ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಕುಲ ನಿರ್ಗಮನ 5


ಗೋಕುಲ ನಿರ್ಗಮನ 5
ಮಹಾನ್ ಕವಿ ಪು.ತಿ. ನರಸಿಂಹಾಚಾರ್ಯರ ಕೃತಿ)

ನೀನು!
ನೀನೂ!
ನೋಡಿದಿರಾ
ಕೇಳಿದಿರಾ
ಇದೊ ಸರಿ ಹೊತ್ತು
ಸುತ್ತೂ ಮುತ್ತೂ ಹಬ್ಬಿದೆ ಹಳವು 
ಜನದೀ ಸುಳಿವು

ಇವರೀ ನಲಿತ ಈ ತರ ಕುಣಿತ
ಏನಿದು ಹುಚ್ಚು ಯಾರಿಗೆ ಮೆಚ್ಚು
ಮನೆಮಠವೆಲ್ಲವ ತೊರೆದೀ ಮಂದಿ
ಇಂತು ನೆರೆಯೆ ಭಯವೆಲ್ಲವು ನಂದಿ
ಯಾರಿಗೆ ಮೆಚ್ಚು 
ಏನಿದು ಹುಚ್ಚು

ಸುಬಲ
ನಿನ್ನ ಮಗಳು ರಾಧೆಯು ಬಹಳಂತೆ ನಂದಕುಮಾರನ ಜತೆಗಿಹಳಂತೆ
ಸುದಾಸ
ಸುಳ್ಳು ಸುಳ್ಳು ಮಗು ಮನೆಯಲ್ಲಿಹುದು ಈ ಪೊಳ್ಳು ಮಾತು ಎನಗಹಿತರದು 
ಪಾಪ ಪಾಪ ಬರಿ ಬೀದಿಯ ಮಾತು

ಸುಬಲ
ಪಾಪ ತಬ್ಬಲಿ ಮಲಗಿದೆ ಸೋತು

ಒಬ್ಬ
ಅಹಹ ಮಧುರ ಮಧುಮಧುರ

ಸುದಾಸ
ಏನು - ಏನು

ಒಬ್ಬ
ಅಗೊ ಅಗೊ ಮುರಲೀ - ಲಾಲಿಸು ಬಧಿರ

ಹಿರಿಯರು
ಅಹಹಾ – ಅಹಹಾ -
ಅರುವತ್ತರೊಳರ್ಧವನೇ ಜಾರಿಸಿತು
ನಡುಹರೆಯದ ಹುಮ್ಮಸ್ಸನೆ ತೋರಿಸಿತು
ಇಂದು ತನಕ ಇದ ಕೇಳಿದ ಅಜ್ಜ

ಸುದಾಸ
ಹುಚ್ಚು ಹುಚ್ಚು ಜಗಕೆಲ್ಲಕು ಹುಚ್ಚು
ಓ ಸುದಾಸ ನೀ ಬಲುಪೆಚ್ಚು
ಬನ್ನಿರಿ ಬನ್ನಿರಿ ಹಳುವಿಗೆ ನಡೆವ ಸನಿಯದೊಳೇ ಕೊಳಲಿಂಪನು ಪಡೆವ (ಸುದಾಸ ಸುಬಲರು ಹೊರತಾಗಿ ಮಿಕ್ಕವರು ಹೋಗುವರು.)

ಸುದಾಸ
ಓ ಸುಬಲ
ನಿನಗೂ ಈ ಕೊಳಲಿನಿದಾಗಿಹುದೇ

ಸುಬಲ
ಆಲಿಸಯ್ಯ ಕಿವಿ ಕಿವುಡಾಗಿಹುದೇ

ಸುದಾಸ
ಇಂಪಿಲ್ಲವೆಂದೆನುವಂತಿಲ್ಲ
ಕೊಳಲನು ಬಾಜಿಸೆ ಪೋರನು ಬಲ್ಲ

ಸುಬಲ
ಅವ ಬಾಜಿಸುತಿರೆ ಹರಟೆಗೆ ಸೊಗಸು
ಸುದಾಸ
ಏನಿದೆ ಮಾತಿಗೆ ಎಲ್ಲವು ಹೊಲಸು

ಸುಬಲ
ಇಂದಿನ ಸುದ್ದಿಯು ತಿಳಿಯದೆ ಅಣ್ಣ

ಸುದಾಸ
ಉಹ್ಞು ಉಹ್ಞು ಏನೇನ್ ಯಾರಿಗೆ ಬನ್ನ

ಸುಬಲ
ಮುಧುರಾಪುರದರಸರ ಕಡೆಯಿಂದ
ಸರದಾರನೊಬ್ಬನೈತಂದ

ನೆಟ್ಟನೆ ಗೋಪನ ಮನೆಗೇ ಬಂದ 
ಆಹ್ಲಾ ಆತನ ಠೀಕೇ ಠೀಕು 
ಆತನು ಬಲು ದೊಡ್ಡವನಿರಬೇಕು

ಸುದಾಸ
ಆ ಮಾತಿರಲಿ; ಬೇಹೇನಣ್ಣ

ಸುಬಲ
ಬಿಲ್ಲ ಹಬ್ಬಕೆಮಗೌತಣವಣ್ಣ

ಸುದಾಸ
ಓಹೋ ನಿನಗೂ

ಸುಬಲ
ಹೂ ಹೂ ನಿನಗೂ 
ಈ ಊರಿನ ಗಂಡಸರೆಲ್ಲರಿಗೂ

ಸುದಾಸ
ಎಂದಿಗೆ ಪಯಣ

ಸುಬಲ
ನಾಳೆಗೆಯೇ

ಸುದಾಸ
ನಾಳೆಗೆಯೇ
ಎಂದೂ ಇಲ್ಲದುದೀ ಸಲವೇಕೋ

ಸುಬಲ
ಆರು ಬಲ್ಲರೀ ರಾಜನ ಮನವ

ಸುದಾಸ
ದಿಟ ಆತನೊಂದು ತೆರ ಹುಚ್ಚಿನವ
ಏನಾದರೂ ಕೇಡನು ಬಗೆದಿಹನೊ
ಸುಬಲ
ಗೋಪನೊಳ್ಳೆಯವ ದೊರೆಗೂ ಮೆಚ್ಚು
ಕೇಡುಮಾಡಲಿವಗಾರಿಗೆ ಕೆಚ್ಚು
ಸುದಾಸ
ಗೋಪನೊಳ್ಳೆಯವ ಸರಿ ಆ ಮಕ್ಕಳೊ
ಅವರ ಮೇಲೆ ದೊರೆವರೆಗೂ ದೂರು
ಹಾಳಾಯಿತು ಅವರಿಂದೆಮ್ಮೂರು
ಸುಬಲ
ದೂರಬೇಡ ದೂರಬೇಡ ತಾತ ಅಳಿಯನಪ್ಪನೋ ಏನೋ ಆತ
ಸುದಾಸ
ಸಾಕು ಸುಮ್ಮನಿರು ನಿನಗೂ ಹುಚ್ಚು

ಸುಬಲ
ಹುಡುಗಿ ಕಡುಚೆಲುವೆ ನೀನೂ ಗಣ್ಯ ಎಂತಿಹುದೋ ಆ ಹಸುಳೆಯ ಮಣ್ಯ

ಸುದಾಸ
ಗೋಪ ಕೇಳಿದರೆ ನಾ ಕೊಡೆನೆನ್ನೆ
ಆರಿಗೆ ಕಡಿಮೆಯೊ ನನ್ನೀ ಕನ್ನೆ

ಸುಬಲ
ಹಾ ಹಾ ಬಲು ಇಂಪೋ ಈ ಕೊಳಲು

ಸುದಾಸ
ಆಗೋ ಆ ಮರದೆಡೆ ಯಾರದು ನೆಳಲು

ಸುಬಲ
ಹೋ ರಾಜಪುರುಷ ಕೇಳಿತೊ ಮಾತು 
ನಡೆ ಈ ತಾಣವ ಬಿಡುವುದೊಳ್ಳಿತು

ಸುದಾಸ
ಏತಕೆ ಒಬ್ಬನೆ ಬಂದಿಹನೋ

ಸುಬಲ
ಈ ಕೊಳಲೆಳೆತಕೆ ಸಂದನೊ ಏನೋ
ಸುದಾಸ
ಹುಚ್ಚು ಹುಚ್ಚು ಎಲ್ಲರಿಗೂ ಹುಚ್ಚು
( ಹಿಂದೆ ಹಿಂದೆ ನೋಡಿಕೊಂಡು ಹೊರಡುತ್ತಾರೆ )
( ಅಕ್ರೂರ ಸಾಮಾನ್ಯ ವೇಷದಿಂದ ಪ್ರವೇಶಿಸುತ್ತಾನೆ )
************
ಇಲ್ಲಿ ಸುದಾಸ ಮತ್ತು ಸುಬಲರ ಸಂಭಾಷಣೆ ಸಾಗಿದೆ. ಅವರಿಗೆ ತಮ್ಮ ಮಕ್ಕಳ ಬಗ್ಗೆ ನಂಬಿಕೆ, ಪ್ರೀತಿಗಳಿವೆ. ಕೃಷ್ಣನ ಕೊಳಲೂ ಇಷ್ಟವೇ. ಆದರೆ ಸ್ವಲ್ಪ ಅತಿಯಾಯಿತು ಎಂದುಕೊಳ್ಳುವರು. ಊರಿನ ಯುವಕರು, ಯುವತಿಯರು ಎಲ್ಲರೂ ಕೃಷ್ಣನ ಕೊಳಲಿನ ಗಾನಕ್ಕೆ ಮೈಮರೆಯುವುದನ್ನು ಕಂಡು ಇವರಿಗೆ ಆಶ್ಚರ್ಯ. ಅವರಿಗೆ ತಾವೂ ಇನ್ನಷ್ಟು ಚಿಕ್ಕವರಾದಂತ ಭಾವ.
ಮಧುರಾ ನಗರದಿಂದ ಸರದಾರನೊಬ್ಬ ಬಂದಿರುವನೆಂದೂ ತಮ್ಮನೆಲ್ಲ ಬಿಲ್ಲಹಬ್ಬಕ್ಕೆ ಕರೆಯಲು ಬಂದಿರುವನೆಂದೂ, ನಾಳೆಯೇ ಹೊರಡಬೇಕಿದೆಯೆಂದೂ ಇವರ ಮಾತುಗಳಿಂದ ತಿಳಿಯುತ್ತದೆ. ಊರಿನ ಗಂಡಸರೆಲ್ಲರೂ ಹೊರಡಬೇಕಿದೆ. ರಾಜ ನಂದಗೋಪನೇನೋ ಒಳ್ಳೆಯವನೇ. ಆದರೆ ಅವನ ಮಕ್ಕಳ ಬಗ್ಗೆ ಅರಸನತನಕ ದೂರು ಹೋಗಿದೆಯಂತೆ. ಏನಾಗುವುದೋ ಎಂಬ ಚಿಂತೆ ಇವರಿಗೆ. ಜೊತೆಗೆ ರಾಜ ತಮಗೆ ಯಾವ ಕೇಡನ್ನು ಬಯಸಿರುವನೋ ಎಂಬ ಚಿಂತೆ.

ಕೃಷ್ಣನ ಕೊಳಲಿಗೆ ಮರುಳಾದವರನ್ನು ಕಂಡು ಇವರಿಗೆಲ್ಲ ಹುಚ್ಚು ಎಂದುಕೊಳ್ಳುವರು. ಸುದಾಸನಿಗೆ ತನ್ನ ಮಗಳು ರಾಧೆಯನ್ನು ಕೃಷ್ಣನಿಗೆ ಮದುವೆ ಮಾಡಿಕೊಡುವ ಆಸೆಯೂ ಇದೆ. ಗೋಪನು ಕೇಳಿದರೆ ನೋಡೋಣ ಎಂದುಕೊಳ್ಳುವನು. ಅಲ್ಲಿ ನಿಂತಿದ್ದ ರಾಜಪುರುಷನನ್ನು ಕಂಡು ಇವರಿಬ್ಬರೂ ಮರೆಯಾಗುವರು. ಸಾಮಾನ್ಯ ವೇಷದಲ್ಲಿದ್ದ ಅಕ್ರೂರನು ಮುಂದೆ ಬರುವನು.

ಭಾವಾರ್ಥ: ಸುಬ್ಬುಲಕ್ಷ್ಮಿ  Lrphks Kolar


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ