ಗೋಕುಲ ನಿರ್ಗಮನ 2
ಗೋಕುಲ ನಿರ್ಗಮನ 2
(ಪು. ತಿ. ನರಸಿಂಹಾಚಾರ್ಯ ಅವರ ಕೃತಿ)
ಗೋಪಿಯರು
ಹಾಡು : ರಾಗ - ಬಾಗೇಸರಿ
ಬಾ ಸಖಿ ಬೃಂದಾವನಕೆ ಆನಂದನಿಕೇತನಕೆ ಬೇಗ ಬಾ ಸಖಿ
ಯಮುನೆಯ ತೆರೆತೆರೆ ತಾಳವ ಹೊಯ್ದು
ತೀರದ ತರುತರು ಅಭಿನಯಗೆಯ್ದು
ಲತೆಲತೆ ಬಳುಕಿ ಗಾಳಿಗೆ ತಳುಕಿ
ಕೊಳಲಿಗೊಲೆವಾ ತಾಣಕೆ ಬೇಗ ಬಾ ಸಖಿ
ಯಾಮಿನಿಮಾತೆಯ ವಂಚಿಸಿ ಚಂದ್ರ
ಹಣಿಕಿದನಿದೆಕೋ ಮುಗಿಲೊಳತಂದ್ರ
ರಸವೇರಿದ ತೆರ ಹಸನಾಯಿತು ತಿರೆ
ಮಧುರ ಮುರಳೀನಾದಕೆ ಬೇಗ ಬಾ ಸಖಿ
ಕಾರ್ಮುಗಿಲಾಗಸವನು ಹೊದೆವಂತೆ
ನಿದ್ದೆಯು ಮುಸುಕಿತು ಹಿರಿಯರನಿಂತೆ - ಜಡದೇಹವ ಮನೆಯೊಳೆ ಬಿಟ್ಟಂತೆ ಹಗುರಾದೆವು ಈ ರಾಗಕೆ – ಬೇಗ ಬಾ ಸಖಿ
ದಿವ ತೊರೆಯಿತು ತನ್ನಯ ಸಾರವನೇ
ಇಳೆ ಕಳೆಯಿತು ತನ್ನಯ ಭಾರವನೇ
ಜನ ಮರೆತಿತು ತನ್ನಯ ರೂಢಿಯನೇ
ಮೋಹನ ಮುರಳೀಗಾನಕೆ ಬೇಗ ಬಾ ಸಖಿ
ಎನ್ನದು ತನ್ನದು ಇದು ಸರಿ ತಪ್ಪು
ಇಲ್ಲದಾಯ್ತು ಕೊಳಲುಲಿವೇ ನೆಪ್ಪು
ಸಂಸಾರ ದೂರ ಬಿನದವೇ ನೇರ
ಇನ್ನು ನಮಗೀ ಗಾನಕೆ – ಬೇಗ ಬಾ ಸಖಿ -
(ಹಾಡಿಕೊಂಡು ಹೋಗುತ್ತಾರೆ.)
(ಗೋಪಾಲಕರ ಗುಂಪು ಹಾಡಿಕೊಂಡು ಬರುತ್ತದೆ.)
ಕೊಳಲ ಗಾನಕ್ಕೆ ಮನಸೋತ ಗೋಪಿಯರು ಹಾಡಿಕೊಂಡು ಒಬ್ಬರನ್ನೊಬ್ಬರು ಕರೆಯುತ್ತ ಬರುತ್ತಾರೆ. ಆ ಕೊಳಲಿನ ಗಾನಕ್ಕೆ ಯಮುನೆಯ ತೆರೆಗಳು ತಾಳ ಹಾಕುತ್ತಿವೆ. ತರುಲತೆಗಳು ನರ್ತನ ಮಾಡುತ್ತಿವೆ. ಗಾಳಿಯು ತಂಪಾಗಿ ಬೀಸುತ್ತಿದೆ.
ಕತ್ತಲನ್ನು ವಂಚಿಸಿ ಚಂದ್ರ ಹೊರಬಂದಿದ್ದಾನೆ. ಭೂಮಿ ರಸಭರಿತವಾಗಿದೆ. ಮಧುರ ಮುರಳಿಯ ಗಾನಕ್ಕೆ ಎಲ್ಲವೂ ರಸಮಯ. ಮನೆಯಲ್ಲಿ ಹಿರಿಯರನ್ನೆಲ್ಲ ನಿದ್ರೆ ಮುಸುಕಿದೆ. ಕಾರ್ಮುಗಿಲು ಆಕಾಶವನ್ನು ಕವಿಯುವಂತೆ ನಿದ್ರೆ ಅವರನ್ನು ಆವರಿಸಿದೆ. ಆದ್ದರಿಂದ ನಾವು ಜಡತ್ವವನ್ನು ಕಳೆದು ಹಗುರಾಗಿದ್ದೇವೆ. ಹಗಲು ತನ್ನ ಸಾರವನ್ನು ಕಳೆದಂತೆ ಇರುಳು ತನ್ನ ಭಾರವನ್ನು ಕಳೆದಿದೆ. ಜನ ತಮ್ಮ ಅಭ್ಯಾಸವನ್ನು ಮರೆತು ಮುರಳಿಯ ಗಾನಕ್ಕೆ ವಶರಾಗಿದ್ದಾರೆ.
ಇಲ್ಲಿ ನನ್ನದು ತನ್ನದು ಎಂಬ ಬೇಧಗಳಿಲ್ಲ. ಕೊಳಲಗಾನವೊಂದೇ ಸತ್ಯ. ಸಂಸಾರ ದೂರವಾಯಿತು. ಗಾನ ಹತ್ತಿರವಾಯಿತು. ನಮ್ಮ ಮನಕ್ಕೆ ಬೇರೇನೂ ಬೇಡ. ಬೇಗ ಬಾ ಸಖಿ ಎಂದು ಗೋಪಿಕಾಸ್ತ್ರೀಯರು ಹಾಡಿಕೊಂಡು ಬರುತ್ತಾರೆ.
ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು