ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಕುಲ ನಿರ್ಗಮನ 8


 ಗೋಕುಲ ನಿರ್ಗಮನ 8

(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)


ಅಕ್ರೂರ

ರಾಗ: ಬಹುದಾರಿ


ಗೋಕುಲದೀ ಜನವೆಂತೀ ಗೋಪಾಲನಿಗೆ ಹಂಬಲಿಸುತ ತೊಳಲುತ್ತಿದೆ ಎಂತಿವನ ಬಗೆ ಕಾಣದೆಯೇ ಒಲಿದಿಹೆ ನಾ ಹಿಂಬಾಲಿಸಲೇ ಅತ್ತಡೆಯಲ್ಲಿತ್ತೆಡೆ ಕೊಳಲಿಲ್ಲಿಯೆ ನಿಲಲೇ

( ಆಲಿಸಿ )

ಇರುಳ ದೀವಿಗೆಯಂತೆ ತನ್ನನೆ

ಮೆರಸಿಕೊಂಡೀ ಗಾನವು 

ಸನಿಯಕ್ಕೆತಂದಂತೆ ಹೊಗರಿಂ-

ದೆನ್ನ ಸುತ್ತನು ಬೆಳಗಿದೆ.

(ನೋಡಿ ಸಂತೋಷದಿಂದ)


ಹಾಡು : ರಾಗ - ಮಲಯಮಾರುತ


ಅಗೊ ಮುರಳೀಧರನಾಹಾ

ಅಗೊ ಮುರಳೀಧರನಾಹಾ


ನಿಡುತೋಳೋ ಎದೆಹರಹೋ

ನಡೆಬೆಡಗೋ ನಿಲುಬಗೆಯೋ

ನಗುಮೊಗವೋ ತಹ ಸೊಗವೋ 

ಕನಸಿಗು ಇಂಥವ ಸುಳಿವೊಲ್ಲ


ಊಹೆಗು ಮೀರಿಹನಲ್ಲಾ

ಅಗೋ ಮುರಳೀಧರನಾಹಾ 

ನರರಚ್ಚರಿಮಣಿ - ಸುರರು ಪರೀಕ್ಷಿಸೆ

ಜೊನ್ನದ ಪಾಲಿನೊಳದ್ದಿರುವ ಇಂದ್ರನೀಲವಿದೊ – ಆಹಾ –

ಅಗೊ ಮುರಳೀಧರನಾಹಾ

(ಬಲರಾಮನನ್ನು ನೋಡಿ)


ಈತನು ಮೆಚ್ಚೋ ಆತನು ಮೆಚ್ಚೋ 

ಮನ ಹೆಚ್ಚಾರೆಂದಚ್ಚರಿಗೊಳುತಿರೆ 

ಹರೆಯ ಹಿಡಿದು ಕೊಳಲಿಗೆ ನಡೆಗೊಡುವಂ ಉದಾರರೂಪಂ ಆವನಿವಂ

ಬಲರಾಮನಲ್ಲದೇ ಆವನಿವಂ


 ರಾಗ: ಸಾಮಾ

ಹರೆಯದೆಳಹೊಗರಿಂದ ಕಳೆತೀವಿ ಇಹರು

ಸೆಳೆರೂಪೊನಿವರಿಗಾರೊಲಿಯದಿಹರು

ಜಸದಂತೆ ಇರುವಿವರ ಪರಿಪರಿಯಲಿ

ನಿರುಕಿಸುತಲೆನ್ನ ಬಗೆ ಬಳಕೆಗೊಳಲಿ

( ಮರೆಗೆ ನಿಲ್ಲುತ್ತಾನೆ )


***********

ಗೋಪಬೃಂದವು ಕೃಷ್ಣನಿಗಾಗಿ ತೊಳಲುವುದನ್ನು ಕಂಡು ಅಕ್ರೂರನಿಗೆ ಅಚ್ಚರಿ. ಅವನನ್ನು ಕಾಣದೆಯೇ ತನಗೂ ಅವನ ಮೇಲೆ ಒಲುಮೆಯುಕ್ಕುತ್ತಿದೆಯೆಂದು ಆಶ್ಚರ್ಯ. ತಾನೂ ಅವನನ್ನು, ಅವನ ಗಾನವನ್ನು ಹಿಂಬಾಲಿಸುವುದರ ಬಗ್ಗೆ ಅವನಿಗೇ ಅಚ್ಚರಿ.


ರಾತ್ರಿಯ ದೀಪದಂತೆ ತನ್ನನ್ನು ಹತ್ತಿರ ಕರೆಯುತ್ತಿರುವ ಗಾನವನ್ನು ಜಾಡು ಹಿಡಿದು ಹೋಗುತ್ತ ಇದ್ದಂತೆ ಮುರಳೀಧರನನ್ನು ಕಾಣುತ್ತಾನೆ !  ಸಂತೋಷವಾಗುತ್ತದೆ. ಆಹಾ, ಮುರಳೀಧರ ಕಂಡನು. ಅವನ ನೀಳವಾದ ತೋಳುಗಳು, ಹರವಾದ ಎದೆ, ನಗುಮೊಗ ತರುವ ಸೊಗಸು, ಕನಸಿಗೂ ಇಂಥವನು ಸುಳಿಯನು. ಊಹಿಸಲಾರದಷ್ಟು ಸುಂದರನನ್ನು ಕಂಡನು.


ಮಾನವರ ಅಚ್ಚರಿಯ ಮಣಿ, ಅಮೃತದ ಸೊದೆಯಿಂದ ಕೂಡಿರುವ ಹಾಲಿನಲ್ಲಿ ಅದ್ದಿದಂತಿರುವ ಇಂದ್ರನೀಲಮಣಿಯಿವನು... ಆಹಾ ಮುರಳೀಧರನಿವನು.


ಬಲರಾಮನನ್ನು ಕಂಡು ಸಂತಸವಾಗುತ್ತದೆ. ಆತನು ಹೆಚ್ಚೋ, ಈತನು ಹೆಚ್ಚೋ ಎಂಬ ಅಚ್ಚರಿ ಅಕ್ರೂರನಿಗೆ. ಉದಾರರೂಪಿನವನು ಬಲರಾಮ. ಕೃಷ್ಣನ ಕೊಳಲಿಗೆ  ಸರಿಯಾಗಿ ಹೆಜ್ಜೆಯಿಡುತ್ತಿರುವನು. ಇವರಿಬ್ಬರಿಗೂ ಹರೆಯ ಕಾಲಿಟ್ಟಿದೆ. ಕಂಗೊಳಿಸುತ್ತಿದ್ದಾರೆ. ಇವರಿಗೆ ಒಲಿಯದವರಾರು? ಸತ್ಯವೇ ರೂಪುಗೊಂಡಂತೆ, ಯಶಸ್ಸಿನ ಮೂರ್ತಿಗಳಿವರನ್ನು ಕಂಡ ನನ್ನ ಮನ ಹಗುರಾಗಿದೆಯೆನ್ನುವನು. ಆ ವೇಳೆಗೆ ಕೃಷ್ಣ ಬರುವುದನ್ನು ಕಂಡು ಮರೆಯಲ್ಲಿ ನಿಲ್ಲುವನು.


ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ