ಗೋಕುಲ ನಿರ್ಗಮನ 4
ಗೋಕುಲ ನಿರ್ಗಮನ 4
ಗೋಪಿಯರು
ಹಾಡು : ರಾಗ : ಸಿಂಧುಭೈರವಿ
ಕೃಷ್ಣನ ಕೊಳಲಿನ ಕರೆ - ಆಲಿಸು ಕೃಷ್ಣನ ಕೊಳಲಿನ ಕರೆ - ತ್ವರೆ ತ್ವರೆ
ತೊಟ್ಟಿಲಿನ ಹಸುಗೂಸ ಮರೆ ಮರೆ
ಪಕ್ಕದ ಗಂಡನ ತೊರೆ ತೊರೆ
ಬೃಂದಾವನಕೆ ತ್ವರೆ ತ್ವರೆ - ಕೃಷ್ಣನ
ಮುತ್ತಿನ ಕುಪ್ಪಸ ಹರಳೋಲೆ
ಮಲ್ಲಿಗೆ ಜಾಜಿ ಮುಡಿಮಾಲೆ
ಹೆಜ್ಜೆಯ ನೇವುರ ಗೆಜ್ಜೆಯ ಪಿಲ್ಲಿ
ಮರತೇ ಬಂದೆವೆ ಮನೆಯಲ್ಲೇ ಸಖಿ – ಕೃಷ್ಣನ
ಕೊಳಲಿನ ಕರೆ
ಹೊತ್ತಾರೆ ಹೊರೆಗೆಲಸ ಮಿಕ್ಕರೆ ಮಿಗಲಿ
ಮಿಕ್ಕಾದ ನೆರೆಹೊರೆ ನಕ್ಕರೆ ನಗಲಿ
ಬೃಂದಾವನದೊಳಾಲಿಸಿಗೋ ಮುರಲೀ
ಕೃಷ್ಣನ ಕೊಳಲಿನ ಕರೆ
ನೇಸರ ಕಿರಣ ಆಗಸದಿರುಳ
ತೊರೆಯಿಸುವ ರೀತಿ
ಮುರಳೀಧರನ ಮುರಳೀಮಾಯೆಗೆ
ಮನಬಿಟ್ಟಿತೆ ಭೀತಿ
ಇನ್ನಾಯಿತೆ ಪ್ರೀತಿ - ಕೃಷ್ಣನ
ಕೊಳಲಿನ ಕರೆ
(ಹಾಡುತ್ತಾ ಹೋಗುತ್ತಾರೆ.)
(ಊರಿನ ಹಿರಿಯರು ಪ್ರವೇಶಿಸುತ್ತಾರೆ. ಇವರ ಜತೆಗೆ ರಾಧೆಯ ತಂದೆ ಸುದಾಸ ಆಕೆಯ ಸಖಿಯ ತಂದೆ ಸುಬಲ ಇವರೂ ಬರುತ್ತಾರೆ)
ಹಿರಿಯರು
(ಒಬ್ಬೊಬ್ಬರೂ ಒಂದೊಂದು ಮಾತು ಹೇಳುತ್ತಾರೆ.)
************
ಇಲ್ಲಿ ಮತ್ತೆ ಗೋಪಿಯರು ಹಾಡಿಕೊಂಡು ಬರುವ ಭಾಗವಿದೆ. ಕೃಷ್ಣನ ಕೊಳಲಿನ ಧ್ವನಿಯು ಅವರನ್ನು ಮೈಮರೆಸಿದೆ. ಬೇಗ ಬೇಗ ಹೋಗಿ ಅವನನ್ನು ಕಾಣಬೇಕೆಂಬ ಕಾತುರ ಅವರಿಗೆ.
ಅವರಿಗೆ ಮನೆ, ಗಂಡ, ಮಕ್ಕಳು ಯಾರದೂ ನೆನಪಿಲ್ಲ. ಬೃಂದಾವನಕ್ಕೆ ಆದಷ್ಟು ಬೇಗ ಹೋಗಬೇಕು ಎಂಬುದಷ್ಟೇ.
ಈ ಗಡಿಬಿಡಿಯಲ್ಲಿ ಕೆಲವರು ಮುತ್ತಿನ ಕುಪ್ಪಸ ಎತ್ತಿಟ್ಟಿದ್ದನ್ನು ತೊಟ್ಟುಕೊಳ್ಳುವುದನ್ನೇ ಮರೆತಿರುವರು. ಓಲೆ, ಮಲ್ಲಿಗೆಮಾಲೆಗಳನ್ನು ಮನೆಯಲ್ಲೇ ಬಿಟ್ಟಿರುವರು. ಇಲ್ಲಿ ನೆನಪಾಗಿದೆ.
ಮನೆಯ ಕೆಲಸಗಳು ಹಾಗೆಯೇ ಉಳಿಯಲಿ. ನೆರೆಹೊರೆಯವರು ತಮ್ಮನ್ನು ಕಂಡು ನಗಲಿ. ಪರವಾಗಿಲ್ಲ. ಬೃಂದಾವನದ ಮುರಳಿಯನ್ನು ಆಲಿಸೋಣ.
ರವಿಕಿರಣಗಳು ಆಗಸದ ಕತ್ತಲನ್ನು ಓಡಿಸುವಂತೆ ಮನದ ಭೀತಿಯನ್ನು ಈ ಮುರಳಿ ಓಡಿಸಿದೆ. ಇನ್ನು ಪ್ರೀತಿಯೊಂದೇ ಉಳಿದಿರುವುದು.
ಹೀಗೆ ಹೇಳಿಕೊಂಡು ಅವರೆಲ್ಲರೂ ಹೊರಟಿದ್ದಾರೆ. ಊರಿನ ಹಿರಿಯರು ಬರುವರು. ಅವರಲ್ಲಿ ರಾಧೆಯ ತಂದೆ ಸುದಾಸ ಮತ್ತು ಅವಳ ಸಖಿ ನಾಗವೇಣಿಯ ತಂದೆ ಸುಬಲ ಇವರೂ ಇರುವರು. ಒಬ್ಬೊಬ್ಬರು ಒಂದೊಂದು ಮಾತು ಹೇಳುವರು.
ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar
(ನಮ್ಮ ಕನ್ನಡ ಸಂಪದ Kannada Sampada
ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
ಕಾಮೆಂಟ್‌ಗಳು