ಗೋಕುಲ ನಿರ್ಗಮನ 6
ಗೋಕುಲ ನಿರ್ಗಮನ 6
(ಮಹಾನ್ ಕವಿ ಪು.ತಿ. ನರಸಿಂಹಾಚಾರ್ಯರ ಕೃತಿ)
ಅಕ್ರೂರ
ರಾಗ: ಮಾಯಮಾಳವಗೌಳ
ಶಿಶಿರಕುಸುಮಾಮೋದೋಚ್ಛ್ವಾಸಂ ಸುಧಾಂಶುಕರಾದೃತಂ
ವಿಮಲಯಮುನಾತೋಯಾಶ್ಲಿಷ್ಟಂ ಮನೋಹರಮರ್ಮರಂ
ಮಧುರಮುರಲೀನಾದಾವಿಷ್ಟಂ ವಿಚಿತ್ರಸುಖಾವಹಂ
ವಿಪಿನಮಿದಹಾ ನಾನೇವೇಳ್ವೆಂ ವಿಮಂದಮುದಾಂತರಂ
ರಾಗ: ಬಿಲಹರಿ
ನಂದಗೋಪನ ಮನೆಯ ತೂಗುಮಂಚದ ಮೇಲೆ
ನಿದ್ದೆಮೇಲುದುವಾತ್ಮ ಹೊದೆಯಲಿರೆ ಇನಿಯಳ್
ಮುಟ್ಟಿ ಬಾ ಎನುವಂತೆ ಈ ಕೊಳಲು ಕೆವಿಗೊಳಲು
ಬಂದೆನೀ ಅಭಿಸಾರವೆನಿತು ಲೇಸಾಯ್ತು
ರಾಗ: ಮೋಹನ
ಸಕಲೇಂದ್ರಿಯಂಗಳಿಗು ನೇತ್ರವೇ ಮಿಗಿಲೆಂದು ಲೋಕ ನುಡಿಯುವುದಿರಲಿ ಆದೊಡಿಂದು
ಈ ಹಳುವೊಳೀ ಗಾನವಾಲಿಸಲು ತೋರುವುದು
ಶ್ರೋತ್ರವೇ ಎಲ್ಲದಕು ಮಿಗಿಲು ಎಂದು
ರಾಗ: ಕಾಂಭೋಜಿ
ಶಾಸ್ತ್ರದಿಂ ಕೇಳ್ವೆಯಿಂ ಪರಿಕಿಸುವ ಬಳಕೆಯಿಂ ಗೇಯದುರ್ಜೆಯವೆಂದೆನಿಸಿರ್ದ ಮನವು ಇಂದೊರ್ವ ಗೋವಳನ ಕೊಳಲುಲುಹಿಗಾಯೆಂದು
ಬೆರಗಪ್ಪ ವೈಚಿತ್ರ್ಯಕೇವೇಳ್ವೆನು
ಹಾಡು : ರಾಗ - ಕಮಾಚ್
ತೆರೆಯಿತೆನ್ನ ಮನವು – ಕೊಳಲೊಳು
ಹರಿಯೆ ಗೋಪಾಲನೊಲವು ||ಪ||
ಕತ್ತಲುಳಿದು ಈ ಇರುಳು ಜೊನ್ನಕೆ ಮಧುರಳಾಗಿ ಮನಬಿಚ್ಚಿಹ ತೆರದೊಳು ||ಅ.ಪ||
ತರಳದಳವ ಜಲದೇವಿ ಕರವೆನೆ
ಜಲದೊಳಾಡಿಸುವ ಬಿರಿದ ಕುಮುದದ
ಮುತ್ತು ನೆಕ್ಕಿತೆನೆ ಅರಳಿದ ಸುರಯಿಯ
ಕಂಪಿನೆಲರ ಜತೆಗೂಡುವ ಗಾನಕೆ – ತೆರೆಯಿತೆನ್ನ ಮನವು
ಹರಿವ ಜಲದ ಕಣ್ಗೋಳುವ ಬನಂಗಳ
ಖಗದ ಮೃಗದ ಮುದದಿಂಪು ದನಿಗಳ
ಸೊಗವನೆಲ್ಲ ನಮ್ಮೆದೆಯ ಕುಹರದೊಳು
ತುಂಬಲೆಳಸುವೀ ಮೋಹನಗಾನಕೆ
ತೆರೆಯಿತೆನ್ನ ಮನವು
ಸುಸ್ವರದಿಂ ಕರಣವ ಪಟುಮಾಡಿ
ಮನನ ಹೊತ್ತಿಸುವ ಹೃದಯವ ಬೆಳಗಿ
ಇರವಿನೆಲ್ಲದರವೆಲುವನಾತ್ಮದೊಳು
ಮೋದವುಜ್ಜ್ಜ್ವಲಿಕೆ ಬೇಳುವ ಗಾನಕೆ
ತೆರೆಯಿತೆನ್ನ ಮನವು
ರಾಗ: ರೀತಿಗೌಳ
ಹೊನ್ನದೋಲ್ ಕಂಪಿನೋಲ್ ನೇಹದಂತೊಲುಮೆಯಂ_
ತೆದೆಯೆಲ್ಲ ಭಾವಗಳ ಹೊರಗಿನಂತೆ
ಸುರರನುಜ್ಝಲಗೊಳಿಪ ಹವಿಯಂತೆ ಈ ಗಾನ
ಇದನುಲಿವ ಗೋಪಾಲನೆಂತಿರುವನೋ
(ತೆರೆಯಲ್ಲಿ ಗೋಪಿಯರು ಹಾಡುತ್ತಾರೆ) ಹಾಡು : ರಾಗ - ಕೇದಾರ 2
(ಕೊಳಲುಲಿವಾಲಿಪವೆಲ್ಲ - ಆದೊಡೆ)
ಮುರಳೀಧರ ಕಾಣಲೊಲ್ಲ
ಎಲ್ಲಿಹನೀ ಗೋಪಬಾಲ
ರೆಲ್ಲಿಹನೀ ಮೋದಶೀಲ
ಅಕ್ರೂರ
ಕೊಳಲಿನ ಮಾಯೆಗೆ ವಿಹ್ವಲರಾದೀ
ಗೋಪವಧೂನಿಕರಂ
ಕೃಷ್ಣನನರಸುತ ಮೈಮರೆ ಮೊರೆಯುತ ಬರುತಿದೆ; ಮರೆಗೈದುವುದೆ ತರಂ
(ಮರೆಗೆ ಹೋಗಿ ನಿಲ್ಲುತ್ತಾನೆ.)
(ಗೋಪಿಯರು ಹಾಡಿಕೊಂಡು ಗುಂಪುಗುಂಪಾಗಿ ಬರುತ್ತಾರೆ.)
**********
ಈ ಭಾಗ ರಾಗಮಯ. ಏಳು ರಾಗಗಳು ಬಂದಿವೆ ಇಲ್ಲಿ. ಅಕ್ರೂರನು ಕಂಸನ ಕಡೆಯವನಾದರೂ ಸಭ್ಯ. ಹೆಸರಿಗೆ ತಕ್ಕಂಥವನು. ಅವನು ಬಿಲ್ಲಹಬ್ಬಕ್ಕೆ ಕರೆಯಬಂದವನು ಕೃಷ್ಣನ ಕೊಳಲ ದನಿಯಿಂದ ಮಲಗಿದ್ದವನು ಎದ್ದು ಕೊಳಲಿನ ಸ್ವರದ ಕಡೆಗೆ ನಡೆದಿರುವನು.
ಆ ಬೆಳುದಿಂಗಳಿನ ರಾತ್ರಿಯಲ್ಲಿ ಮನೋಹರವಾದ ಅರಣ್ಯದಲ್ಲಿ ಮಧುರವಾದ ಮುರಳಿಯ ಗಾನ ಅವನಿಗೆ ಇಷ್ಟವಾಗಿದೆ. ನಂದಗೋಪನ ಮನೆಯಿಂದ ಎದ್ದು ಬಂದದ್ದೂ ಒಳ್ಳೆಯದಾಯಿತು ಎಂದುಕೊಳ್ಳುತ್ತಾನೆ.
ಸಕಲ ಇಂದ್ರಿಯಗಳಲ್ಲಿ ಕಣ್ಣು ಪ್ರಧಾನವಾದುದು ಎನ್ನುತ್ತಾರೆ. ಆದರೆ ಇಲ್ಲಿ ಇಡೀ ಅರಣ್ಯವೇ ಗಾನದಲ್ಲಿ ಮುಳುಗಿದೆ. ಕಿವಿಯೇ ಪ್ರಧಾನವಾದುದು ಎನ್ನಬಹುದು.
ಶಾಸ್ತ್ರದಿಂದ, ಪರೀಕ್ಷಿಸುವ ಸಂಗೀತ ನನಗೆ ಅಸಾಧ್ಯವಾದುದೆಂದು ಅಂದುಕೊಂಡಿದ್ದೆ. ಆದರೆ ಇಂದು ಒಬ್ಬ ಗೋಪಾಲನ ಕೊಳಲು ನನ್ನನ್ನು ಆಕರ್ಷಿಸಿದೆಯಲ್ಲ ಎಂದು ಅವನಿಗೆ ಬೆರಗು. ಕೊಳಲಿನಿಂದ ಅವನ ಮನವು ತೆರೆದಿದೆ. ಕತ್ತಲು ಕಳೆದು ಹರಡಿರುವ ಈ ಬೆಳುದಿಂಗಳು ಮನಸನ್ನು ಬಿಚ್ಚಿದೆ. ಕೊಳದಲ್ಲಿ ಅರಳಿದ ಕುಮುದದ ಸುಗಂಧ ಈ ಗಾನದೊಂದಿಗೆ ಬೆರೆತು ಮುದ ನೀಡಿದೆ. ಹರಿಯುವ ಜಲ, ಮೃಗಗಳ ಸದ್ದು ಎಲ್ಲದರ ಸೊಗಸು ನಮ್ಮೆದೆಯಲ್ಲಿ ತುಂಬಿ ಈ ಗಾನದೊಂದಿಗೆ ಬೆರೆತು ಮನವ ತೆರೆದಿದೆ.
ಸುಸ್ವರದಿಂದ ಮನವನ್ನು ಬೆಳಗಿಸುವ, ಇರುವುದೆಲ್ಲವನ್ನೂ ಚೆಲುವನ್ನಾಗಿಸುವ ಅತ್ಮದಲ್ಲಿ ಮೋದವನ್ನು ಬೆಳಗುವ ಈಗಾನವು ನನ್ನಮನವ ತೆರೆದಿದೆ.
ಬೆಳದಿಂಗಳಲ್ಲಿ, ಕಂಪಿನಲ್ಲಿ, ಸ್ನೇಹದಲ್ಲಿ, ಒಲುಮೆಯಲ್ಲಿ ಎದೆಯ ಭಾವಗಳೆಲ್ಲ ಹೊರಹೊಮ್ಮುವಂತೆ ದೇವತೆಗಳನ್ನೂ ಆಕರ್ಷಿಸುತ್ತಿರುವ ಈ ಗಾನವನ್ನು ನುಡಿಸುವವನು ಹೇಗಿರುವನೋ ಎಂದುಕೊಳ್ಳುವ ವೇಳೆಗೆ ಮರೆಯಲ್ಲಿ ಗೋಪಿಯರ ಧ್ವನಿ ಕೇಳಿಬರುವುದು.
( ಕೊಳಲಿನ ದನಿ ಕೇಳುತ್ತಿದೆ. ಮುರಳೀಧರ ಕಾಣಿಸುತ್ತಿಲ್ಲ. ಎಲ್ಲಿಹನೀ ಗೋಪಬಾಲ?)
ಅಕ್ರೂರನು ಅವರಿಗೆ ಕಾಣದಂತೆ ಮರೆಯಲ್ಲಿ ನಿಲ್ಲುವನು.
ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು