ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾಗೀರಥಿ ಹೆಗಡೆ


 ಭಾಗೀರಥಿ ಹೆಗಡೆ


ಭಾಗೀರಥಿ ಹೆಗಡೆ ಕನ್ನಡ ಸಾಹಿತ್ಯಲೋಕದ ಹೆಸರಾಂತ ಬರಹಗಾರ್ತಿ. 

ಭಾಗೀರಥಿ ಹೆಗಡೆ ಅವರು 1948ರ ಜುಲೈ 23ರಂದು ಜನಿಸಿದರು.  ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ತಟ್ಟಿಕೈ ಗ್ರಾಮದವರು. ತಾಯಿ ಗಣಪಿ. ತಂದೆ ವೆಂಕಟ್ರಮಣ ಭಟ್ಟ. ಇವರ ಶಾಲಾ ಶಿಕ್ಷಣ ಐದನೇ ವರ್ಗಕ್ಕೇ ಕೊನೆಗೊಂಡರೂ, ಮದುವೆಯಾಗಿ ಮಕ್ಕಳಾದ ನಂತರ, ಬಾಹ್ಯ ಪರೀಕ್ಷೆ ಬರೆದು ಎಸ್.ಎಸ್.ಎಲ್.ಸಿ. ಹಾಗೂ ಹಿಂದಿ ಪ್ರವೇಶಿಕಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು.   ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಅಂದಿನ ಸಂಪ್ರದಾಯದಂತೆ ಪಕ್ಕದೂರು ಬಿಳೇಕಲ್ಲಿನ ಆರ್.ಎಂ. ಹೆಗಡೆಯವರೊಂದಿಗೆ  ಇವರ ವಿವಾಹವಾಯಿತು.  ಹೈಸ್ಕೂಲು ಅಧ್ಯಾಪಕರಾಗಿದ್ದ ಪತಿಯವರೊಂದಿಗೆ ಸಿರಸಿಯಲ್ಲಿ ನೆಲಸಿದರು. 

ಬಾಲ್ಯದಲ್ಲಿ ಹವ್ಯಕ ಸಂಪ್ರದಾಯದ ಹಾಡುಗಳನ್ನು ರಚಿಸುತ್ತಿದ್ದ ಬಾಗೀರಥಿ ಅವರು, ಕ್ರಮೇಣ ಕವಿತೆಗಳನ್ನು ಬರೆಯತೊಡಗಿದರು. ತುಷಾರ ಮಾಸಪತ್ರಿಕೆಯ ಚಿತ್ರಕವನ ಸ್ಪರ್ಧೆಯಲ್ಲಿ ಭಾಗವಹಿಸ ತೊಡಗಿದರು. ತುಷಾರದಲ್ಲೇ ಇವರ ಮೊದಲ ಕತೆ 'ನಮ್ಮೆಲಬುಗಳ ಮೇಲೆ' ಪ್ರಕಟವಾಯಿತು.  ಮುಂದೆ ಇವರ ವೈವಿಧ್ಯಪೂರ್ಣ ಬರಹಗಳು ಎಲ್ಲ ಪತ್ರಿಕೆಗಳಲ್ಲಿ ನಿರಂತರ ಪ್ರಕಟಗೊಳ್ಳುತ್ತಲಿವೆ. 

ಭಾಗೀರಥಿ ಹೆಗಡೆ ಅವರ ಪ್ರಕಟಿತ ಕೃತಿಗಳಲ್ಲಿ ಸ್ವೀಕಾರ, ಅರ್ಥ, ಪ್ರವಾಹ, ಗಿಳಿಪದ್ಮ, ಬೇಟೆ, ಪ್ರತಿಮೆ, ಆಳ, ಯಾತ್ರೆ, ಹಿಮನದಿ ಕಥಾ ಸಂಕಲನಗಳಿವೆ. ‘ಚಂದ್ರಗಾವಿ’, ‘ಒಂದುದಿನ’ ಕವನ ಸಂಕಲನಗಳಿವೆ.  'ಪ್ರಭಾವತಿ’ ನಾಟಕವಿದೆ. 'ಗುಬ್ಬಿಯ ಸ್ವರ್ಗ’ ಮತ್ತು 'ಕನ್ನಡ ಶಾಲೆಯ ಹುಡುಗ’  ಮಕ್ಕಳ ಕವನ ಸಂಕಲನಗಳಿವೆ. 'ಹೊಳೆಯ ಹಾದಿ’ ಮತ್ತು 'ಕಾಲಾಂತರ’ ಕಾದಂಬರಿಗಳಿವೆ. 'ಬಾರೆಲೆ ಹಕ್ಕಿ' ಇವರ ಪ್ರಬಂಧ ಸಂಕಲನ. 'ಇಂದಿರಾಗಾಂಧಿ’ ಜೀವನ ಚರಿತ್ರೆ. 

ಭಾಗೀರಥಿ ಹೆಗಡೆ ಅವರ ಕಥೆಗಳು ಉತ್ಥಾನ, ಸಂಕ್ರಮಣ, ತರಂಗ, ತುಷಾರ, ವಿಕ್ರಾಂತ ಕರ್ನಾಟಕ, ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ. 'ಪ್ರಜಾವಾಣಿ’ ಶಿಶುಕಾವ್ಯ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹೀಗೆ ಎರಡು ಬಾರಿ ಬಹುಮಾನಗಳು, ೨೦೧೩ರ   ‘ಪ್ರಜಾವಾಣಿ’ ಸಂಕ್ರಾಂತಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 'ಅರ್ಥ’  ಕಥಾ ಸಂಕಲನಕ್ಕೆ ಮಾಸ್ತಿ ಕನ್ನಡ ಸೇವಾನಿಧಿ ಪುರಸ್ಕಾರ ಮತ್ತು ಧಾರವಾಡದ ರತ್ನಮ್ಮ ಹೆಗ್ಗಡೆ ದತ್ತಿನಿಧಿ ಬಹುಮಾನ (೧೯೯೧), 'ಪ್ರವಾಹ’ ಕಥಾ ಸಂಕಲಕ್ಕೆ ಎಚ್, ವಿ, ಸಾವಿತ್ರಮ್ಮ ದತ್ತಿನಿಧಿ ಬಹುಮಾನ (೧೯೯೬). 'ಗಿಳಿಪದ್ಮ’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಲಕ್ಷ್ಮಿ ದೇವಿ ಶಾಂತರಸ ದತ್ತಿಪ್ರಶಸ್ತಿ(೨೦೦೭), 'ಪ್ರಭಾವತಿ’ ನಾಟಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ವರ್ಷ ದತ್ತಿ ನಿಧಿ ಬಹುಮಾನ (೨೦೦೨), 'ಗುಬ್ಬಿಯ ಸ್ವರ್ಗ’ ಮಕ್ಕಳ ಪುಸ್ತಕಕ್ಕೆ ಕರ್ನಾಟಕ ಲೇಖಕಿಯರ ಸಂಘದ ಗುಣಸಾಗರಿ ನಾಗರಾಜ ಪ್ರಶಸ್ತಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ 'ಪುಸ್ತಕ ಸೊಗಸು' ಬಹುಮಾನ (೨೦೦೭), 'ಹೊಳೆಯ ಹಾದಿ’ ಕಾದಂಬರಿಗೆ ಮುಂಬಯಿಯ ಸದಾನಂದ ಸುವರ್ಣ ಪ್ರತಿಷ್ಠಾನದ ಕಾರಂತ ಕಾದಂಬರಿ ಸ್ಪರ್ಧೆ ಬಹುಮಾನ ಮತ್ತು ಬೆಂಗಳೂರಿನ ಅತ್ತಿಮಬ್ಬೆ  ಪ್ರತಿಷ್ಠಾನದ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ (೨೦೦೯), ಯಳಂದೂರಿನ ಅಂಬಾ ಪ್ರಕಾಶನದ ‘ಸಂಚಿ ಹೊನ್ನಮ್ಮ ಪ್ರಶಸ್ತಿ’  (೨೦೦೯),  ಉತ್ತರಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಕೆ. ಶಾಮರಾವ ದತ್ತಿ ಪ್ರಶಸ್ತಿ (೨೦೦೨), ಕರ್ನಾಟಕ ಸರ್ಕಾರದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ (೨೦೦೨), 'ಒಂದು ದಿನ’ ಕವನ ಸಂಕಲನಕ್ಕೆ  ಕನ್ನಡ ಸಾಹಿತ್ಯ ಪರಿಷತ್ತಿನ ‘ನೀಲಗಂಗಾ ದತ್ತಿ ಪ್ರಶಸ್ತಿ’(೨೦೧೪), 'ಕನ್ನಡ ಶಾಲೆಯ ಹುಡುಗ’ ಮಕ್ಕಳ ಪದ್ಯ ಸಂಕಲನಕ್ಕೆ ಬೆಂಗಳೂರಿನ ವಿಶ್ವೇಶ್ವರಯ್ಯ ಟ್ರಸ್ಟಿನ ರಾಷ್ಟೀಯ ಪ್ರಶಸ್ತಿ (೨೦೧೪)‍, ಬೆಂಗಳೂರಿನ ಅಗ್ನಿಸೇವಾ ಟ್ರಸ್ಟಿನ ‘ಮಹಾಕವಿ ಪರಮದೇವ ಪ್ರಶಸ್ತಿ’(೨೦೧೫), ಉತ್ತರ ಕರ್ನಾಟಕ ಲೇಖಕಿಯರ ಸಂಘದ ಶಾಂತಾದೇವಿ ಕಣವಿ ಕಥಾ ಪ್ರಶಸ್ತಿ (೨೦೧೯), ಹೊನ್ನಾವರದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಪುರಸ್ಕಾರ (೨೦೨೦), ಕರ್ನಾಟಕ ಸರ್ಕಾರದ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ (೨೦೨೨), 'ಕಾಲಾಂತರ' ಕಾದಂಬರಿಗೆ ಬೆಂಗಳೂರಿನ ಸರಳಾ ರಂಗನಾಥರಾವ್ ಪ್ರತಿಷ್ಠಾನ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ಸಂದಿವೆ. 
 
ಭಾಗೀರಥಿ ಹೆಗಡೆ ಅವರಿಗೆ ಉತ್ತರ ಕನ್ನಡ ಜಿಲ್ಲಾ ೧೯ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ (೨೦೧೪, ಕುಮಟಾದಲ್ಲಿ ನಡೆದ ಉ. ಕ. ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ,(೨೦೦೬), ಸಿರ್ಸಿ ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ (೨೦೧೧), ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳಿಂದ ‘ಸಾಹಿತ್ಯ ಸರಸ್ವತಿ’ ಬಿರುದು ಹಾಗೂ ಸನ್ಮಾನ (೨೦೦೭), ಸಿರ್ಸಿಯ ಆದರ್ಶ ವನಿತಾ ಸಮಾಜ, ರೋಟರಿ ಕ್ಲಬ್, ಅಭಿಮಾನ ಸಾಂಸ್ಕೃತಿಕ ವೇದಿಕೆ, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ, ಕೆ ಎಸ್. ಆರ್. ಟಿ. ಸಿ.ಕನ್ನಡ ಕ್ರಿಯಾ ಸಮಿತಿ, ಅಖಿಲ ಹವ್ಯಕ ಮಹಾಸಭಾ ಬೆಂಗಳೂರು, ಹೀಗೆ ವಿವಿಧ ಸಂಘ ಸಂಸ್ಥೆಗಳ ಅನೇಕ ಗೌರವಗಳು ಸಂದಿವೆ.      

ಧಾರವಾಡ ಮತ್ತು ಕಾರವಾರ ಆಕಾಶವಾಣಿಯಲ್ಲಿ ಭಾಗೀರಥಿ ಹೆಗಡೆ ಅವರ ಬರಹಗಳು ಪ್ರಸಾರವಾಗಿವೆ. ಚಂದನ ವಾಹಿನಿಯ ‘ಬೆಳಗು’ ಕಾರ‍್ಯಕ್ರಮದಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ.  ಈ ಟಿವಿಯ ‘ನಮಸ್ಕಾರ’ ಕಾರ‍್ಯಕ್ರಮದಲ್ಲಿ ಸಂದರ್ಶನ ಪ್ರಸಾರವಾಗಿದೆ.   'ಚಂದನ' ವಾಹಿನಿಯ 'ಕತೆಗಾರ' ಕಾರ‍್ಯಕ್ರಮದಲ್ಲಿ ಇವರ ಸಣ್ಣಕತೆ ಪ್ರಸಾರವಾಗಿದೆ. ಸಿರಸಿ ಸಮೀಪದ ಕೊರ್ಲಕಟ್ಟಾ ವಿವೇಕ ಬಳಗದವರು ತಯಾರಿಸಿದ ಭಾಗೀರಥಿ ಹೆಗಡೆಯವರ ಬರಹದ ಆಧಾರಿತ 'ಉರಿದಾರಿ’ ಟೆಲಿಫಿಲ್ಮಿನಲ್ಲಿ ಭಾಗೀರಥಿ ಹೆಗಡೆಯವರು ಸ್ವಯಂ ಒಂದು ಪಾತ್ರದಲ್ಲಿಯೂ ಅಭಿನಯಿಸಿದ್ದಾರೆ.    

ಹಿರಿಯರಾದ ಸಾಧಕಿ ಭಾಗೀರಥಿ ಹೆಗಡೆ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.

Our writer Bhagirathi Hegde

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ