ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಕುಲ ನಿರ್ಗಮನ 14


 

ಗೋಕುಲ ನಿರ್ಗಮನ 14

(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)


ರಾಧೆ

ಹಾಡು: ರಾಗ-ಕಾನಡ

ಬರುತಿಹನೇ ನೋಡೆ ವಾರಿಜಲೋಚನ ||ಪ||

ಬರುವನೆ ಇತ್ತೆಡೆ ಪೇಳು ನನ್ನಾಣೆ ||ಅ.ಪ||


ಕೊರಲಿನ ತುಲಸೀಮಾಲೆಯ ಮೇಲೆ

ಬೀಸಿ ಬಂದಂತಿರುವೆಲರನು ಕೇಳೆ

ಸಿಂಗದ ತೆರ ನಡೆ ನಡೆವ ಗಂಭೀರನ

ದೋತರದುಲಿವೋ ಎಲೆಯುಲಿವೋ ಹೇಳೆ ಬರುತಿಹನೇ


ನಡುವಿನ ಉಡಿದಾರ ಘುಲುಘುಲುಕೆಂದುದೆ

ಸನಿಯದ ಪೊದರೆಡೆ ಈ ದನಿ ಯಾವುದೆ

ಮರೆಯದೆ ಬಹನೋ ನೆನೆಯದೆ ನಿಲುವನೊ

ಬಗೆಬಗೆಯಳುಕೊಳು ಮಿಡುಕುತಿಹುದೆ ಮನ-ಬರುತಿಹನೇ

( ಅತ್ತಡೆ ಕೃಷ್ಣ ಶ್ರೀದಾಮನೊಡನೆ ಪ್ರವೇಶಿಸುತ್ತಾರೆ. )


ಕೃಷ್ಣ


ಚಂದ್ರ ಮೂಡಲೆಚ್ಚರುವ ಕುಮುದಿನಿ ಬೀಸುಗಾಳಿಯೊಳಗಲೆಯುವ ತೆರದೊಳು ಎನ್ನ ಬಯಕೆಯ ಬಿರುವೆಲರೊಳು ಭಾಮಿನಿ ಮನವಲೆವೊಲು ಮೈ ಬಳಲಿಸುತಿರುವಳು ಕೆಳೆಯನೆ ನೋಡದೊ ವಾರಿಜಲೋಚನೆ ಹಳುವೊಳೆನಗೆ ಹಂಬಲಿಸುವ ಪರಿಯ


ರಾಧೆ

( ಇತ್ತೆಡೆ )


ಬಂದನೆ ಗೆಳತಿ ಬಂದರೇನೆ ಗತಿ 

ನಿಂದರೇಗೆಯ್ವೆ ಸನಿಯದೊಳಿನಿಯ

ಬಂದು ನಿಂದು ರಾಧೇ ಎನಲೇಪರಿ ದುಮುದುಮು ದುಡಿಯುವ ಹೃದಯವ ತಡೆವೆನೆ ಬರುತಿಹನೇ


ಶ್ರೀದಾಮ

( ಅತ್ತೆಡೆ )


ಕೆಂಪಿನ ಬಳಿವಿಡಿದಲರನು ಸೇರುವ

ದುಂಬಿಯಂತೆ ಸಖ ಇನಿಯರ ಕಂಡೆವು

ನಾಗವೇಣಿ ಓ ಓ ನಾಗವೇಣಿ

ಗೆಳತಿಯ ಗೆಳೆಯಗೆ ಬಿಡು ನನಗೋಗೊಡು ಬಂದನಿಗೋ ಸಖಿ ವಾರಿಜಲೋಚನ ಬೃಂದಾವನದೊಳು ಇನಿಯಳನರಸಿ 


ನಾಗವೇಣಿ

( ಇತ್ತ )

ಅಗೊ ಅಗೊ ರಾಧೇ


ರಾಧೆ

ಏನಾರೆಲ್ಲಿಯೆ


ನಾಗವೇಣಿ

ಉದಯದೊಳಿನನೆಲ್ಲೆಂಬರೆ – ಕಣ್ತೆರೆ


ರಾಧೆಷ

ನಿಲ್ಲು ಗೆಳತಿ ತುಸ ನಿಲ್ಲು ಗೆಳತಿ ಓ


ನಾಗವೇಣಿ

ಅಂಜಲೇಕೆ ಸಖಿ - ಅನ್ಯನೆ ನಿನಗೆ


ಶ್ರೀರಾಮ ಮತ್ತು ನಾಗವೇಣೀ

(ಹೋಗುತ್ತಾ)

ಬಂದನಿಗೋ ಸಖಿ ವಾರಿಜಲೋಚನ ಬೃಂದಾವನದೊಳು ನಿನ್ನನೆ ಅರಸಿ

(ಹೋಗುತ್ತಾರೆ.)


************

ರಾಧೆಯು ಸಖಿ ನಾಗವೇಣಿಯನ್ನು ಕೃಷ್ಣನ ಬರುವಿಕೆಯ ಬಗ್ಗೆ ಆತಂಕದಿಂದ ತಲ್ಲಣಿಸುತ್ತಾಳೆ. ಬರುವನೋ ಇಲ್ಲವೋ ಎಂಬ ಸಂದೇಹ.


ಕೊರಲಿನಲ್ಲಿ ತುಲಸೀಮಾಲೆಯನ್ನು ಧರಿಸಿರುವನು. ಅದರ ಮೇಲೆ ಬೀಸಿ ಬಂದ ಗಾಳಿಯು ಅವನ ಬರುವಿಕೆಯನ್ನು ಸೂಚಿಸುತ್ತಿದೆ. ಸಿಂಹದ ನಡಿಗೆಯವನೂ ಗಂಭೀರನೂ ಆದ ಅವನ ದುಕೂಲದ ಸದ್ದೇ ಇದು? ಅಥವಾ ಎಲೆಗಳ ಸದ್ದೋ...? ಹೇಳು ಗೆಳತಿ.


ನಡುವಿನಲ್ಲಿರುವ ಉಡಿದಾರದ ಗೆಜ್ಜೆಗಳು ಘಲ್ ಘಲ್ ಎನ್ನುತ್ತಿದೆಯೆ? ಹತ್ತಿರದ ಪೊದರಿನಲ್ಲಿ ಕೇಳಿಸುತ್ತಿರುವ ಈ ಧ್ವನಿ ಯಾವುದೆ? ನನ್ನನ್ನು ಮರೆಯದೆ ಬರುವನೋ ಅಥವಾ ನೆನೆಯದೆ ನಿಲ್ಲುವನೋ...ಹೀಗೆ ಬಗೆಬಗೆಯ ಅಳುಕಿನಲ್ಲಿ ಮನಸ್ಸು ಮಿಡುಕುತ್ತಿದೆ ಗೆಳತಿ


ಇತ್ತ ಕೃಷ್ಣ ಗೆಳೆಯನೊಡನೆ ಪ್ರವೇಶಿಸುವನು. ಅವನು ಗೆಳೆಯನಿಗೆ ಹೇಳುವನು. ಚಂದ್ರೋದಯವಾಗುತ್ತಲೂ ಕುಮುದಿನಿ ಎಚ್ಚರಾಗುವಂತೆ ಬೀಸುವ ಗಾಳಿಯಲ್ಲಿ ಅಲೆಯುವ ಮನಸ್ಸು ಭಾಮಿನಿಯನ್ನು ನೆನೆದು ಮೈ ಬಳಲುತ್ತಿದೆ.  ಗೆಳೆಯನೆ, ನೋಡು ವಾರಿಜಲೋಚನೆಯು ಕಾಡಿನಲ್ಲಿ ನನಗಾಗಿ ಹಂಬಲಿಸುತ್ತಿರುವ ರೀತಿಯನ್ನು ನೋಡು.


ಮತ್ತೆ ಇತ್ತ ಕಡೆ ರಾಧೆಯು ತನ್ನ ಗೆಳತಿಯೊಂದಿಗೆ ಮನದ ಹಂಬಲವನ್ನು ಹೇಳತೊಡಗುವಳು.


ಬಂದನೇನೇ ಗೆಳತಿ? ಬಂದರೆ ಏನು ಗತಿ? ಹತ್ತಿರ ಬಂದು ನಿಂತರೆ ಏನು ಮಾಡಲಿ?  ಬಂದು ನಿಂತು ರಾಧೇ ಎಂದರೆ ಏನು ಗತಿ? ಹೃದಯ ದುಮುಗುಟ್ಟುತ್ತಿದೆ ಗೆಳತಿ.


ಅತ್ತ ಕಡೆ ಶ್ರೀದಾಮನು ಇವರಿಬ್ಬರನ್ನೂ ಕಂಡನು. ಸುವಾಸನೆಯನ್ನರಸಿ ಬರುವ ದುಂಬಿಯಂತೆ ಇನಿಯರನ್ನು ಕಂಡೆವು. ತನ್ನ ಪ್ರಿಯೆಯನ್ನು ಕರೆಯುವನು. ನಾಗವೇಣೀ, ಅವಳನ್ನು ಅವಳ ಇನಿಯನೊಂದಿಗೆ ಬಿಟ್ಟು ನೀನು ನನ್ನೊಂದಿಗೆ ಬಾ ಎನ್ನುವನು.


ನಾಗವೇಣಿಯು ಅಗೋ ಅಗೋ ರಾಧೇ ಎಂದು ಕೂಗುವಳು. ರಾಧೆಗೆ ನಾಚಿಕೆ. ಭಯ. ಆತಂಕ. ಏನು, ಯಾರು, ಎಲ್ಲಿ ಎಂದು ಒಂದೇ ಸಮನೆ ಪ್ರಶ್ನಿಸುವಳು. ಹಗಲಿನಲ್ಲಿ ಸೂರ್ಯನೆಲ್ಲಿ ಎನ್ನುವರೆ ಗೆಳತಿ? ಕೃಷ್ಣನಲ್ಲವೆ ಎಂದಾಗ ತುಸು ನಿಲ್ಲು ಎಂದು ರಾಧೆಯೆಂದಾಗ ಅಂಜಿಕೆಯೇಕೆ  ನಿನ್ನವನು ಬಂದನು ಎಂದು ಶ್ರೀದಾಮನೊಡನೆ ನಾಗವೇಣಿ ಹೊರಡುವಳು.


ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar


(

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ