ತೇಜಸ್ವಿನಿ ನಿರಂಜನ
ತೇಜಸ್ವಿನಿ ನಿರಂಜನ
ಡಾ ತೇಜಸ್ವಿನಿ ನಿರಂಜನ ಅವರು ಪ್ರಾಧ್ಯಾಪಕಿ, ಸಾಂಸ್ಕೃತಿಕ ಸಿದ್ಧಾಂತಿ, ಅನುವಾದಕಿ ಮತ್ತು ಲೇಖಕಿ. ಸಂಸ್ಕೃತಿ ಅಧ್ಯಯನಗಳು, ಲಿಂಗ ಅಧ್ಯಯನಗಳು, ಅನುವಾದ ಹಾಗೂ ಸಂಗೀತ ಕ್ಷೇತ್ರ, ಅದರಲ್ಲೂ ವಿಶೇಷವಾಗಿ ಭಾರತೀಯ ಸಂಗೀತದ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದ ಎತ್ನೋ ಮ್ಯೂಸಿಕಾಲಜಿ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳಿಗಾಗಿ ಅವರು ಹೆಸರುವಾಸಿಯಾಗಿದ್ದಾರೆ.
ಕನ್ನಡ ಮಹಾನ್ ಸಾಹಿತ್ಯ ದಂಪತಿಗಳಾದ ನಿರಂಜನ ಮತ್ತು ಡಾ. ಅನುಪಮಾ ನಿರಂಜನ ಅವರ ಸುಪುತ್ರಿಯಾದ ತೇಜಸ್ವಿನಿ ನಿರಂಜನ ಅವರು 1958ರ ಜುಲೈ 26ರಂದು ಧಾರವಾಡದಲ್ಲಿ ಜನಿಸಿದರು. ಅವರು 2ನೇ ವಯಸ್ಸಿನಲ್ಲಿ ಪೋಷಕರೊಂದಿಗೆ ಬೆಂಗಳೂರಿಗೆ ಬಂದರು. ಬೆಂಗಳೂರಿನ ದಿ ಹೋಮ್ ಸ್ಕೂಲ್ (1962-1971) ಮತ್ತು ಮಹಿಳಾ ಸೇವಾ ಸಮಾಜ (1971-1974)ಗಳಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ (1974-76) ಪಿಯುಸಿ ಮತ್ತು
ಬಸವನಗುಡಿಯ ನ್ಯಾಷನಲ್ ಕಾಲೇಜಿನಿಂದ ಪದವಿಯನ್ನು ಪಡೆದರು (1976-79). ಮುಂದೆ ಅವರು ಬಾಂಬೆ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಮತ್ತು ಸೌಂದರ್ಯಶಾಸ್ತ್ರದಲ್ಲಿ ಎಂ.ಎ., ಪುಣೆ ವಿಶ್ವವಿದ್ಯಾಲಯದಿಂದ ಭಾಷಾಶಾಸ್ತ್ರದಲ್ಲಿ ಎಂಫಿಲ್ ಮತ್ತು ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಸಾಧನೆಗಳನ್ನು ಮಾಡಿದರು. ಅವರು ಮುಂಬೈ ಮೂಲದ ಗ್ವಾಲಿಯರ್ ಘರಾನಾ ಗಾಯಕಿ ನೀಲಾ ಭಾಗವತ್ ಅವರಿಂದ ಒಂದು ದಶಕದ ಕಾಲ ಸಂಗೀತವನ್ನು ಕಲಿತರು.
ತೇಜಸ್ವಿನಿ ನಿರಂಜನ ಅವರು 2021 ರಿಂದ ಇಂಟರ್-ಏಷ್ಯನ್ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಹಾಗೂ ಅಹಮದಾಬಾದ್ ವಿಶ್ವವಿದ್ಯಾಲಯದ ಆನ್‌ಲೈನ್ ಕಾರ್ಯಕ್ರಮಗಳ ಡೀನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿರಂಜನ ಅವರು ಬೆಂಗಳೂರಿನ ಸಂಸ್ಕೃತಿ ಮತ್ತು ಸಮಾಜದ ಅಧ್ಯಯನ ಕೇಂದ್ರದಲ್ಲಿ ಸಹ-ಸಂಸ್ಥಾಪಕಿ ಮತ್ತು ಹಿರಿಯ ಸಹವರ್ತಿಯಾಗಿದ್ದರು, ಅಲ್ಲಿ ಅವರು HEIRA ಕಾರ್ಯಕ್ರಮದಲ್ಲಿ ಪ್ರಮುಖ ಸಂಶೋಧಕರಾಗಿದ್ದರು. ಅವರು 2012 ರಿಂದ 2016 ರವರೆಗೆ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನಲ್ಲಿ ಉನ್ನತ ಶಿಕ್ಷಣದಲ್ಲಿ ಭಾರತೀಯ ಭಾಷೆಗಳ ಕೇಂದ್ರದಲ್ಲಿ ಅಧ್ಯಕ್ಷರಾಗಿದ್ದರು. 2016ರಿಂದ 2021 ರವರೆಗೆ, ಅವರು ಹಾಂಗ್ ಕಾಂಗ್‌ನ ಲಿಂಗ್ನಾನ್ ವಿಶ್ವವಿದ್ಯಾಲಯದಲ್ಲಿ ಸಾಂಸ್ಕೃತಿಕ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿದ್ದರು ಮತ್ತು ಅಹಮದಾಬಾದ್ ವಿಶ್ವವಿದ್ಯಾಲಯದಲ್ಲಿ ಸ್ಕೂಲ್ ಆಫ್ ಆರ್ಟ್ಸ್ ಮತ್ತು ಸೈನ್ಸ್‌ನೊಂದಿಗೆ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ತೇಜಸ್ವಿನಿ ನಿರಂಜನ ಅವರು 2013 ರಿಂದ 2016 ರವರೆಗೆ ಬೆಂಗಳೂರಿನ ಇಂಟರ್‌ನೆಟ್ ಮತ್ತು ಸೊಸೈಟಿ ಕೇಂದ್ರದಲ್ಲಿ ಡಿಸ್ಟಿಂಗ್ವಿಶ್ಡ್ ಫೆಲೋ ಆಗಿದ್ದರು. ಇಂಟರ್-ಏಷ್ಯಾ ಕಲ್ಚರಲ್ ಸ್ಟಡೀಸ್ ಸೊಸೈಟಿಯ ಅಧ್ಯಕ್ಷರಾಗಿದ್ದರು.
ಅವರು ಸೆಫಿಸ್ ಪೋಸ್ಟ್‌ಡಾಕ್ಟರಲ್ ಫೆಲೋಶಿಪ್ (1997-1999), ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಸಾಯರ್ ಫೆಲೋ ಪಡೆದವರು; ರಾಕ್‌ಫೆಲ್ಲರ್ ಫೆಲೋ, ಚಿಕಾಗೋ ವಿಶ್ವವಿದ್ಯಾಲಯ ಮತ್ತು ಹೋಮಿ ಭಾಭಾ ರಾಷ್ಟ್ರೀಯ ಫೆಲೋಶಿಪ್ ಸಹಾ ಇವರಿಗೆ ಸಂದಿತ್ತು.
ಜಹಾಜಿ ಮ್ಯೂಸಿಕ್ ಎಂಬ ಸಾಕ್ಷ್ಯಚಿತ್ರದ ಪರಿಕಲ್ಪನೆ ತೇಜಸ್ವಿನಿ ನಿರಂಜನ ಅವರದಾಗಿದ್ದು, ಅವರು ಅದರ ಸಹ-ನಿರ್ಮಾಪಕರೂ ಆಗಿದ್ದರು. ಇದರಲ್ಲಿ ಭಾರತೀಯ-ಪೋರ್ಚುಗೀಸ್ ಸಂಗೀತಗಾರ ರೆಮೊ ಫೆರ್ನಾಂಡಿಸ್ ನಟಿಸಿದ್ದು, ಕೆರಿಬಿಯನ್‌ನಲ್ಲಿರುವ ಭಾರತೀಯ ಡಯಾಸ್ಪೊರಾದಲ್ಲಿನ ಸಂಗೀತದ ಪ್ರಕಾರಗಳನ್ನು ತೆರೆದಿಡುತ್ತದೆ. ಚಲನಚಿತ್ರದ ಶೀರ್ಷಿಕೆಯು "ಶಿಪ್ಸ್ ಮ್ಯೂಸಿಕ್" ಎಂದಿದ್ದು, ಇದು 19 ನೇ ಶತಮಾನದ ಮಧ್ಯದಲ್ಲಿ ಪೂರ್ವ ಭಾರತದಿಂದ ಫ್ರೆಂಚ್-ಟ್ರಿನಿಡಾಡ್‌ಗೆ ಒಪ್ಪಂದದ ಮೇರೆಗೆ ಕಾರ್ಮಿಕ ವಸಾಹತುಗಾರರನ್ನು ಸಾಗಿಸಿದ ಹಡಗುಗಳ ಉಲ್ಲೇಖ ಹೊಂದಿದೆ. ಚಲನಚಿತ್ರ ನಿರ್ಮಾಪಕಿ ಸುರಭಿ ಶರ್ಮಾ ಸಹ-ನಿರ್ಮಾಣ ಮಾಡಿದ ಈ ಚಲನಚಿತ್ರವು ಲಿಂಗ, ಸಂಗೀತ ಮತ್ತು ವಲಸೆಯ ಜಗತ್ತನ್ನು ತೆರೆದಿಟ್ಟಿದ್ದು, ಮಾಧ್ಯಮಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು.
ತೇಜಸ್ವಿನಿ ನಿರಂಜನ ಅವರು ಮುಂಬೈ ನಗರವು ಹಿಂದೂಸ್ತಾನಿ ಸಂಗೀತಕ್ಕೆ ಅಂತಹ ಜನಪ್ರಿಯ ಕೇಂದ್ರವಾಗಲು ಸಾಂಸ್ಕೃತಿಕ, ರಾಜಕೀಯ ಮತ್ತು ಭೌಗೋಳಿಕ ಕಾರಣಗಳನ್ನು ಪರಿಶೀಲಿಸುವ Musicophilia in Mumbai ಕೃತಿಯ ಲೇಖಕಿಯೂ ಆಗಿದ್ದಾರೆ. ಅದೇ ವಿಷಯವನ್ನು ಆಧರಿಸಿ 'ಫಿರ್ ಸೆ ಶ್ಯಾಮ್ ಪೆ ಆನಾ’ ಚಿತ್ರವನ್ನು ಮೂಡಿಸಲು ಅವರು ಮತ್ತೊಮ್ಮೆ ಚಲನಚಿತ್ರ ನಿರ್ಮಾಪಕಿ ಸುರಭಿ ಶರ್ಮಾ ಅವರೊಂದಿಗೆ ಜೊತಗೂಡಿದರು.
ತೇಜಸ್ವಿನಿ ನಿರಂಜನ ಅವರು ವೆಸ್ಟ್ ಇಂಡೀಸ್, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಜಪಾನ್, ತೈವಾನ್, ಯುಎಸ್ ಮತ್ತು ಯುಕೆಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಅವರು ಭಾರತೀಯ ಉನ್ನತ ಶಿಕ್ಷಣದ ತರಗತಿಗಳಲ್ಲಿ ತರಗತಿ ಕೊಠಡಿಗಳಿಗಾಗಿ ದ್ವಿ-ಭಾಷಾ ಶಿಕ್ಷಣ ಕೈಪಿಡಿಯನ್ನು ರಚಿಸುವಲ್ಲಿ ತೀವ್ರವಾದ ಪ್ರಯತ್ನಗಳಿಗಾಗಿ ಶೈಕ್ಷಣಿಕ ವಲಯಗಳಲ್ಲಿ ಹೆಸರುವಾಸಿಯಾಗಿದ್ದಾರೆ. ಇದರ ಬಗ್ಗೆ ಆರಂಭಿಕ ಸಂಶೋಧನೆಯನ್ನು ಸಹ ಸ್ತ್ರೀವಾದಿ ವಿದ್ವಾಂಸ ಶರ್ಮಿಳಾ ರೇಗೆ ಅವರೊಂದಿಗೆ ನಡೆಸಿದರು.
ತೇಜಸ್ವಿನಿ ನಿರಂಜನ ಅವರು 2009 ರಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ಅನ್ನು 'ಪ್ರಜಾಪ್ರಭುತ್ವ ವಿರೋಧಿಯಾಗಿದೆ' ಎಂದು ವಿರೋಧಿಸಿದ ಭಾರತೀಯ ಶಿಕ್ಷಣ ತಜ್ಞರ 180 ಪ್ರಬಲ ಪಟ್ಟಿಯ ಭಾಗವಾಗಿದ್ದರು.
ತೇಜಸ್ವಿನಿ ನಿರಂಜನ ಅವರಿಗೆ ಎಂ.ಕೆ. ಇಂದಿರಾ ಅವರ ಫಣಿಯಮ್ಮ ಕೃತಿಯ ಇಂಗ್ಲಿಷ್ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1993), ಮತ್ತು ಅತ್ಯುತ್ತಮ ಅನುವಾದಕ್ಕಾಗಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1994)ಗಳು ಸಂದವು. ಖ್ಯಾತ ಕಥೆಗಾರ, ಕವಿ ನಾಟಕಕಾರ ಜಯಂತ್ ಕಾಯ್ಕಿಣಿ ಅವರ ಮುಂಬೈ ಪರಿಸರದ ಎಲ್ಲ ಕಥೆಗಳ ಸಂಗ್ರಹಿತ ಕೃತಿಯನ್ನು ತೇಜಸ್ವಿನಿ ನಿರಂಜನ ಅವರು ‘No Presents Please: Mumbai Stories’ ಶೀರ್ಷಿಕೆಯಡಿ ಇಂಗ್ಲಿಷಿಗೆ ಅನುವಾದಿಸಿದ್ದು, ಈ ಕೃತಿಗೆ ಪ್ರತಿಷ್ಠಿತ The American Literary Translators Association (ALTA) ಸಂಸ್ಥೆಯ 2021ನೇ ಸಾಲಿನ ಅಮೆರಿಕದ ರಾಷ್ಟ್ರೀಯ ಗದ್ಯ ಸಾಹಿತ್ಯ ಅನುವಾದ (National Translation Award in Prose) ಪ್ರಶಸ್ತಿ ಲಭಿಸಿತು. ಇದೇ ಕೃತಿಗೆ 2019 ರಲ್ಲಿ the DSC Prize for South Asian Literature 2018 ಪ್ರಶಸ್ತಿಯು ತೇಜಸ್ವಿನಿ ನಿರಂಜನ ಮತ್ತು ಜಯಂತ್ ಕಾಯ್ಕಿಣಿ ಅವರಿಗೆ ಜಂಟಿಯಾಗಿ ಸಂದಿತ್ತು.
ತೇಜಸ್ವಿನಿ ನಿರಂಜನ ಅವರು ಪಾಬ್ಲೋ ನೆರುಡಾ ಅವರ ಕಾವ್ಯ ಮತ್ತು ಶೇಕ್ಸ್ಪಿಯರನ ಜೂಲಿಯಸ ಸೀಜರ್ ಅನ್ನು ಕೂಡಾ ಕನ್ನಡಕ್ಕೆ ಅನುವಾದಿಸಿದ್ದಾರೆ. ವೈದೇಹಿ ಅವರ ಗುಲಾಬಿ ಟಾಕಿಸ್ ಅನ್ನು ಇಂಗ್ಲಿಷಿಗೆ ತಂದಿದ್ದಾರೆ. ಅವರ ಸಂಪಾದನೆಗಳಲ್ಲಿ Music, Modernity, and Publicness in India, Breaking the Silo: Integrating Science Education in India - With K.Sridhar and Anup Dhar; Genealogies of the Asian Present: Situating Inter-Asia Cultural Studies - With Wang Xiaoming; ಹಾಗೂ ಕನ್ನಡದಲ್ಲಿ ಸ್ತ್ರೀವಾದಿ ವಿಮರ್ಶೆ (ಸೀಮಂತಿನಿ ನಿರಂಜನ ಜೊತೆಯಲ್ಲಿ) ಸೇರಿವೆ.
ಅಪ್ರತಿಮ ಸಾಧಕಿ ತೇಜಸ್ವನಿ ನಿರಂಜನ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birthday of great achiever Dr. Tejaswini Niranjana 🌷🙏🌷
ಕಾಮೆಂಟ್‌ಗಳು