಪು. ತಿ. ನರಸಿಂಹಾಚಾರ್ ಅವರ ಕೃತಿ 🌷🙏🌷)
ಜಗದೀ ಮಾಯೆಯ ಹೊಳಲಿಡುತಿರುವಾ ಮರೆದೈವದ ಕೊಳಲ ನಮ್ಮೆದೆ ಅರೆಚಣವಾದರು ಲಾಲಿಸಿ
ನೀಗಲಿ ಭವದಳಲ
ಅಕ್ರೂರಾಗಮನ
(ಮೋಡ ಕವಿದಿರುವ ರಾತ್ರಿ, ಕವಿ ತನ್ನ ಮನೆಯಲ್ಲಿ ಇದ್ದಾನೆ; ಮರೆಯಲ್ಲಿ ಗೊಲ್ಲ ಹುಡುಗರು ಊದುವಂಥ ಕೊಳಲ ನಾದವು ಆಗಾಗ ಕೇಳಿಬರುತ್ತದೆ.)
ಕವಿ
ಆವನೀ ಉನ್ನತ್ತ ಈ ಸರಿಯ ಹೊತ್ತಿನೊಳು ಕೊಳಲ ಬಾರಿಸಿ ಮಧುರರಾಗವನು ರಚಿಪನಿಂತೆ
ಕರಿಮುಗಿಲ ಬಲೆಯೊಳಗೆ ಪೆರೆ ಸಿಲುಕಿ ನೋಯುತಿದೆ
ಗಾಳಿ ಬಾನಲೆಯುತಿದೆ ದೆಸೆಗೆಟ್ಟ ತಿರುಕನಂತೆ
ಈಗಿತ್ತ ಆಗತ್ತ ಕಿವಿಯಾಚೆ ದೂರತ್ತ ಮುಗಿಲುಮರೆ ಜೊನ್ನದಿಂ ಬೂದಾದ ರಜನಿಪಥದಿ
ತರಳಮುರಳೀನಾದವಿದನೆಲರು ಒಯ್ಯುತಿದೆ ಬಾಲಕೃಷ್ಣನ ತೃಣಾವರ್ತನಂದೊಯ್ದ ತೆರದಿ.
(ಒಳತೆರೆ ಎದ್ದು ಬೆಳುದಿಂಗಳಾಗುವುದು.)
ಏನು ಚೋದ್ಯಮಿದಯ್ಯ ತಾಮಸಿಯ ಕಾಳೆದೆಯೊ-
ಳನುರಾಗವುದಿಸಿದೊಲು ತಿಂಗಳಿನ ಬೆಳಕಿದಾಯ್ತು
ಬಯಲೊಳಗೆ ಬನವಾಯ್ತು ನೆಳಲೊಳಗೆ ರೂಪಾಯ್ತು
ಕಾಲ ಹಿಮ್ಮೊಗ ಹರಿದು ಗೋಕುಲವೆ ಕಣ್ಣಿಗಾಯ್ತು!
(ಮುರಲೀನಾದ ಮಧುರತರವಾಗುವುದು, ಕವಿ ಮರೆಯಾಗುತ್ತಾನೆ, ಹಾಡುತ್ತಾ ಗೋಪಿಯರು ಬರುತ್ತಾರೆ )
************
ಇಲ್ಲಿ ಕವಿಗೆ ಯಾರೋ ನುಡಿಸುತ್ತಿರುವ ಕೊಳಲಿನ ಧ್ವನಿ ಕೇಳಿಸುತ್ತಿದೆ. ಸರಿ ರಾತ್ರಿಯಲ್ಲಿ ಯಾರು ನುಡಿಸುತ್ತಿರುವರೆಂದು ಅಚ್ಚರಿ ಪಡುತ್ತಾನೆ. ಆ ಬೆಳುದಿಂಗಳು, ಆ ರಾತ್ರಿ, ಇಂಪಾದ ಧ್ವನಿ ಕವಿಯನ್ನು ಕೃಷ್ಣನ ಕಡೆಗೆ ರಾಸಲೀಲೆ ಸೆಳೆಯುತ್ತದೆ. ಬೃಂದಾವನದ, ಗೋಕುಲದ ದೃಶ್ಯಗಳು ಕಣ್ಣ ಮುಂದೆ ಬರುತ್ತವೆ. ಅದೆಲ್ಲವೂ ಕನಸಿನಂತೆ, ಕಲ್ಪನೆಯನ್ನು ಹೊತ್ತು ದೃಶ್ಯಗಳಾಗಿ ರೂಪುಗೊಂಡು ಅದ್ಭುತ ಕಥಾನಕಕ್ಕೆ ನಾಂದಿ ಹಾಡಿವೆ.
ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು