ಸೋಮನಾಥ್ ಚಟರ್ಜಿ
ಸೋಮನಾಥ್ ಚಟರ್ಜಿ
ಸೋಮನಾಥ್ ಚಟರ್ಜಿ ದೇಶ ಕಂಡ ಉತ್ತಮ ರಾಜಕಾರಣಿಗಳಲ್ಲೊಬ್ಬರು. ಲೋಕಸಭೆ ಸ್ಪೀಕರ್ ಆಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅವರು ಶ್ರೇಷ್ಠ ಸಂಸದೀಯ ಪಟು ಪ್ರಶಸ್ತಿಗೂ ಭಾಜನರಾಗಿದ್ದರು. ಅವರು ಮಾತನಾಡುವಾಗ ಸಂಸತ್ತಿನ ಸದನಗಳು ಮಾತ್ರವಲ್ಲದೆ ದೇಶದ ಜನತೆಯೂ ಕಿವಿಗೊಡುತ್ತಿತ್ತು.
ಸೋಮನಾಥ್ ಚಟರ್ಜಿ ಅಸ್ಸಾಂನ ತೇಜ್‌ಪುರದಲ್ಲಿ 1929ರ ಜುಲೈ 25ರಂದು ಜನಿಸಿದರು. ಅವರ ತಂದೆ ಎನ್.ಸಿ. ಚಟರ್ಜಿ ಒಂದು ಕಾಲದಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದರು. ಬೀಣಾಪಾಣಿ ಅವರ ತಾಯಿ. ಕೋಲ್ಕತದಲ್ಲಿ ಶಿಕ್ಷಣ ಪಡೆದ ನಂತರ ಯುಕೆಯ ಮಿಡ್ಲ್ ಟೆಂಪಲ್ ಕಾನೂನು ಕಾಲೇಜಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದಿದ್ದ ಚಟರ್ಜಿ ಅವರು, 1968ರಿಂದ 2008ರ ವರೆಗೆ ನಾಲ್ಕು ದಶಕಗಳ ಕಾಲ ಸಿಪಿಐ(ಎಂ) ಸದಸ್ಯರಾಗಿದ್ದರು.
ಸೋಮನಾಥ್ ಚಟರ್ಜಿ 1971ರಲ್ಲಿ ಸಿಪಿಎಂ ಬೆಂಬಲಿತ ಪಕ್ಷೇತರರಾಗಿ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾದರು. ನಂತರ ಸತತ 10 ಬಾರಿ ಚುನಾಯಿತರಾಗಿದ್ದರು. 1984ರಲ್ಲಿ ಒಂದು ಬಾರಿ ಮಾತ್ರ ಮಮತಾ ಬ್ಯಾನರ್ಜಿ ಅವರ ವಿರುದ್ಧ ಸೋಲುಂಡಿದ್ದರು. 1989ರಿಂದ 2004ರ ವರೆಗೆ ಚಟರ್ಜಿ ಅವರು ಲೋಕಸಭೆಯಲ್ಲಿ ಸಿಪಿಎಂ ನಾಯಕರಾಗಿದ್ದರು. 1996ರಲ್ಲಿ ಶ್ರೇಷ್ಠ ಸಂಸದೀಯ ಪಟು ಪ್ರಶಸ್ತಿ ಪಡೆದ ಚಟರ್ಜಿ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿದ್ದರು. ಹಲವು ಸಂಸದೀಯ ಸಮಿತಿಗಳ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದ ಅವರು ಪಕ್ಷಭೇದವಿಲ್ಲದೆ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು.
2004ರಲ್ಲಿ ಯುಪಿಎ-1 ಸರಕಾರದ ಅವಧಿಯಲ್ಲಿ ಸೋಮನಾಥ್ ಚಟರ್ಜಿ ಅವರು ಸರ್ವಾನುಮತದಿಂದ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು. ಪ್ರಕಾಶ್ ಕಾರಟ್ ಅವರ ನಾಯಕತ್ವದಲ್ಲಿದ್ದ ಸಿಪಿಎಂ, 2008ರ ಜುಲೈನಲ್ಲಿ ಯುಪಿಎ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂದೆಗೆದುಕೊಂಡಾಗ, ಚಟರ್ಜಿ ಅವರು, ತಮ್ಮ ಹುದ್ದೆ ಪಕ್ಷ ರಾಜಕೀಯಕ್ಕೆ ಮೀರಿದ್ದು ಎಂದು ಪ್ರತಿಪಾದಿಸಿ ರಾಜೀನಾಮೆ ನೀಡಲು ನಿರಾಕರಿಸಿದರು. ಹೀಗಾಗಿ ಚಟರ್ಜಿ ಅವರನ್ನು ಅವರ ಪಕ್ಷ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿತು.
ಸೋಮನಾಥ್ ಚಟರ್ಜಿ ಅವರ ಪ್ರಮುಖ ನಿರ್ಧಾರಗಳಲ್ಲಿ, ಲೋಕಸಭೆಯ ಶೂನ್ಯವೇಳೆಯ ಕಲಾಪಗಳ ನೇರ ಪ್ರಸಾರವನ್ನು ಆರಂಭಿಸಿದ್ದು, ಪ್ರಮುಖವಾದದ್ದು. 2004ರ ಜುಲೈ 5ರಂದು ಶೂನ್ಯವೇಳೆಯ ಕಲಾಪಗಳನ್ನು ಟಿವಿಯಲ್ಲಿ ನೇರಪ್ರಸಾರ ಮಾಡಲು ಅವರು ಅನುಮತಿ ನೀಡಿದ್ದರು. 2006ರ ಜುಲೈನಲ್ಲಿ ಅವರಿದ್ದ ಅವಧಿಯಲ್ಲಿ ಪೂರ್ಣ ಪ್ರಮಾಣದ ಲೋಕಸಭಾ ಚಾನೆಲ್ ಆರಂಭಗೊಂಡಿತು. 2009ರಲ್ಲಿ ಅವರು ಸಕ್ರಿಯ ರಾಜಕಾರಣದಿಂದ ನಿವೃತ್ತರಾದರು.
ಸೋಮನಾಥ ಚಟರ್ಜಿ ಅವರು 2018ರ ಆಗಸ್ಟ್ 13ರಂದು ಈ ಲೋಕವನ್ನಗಲಿದರು.
On the birth anniversary of great politician Somanath Chatterjee
ಕಾಮೆಂಟ್‌ಗಳು