ಗೋಕುಲ ನಿರ್ಗಮನ 12
ಗೋಕುಲ ನಿರ್ಗಮನ 12
(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)
ಅಕ್ರೂರ
(ಕಾಣಿಸಿಕೊಂಡು)
ನೂರು ಬಣ್ಣದ ಹೊಳಪನೊಳಗಾಂತು ಇದರ ತೆರ-
ವಿಂಥದೆನೆ ಮತ್ತೊಂದು ಢಾಳಿನಿಂದ
ಕಂಗಳನು ಕೋರೈಸುವಚ್ಚರಿಯ ಹೀರದಂ-
ತಿವನ ಬಗೆಗೆನ್ನ ಬಗೆಯಚ್ಚರಿಪುದು
ರಾಗ - ಹಿಂದೋಳ
ಕೃಷ್ಣೋಜ್ವಲಂ ಕೃಷ್ಣನಮೇಯಮಾನಸಂ ಲೋಕಪ್ರಿಯಂ ಧೀರನನಾತ್ಮ ಬಾಧಕಂ ಸದ್ಭಾವಸಂಪುಷ್ಟನನಿಂದ್ಯನೀತನಂ
ಬಾನಿಂದ ಭಾಗೀರಥಿಯಂದಮೊಯ್ವೆ ನಾಂ
ರಾಗ – ರಾಮಪ್ರಿಯ
ಗೋಕುಲದಾಟಕ್ಕೆ ಕುಣಿತದ ಕೂಟಕ
ಹೆಂಗಳ ನೋಟಕೆ ಒಲಿದೀತಂ
ಮಧುರೆಗೆ ಬಾ ಎನೆ ದೊರೆಯಾಣತಿಯಿಂ
ಧಿಕ್ಕರಿಸುತ ನಗಲೇಗೆಯ್ವೆಂ ಸರಳನಮಿತೋತ್ಸಾಹಿ ರಾಮಂ
ಮೊದಲು ಕಾಣುವೆನಾತನಂ
ಬಿಲ್ಲಹಬ್ಬವ ಬಣ್ಣಿಸುವೆ ನಾ
ಹುರುಮಗೊಳಿಸುವ ಮಾತಿನಿಂ
(ಹೊರಡುವನು. ಒಳತೆರೆ ಬೀಳುತ್ತದೆ.)
**********
ಇತ್ತ ಅಕ್ರೂರನು ಕೃಷ್ಣನ ಬಗೆಯನ್ನು ಕಂಡು ಆಶ್ಚರ್ಯಪಡುವನು.ಕಂಗಳನ್ನು ಕೋರೈಸುವ, ಅಚ್ಚರಿಯ ಹೀರುವಂತಿರುವ ಇವನ ಬಗೆ ತಿಳಿಯುವುದೆಂತು ಎಂದು ಚಿಂತಿಸುವನು.
ಕೃಷ್ಣವರ್ಣದ ಉಜ್ವಲನನ್ನು, ಅಮೇಯನನ್ಬು, ಲೋಕಕ್ಕೆ ಪ್ರಿಯನಾದವನನ್ನು, ಧೀರನನ್ನು, ಅನಾತ್ಮಬಾಧಕನನ್ನು, ಸದ್ಭಾವ ಸಂಪುಷ್ಟನನ್ನು, ಅನಿಂದ್ಯನಾದ ಈತನನ್ನು ಆಗಸದಿಂದ ಭಾಗೀರಥಿ ಇಳಿದಂತೆ ಇಲ್ಲಿಂದ ಮಧುರಾ ನಗರಕ್ಕೆ ಒಯ್ಯುವೆನು.
ಆದರೆ ಇವನು ಇಲ್ಲಿ ಆಟ, ಕೂಟ, ಕುಣಿತ, ಹೆಣ್ಣುಗಳ ನೋಟಕ್ಕೆ ಒಲಿದಿರುವವನು. ಮಧುರೆಗೆ ಬಾ ಎಂದರೆ ದೊರೆಯಾಣತಿಯನ್ನು ಧಿಕ್ಕರಿಸುತ್ತ ನಕ್ಕು ಬಿಟ್ಟರೆ ಏನು ಮಾಡುವುದು? ಆದುದರಿಂದ ಸರಳನೂ, ಸಂಪನ್ನನೂ, ಉತ್ಸಾಹಿಯೂ ಆದ ಬಲರಾಮನನ್ನು ಮೊದಲು ಕಾಣುವೆನು. ಅವನಿಗೆ ಬಿಲ್ಲಹಬ್ನವನ್ನು ವರ್ಣಿಸುವೆನು. ಅವನನ್ನು ಹುರುಪುಗೊಳಿಸುವೆನು ಎಂದುಕೊಂಡು ಹೊರಡುವನು.
ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು