ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಕುಲ ನಿರ್ಗಮನ 13


 ಗೋಕುಲ ನಿರ್ಗಮನ 13

(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)

ವೇಣು ವಿಸರ್ಜನ 
(ಕವಿ ಪ್ರವೇಶಿಸಿ ಹಾಡುತ್ತಾನೆ.)
ಹಾಡು : ರಾಗ - ನಾಟಿ 

ಶರಣೆನುವೆಂ ಶರಣೆನುವೆಂ
ಬೃಂದಾವನಚರಚರಣಕೆ ನಾಂ 
ಮುಗಿಲೊಳು ಮರೆದಿರೆ ಸುಂದರವದನವು.
ಮಂದಸ್ಮಿತವೆಳಮಿಂಚಿನೊಳು 
ದೆಸೆಯೊಳು ತನು ತಾರಗೆಯೊಳು ಮುಕ್ತಾ –
ಹಾರಸುಮಾವಳಿ ಬೆರೆದಿರಲು
ಮನದ ನೆಲದಿ ಚಂಚಲಿಸುತ ಚಲಚಲ ಘಲುಘಲ್ಲೆನುವೀ ಚರಣಕೆ ನಾಂ
ಶರಣೆನುವೆಂ ಶರಣೆನುವೆಂ ಬೃಂದಾವನಚರಚರಣಕೆ ನಾಂ

ಮುಡಿಯ ನವಿಲುಗರಿ ಚಂದ್ರಮಗಾಗಿರೆ
ಶುಕ್ಲಾಂಬರ ಜೊನ್ನಕೆ ಸಲಲು
ಇರುಳ ಮೌನದೊಳು ಹೊಳೆಬನಗಾಳಿಯ ಬಗೆಬಗೆ ದನಿಯೊಳು ನಿಲೆ ಕೊಳಲು
ಮನದಿ ಮಾತ್ರ ಸ್ಪುಟವಾಗುತ ಪುಟಪುಟ ಪುಟಿದು ಕುಣಿಯುವೀ ಚರಣಕೆ ನಾಂ
ಶರಣೆನುವೆಂ ಶರಣೆನುವೆಂ ಬೃಂದಾವನಚರಚರಣಕೆ ನಾಂ

ಸೊರಗಲು ಮನ ಜಡವಾಗಲು ತನು ಪದ
ಘಾತಕ ಎದೆ ಮೃದುವಾಗುತಿರೆ 
ಮುದವು ಹಿಳಿದು ಮಡುವಾಗಿರೆ ಬಾಳೊಳು
ನಾನಾ ಎಂಬಲೆಯಳಿಯುತಿರೆ 
ಮೆಲ್ಲೆಲರೊಳು ಸರಸೀರುಹದಂದದಿ
ಧ್ಯಾನದಿ ಚಲಿಸುವ ಚರಣಕೆ ನಾಂ
ಶರಣೆನುವೆಂ ಶರಣೆನುವೆಂ
ಬೃಂದಾವನಚರಚರಣಕೆ ನಾಂ [ಮರೆಯಾಗುತ್ತಾನೆ.]

(ತೆರೆ ಎದ್ದು ರಾಧೆಯನ್ನೂ ಸಖಿ ನಾಗವೇಣಿಯನ್ನೂ ತೋರುತ್ತದೆ.)
************

ಮತ್ತೆ ಇಲ್ಲಿ ಕವಿಯ ಮಾತುಗಳು ಬಂದಿವೆ. ಬೃಂದಾವನದಲ್ಲಿ ಚಲಿಸುತ್ತಿರುವ ಹರಿಯ  ಚರಣಗಳಿಗೆ ಶರಣೆನ್ನುವನು. ಶ್ರೀ ಹರಿಯ ಸುಂದರವಾದ ವದನವು ಮುಗಿಲಿನಂತೆ ಮೆರೆದಿದೆ. ಮಂದಸ್ಮಿತವದನ.ಎಳೆಯ ಮಿಂಚಿನಂತಹ ನಗು. ತನುವಿನಲ್ಲಿ ಮುತ್ತಿನ ಹಾರಗಳು. ಘಲುಘಲಿರೆನ್ನುವ ಗೆಜ್ಜೆಗಳನ್ನು ಹೊಂದಿರುವ ಚರಣಗಳಿಗೆ ಶರಣೆನ್ನುವೆ ಎನ್ನುವನು.

ಮುಡಿಯಲ್ಲಿ ನವಿಲುಗರಿಯು ಚಂದ್ರನಂತೆ ಶೋಭಿತವಾಗಿದೆ. ಬಿಳಿಯ ಪೀತಾಂಬರ ಬೆಳದಿಂಗಳಿಗೆ ಸಮವಾಗಿದೆ. ಈ ರಾತ್ರಿಯ ಮೌನದಲ್ಲಿ ಹೊಳೆಯ, ಬನದ ಬಗೆಬಗೆಯ ಸದ್ದುಗಳು ಸೇರಿವೆ. ಕೊಳಲಿನ ನಾದವು ಇಲ್ಲಿ ಹರಡಿದೆ. ಮನದಲ್ಲಿ ಇದು ಸ್ಫುಟವಾಗಿ ನಿಂತಿದೆ‌. ಇದರೊಂದಿಗೆ ಪುಟಪುಟ ಕುಣಿಯುವ ಶ್ರೀ ಹರಿಯ ಚರಣಗಳಿಗೆ ಶರಣೆನ್ನುವೆ ಎನ್ನುವನು.

ಮನವು ಸೊರಗಿದೆ. ತನು ಜಡವಾಗಿದೆ.ಪದಗಳ ಕುಣಿತಕ್ಕೆ ಎದೆಯು ಮೃದುವಾಗಿದೆ. ಮುದದಿಂದ ಹೃದಯ ಮಡುವಾಗಿದೆ. ನಾನು ಎಂಬ ಅಹಂಭಾವದ ಅಲೆಯು ಅಳಿಯುತ್ತಿದೆ. ಮೆಲುವಾದ ಗಾಳಿಯಲ್ಲಿ ಕಮಲದಂತೆ ಧ್ಯಾನದಲ್ಲಿ ಚಲಿಸುತ್ತಿರುವ ಬೃಂದಾವನದಲ್ಲಿನ ಶ್ರೀ ಹರಿಯ ಚರಣಗಳಿಗೆ ಶರಣೆನ್ನುವನು.ಕವಿಯು ಮರೆಯಾಗುವನು. ನಂತರ ರಾಧೆಯೂ ಮತ್ತು ಅವಳ ಸಖಿ ನಾಗವೇಣಿಯೂ  ಬರುವರು.

ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ