ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಿವು ವಿ. ಹೂಗಾರ


 ಶಿವು ವಿ. ಹೂಗಾರ


ಶಿವು ವಿ. ಹೂಗಾರ ಪ್ರಖ್ಯಾತ ಕಲಾವಿದರು.

ಜುಲೈ 1 ಶಿವು ಹುಟ್ಟಿದ ಊರು. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅರಕೇರಿ ಇವರು  ಹುಟ್ಟಿದ ಊರು. ಇವರ  ಕುಲಕಸಬು ಹೂಗಾರಿಕೆ. ಮನೆಯಲ್ಲಿ ತಂದೆ ತಾಯಿ ಮತ್ತು ಇವರ  ತಮ್ಮ ಇಷ್ಟೇ ಇವರ  ಕುಟುಂಬ. ಇವರ  ಹೆತ್ತವರು ಊರಿಗೆಲ್ಲ ಬಿಲ್ವಪತ್ರಿ ಕೊಡುವುದರ ಜೊತೆಗೆ ವ್ಯವಸಾಯ ಮಾಡುತ್ತಿದ್ದರು. ಶುಭಕಾರ್ಯ, ಜಾತ್ರೆ, ಮದುವೆಯಿಂದ ಹಿಡಿದು ಮನುಷ್ಯನ ಅಂತಿಮಯಾತ್ರೆಗೂ ಮಾಲೆ, (ನೈಜಹೂ ಸಾಲದಾದಾಗ ಕೃತಕ ಹೂ ತಯಾರಿಕೆ) ದಂಡಿ, ಬಾಸಿಂಗದಂತಹ ಅಲಂಕಾರಿಕ ಕುಸರಿ ಕೆಲಸಗಳನ್ನು ಮಾಡುತ್ತಿದ್ದರು. ತಂದೆ ತಾಯಂದಿರ  ಈ ಕೆಲಸವನ್ನೆಲ್ಲ ನೋಡಿ ಬೆಳೆದಿದ್ದರಿಂದ ಶಿವು ಅವರಿಗೆ  ಕಲಾವಿದನಾಗುವ ಆಶಯ ಜಾಗೃತವಾಯಿತು. 

ಶಿವು ಅವರದ್ದು ದನಕರುಗಳಿದ್ದ ಮನೆ. ಚಿಕ್ಕಕರುಗಳನ್ನು ಓಡಾಡುವ ದಾರಿಯಲ್ಲೇ ಕಟ್ಟುತ್ತಿದ್ದರಾದ್ದರಿಂದ ಅವುಗಳ ಮೇಲೆ - ಕೆಳಗೆ,  ನೆರೆಹೊರೆಯ ಮಕ್ಕಳೊಂದಿಗೆ ದಾಟಾಡುತ್ತಿದ್ದರು. ಅವುಗಳ ಹೆಂಡಿ ಬಳಿಯುವುದರಿಂದ ಹಿಡಿದು ಹಳ್ಳಕ್ಕೆ ಹೋಗಿ ಮೈತೊಳೆದು ಮೇವು ಹಾಕುವುದೆಲ್ಲ ಇವರದೇ ಕೆಲಸ. ಅವ್ವನ  ಕಡೆಯಿಂದ ಬಿಸಿರೊಟ್ಟಿಗೆ ಉಪ್ಪು ಎಣ್ಣಿ ಸವರಿ ರೊಟ್ಟಿಮುಟ್ಟಿಗಿ ಮಾಡಿ ಕರುವಿನ ಬಾಯಿ ತೆರೆದಿಡುವುದು,  ಅದು ಚೆಲ್ಲಾಟವಾಡುತ್ತ ತಿನ್ನಲು ಪ್ರಯತ್ನಿಸಿದಾಗ ಇವರು ಪಡುತ್ತಿದ್ದ  ಖುಷಿ ಅಷ್ಟಿಷ್ಟಲ್ಲ.

ಶಿವು ಅವರ ಹುಟ್ಟೂರಲ್ಲಿ  ಕಲ್ಮೇಶ್ವರ ದೇವಸ್ಥಾನದ ಪೂಜೆಯನ್ನು ಹೂಗಾರ ಕುಟುಂಬಗಳು ಸರದಿಯಲ್ಲಿ ಮಾಡುವ ಪದ್ಧತಿ ಇದೆ.  ಇವರ ಕುಟುಂಬದ  ಸರದಿ ಬಂದಾಗ ಅಪ್ಪನೊಂದಿಗೆ ಬಾಲಕ ಶಿವು ಕೂಡಾ  ಪೂಜೆಗೆ ಹೋಗುತ್ತಿದ್ದರು. ಇವರೊಬ್ಬರೇ  ಗುಡಿಗೆ ಪೂಜೆಗೆ ಹೋದಾಗ ಗರ್ಭಗುಡಿಯಲ್ಲಿ ದೀಪದಿಂದಾಗಿ ಕಪ್ಪುಹೊಗೆ ಆವರಿಸಿದ ಗೋಡೆಯ ಮೇಲೆ ದೀಪದ ಕಡ್ಡಿಯಿಂದ ಈಶ್ವರಲಿಂಗ ಹಾಗೂ ಎದುರಿರುವ ಮಲಗಿದ ನಂದಿಮೂರ್ತಿಗಳನ್ನು ಚಿತ್ರಿಸುತ್ತಿದ್ದರು. ಅದನ್ನೇ ಶಾಲೆಗೆ ಬಂದಾದ ಮೇಲೆ ಮಾಸ್ತರರು ಇಲ್ಲದಿರುವಾಗ ಮಕ್ಕಳಲ್ಲೇ  ಗುಂಪುಗಳನ್ನು ಕಟ್ಟಿಕೊಂಡು ಮತ್ತದೇ ಬಸವನ ಚಿತ್ರವನ್ನು ಪಾಟಿಯಲ್ಲಿ ರಚಿಸಿ ವಿರೋಧಿ ಗುಂಪಿನ ಮುಂದೆ ಭುಜ ಕುಣಿಸುತ್ತ ಮಜ ಪಡೆಯುತ್ತಿದ್ದರು. ಅಭ್ಯಾಸದಲ್ಲಿ ಹಿಂದುಳಿದವರೆಲ್ಲ ಇವರ  ಸಂಘದ ಸದಸ್ಯರು! ಒಬ್ಬೊಬ್ಬರಿಗೆ ಒಂದೊಂದು ಆಸಕ್ತಿ. ಶಿವು ಅವರದು  ಚಿತ್ರ ಮತ್ತು ಮೂರ್ತಿ ರಚಿಸುವುದು.

ಶಿವು  ಅವರು ಬಾಲ್ಯದಲ್ಲಿ ನೆಲ, ಗೋಡೆ, ಪಾಟಿ, ಪೇಪರ್ ಮೇಲೆ ಕಡ್ಡಿ, ಕಟಕ, ಇದ್ದಲಿ ಪೇಣೆ, ಪೆನ್ಸಿಲ್ ಹೀಗೆ ಏನೂ ಸಿಕ್ಕರೂ ಗೀಚುತ್ತ ಖುಷಿಪಡುತ್ತಿದ್ದರು. ಒಂದು ದಿನ ಅಪ್ಪನೊಂದಿಗೆ ಹಠ ಮಾಡಿ ಬಡಿಗೇರ ಲಕ್ಷ್ಮಪ್ಪ ಕಾಕಾನ ಹತ್ತಿರ ಮರದ ನಂದಿ ಮಾಡಿಸಿ ಅದಕ್ಕೆ ಗಾಲಿಗಳೂ ಬೇಕು ಮತ್ತದಕ್ಕೆ ದಾರ ಕಟ್ಟಿ ಎಳೆಯಲು ಆಟವಾಡಲು ಬರುವಂತಿರಬೇಕೆಂದು ಕಾಡುತ್ತ ಕುಳಿತಿದ್ದರು. ಅವರ ಮನೆಗೆ ಕರೆದುಕೊಂಡು ಹೋದರಾದರೂ ರೈತರ ಕೃಷಿ ಸಲಕರಣೆಗಳ ಕೆಲಸ ಮುಗಿದ ಮೇಲೆ ಇವರ ಪಾಳಿ. ಹೀಗಾಗಿ ಆ ಮರದ ಗೂಳಿಗಾಗಿ ಮಾಡಿದ ಹಠದಿಂದ ಬಡಿಗೇರ ಕಾಕಾನ ಕೆಲಸಕ್ಕೆ ತೊಂದರೆ ಆಯಿತೆಂದು ಆಗಾಗ ಅಪ್ಪನಿಂದ ಏಟೂ ತಿನ್ನುತ್ತಿದ್ದರು.

ಶಿವು ಅವರನ್ನು  ಕಲೆಯ ದಾರಿಗೆ ಎಳೆದು ತಂದವುಗಳ ಪೈಕಿ ಕ್ಯಾಲೆಂಡರ್, ಬಿಸ್ಕತ್ತು ಡಬ್ಬಿಮೇಲಿನ ರಾಮಾಂಜನೇಯ ಸೀತಾಲಕ್ಷ್ಮಣ, ಹಿಮಾಲಯದ ಎದೆಯಲ್ಲಿ ನಂದಿಯೊಂದಿಗೆ ನಿಂತ ಈಶ್ವರ, ಕಮಲದಲ್ಲಿ  ಆನೆಗಳ ರಕ್ಷಣೆಯಲ್ಲಿ ಕುಳಿತ ಲಕ್ಷ್ಮೀ, ಶಾಂತ ಹಸಿರು ಹೊದ್ದ ನಿಸರ್ಗದ ಮಧ್ಯೆ ನೀರಝರಿ, ಶ್ವೇತಕಮಲದಲ್ಲಿ ಮಯೂರದೊಂದಿಗಿರುವ ಶಾರದೆ, ಪಠ್ಯಪುಸ್ತಕಗಳಲ್ಲಿನ ಜಗಜ್ಯೋತಿ ಬಸವೇಶ್ವರ, ಗಾಂಧೀ, ಸುಭಾಷ, ಭಗತ್, ನೆಹರು, ಅಂಬೇಡ್ಕರ್, ಶಿವಾಜಿ… ಮುಂದೆ ‘ಸುಧಾ’ ‘ಮಯೂರ’ ಮತ್ತು ಇತರ ಪತ್ರಿಕೆಗಳಲ್ಲಿ ಬರುತ್ತಿದ್ದ ಚಂದ್ರನಾಥ ಆಚಾರ್ಯ, ಪ.ಸ. ಕುಮಾರ್, ಎಂ.ಎಸ್. ಮೂರ್ತಿಯಂಥ ಹಿರಿಯರು ರಚಿಸಿದ ಚಿತ್ರಗಳು. ಪ್ರಾಥಮಿಕ ಶಾಲೆಯಲ್ಲಿ ಇವರೊಳಗಿನ ಕಲೆಯನ್ನು ಗುರುತಿಸಿದವರು  ಎಚ್.ಬಿ. ಯಂಡಿಗೇರಿ ಸರ್ ಅವರು. ಹೀಗೆ ಇನ್ನೂ ಅನೇಕ ಹಿರಿಕಿರಿಯ ಕಲಾವಿದರಿಂದ ದೊರೆತ ಸಾಮಿಪ್ಯ, ಮಾರ್ಗದರ್ಶನ, ಪ್ರೋತ್ಸಾಹ ಮತ್ತು   ಕುಟುಂಬದ ಸಹನೆಯಿಂದ ಶಿವು ಕಲೆಯಲ್ಲಿ ಬೆಳೆದರು.

ಶಿವು ಅವರ ತಂದೆ  ವಿ.ಎಸ್. ಹೂಗಾರ 80ರ ನಂತರ ಗೆರೆಗಳ ಒಡನಾಟವನ್ನು ಚುರುಕುಗೊಳಿಸಿಕೊಂಡರು. ಅವರೆಳೆದ ಗೆರೆಗಳು ಈಗಲೂ ದೃಢವಾಗಿವೆ. ಶಿವು ಅವರಿಗೆ ಗೂಳಿಗಳೆಂದರೆ ಬಹಳ ಇಷ್ಟ. ಇವರ  ರೇಖೆಗಳು ಅವುಗಳೊಳಗೆ ಹೊಕ್ಕಾಡಿವೆ. ಶಿವು ಅವರ ಪುತ್ರ ಕೃಷ್ಣ ಸಹಾ  ಅಪ್ಪ ಮತ್ತು ತಾತನ ಸಹವಾಸದಿಂದ ಚಿತ್ರಗಾರನಾಗಿದ್ದಾನೆ. ಈ ಮೂರು ತಲೆಮಾರಿನ ಚಿತ್ರೋತ್ಸವ ಕೂಡಾ ಇತ್ತೀಚಿಗೆ ನಡೆದು ಜನಪ್ರಿಯಗೊಂಡಿತು. 

ಮಾಹಿತಿ  ಆಧಾರ: tv9ಕನ್ನಡ.com ಅಲ್ಲಿ ಮೂಡಿದ ಸಂದರ್ಶನ 


Happy birthday Shivu V Hugar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ