ಗೋಕುಲ ನಿರ್ಗಮನ 3
ಗೋಕುಲ ನಿರ್ಗಮನ 3
(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)
ಗೋಪಾಲಕರು
ಹಾಡು : ರಾಗ ಮಾಂಡ್
ಬನ್ನಿ ಬನ್ನಿ ನೇಹಿಗಳೇ
ಹಳುವಿಗೋಡುವ
ನಮ್ಮ ಕೃಷ್ಣ ಕೊಳಲನೂದಿ
ಸನ್ನೆ ಮಾಡುವ
ಕೃಷ್ಣ ಕೊಳಲನೂದುತಿರೆ
ನಿದ್ದೆಯೆಂತು ಬಹುದೆಮಗೆ
ರಾಮ ಹರೆಯ ಮೋದುತಿರೆ
ನಿಲ್ವೆವೆಂತು ಮನೆಯೊಳಗೆ - ಬನ್ನಿ ಬನ್ನಿ
ಪಟವ ದಾರ ತುಯ್ಯುವೊಲು
ಮನವ ತುಯ್ದುದೀ ಕೊಳಲು
ಅದರ ಸರಕೆ ಹಾರಾಡೆ
ನಲವೆಲರೊಳು ತಾರಾಡೆ - ಬನ್ನಿ ಬನ್ನಿ
ಸುಮನೆ ಯಮುನೆ ಕಲ್ಯಾಣಿ
ಚೆಲುವೆ ಚೆನ್ನಿ ಶುಕವಾಣಿ
ಹೊಸಬಿ ಹೊನ್ನಿ ಹರಿಣಾಕ್ಷಿ
ನೆರೆದಿಹರೆನಲಿದೆ ಸಾಕ್ಷಿ - ಬನ್ನಿ ಬನ್ನಿ
ಹಗಲಿನಾಚೆಯಿರುಳ ಕರೆ
ನೇರಿಟ್ಟಿತು ನೇಹಿಗರೆ
ಆಸೆಯಂತೆ ಬಾಳಾಗೆ
ತೋಷವೊಂದೆ ಮೇಲಾಗೆ - ಬನ್ನಿ ಬನ್ನಿ (ಹಾಡಿಕೊಂಡು ಹೋಗುವರು.)
( ಗೋಪಿಯರ ಮತ್ತೊಂದು ತಂಡ ಕೂಡ ಹಾಡಿಕೊಂಡು ಬರುವುದು.)
**********
ಇಲ್ಲಿ ಗೋಪಾಲಕರು ತಮ್ಮ ಸ್ನೇಹಿತರನ್ನು ಕರೆಯುತ್ತಿರುವರು. ಕಾಡಿಗೆ ಹೋಗುವಾ, ಕೃಷ್ಣ ಕೊಳಲನ್ನು ಊದಿ ಸನ್ನೆ ಮಾಡಿ ಕರೆಯುತ್ತಿದ್ದಾನೆ ಎನ್ನುವರು.
ಕೃಷ್ಣ ಕೊಳಲನ್ನು ಊದುತ್ತಿರಲು ನಮಗೆ ನಿದ್ರೆ ಹೇಗೆಬರುತ್ತದೆ? ಮನೆಯೊಳಗೆ ನಿಲ್ಲುವುದಾದರೂ ಹೇಗೆ?
ಗಾಳಿಪಟವನ್ನು ಅದರ ದಾರ ಅಲುಗಾಡಿಸುವಂತೆ ಈ ಕೊಳಲು ನಮ್ಮ ಮನಸ್ಸನ್ನು ಅಲ್ಲಾಡಿಸುತ್ತಿರುವುದು. ಅದರ ಸ್ವರಕ್ಕೆ ನಾವು ಗಾಳಿಯಲ್ಲಿ ತೇಲಾಡಿದಂತಿದೆ.
ನಮ್ಮೆಲ್ಲರ ಗೆಳತಿಯರೂ ಬಂದಿರುವರು. ಸುಮನೆ, ಯಮುನೆ, ಕಲ್ಯಾಣಿ ಮುಂತಾದವರು ಬಂದಿರುವರೆನ್ನಲು ಅವರ ಧ್ವನಿಯ ಸಾಕ್ಷಿಯಿದೆ. ಹಗಲು ಮುಗಿದು ಇರುಳು ಕಾಲಿಡುತ್ತಿರುವ ಈ ವೇಳೆಯಲ್ಲಿ ನಾವೆಲ್ಲ ಸಂತೋಷದಲ್ಲಿ ಮುಳುಗುವಾ ಬನ್ನಿ ಬನ್ನಿ ಸ್ನೇಹಿತರೆ ಎಂದು ಕರೆಯುತ್ತಿದ್ದಾರೆ.
ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar
(ನಮ್ಮ ಕನ್ನಡ ಸಂಪದ Kannada Sampada
ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
ಕಾಮೆಂಟ್‌ಗಳು