ಗೋಕುಲ ನಿರ್ಗಮನ 7
ಗೋಕುಲ ನಿರ್ಗಮನ 7
(ಮಹಾನ್ ಕವಿ ಪು.ತಿ. ನರಸಿಂಹಾಚಾರ್ಯರ ಕೃತಿ)
ಗೋಪಿಯರು
ಕೊಳಲುಲಿವಾಲಿಪೆವೆಲ್ಲ - ಆದೊಡೆ
ಮುರಳೀಧರ ಕಾಣಲೊಲ್ಲ ॥ಪ॥
ಎಲ್ಲಿಹನೀ ಗೋಪಬಾಲ- ಪೇಳಿರೆಲ್ಲಿಹನೀ ಮೋದಶೀಲ
ಯಮುನೆಯ ಬನವೆಲ್ಲ ಹುಡುಕಿ -ಸಖಿಯರೆ ದೆಸೆದೆಸೆಯಲೆದೆಯ ಮಿಡುಕಿ
ತರುತರುವಡಿಯೊಳು ನೆಳಲು – ನಿಮ್ಮ ಶ್ಯಾಮ
ನಿಲ್ಲಿಹನೆಂದಣಕಿಸುತಿರಲು
ಕರವೆಡೆ ಹೊನ್ನೇ ಪೂಸೋನೆ – ಜುಮುತಟ್ಟಿ ಕರೆವೆಡೆ ಹೊನ್ನೆ ಸೂಸೋನೆ
ಜಲರುಹಶ್ಯಾಮನ ಸುಳಿವನೆ ಕಾಣೆ
(ಗೋಪಾಲಕರ ಗುಂಪು ಹಾಡುತ್ತಾ ಬರುತ್ತದೆ.)
ಗೋಪಾಲಕರು
ಹಾಡು : ರಾಗ -ಆನಂದಭೈರವಿ
ಹರಿವೆಡೆ ಹಗುರಾಗಿ ಯಮುನೆ - ಮಳಲೊಳು ಹರಿವೆಡೆ ಹಗುರಾಗಿ ಯಮುನೆ ಹರಿಯನರಸುತಲಾಯ್ತು ನಮಗೆ ಬರಿ ಬವಣೆ
ಎಲ್ಲರೂ
ತರುಗಿಡಬಳ್ಳಿ ಬನವೆಲ್ಲಾ – ಕಿವಿ ಬಳಿ ಪಿಸುಗುಟ್ಟುತಿವೆ ಗೋವಿಂದನ ಸೊಲ್ಲ
ಆದೊಡೆ ಕಂಗಳಿಗಿವ ಕಾಣಲೊಲ್ಲ - ಕಾಣೆ
ವೆಲ್ಲವಿತಿಹನೋ ನಮ್ಮ ಗೊಲ್ಲ
ಇಗೊ ಇಲ್ಲೆ ಎನುವಂತೆ ಒಮ್ಮೆ - ಅಲ್ಲಲ್ಲ ಬಗೆಯಲ್ಲೆ ಎನುವಂತೆ ಒಮ್ಮೆ ದೂರಸಾರಿದನೇನೊ ಎನಲೊಮ್ಮೆ - ಪೇಳಿ ಆವೆಡೆ ನಾನಿವನ ಕಾಣಲಮ್ಮೆ
ಅಗೊ ಬನ್ನಿ ಅಗೊ ಬನ್ನಿ ಮುರಳೀ - ಗೆಳೆಯರೆ ಬಯಕೆವೇಗಕೆ ನಡೆ ತಗ್ಗದೆ ಇರಲಿ
ಮನ ಮುಂದೆ ತನು ಹಿಂದೆ ಎನದೆ - ಅವನೆಡೆ
ತನುಮನವೊಂದಾಗಿ ಧಾವಿಸುತಿರಲಿ ಕೊಳಲುಲಿವಾಲಿಪೆವೆಲ್ಲ ಆದೊಡೆ
ಮುರಳೀಧರ ಕಾಣಲೊಲ್ಲ
( ಗುಂಪು ಮರೆಯಾಗುತ್ತದೆ )
***********
ಗೋಪಿಯರಿಗೆ ಕೊಳಲದ್ವನಿ ಕೇಳಿಸುತ್ತಿದೆ. ಆದರೆ ಮುರಳೀಧರ ಕಾಣಿಸುತ್ತಿಲ್ಲ. ಇಡೀ ಯಮುನೆಯ ದಡವನ್ನು ಹುಡುಕಲು ಹೇಳುತ್ತಾರೆ. ದಿಕ್ಕುದಿಕ್ಕುಗಳನ್ನೂ ನೋಡಿರೆಂದು ಒಬ್ಬರಿಗೊಬ್ಬರು ಹೇಳುವರು. ಮರಗಿಡಗಳ ನೆರಳು ಅವರನ್ನು ಅಣಕಿಸುತ್ತಿದೆ. ನಿಮ್ಮ ಶ್ಯಾಮ ಎಲ್ಲಿರುವನೆಂಬಂತೆ ಕೇಳುವಂತಿದೆ. ಕರೆದಲ್ಲಿ ಬಂಗಾರದ ರಾಶಿಯನ್ನು ಹರಡುವವನೇ ಎಲ್ಲಿರುವೆ?
ನಂತರ ಗೋಪಾಲಕರೂ ಕೃಷ್ಣನನ್ನು ಹುಡುಕಿಕೊಂಡು ಬರುವರು. ಹಗುರವಾಗಿ ಹರಿಯುತ್ತಿರುವ ಯಮುನೆಯನ್ನು ಹರಿಯನ್ನು ತೋರಿಸು ಎನ್ನುವರು.
ಮರಗಿಡಬಳ್ಳಿಗಳೆಲ್ಲವೂ ಕಿವಿಯ ಬಳಿ ಗೋವಿಂದನ ಇರುವಿಕೆಯನ್ನು ಪಿಸುಗುಟ್ಟಿ ಹೇಳುತ್ತಿರುವಂತೆ ಭಾಸವಾಗುತ್ತಿದೆ. ಆದರೆ ನಾದದ ವಿನಹ ನಾದಲೋಲ ಕಾಣಿಸುತ್ತಿಲ್ಲ. ಅದೆಲ್ಲಿ ಅವಿತಿರುವನೋ?
ಇಗೋ ಇಲ್ಲೆ ಎನುವಂತೆ ಒಮ್ಮೆ, ಮತ್ತೊಮ್ಮೆ ಇಲ್ಲಲ್ಲ.. ಅಲ್ಲಿ ಎನ್ನುವಂತೆ ಅನಿಸುತ್ತಿದೆ. ಇಲ್ಲೇ ಹತ್ತಿರದಲ್ಲಿ ಕೇಳಿಸಿದ ನಾದ ಇನ್ನೊಮ್ಮೆ ದೂರದಲ್ಲಿರುವಂತೆ ತೋರುತ್ತಿದೆ.
ತಡಮಾಡದೆ ಬನ್ನಿ ಗೆಳೆಯರೇ, ಅವನನ್ನು ಹುಡುಕೋಣ. ಮನ ಮುಂದಾಗಿ ತನು ಹಿಂದಾಗದಂತೆ ತನುಮನಗಳೊಂದಾಗಿ ಸಾಗೋಣವೆನ್ನುವರು. ಅವರಿಗೊಂದೇ ಚಿಂತೆ. ಕೊಳಲುಲಿ ಕೇಳಿಸುತ್ತಿದೆ ಆದರೆ ಅದರೊಡೆಯ ಕಾಣಿಸುತ್ತಿಲ್ಲ!
ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು