ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಕುಲ ನಿರ್ಗಮನ 10


 ಗೋಕುಲ ನಿರ್ಗಮನ 10

(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)

ಬಲರಾಮ

ಪ್ರಲಂಬನಹಹಾ ನೆನೆದೊಡೆ ಸಾಕು 
ಬಗೆ ಮುದದಿಂ ಕುಣಿವುದು ಥಕಥಾಕು - 
ನಾನೂ ನಿಮ್ಮಂತೆಂದಾ ವೈರಿ 
ನೇಹವ ತೋರಿ ಜತೆಯಂ ಸೇರಿ 
ಆಟದಿ ಬೆರತು ಬೂಟಕೆ ಸೋತು 
ಬೆನ್ನನೇರೆ ನಾಗೋಣಿಗೆ ಜೋತು ದೂರಕೊಯ್ದು ಕಡುವೇಗದಿ ದುರಳಂ 
ಕೊಲ್ಲಲೆಳಸೆ ಮರೆತೆನ್ನಯ ಹುರುಳಂ
ತೊಡೆಯೊಳವುಕಿ ಕೊರಲ ಹಿಸುಕಿ ಕೈಯಿಂ ನೆತ್ತಿಯೊಡೆಯೆ ಗುದ್ದಿ ಗುದ್ದಿ ಬಾಯಿಂ 
ರಕ್ತದ ರಸ ಹಿಳಿಯೇ ದಮ್ಮಳಿಯೇ ಹಾಹಾರವವೇಳೆ ತನು ಬೀಳೆ 
ಬಿದ್ದನುಘೇ ಹೋ ಎನೆ ಜನ ಸುತ್ತ
ಪ್ರಲಂಗಿಳೆಯಾಲಿಂಗನವಿತ್ತ 
ಕುಣಿಯಲುಬೇಕಾ ಕುಣಿತವ.

ಕೃಷ್ಣ
ರಾಗ – ಸಿಂಹೇಂದ್ರಮಧ್ಯಮ -
ವಿಷಾದಮಾಯ್ತಗ್ರಜ ಬೀಳೆ ರಕ್ಕಸಂ ಪ್ರತಾಪವಂತಂ ಕೆಳೆಗೀತ ತಕ್ಕವಂ 
ಅಕಾರಣಂ ದ್ವೇಷಮದೇಕೆ ಲೋಗರೊಳ್ ಅಕಾರಣಂ ನೇಹಮಿದಲ್ತೆ ಸೋಜಿಗಂ

ರಾಗ ತೋಡಿ

ಸ್ನೇಹಾಭಿಲಾಷಿ ಹೃದಯಂ ಜ್ವಲಿತಾರ್ಚಿಯಂದಂ 
ಚೇತೋಭಿಗಾಮಿ ಸಕಲಾತ್ಮರಸಪ್ರವೃದ್ಧಂ ಆನಂದಪಾವಕಸುದೀಪ್ತಮಿದಕ್ಕೆ ಸಲ್ಲು- ತ್ತುದ್ದೀಪ್ತಿಯಂ ಸೊಗೆಯನೈದುವರೈದುವಂದಂ

ಬಲರಾಮ
ರಾಗ - ಬೇಗಡೆ
ಒಲಿದವರೊಲಿಯಲಿ ಹಗೆತನ _ ಕೆಳಸುವರೆಳಸಲಿ ಮದಾಂಧರವರವರರಿವೋಲ್ ಇಳೆಯೊಳಗೇಪರಿಯಾಗಲಿ
ಬೆಲೆಕೊಡದವರಿಲ್ಲವೆಮಗೆ ಎಂದಾನರಿವೆಂ
ಕುತ್ತಗಳಾರೋಗ್ಯಕ್ಕಾ_
ಪತ್ತುಗಳೈಶ್ವರ್ಯಜೀವಿತಕ್ಕರಿ ಮೈತ್ರ_
ಕ್ಕೌತ್ತಮ್ಯಕ್ಕಮಧಮರ್ ತಾ_
ವುತ್ತೇಜನವೀವರಂತೆ ಸತ್ತ್ವೋನ್ನತಿಯಂ

ಕೃಷ್ಣ
ರಾಗ - ನಾದನಾಮಕ್ರಿಯ
ನಾನೊಲಿವೆಂ ನಿಮ್ಮವನೈ 
ಏನುವನಾಂ ಬೇಡೆನಯ್ಯ ನೀಡುವೆನೆನ್ನಂ ಗಾನದಿ ಸಾರುವೆನಿದನಾಂ
ಜಾಣಿಂ ಕಿವಿಗೊಡುವ ಲೇಸು ಎಲ್ಲರಿಗಿಲ್ಲಂ

ಬಲರಾಮ
ರಾಗ: ಮಾಂಡ್
ಉಪ್ಪಿಗೆ ಪಾಲ್ ಮುನಿವುದು 
ಸಕ್ಕರೆಗದು ಒಲಿವುದು 
ಮನಮನದೊಲು ಬೆರೆವ ಗುಣ 
ಬಲ್ಲವರಾರೀ ಹದನ

ಕೃಷ್ಣ
ಹಾಡು : ರಾಗ ಕಾಪಿ
ಒಲುಮೆ ಹಗೆ ಎಂಥ ಬಗೆ 
ಇದನೆನಗೆ ಪೇಳ್ವರಾ‌ರ್
 ಇದನೆನಗೆ ಪೇಳ್ವರಾ‌ರ್
 ಅರಿಯಲು ಹೂ ಬಲುಸರಳ 
ಬಲ್ಲೆವೆ ಮುಳ್ಳಿನ ಹುರುಳ 
ಒಂದೆ ತೊಟ್ಟು ಎರಡು ಹುಟ್ಟು
ಎಂಥ ಬಗೆ ಇದನೆನಗೆ
ಪೇಳ್ವರಾ‌ರ್-  ಒಲುಮೆ ಹಗೆ 
ಮೋಡದ ಕರುಳೊಳು ಕೂರ್ಪು
ಅಂಚೊಳಿಹುದು ಸಿಡಿಲಾರ್ಪು
ಒಂದೆ ಇರವು ಎರಡು ತೆರವು
ಎಂಥ ಬಗೆ ಇದನೆನಗೆ
ಪೇಳ್ವರಾ‌ರ್_ ಒಲುಮೆ ಹಗೆ
( ಹೀಗೆ ಕುಣಿಯುತ್ತಿರುವಾಗ ಶ್ರೀದಾಮನೆಂಬ ಮಿತ್ರನೊಬ್ಬ ಈ ಕುಣಿತಕ್ಕೆ ತನ್ಬೊಂದು ನುಡಿಯೊಡನೆ ಬಂದು ಸೇರಿಕೊಳ್ಳುತ್ತಾನೆ )

ಶ್ರೀದಾಮ
ನಗೆಯೊಳಗೇನಿದೆ ತೊಡಕು 
ಸರಳವೆ ಹುಬ್ಬಿನ ಸೆಡಕು 
ಒಂದೆ ಪ್ರೀತಿ ಎರಡು ರೀತಿ 
ಎಂಥ ಬಗೆ ಇದನೆನಗೆ 
ಪೇಳ್ವರಾ‌ರ್ ಒಲುಮೆ ಹಗೆ

ಮೂವರೂ
ಒಂದೇ ಪ್ರೀತಿ ಎರಡು ರೀತಿ 
ಎಂಥ ಬಗೆ ಇದನೆಮಗೆ
ಪೇಳ್ವರಾ‌ರ್ ಪೇಳ್ವರಾ‌ರ್
ಪೇಳ್ವರಾ‌ರ್ - ಒಲುಮೆ ಹಗೆ

ಬಲರಾಮ
ಪೋ ಪೋ ಪೋ ಪೇಳುವ‌
ಪೇಳುವರ್ 
ಕಣ್ಣೊಳು ನಿನ್ನಾಳುವವ‌ರ್

ಕೃಷ್ಣ
ಬಾ ಬಾ ಬಾ ನೀನೂ ಬಾ
ನನಗೆ ಹರೆಯ ಮೋದು ಬಾ 
ಶ್ರೀದಾಮ
ಬನ್ನಿ - ಕೃಷ್ಣ ಬೇಗ ಬಾ 

ಬಲರಾಮ

ಶ್ರೀದಾಮ

ಪೋ ಪೋ ಪೋ ಪೋಗು ನೀ 
ಕಾದಿರುವರು ಕಾಮಿನೀ 
ಹೆಣ್ಣ ಹಂಬಲೆನಗಿಲ್ಲ 
ನಾಚುವರೆನ್ನಿದಿರೆಲ್ಲ 
ಗಂಡುಕೂಡೆ ನನ್ನಾಟ 
ನಿನಗಿರಲೈ ಈ ಬೇಟ
ಕೃಷ್ಣಾ ಪೋಗು ನೀ
 ( ಬಲರಾಮ ಹೋಗುತ್ತಾನೆ )

ಕೃಷ್ಣ
( ಶ್ರೀದಾಮನಿಗೆ )
ಎನ್ನ ಚೆನ್ನೆ ಬಂದಿಹಳೆ?

ಶ್ರೀದಾಮ
(ಕೊಂಕಿನ ಸಂದೆಗದಿಂದ)
ಕಂಡೆನೆ ನಾ _ಬಂದಿಹಳೆ

ಕೃಷ್ಣ
ಪೋ ಪೋ ಪೋ ಪೋ ಪೋರ

ಶ್ರೀದಾಮ
(ಹೆಣ್ಣ ಹಾಗೆ ಅಭಿನಯಿಸುತ್ತಾ) 
ಬಾ ಬಾ ಬಾ ಬಾ ನೀರ
(ಎಂದು ಮರೆಯಾಗುತ್ತಾನೆ.)

ಕೃಷ್ಣ
ಥಳಿಸುವ ಪ್ರೇಮದ ಮಿಂಚೊಳಗಾಗಿರೆ
ಮೋಹರಿಸುವ ಮೋಹದ ಮನದಿಂ ಬಿರುವೆಲರನು ಕರಿಮೋಡದ ತೆರದೊಳು
ಹಿಂಬಾಲಿಪೆನೀತನ ಜವದಿಂ

(ಹೊರಡುವನು.
***********
ಬಲರಾಮ ಕೃಷ್ಣನೊಂದಿಗೆ ಹಿಂದೆ ನಡೆದ ಸಂಗತಿಗಳನ್ನು ನೆನಪಿಸಿಕೊಳ್ಳುತ್ತಾನೆ. ಪ್ರಲಂಬನನೆಂಬ ರಕ್ಕಸ ಇವನನ್ನು ದೂರಕ್ಕೆ ಕರೆದೊಯ್ದು ಕೊಲ್ಲಲು ಮಾಡಿದ ಸಂಚನ್ನು ಅದನ್ನು ಕೃಷ್ಣ ತಡೆದದ್ದನ್ನು ಹೇಳುವನು. ಪ್ರಲಂಬನನನ್ನು ಭೂಮಿಗೆ ಬೀಳಿಸಿದ್ದನ್ನು ನೆನಪಿಸಿಕೊಂಡು ಕುಣಿಯುವನು.

ಕೃಷ್ಣ ಅದರ ಬಗ್ಗೆ ಹೇಳುವ ಮಾತುಗಳು ಅತ್ಯಂತ ಹಿರಿಮೆಯಿಂದ ಕೂಡಿವೆ. ಅವನು ರಕ್ಕಸನಾಗಿದ್ದರೂ ಪ್ರತಾಪವಂತನಾಗಿದ್ದನು. ಗೆಳೆಯನಾಗಿರಬಹುದಿತ್ತು. ಅಕಾರಣವಾಗಿ ತಮ್ಮೊಂದಿಗೆ ದ್ವೇಷವನ್ನು ಸಾಧಿಸಿದನು ಯಾಕೋ ಗೊತ್ತಿಲ್ಲ ಎನ್ನುವನು. ಅಕ್ರೂರನ ಬಗ್ಗೆ ಸ್ನೇಹ ಭಾವ ಮೂಡಿದೆ.

ಅಕ್ರೂರನು ಸ್ನೇಹಾಭಿಲಾಷಿ. ಸರ್ವರ ಅತ್ಮದಲ್ಲಿ ಜ್ವಲಿಸುವ ಬೆಂಕಿಯಂತೆ ಚೈತನ್ಯರೂಪಿ. ಆನಂದದ ಬೆಂಕಿಗೆ ದೀಪ್ತಿಯಾದವನು. ಇದನ್ನು ಯಾರೂ ಆರಿಸಲಾರರು.

ಒಲಿದವರು ಒಲಿಯಲಿ. ದ್ವೇಷಿಸುವವರು ದ್ವೇಷಿಸಲಿ. ಇಳೆಯಲ್ಲಿ ಏನೇ ಆಗಲಿ. ಬೆಲೆ ಕೊಡುವವರು ಇಲ್ಲವೆಂದು ನಾನು ಬಲ್ಲೆ. ಆರೋಗ್ಯಕ್ಕೆ ಕುತ್ತುಗಳೇ ಅಪತ್ತುಗಳು. ಜೀವಿತಕ್ಕೆ ಐಶ್ವರ್ಯವೇ ಶತ್ರು. ಮೈತ್ರಿಗೆ ಉತ್ತಮತೆಯೇ ಸರಿ. ಅಧಮರು ಉತ್ತೇಜನವನ್ನು ನೀಡುವರು. ಮೈತ್ರಿ ಹೆಚ್ಚುವುದು.

ನಾನು ಒಲಿದರೆ ನಿಮ್ಮವನು. ನಾನೇನೂ ಬೇಡುವವನಲ್ಲ.ನನ್ನನ್ನೇ ನಾನು ನೀಡುವವನು. ಈ ಕೊಳಲ ಗಾನದಿಂದ ಇದನ್ನು ಸಾರುವೆನು. ಜಾಣತನದಿಂದ ಎಲ್ಲರೂ ಕಿವಿಗೊಟ್ಟರೆ ಒಳ್ಳೆಯದು
ಆಗ ಬಲರಾಮನು ಉಪ್ಪಿಗೆ ಹಾಲು ಸೇರದು. ಆದರೆ ಸಕ್ಕರೆಗೆ ಅದು ಒಲಿಯುವುದು. ಮನಮನಗಳು ಬೆರೆತು ಅರಿತು ಒಂದಾಗುವುದನ್ನು ಯಾರೂ ಅರಿಯರು.

ಒಲುಮೆಯಾಗಲೀ, ಹಗೆಯಾಗಲೀ ಇದನ್ನು ಅರಿಯುವ ಬಗೆಯನ್ನು ಹೇಳುವವರಾರು? ನೋಡಲು ಹೂವು ಬಲು ಸುಂದರ ಸರಳ. ಆದರೆ ಅದರ ಸುತ್ತ ಇರುವ ಮುಳ್ಳುಗಳಿವೆಯಲ್ಲ. ಒಂದೆ ತೊಟ್ಟಿನಲ್ಲಿ ಹೂವು ಮತ್ತು ಮುಳ್ಳುಗಳಿರುವುದರ ಬಗೆ ನನಗೆ ಹೇಳುವವರಾರು? ಮೋಡದಲ್ಲಿರುವ ಮಿಂಚಿನಂತೆ ಒಲುಮೆಯಲ್ಲಿಯೂ ಹಗೆಯಿದೆ. ಹಗೆಯಲ್ಲಿಯೂ ಒಲುಮೆಯಿದೆ. ಇದನರಿತು ಹೇಳುವವರಾರು? 
 
(ಹೀಗೆ ಇವರಿಬ್ಬರೂ ಕುಣಿಯುತ್ತಿರುವಾಗ ಶ್ರೀದಾಮನೆಂಬ ಮಿತ್ರನು ಈ ಕುಣಿತಕ್ಕೆ ತನ್ನ ಒಂದು ಮಾತನ್ನು ಹೇಳುತ್ತಾ ಬರುತ್ತಾನೆ. )

ಶ್ರೀದಾಮನು ನಗೆಯನ್ನೇ ಉತ್ತೇಜಿಸುವನು. ಅದರಲ್ಲಿ ಯಾವುದೇ ತೊಡಕಿಲ್ಲ ಎನ್ನುವನು.ಮೂವರೂ ಒಟ್ಟಿಗೇ ಹಾಡುವರು. ಬಲರಾಮನು ಕೃಷ್ಣನಿಗೆ ಹಾಸ್ಯ ಮಾಡುವನು. ನಿನ್ನನ್ನು ಕಣ್ಣಲ್ಲಿಯೇ ಆಳುವವರು ಹೇಳುವರು ಹೋಗು ಎಂದು ಹೇಳುವನು ಕೃಷ್ಣನು ನೀನೂ ಬಾ ಎನ್ನುವನು.  ಅದಕ್ಕೆ ಬಲರಾಮನು ನನಗೆ ಹೆಣ್ಣಿನ ಹಂಬಲವಿಲ್ಲ. ನಾನಿದ್ದರೆ ಅವರುಗಳು ನಾಚುವರು. ನನಗೇನಿದ್ದರೂ ಗಂಡುಗಳೊಡನೆ ಆಟ ಎಂದು ಹೇಳಿ ಅವನು ಹೊರಡುವನು. 
ಕೃಷ್ಣ ಶ್ರೀದಾಮನನ್ನು ನನ್ನ ಚೆನ್ನೆ ಬಂದಿಹಳೆ ಎಂದು ರಾಧೆಯ ಬಗ್ಗೆ ವಿಚಾರಿಸುವನು. ಶ್ರೀದಾಮ ಅಣಕಿಸುವನು. ಕೃಷ್ಣನು ಹುಸಿಮುನಿಸಿನಿಂದ ಅವನನ್ನು ಹೋಗು ಎಂದರೆ ಅದಕ್ಕೆ ಉತ್ತರವಾಗಿ ಹೆಣ್ಣಿನಂತೆ ಬಾ ಎನ್ನುವನು ಶ್ರೀದಾಮ. ಕೃಷ್ಣನು ಒಲುಮೆಯ ಹೆಣ್ಣನ್ನು ಕಾಣುವ ತವಕದಲ್ಲಿ ಹೊರಡುವನು.

ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ