ಎಚ್. ಎಸ್. ಸರಸ್ವತಿ
ಎಚ್. ಎಸ್. ಸರಸ್ವತಿ
ಎಚ್. ಎಸ್. ಸರಸ್ವತಿ ಅವರು ಆಕಾಶವಾಣಿಯಲ್ಲಿ ಅಧಿಕಾರಿಗಳಾಗಿ ಮಹತ್ವದ ಕಾರ್ಯಕ್ರಮಗಳಿಗೆ ಹೆಸರಾದವರು.
ಎಚ್. ಎಸ್. ಸರಸ್ವತಿ ಅವರು 1958ರ ಜುಲೈ 28ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಚ್. ಎಸ್. ಶಂಕರನಾರಾಯಣ. ತಾಯಿ ಗೌರಮ್ಮ. ಸರಸ್ವತಿ ಅವರು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಸರಸ್ವತಿ ಅವರು 1988ರ ವರ್ಷದಲ್ಲಿ ಆಕಾಶವಾಣಿಗೆ ಸೇರಿದರು. ಚಿತ್ರದುರ್ಗ, ಹಾಸನ, ಮೈಸೂರು, ಬೆಂಗಳೂರು ಆಕಾಶವಾಣಿ ಕೇಂದ್ರಗಳಲ್ಲಿ ಹೆಚ್ಚು ಸೇವೆ ಸಲ್ಲಿಸಿದ ಅವರು, ತಾವು ಇದ್ದೆಡೆಯಲ್ಲೆಲ್ಲ ಸ್ಥಳೀಯ ಸಾಂಸ್ಕೃತಿಕ ವಿಶೇಷಗಳನ್ನು ಆಕಾಶವಾಣಿಯಲ್ಲಿ ಮೂಡಿಸಲು ವಹಿಸಿದ ಪರಿಶ್ರಮ ಮಹತ್ವದ್ದು.
ಸರಸ್ವತಿ ಅವರು ರೂಪಿಸಿದ 'ನುಡಿವಸಂತ' ಕಾರ್ಯಕ್ರಮ ಜನಪ್ರಿಯವಾಗಿತ್ತು. ಅಮೃತವರ್ಷಿಣಿ ಕಾರ್ಯಕ್ರಮಕ್ಕೂ ಅವರ ಕೊಡುಗೆ ಮಹತ್ವದ್ದಿತ್ತು. ಅವರು ರೂಪಿಸಿದ 'ಸಾಕ್ಷಾತ್ಕಾರದತ್ತ' ಬಹುಜನ ಇಂದೂ ನೆನೆಸಿಕೊಳ್ಳುವ ಕಾರ್ಯಕ್ರಮ. ಸಾಕ್ಷಾತ್ಕಾರ ಎಂಬುದು ಕೇವಲ ಆಧ್ಯಾತ್ಮ ವಿಚಾರಕ್ಕೆ ಸೀಮಿತವಾಗಿರದೆ ಬದುಕಿನ ನೈಜ ಅನುಭವಗಳಜನ್ಯವೂ ಆಗಿರಬಹುದು ಎಂಬ ನೆಲೆಯಲ್ಲಿ, ಬದುಕಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಕರೆತಂದು ನಿರೂಪಿಸಿದ ಒಂದು ಅದ್ಭುತ ಪ್ರಯೋಗ.
ಸರಸ್ವತಿ ಅವರು ಕನ್ನಡದ ಅದ್ಭುತ ಸಾಹಿತ್ಯ ಕೃತಿಗಳನ್ನು ರೇಡಿಯೋ ನಾಟಕಕ್ಕೆ ತಂದು ಬೆರಗು ಮೂಡಿಸಿದವರು ಕೂಡ. ದೇವುಡು ಅವರ ಯಾಜ್ಞವಲ್ಕ್ಯ, ಶಿವರಾಮ ಕಾರಂತರ ‘ಅಳಿದ ಮೇಲೆ’, ಎಚ್. ಎಸ್. ವೆಂಕಟೇಶಮೂರ್ತಿ ಅವರ 'ಮನೆ ಬೆಂಕಿ ಗಾಳಿ', ನಿರಂಜನ ಅವರ 'ಚಿರಸ್ಮರಣೆ' ಅಂತಹ ಕೃತಿಗಳೂ ಈ ನಾಟಕಗಳಲ್ಲಿ ಮೂಡಿದ್ದವು ಎಂಬುದು ವಿಶೇಷ.
ಹಲವು ಹಂತಗಳಲ್ಲಿ ಕೆಲಸಮಾಡಿ ನಿರ್ದೇಶಕರಾಗಿ ನಿವೃತ್ತರಾದ ಎಚ್. ಎಸ್. ಸರಸ್ವತಿ ಅವರು ಆಕಾಶವಾಣಿಯ ವಿವಿಧ ಕಾಲಘಟ್ಟಗಳಲ್ಲಿನ ಬದಲಾವಣೆಗಳಲ್ಲಿ ನುರಿತು, ಅರಿತು, ಇರುವ ಸೀಮಿತ ಸಾಧ್ಯತೆಗಳಲ್ಲೂ ಹೇಗೆ ಉತ್ತಮ ಕೆಲಸ ಮಾಡಬಹುದೆಂಬುದನ್ನು ತಮ್ಮ ಉತ್ಸಾಹ ಚೈತನ್ಯಗಳಿಂದ ನಿರೂಪಿಸಿದವರು ಎಂಬುದು ಬಹಳಷ್ಟು ಮಂದಿ ಹೇಳುವ ಮಾತು.
ಉತ್ಸಾಹಿಗಳೂ, ಸಾಹಿತ್ಯ - ಸಂಗೀತ - ಸಂಸ್ಕೃತಿಗಳ ಪ್ರಿಯರೂ, ಸರಳ ಸ್ನೇಹಪರರೂ ಆದ ಎಚ್. ಎಸ್. ಸರಸ್ವತಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.
ಮಾಹಿತಿ ಸಹಕಾರ: B.k. Sumathi 🌷🙏🌷
Happy birthday to All India Radio fame H.S. Saraswati 🌷🙏🌷
ಕಾಮೆಂಟ್‌ಗಳು