ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಕುಲ ನಿರ್ಗಮನ 9


 ಗೋಕುಲ ನಿರ್ಗಮನ 9

(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)

(ಕೃಷ್ಣ ಮುಂದೆ ರಾಮ ಹಿಂದೆ ಪ್ರವೇಶಿಸುತ್ತಾರೆ, ಗೋಪಬೃಂದ ಹೋದ ಇದಿರು ದಿಕ್ಕಿನಿಂದ)

ಎನ್ನೀ ಕೊಳಲಿದು ಕಾಡಿನ ಬಿದಿರು 
ಈ ಹುಲುಕಡ್ಡಿಗೆ ಎನಿತೋ ಚದುರು | 
ಇವರಿಂ ನಾನಪ್ಪೆನು ನಾದಮಯ 
ಈ ಬೃಂದಾವನ ಆನಂದಮಯ ಎನ್ನಿನಿತಾಸೆಗಳಿದರೊಳು ತೂರಿ 
ನಾದದ ವೇಷದಿ ಕಿವಿಬಳಿ ತೋರಿ 
ಮರಳಿ ಎದೆಗೈದೆ ಎನಿತಾಹ್ಲಾದ 
ಬಯಕೆಯೇ ಸಲಿಕೆಯಪ್ಪ ವಿನೋದ ಪ್ರಾಣತರಂಗಿತ ನಾದತರಂಗ 
ನಾದತರಂಗಿತ ಪ್ರಾಣತರಂಗ 
ನನಗೂ ನನ್ನಾಹ್ಲಾದಕು ನಡುವೆ 
ಇಹುದೀ ಚದುರಿನ ಬಿದಿರಿನ ಕೊಳವೆ ಎನಗೆನ್ನಾನಂದದ ಬಳಿತೋರೆ 
ಸಹೃದಯವೀ ಜಗವೆಂಬುದ ಸಾರೆ

ಬಲರಾಮ
ಮೂಲೋಕವ ಗೆಲೆ ಸಾಕೀ ಸಾಧನ ಎನ್ನಿಪುದೆನಗೀ ವೇಣುವಾದನ

ಕೃಷ್ಣ

ಮಗುವಳುತ್ತಲೂ ತಾಯ ಗೆಲುವುದು ಏನಚ್ಚರಿ ನಾ ನಿಮ್ಮ ಗೆಲುವುದು ಕೇಶಿಯನಿದಿರಿಸೆ ಕೊಳಲಿದು ಸಾಕೆ ಕೇಡುಗರಿದಿರೊಳು ಹಾಡ ಪರಾಕೆ
ಬಲರಾಮ

ದಿಟ ದಿಟ-ಅನುಜ ಧೇನುಕನೆಲ್ಲಿ
ನಿನ್ನೀ ತೆಳ್ಳನೆ ಬಿದಿರುಲಿವೆಲ್ಲಿ
ಕೃಷ್ಣ

ಒಳ್ಳೆಯ ನೆಲೆಗೆ ಹಾಡಿನ ದಾನ 
ವೈರರುಜೆಗೆ ತೋಳ್ವಲವನುಪಾನ 
ಮದಿಸಿದ್ದಾ ಕಾಳಿಂಗನ ಮಣಿಸೆ 
ಕಾಲಿನ ತಾಳಕೆ ಹೆಡೆಗಳ ಕುಣಿಸೆ

(ತಟಕ್ಕನೆ ಕುಣಿಯುತ್ತಾನೆ.)
ರಾಗ – ಹಂಸಧ್ವನಿ 

ಕುಣಿಯಲು ಬೇಕೀ ಕುಣಿತವ 
ತಲ್ಲಣಿಸಲು ಜನ ಏಗತಿ ಎನುತ 
ರಂಬೆಯೇರಿ ನಾ ದಿಗಿಲಂ ನಗುತ 
ಧುಮುಕಿ ತಲಕೆ ಕಲಕಿ ಮಡುವ ಪದಾ- ಘಾತದಿಂದ ಸುಳಿಗಳ ಬಿಲವಾದಾ 
ಹುತ್ತದಲ್ಲಿ ಕಾಳಿಂಗಸರ್ಪವಂ 
ತುಡುಕಿ ಹೊಯ್ದಾಡಿ ಅವನ ದರ್ಪವಂ ಮುರಿದು ವಿಷಕಾರ ಮನಕೆ ಭಯವೂರೆ ಬಳಿಯ ಸತಿಯೂಳೆ ಹೆಡೆಯೇಳು ಜೋಲೆ ಶರಣು ಶರಣು ಗೆಲು ಗೆಲ್ಲು ಭಾಮರೇ 
ಎಂಬ ಸೊಲ್ಲಿಗೆದೆ ಮುದದಿ ಮದಿಸಿರೇ ಕುಣಿಯಲು ಬೇಕಾ ಕುಣಿತವ 

**********
ಕೃಷ್ಣನಿಗೆ ತನ್ನ ಕೊಳಲಿನ ಬಗ್ಗೆ ವಿಸ್ಮಯ. ಈ ಬಿದಿರಿನ ಕೊಳವೆ ಹೊರಡಿಸುವ ಸದ್ದಿಗೆ ಅಷ್ಟೊಂದು ಜನರು ಆನಂದಪಡುವರಲ್ಲಾ ಎಂದು. ನನ್ನ ಎಷ್ಟೋ ಆಸೆಗಳು ಇದರಲ್ಲಿ ತೂರಿ ಸ್ವರಗಳಾಗಿ ಹೊರಬರುತ್ತವೆ. ನಾದವಾಗಿ ಕಿವಿಯ ಬಳಿ ಸಾರಿ ಮತ್ತೆ ಹೃದಯವನ್ನು ಮುಟ್ಟುತ್ತವೆಯೆಂದು ಅಚ್ಚರಿಪಡುತ್ತಾನೆ.

ಪ್ರಾಣದ ತರಂಗಕ್ಕೂ ನಾದದ ತರಂಗಕ್ಕೂ ವ್ಯತ್ಯಾಸವಿಲ್ಲ. ನನಗೂ ಮತ್ತು ನನ್ನ ಆಹ್ಲಾದಕ್ಕೂ ನಡುವಿನ ಸೇತುವೆಯಂತೆ ಇದೆ ಈ ಬಿದಿರಿನ ಕೊಳವೆ. 

ಆಗ ಬಲರಾಮನು ಮೂರುಲೋಕಗಳನ್ನೂ ಗೆಲ್ಲಬಲ್ಲದು ಈ ನಿನ್ನ ವೇಣುವಾದನ ಎಂದು ಮೆಚ್ಚುತ್ತಾನೆ.

ಆಗ ಕೃಷ್ಣ ಮಗುವು ಅಳುತ್ತಲೇ ತಾಯನ್ನು ಗೆಲುವುದು. ಆ ಕೇಶಿ, ಧೇನುಕರಂತಹ ರಕ್ಕಸರನ್ನು ಎದುರಿಸಲು ಈ ಕೊಳಲು ಸಾಕೆ ಎಂದು ಸಂದೇಹ ವ್ಯಕ್ತಪಡಿಸುವನು. ಅದನ್ನು ಬಲರಾಮನೂ ಸರಿಯೆನ್ನುವನು. ಆ ರಕ್ಕಸರೆಲ್ಲಿ..ಈ ಬಿದಿರಿನ ಸ್ವರವೆಲ್ಲಿ? ಎಂದು ಅನುಮಾನ.

ಕೃಷ್ಣ ಮತ್ತೆ ಧೈರ್ಯ ಹೇಳುವನು. ಒಲುಮೆಗೆ, ನಲುಮೆಗೆ ಈ ಗಾನವಾದರೆ ವೈರಿಗಳನ್ನು ನಿಗ್ರಹಿಸಲು ಬಾಹುಬಲವಿದೆ. ಈ ಹಿಂದೆ ಮದಿಸಿದ ಕಾಳಿಂಗನನ್ನು ಕಾಲುಗಳಿಂದ ತುಳಿದು ಮಣಿಸಿದ್ದನ್ನು ನೆನೆಯುವನು. ಆ ನೆನಪಿನಲ್ಲಿ ಕುಣಿಯುವನು.

ಆ  ಕಾಳಿಂಗಮರ್ದನದ ನೆನಪು ಮೂಡುವುದು. ಯಮುನೆಯಲ್ಲಿ ಕಾಳಿಂಗನ ಕಾಟಕ್ಕೆ ಜನರೆಲ್ಲ ಬೆದರಿರಲು ತಾನು ಧುಡುಮ್ಮನೆ ಧುಮುಕಿ ತಳಕ್ಕಿಳಿದು ಬಿಲದಲ್ಲಿ ಅಡಗಿದ್ದ ಕಾಳಿಂಗನನ್ನು ಹಿಡಿದೆಳೆದು ತುಳಿದ ನೆನಪನ್ನು ಕುರಿತು ಹೇಳುವನು. ಕಾಳಿಂಗನು ಭಯದಿಂದ ವಿಷವನ್ನು ಕಾರಿದ್ದು, ಅವನ ದರ್ಪವನ್ನು ಮುರಿದದ್ದು, ಅವನ ಸತಿಯು ತನ್ನನ್ನು ಪ್ರಾರ್ಥಿಸಿದ್ದು, ಎಲ್ಲರೂ ಭಲೆ, ಭಲೆ ಎಂದು ಕೊಂಡಾಡಿದ್ದು...ಎಲ್ಲ ನೆನಪಾಗುವುದು. ಆಹಾ ಆ ಕುಣಿತವನ್ಬು ಕುಣಿಯಬೇಕು ಎನ್ನುವನು ಕೃಷ್ಣ.

ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ