ಸ್ವಾತಂತ್ರ್ಯ ನೋಟ - 2
ರಾಣಿ ಅಬ್ಬಕ್ಕ
ಸ್ವಾತಂತ್ರ್ಯ ನೋಟ - 2
ಇಂದು ಚರಿತ್ರೆಯಲ್ಲಿ ಕೆಲವು ಶತಮಾನ ಹಿಂದೆ ಹೋಗುತ್ತಿದ್ದೇನೆ. ನನಗೆ ಸ್ವಾತಂತ್ರ್ಯ ಚರಿತ್ರೆಯನ್ನು ಘಟನಾವಳಿಗಳ ಜೊತೆ ಹೇಳುವುದು ಮಾತ್ರಾ ಉದ್ದೇಶವಾಗಿಲ್ಲದೆ, ಸ್ವಾತಂತ್ರ್ಯದ ಅರ್ಥ ನಮ್ಮ ಅನುಭವಕ್ಕೆ ಬರಬೇಕು ಎಂಬ ಆಶಯ ಹೊಂದಿದ್ದೇನೆ.
ಸಾಮಾನ್ಯವಾಗಿ ನಾವು ಸ್ವಾತಂತ್ರ್ಯಹರಣ ಅಂದರೆ ಬ್ರಿಟಿಷರ ಕಡೆ ಮಾತ್ರಾ ಚಿಂತಿಸುತ್ತೇವೆ. ರಾಷ್ಟ್ರಭಕ್ತಿ ಎಂಬೋದು ಪಕ್ಕದ ದೇಶದ ಮೇಲೆ ಕ್ರಿಕೆಟ್ ಮ್ಯಾಚ್ ಗೆದ್ದಾಗ ಉಂಟಾಗುವ ಉತ್ಸಾಹದಲ್ಲಿ, ಆ ದೇಶದ ಮೇಲೆ ಪ್ರತೀಕಾರ ಆದಾಗ ಕಾಣುವ ಸಂತಸದಲ್ಲಿ, ಗಡಿಯಲ್ಲಿರುವ ದೊಡ್ಡ ದೇಶ ಆಗಾಗ ಮಾಡುವ ಕುತಂತ್ರಗಳ ತಕರಾರಿಗೆ ನಮ್ಮ ದೇಶಕ್ಕೆ ಬೇಕಾದ ಶಕ್ತಿ ಎಂದು ಬರುತ್ತದೋ ಎಂಬ ಅತೃಪ್ತಿಗಳಲ್ಲಿ ಮಾತ್ರಾ ದೇಶಿಗರಿಗೆ ಬಂದರೆ ಸಾಲದು. ಯಾವುದೇ ದೇಶದೊಳಗಿನ ಆಂತರಿಕ ಶಕ್ತಿಗಳಿಂದಾಗಲಿ, ಹೊರದೇಶದ ಶಕ್ತಿಗಳಿಂದಾಗಲಿ ಮತ್ತು ನಮ್ಮೊಳಗೇ ಇರುವ ನಮಗೇ ಚಿಂತಿಸಿದರೆ ಅಸಹ್ಯತೆ ಹುಟ್ಟಿಸುವ ಕೀಳುತನಗಳಿಂದಾಗಲಿ ಹೊರಬರುವದೂ ನಮ್ಮ ಸ್ವಾತಂತ್ರ್ಯದ ಪರಿಕಲ್ಪನೆಯಲ್ಲಿ ಮೂಡಬೇಕು.
ಭಾರತ ಎಂಬುದು ದೊಡ್ಡ ಏಕ ಸಾಮ್ರಾಜ್ಯವಾಗಿ ನಮಗೆ ಗೊತ್ತಿರುವ ಚರಿತ್ರೆಯ ಪುಟಗಳಲ್ಲಿ ಇಲ್ಲದಿದ್ದರೂ ಈ ಭಾರತ ವರ್ಷದ ಮೇಲೆ ನಿರಂತರವಾಗಿ ಆಕ್ರಮಣಗಳು ನಡೆದು ಹಲವು ಆಮದು ಸಂಸ್ಕೃತಿಗಳು ಇಲ್ಲಿನ ನೆಲದ ಮೇಲೆ ಅಳಿಸಲಾಗದಂತಹ ಅಚಾತುರ್ಯ ನಡೆಸಿಬಿಟ್ಟಿವೆ. ಸದ್ಯಕ್ಕೆ ಬ್ರಿಟಿಷರಿಗಿಂತ ಹಿಂದೆ ಬಂದ ಪೋರ್ಚುಗೀಸರ ಕಾಲದಲ್ಲಿ ನಡೆದ ಘಟನೆಯೊಂದನ್ನು ಇಲ್ಲಿ ನೋಡೋಣ.
ತುಳುನಾಡಿನ ರಾಣಿ ಅಬ್ಬಕ್ಕ ಚೌಟ ದೇವಾಲಯಗಳ ನಗರಿ ಎಂದೇ ಖ್ಯಾತವಾಗಿರುವ ಮೂಡಬಿದರೆ ಪ್ರದೇಶವನ್ನಾಳಿದ ಜೈನ ಮತದ ಚೌಟ ವಂಶಕ್ಕೆ ಸೇರಿದವರು. ಪುತ್ತಿಗೆ ಅವರ ರಾಜಧಾನಿಯಾಗಿತ್ತು. ಬಂದರು ನಗರಿ ಉಳ್ಳಾಲವು ಅವರ ಉಪರಾಜಧಾನಿಯಾಗಿತ್ತು.
ಆಯಕಟ್ಟಿನ ಪ್ರದೇಶವಾದ ಉಳ್ಳಾಲವನ್ನು ವಶಪಡಿಸಿಕೊಳ್ಳಲು 16ನೇ ಶತಮಾನದಲ್ಲಿ ಪೋರ್ಚುಗೀಸರು ನಾನಾರೀತಿಯ ಹೋರಾಟಗಳನ್ನು ನಡೆಸಿದರಾದರೂ ರಾಣಿ ಅಬ್ಬಕ್ಕರ ಸಾಹಸದಿಂದಾಗಿ ಸುಮಾರು ನಾಲ್ಕು ದಶಕಗಳ ಕಾಲ ಸಫಲವಾಗಲಿಲ್ಲ. ಇಂತಹ ಧೈರ್ಯ ಮತ್ತು ಸ್ಥೈರ್ಯಕ್ಕೆ ಹೆಸರಾಗಿದ್ದ ಅಬ್ಬಕ್ಕ ವಸಾಹತುಶಾಹಿಗಳ ವಿರುದ್ಧ ಹೋರಾಡಿದ ಭಾರತೀಯ ಮಹಿಳೆಯರಲ್ಲಿ ಮೊದಲಿಗರಾಗಿ ಕಣ್ಮುಂದೆ ಬಂದು ನಿಲ್ಲುತ್ತಾರೆ.
ಬಹುತೇಕ ಕರಾವಳಿಯ ಸಂಪ್ರದಾಯದಂತೆ ಚೌಟ ವಂಶಸ್ಥರೂ ಅಳಿಯ ಸಂತಾನದ ಆಳ್ವಿಕೆಯನ್ನು ಅನುಸರಿಸಿದ ಕಾರಣ, ಅಬ್ಬಕ್ಕನ ಮಾವ ತಿರುಮಲರಾಯರು ಅಬ್ಬಕ್ಕಳಿಗೆ ಸಕಲ ಯುದ್ಧತಂತ್ರಗಳನ್ನೂ, ಸೈನಿಕ ಕೌಶಲ್ಯಗಳನ್ನೂ ಹೇಳಿಕೊಟ್ಟಿದ್ದಲ್ಲದೇ ಆಕೆಗೆ ರಾಣಿ ಪಟ್ಟಕಟ್ಟಿದರು. ವಿವಾಹ ವಯಸ್ಕಳಾದ ಮೇಲೆ ಮಂಗಳೂರಿನ ಅರಸನಾಗಿದ್ದ ಲಕ್ಷ್ಮಪ್ಪ ಅರಸನೊಂದಿಗೆ ಆಕೆಯ ವಿವಾಹ ಸಕಲ ವೈಭವದಿಂದ ನೆರವೇರಿತು. ಆದರೆ ವಿವಾಹ ಸಂಬಂಧ ಬಹಳ ಕಾಲ ಉಳಿಯದೆ ಅಬ್ಬಕ್ಕ ಪುನಃ ಉಳ್ಳಾಲಕ್ಕೆ ಹಿಂತಿರುಗಿದರು.
15ನೇ ಶತಮಾನದಲ್ಲಿ ಕೇರಳದ ಮೂಲಕ ಭಾರತಕ್ಕೆ ಆಗಮಿಸಿದ ಪೋರ್ಚುಗೀಸರು ಕ್ರಮೇಣ ಅಕ್ಕ ಪಕ್ಕದ ಭೂಭಾಗಗಳನ್ನು ಒಂದೊಂದಾಗಿ ಆಕ್ರಮಿಸಿಕೊಳ್ಳುವುದರಲ್ಲಿ ಸಫಲರಾದರು. ಗೋವೆಯನ್ನು ಆಕ್ರಮಿಸಿಕೊಂಡ ನಂತರ ಅವರ ಗಮನ ಕರ್ನಾಟಕದ ಕರಾವಳಿಯತ್ತ ತಿರುಗಿ, 1525ರಲ್ಲಿ ದಕ್ಷಿಣ ಕನ್ನಡದ ಕರಾವಳಿಯ ಮೇಲೆ ದಾಳಿ ಮಾಡಿ ಮಂಗಳೂರು ಬಂದರನ್ನು ನಾಶಪಡಿಸಿದರು. ಆ ಸಮಯದಲ್ಲಾಗಲೇ ಉಳ್ಳಾಲದ ನೈಸರ್ಗಿಕವಾದ ಸಮೃದ್ಧ ಬಂದರು ಪಶ್ಚಿಮಕ್ಕೆ ಅರೇಬಿಯಾ ಮತ್ತು ಇತರ ದೇಶಗಳಿಗೆ ಮಸಾಲ ಪದಾರ್ಥಗಳ ವ್ಯಾಪಾರದ ಕೇಂದ್ರವಾಗಿತ್ತು. ಅದು ಲಾಭದಾಯಕ ವ್ಯಾಪಾರ ಕೇಂದ್ರವಾಗಿದ್ದರಿಂದ, ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟಿಷರು ಈ ಪ್ರದೇಶದ ನಿಯಂತ್ರಣಕ್ಕಾಗಿ ಮತ್ತು ವ್ಯಾಪಾರ ಮಾರ್ಗಗಳಿಗಾಗಿ ಪರಸ್ಪರ ತಮ್ಮಲ್ಲಿಯೇ ಪೈಪೋಟಿ ನಡೆಸುತ್ತಿದ್ದರು. ಆದರೆ ಸ್ಥಳೀಯವಾಗಿ ರಾಣಿ ಅಬ್ಬಕ್ಕ ಪ್ರಬಲರಾಗಿದ್ದರಿಂದ ಅದು ಸಫಲವಾಗದೆ ಅವರೆಲ್ಲರೂ ಅಬ್ಬಕ್ಕನ ಮೇಲೆ ಮುಗಿಬೀಳಲು ಸಮಯ ಸಾಧಿಸುತ್ತಿದ್ದರು.
ರಾಣಿ ಅಬ್ಬಕ್ಕ ಸ್ವತಃ ಜೈನ ವಂಶಸ್ಥರಾದರೂ ಹಿಂದೂಗಳನ್ನು ಮತ್ತು ಮುಸ್ಲಿಮರನ್ನು ಸೌಹಾರ್ದಯುತವಾಗಿ ಮತ್ತು ಸಮಾನವಾಗಿ ಕಾಣುತ್ತಾ ಅವರವರ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ಆಡಳಿತದಲ್ಲಿ ಅವರನ್ನು ಬಳಸಿಕೊಳ್ಳುತ್ತಾ ಎಲ್ಲರ ಮನಗೆದ್ದಿದ್ದರು. ಆಕೆಯ ಸೈನ್ಯದಲ್ಲಿ ಎಲ್ಲಾ ಪಂಗಡಗಳು ಮತ್ತು ಜಾತಿಗಳ ಜನರಿಗೂ ಅವಕಾಶ ನೀಡಿದ್ದರು. ಹಾಗಾಗಿ ಎಲ್ಲರೂ ಆಕೆಯನ್ನು ಬಹಳವಾಗಿ ಇಷ್ಟ ಪಡುತ್ತಿದ್ದಲ್ಲದೇ ಆಕೆಗಾಗಿ ಪ್ರಾಣವನ್ನೂ ಕೊಡುವಷ್ಟರ ಮಟ್ಟಿಗಿನ ನಿಷ್ಟೆಯನ್ನು ಹೊಂದಿದ್ದರು. ಆಗಿನ ದಿನಗಳಲ್ಲಿ ಬ್ಯಾರಿಗಳು ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುವವರಾಗಿದ್ದರು. ಅಬ್ಬಕ್ಕ ಬ್ಯಾರಿಗಳಿಗೆ ಬೌಲ್ಡರ್ ನಿರ್ಮಾಣ ಕಾರ್ಯವಹಿಸಿ ಮಳಲಿಯಲ್ಲಿ ಅಣೆಕಟ್ಟು ನಿರ್ಮಾಣದ ಮೇಲ್ವಿಚಾರಣೆಯನ್ನು ಸ್ವಯಂ ನಿರ್ವಹಿಸಿದ್ದಾಗಿ ಚರಿತ್ರೆಯ ಸಂಶೋಧನೆಗಳಲ್ಲಿ ಕಂಡುಬಂದಿದೆ.
ಅಬ್ಬಕ್ಕ ರಾಣಿ ರಾಜತಾಂತ್ರಿಕವಾಗಿ ಕ್ಯಾಲಿಕಟ್ಟಿನ ಜಮೋರಿನ್ ಜೊತೆ ಮೈತ್ರಿ ಮಾಡಿಕೊಂಡಿದ್ದಲ್ಲದೇ, ಬಿದನೂರಿನ ಪ್ರಬಲ ರಾಜ ವೆಂಕಟಪ್ಪನಾಯಕರ ಬೆಂಬಲವನ್ನೂ ಪಡೆದು ಸ್ಥಳೀಯ ಆಡಳಿತಗಾರರ ಮೈತ್ರಿಗೆ ಮತ್ತಷ್ಟು ಬಲವನ್ನು ನೀಡಿದ್ದರು. ಹೀಗಾಗಿ ಪೋರ್ಚುಗೀಸ್ ಪಡೆಗಳಿಗೆ ಈಕೆ ಸಿಂಹಸ್ವಪ್ನವಾಗಿದ್ದರು.
1555ರಲ್ಲಿ ಪ್ರಬಲ ಪೋರ್ಚುಗೀಸರು ಕ್ಯಾಲಿಕಟ್‌ನ ಜಮೊರಿನ್ ಒಡೆತನಗಳನ್ನು ನಾಶಪಡಿಸಿದ್ದಲ್ಲದೇ, ಬಿಜಾಪುರದ ಸುಲ್ತಾನನನ್ನು ಸೋಲಿಸಿದರು. ಗುಜರಾತಿನ ಸುಲ್ತಾನನಿಂದ ದಮನ್ ಅನ್ನು ವಶಪಡಿಸಿಕೊಂಡಿದ್ದಲ್ಲದೇ, ಮೈಲಾಪುರದಲ್ಲಿ ವಸಾಹತು ಸ್ಥಾಪಿಸಿ, ಬಾಂಬೆಯನ್ನು ವಶಪಡಿಸಿಕೊಂಡರು. ಅದೇ ಸಮಯದಲ್ಲಿ ಗೋವೆಯನ್ನು ತಮ್ಮ ಪ್ರಧಾನ ಕಛೇರಿಯನ್ನಾಗಿ ಮಾಡಿಕೊಂಡು ಹಿಂದೂಗಳನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡುತ್ತಾ ಸಾಗಿದ್ದರು.
ಇಷ್ಟೆಲ್ಲಾ ಸಾಧಿಸಿದ್ದರೂ ವ್ಯಾಪಾರ ವಹಿವಾಟುಗಳ ಪ್ರಮುಖ ಕೇಂದ್ರವಾಗಿದ್ದ ಮಂಗಳೂರು ಮತ್ತು ಉಲ್ಲಾಳ ತಮ್ಮ ಕೈವಶವಾಗದಿದ್ದದ್ದು ಪೋರ್ಚುಗೀಸರ ಮನದಲ್ಲಿ ಹಬೆಯಾಡುತ್ತಿತ್ತು. ಹಾಗಾಗಿ ಮಂಗಳೂರಿನಿಂದ ದಕ್ಷಿಣಕ್ಕೆ ಕೇವಲ 14 ಕಿಲೋಮೀಟರ್ ದೂರದಲ್ಲಿರುವ ರಾಣಿ ಅಬ್ಬಕ್ಕನ ಆಡಳಿತದಲ್ಲಿದ್ದ ಉಳ್ಳಾಲದ ಬಂದರನ್ನು ವಶಪಡಿಸಿಕೊಳ್ಳಲು ನಿರ್ಧರಿಸಿ, ಅಬ್ಬಕ್ಕನನ್ನು ಲಘುವಾಗಿ ಪರಿಗಣಿಸಿ ಕೆಲವು ದೋಣಿಗಳನ್ನು ಮತ್ತು ಸೈನಿಕರನ್ನು ಕಳುಹಿಸಿ ಆಕೆಯನ್ನು ಸೆರೆ ಹಿಡಿದು ಗೋವೆಗೆ ಕರೆ ತರಲು ಕಳುಹಿಸಿದರು. ಆದರೆ ಅವರು ಕಳುಹಿಸಿದ ಆ ದೋಣಿಗಳು ಮತ್ತೆಂದೂ ಗೋವಾಕ್ಕೆ ಹಿಂತಿರುಗಲಿಲ್ಲ. ಎಷ್ಟು ದಿನಗಳಾದರೂ ತಮ್ಮ ಸೈನಿಕರು ಮರಳಿ ಬಾರದಿದ್ದರಿಂದ ಆಘಾತಕ್ಕೊಳಗಾದ ಪೋರ್ಚುಗೀಸರು, ಈ ಬಾರಿ ಪ್ರಸಿದ್ಧನಾದ ಅಡ್ಮಿರಲ್ ಡೊಮ್ ಅಲ್ವಾರೊ ಡಾ ಸಿಲ್ವೀರಾ ನೇತೃತ್ವದಲ್ಲಿ ಒಂದು ದೊಡ್ಡ ಹಡಗನ್ನು ಕಳಿಸಿದರು. ಅಬ್ಬಕ್ಕನ ಮುಂದೆ ಅಡ್ಮಿರಲ್ ಸಿಲ್ವಿರಾ ಆಟವೇನೂ ನಡೆಯದೇ, ರಕ್ತ ಸಿಕ್ತ ಗಾಯಗಳೊಂದಿಗೆ ಖಾಲಿ ಕೈಯಿಂದ ಹಿಂದಿರುಗಿದ. ಮತ್ತೊಂದು ಪೋರ್ಚುಗೀಸ್ ನೌಕಾಪಡೆಯನ್ನು ಕಳುಹಿಸಿದರೂ ಅವರೂ ಸಹಾ ಸೋತುಸುಣ್ಣವಾಗಿ ಪ್ರಾಣಭಯದಿಂದ ಗಾಯಗೊಂಡ ಕೆಲವರು ಮಾತ್ರ ಗೋವೆಗೆ ಹಿಂದಿರುಗಿದರು.
ಹೀಗೆ ಉಲ್ಲಾಳದ ಮೇಲೆ ಜಯಸಾಧನೆ ಸಾಧ್ಯವಿಲ್ಲದ ಮಾತು ಎಂದರಿತ ಪೋರ್ಚುಗೀಸ್ ಆಡಳಿತ, ಮಂಗಳೂರಿನ ಬಂದರಿನತ್ತ ತಮ್ಮ ಗಮನಹರಿಸಿ ಮಂಗಳೂರು ಬಂದರು ಮತ್ತು ಕೋಟೆಯನ್ನು ಜೊನೊ ಪೀಕ್ಸೊಟೊ ನೇತೃತ್ವದ ಬೃಹತ್ ಸೈನ್ಯದ ಸಹಾಯದಿಂದ ಯಶಸ್ವಿಯಾಗಿ ವಶಪಡಿಸಿಕೊಂಡು ಅಲ್ಲಿಂದ ರಾಣಿ ಅಬ್ಬಕ್ಕಳನ್ನು ಮಣಿಸಲು ಯೋಜನೆ ರೂಪಿಸಿತು. ಅಷ್ಟು ದೊಡ್ಡ ಸೈನಿಕ ಶಕ್ತಿಯನ್ನು ರಾಣಿ ಅಬ್ಬಕ್ಕನ ಸಣ್ಣ ಸೈನ್ಯಕ್ಕೆ ಎದುರಿಸುವುದು ಸಾಧ್ಯವಿರಲಿಲ್ಲ. ಹಾಗಾಗಿ ಪೋರ್ಚುಗೀಸರು ಉಲ್ಲಾಳವನ್ನು ತಲುಪಿದಾಗ ಇಡೀ ಪ್ರದೇಶವೇ ನಿರ್ಜನವಾಗಿತ್ತು. ಎಲ್ಲಿ ನೋಡಿದರೂ ರಾಣಿ ಅಬ್ಬಕ್ಕಳಾಗಲೀ ಆಕೆಯ ಸೈನ್ಯವಾಗಲೀ ಕಾಣಲೇ ಇಲ್ಲ. ಇದನ್ನು ನೋಡಿದ ಪೋರ್ಚುಗೀಸ್ ಜನರಲ್ ಮತ್ತು ಆತನ ಪಡೆ ತಮ್ಮ ಸೈನ್ಯದ ಬಲಕ್ಕೆ ಹೆದರಿ ರಾಣಿ ಅಬ್ಬಕ್ಕ ಓಡಿ ಹೋಗಿರಬಹುದೆಂದು ಎಣಿಸಿ ಅಲ್ಲಿಯೇ ಆ ರಾತ್ರಿ ಸಂತೋಷದಿಂದ ನಿರಾಯಾಸವಾಗಿ ಉಳ್ಳಾಲವನ್ನು ವಶಪಡಿಸಿಕೊಂಡ ಸಂಭ್ರವನ್ನು ಆಚರಿಸಿ ದಣಿವಾರಿಸಿಕೊಳ್ಳಲು ನಿದ್ರೆಗೆ ಜಾರಿ ಹೋಗಿದ್ದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ರಾಣಿ ಅಬ್ಬಕ್ಕ ತನ್ನ 200 ಶಕ್ತಿಶಾಲಿ ಸೈನಿಕರೊಂದಿಗೆ ಏಕಾಏಕಿ ಪೋರ್ಚುಗೀಸರ ಮೇಲೆ ದಾಳಿ ಮಾಡಿ ಪೋರ್ಚುಗೀಸರ ಜನರಲ್ ಜೊನೊ ಪೀಕ್ಸೊಟೊ ಮತ್ತವನ ಸೈನಿಕರ ರುಂಡಗಳನ್ನು ಚೆಂಡಾಡಿದ್ದಲ್ಲದೇ 70ಕ್ಕೂ ಅಧಿಕ ಪೋರ್ಚುಗೀಸರನ್ನು ಸೆರೆಹಿಡಿದರು. ಉಳಿದವರು ಪ್ರಾಣ ಭಯದಿಂದ ಓಡಿಹೋದರು. ಈ ರೀತಿಯಾಗಿ ಚಾಣಾಕ್ಷತನದಿಂದ ಹೆಚ್ಚಿನ ಹೋರಾಟವಿಲ್ಲದೆ ಯುದ್ದ ಜಯಿಸಿದ್ದನ್ನು ಸಂಭ್ರಮಿಸಿದ ಅಬ್ಬಕ್ಕ, ಕೂಡಲೇ ಆ ನಡು ರಾತ್ರಿಯಲ್ಲಿಯೇ ಅದೇ ತನ್ನ ನಂಬಿಕಸ್ಥ ಸೈನಿಕರೊಂದಿಗೆ ಮಂಗಳೂರಿನ ಕೋಟೆಗೆ ಮುತ್ತಿಗೆ ಹಾಕಿ, ಕೋಟೆಯನ್ನು ಯಶಸ್ವಿಯಾಗಿ ವಶಪಡಿಸಿಕೊಂಡು ಅಲ್ಲಿದ್ದ ಪೋರ್ಚುಗೀಸ್ ಅಧಿಕಾರದ ಮುಖ್ಯಸ್ಥ ಅಡ್ಮಿರಲ್ ಮಸ್ಕರೇನ್ಹಸ್ ಎಂಬುವನನ್ನು ಹತ್ಯೆ ಮಾಡಿ ಅಳಿದುಳಿದಿದ್ದ ಪೋರ್ಚುಗೀಸರನ್ನೂ ಗಡಿಪಾರು ಮಾಡಿ ಮಂಗಳೂರಿನ ಕೋಟೆಯ ಮೇಲೆ ತನ್ನ ಪ್ರಾಬಲ್ಯವನ್ನ ಮೆರೆದರು. ನಂತರದ ದಿನಗಳಲ್ಲಿ ಮಂಗಳೂರಿನ ಉತ್ತರಕ್ಕೆ 100 ಕಿ.ಮೀ ದೂರದಲ್ಲಿನ ಕುಂದಾಪುರದಲ್ಲಿದ್ದ ಪೋರ್ಚುಗೀಸರ ವಸಾಹತನ್ನೂ ವಶಪಡಿಸಿಕೊಂಡು ಪೋರ್ಚುಗೀಸರಿಗೆ ಬಾರೀ ರೀತಿಯಲ್ಲಿ ಹೊಡೆತ ನೀಡಿದರು.
ಯುದ್ದದಲ್ಲಿ ಹೋರಾಡಿ ಅಬ್ಬಕ್ಕನನ್ನು ಗೆಲ್ಲಲಾಗದ ಪೋರ್ಚುಗೀಸರು ಅಂತಿಮವಾಗಿ, ಶತ್ರುವಿನ ಶತ್ರು ತಮ್ಮ ಮಿತ್ರ ಎನ್ನುವ ದಾಳ ಬಳೆಸಿ ಆಕೆಯಿಂದ ಪರಿತ್ಯಕ್ತನಾಗಿದ್ದ ಆಕೆಯ ಗಂಡ ಮಂಗಳೂರಿನ ಅರಸನಾಗಿದ್ದ ಲಕ್ಷ್ಮಪ್ಪ ಅರಸನೊಂದಿಗೆ ಸ್ನೇಹ ಬೆಳೆಸಿ, ರಾಣಿ ಅಬ್ಬಕ್ಕನನ್ನು ಸೋಲಿಸಲು ಸಹಾಯ ಕೋರಿದರು. ತನ್ನ ಮಾಜಿ ಪತ್ನಿಯ ವಿರುದ್ಧ ವೈಯಕ್ತಿಕ ಸೇಡನ್ನು ತೀರಿಸಿಕೊಳ್ಳಲು ಹವಣಿಸಿದ್ದ ಲಕ್ಷ್ಮಪ್ಪ ಇದರಿಂದ ತನಗಾಗುವ ವೈಯಕ್ತಿಕ ಲಾಭದ ಕನಸಿನಲ್ಲಿ ಪೋರ್ಚುಗೀಸರ ಪರ ಸೇರಿಕೊಂಡು ಮೋಸದಿಂದ ರಾಣಿ ಅಬ್ಬಕ್ಕನನ್ನು ಸೆರೆ ಹಿಡಿಯಲು ಕಾರಣನಾದ. ಹೀಗೆ ರಾಣಿ ಅಬ್ಬಕ್ಕ 1568ರಲ್ಲಿ ಸೆರೆಯಾದರು.
ಸೆರೆಮನೆಯಿಂದ ಹೇಗಾದರೂ ತಪ್ಪಿಸಿಕೊಳ್ಳಲು ಯೋಚಿಸಿದ ರಾಣಿ ಅಬ್ಬಕ್ಕ ಅಲ್ಲಿಯೂ ದಂಗೆ ಎಬ್ಬಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಪೋರ್ಚುಗೀಸ್ ಸೈನಿಕರಿಂದ 1570 ವರ್ಷದಲ್ಲಿ ಹತ್ಯೆಗೀಡಾದರು ಎಂದು ನಂಬಲಾಗಿದೆ.
2003ರ ಜನವರಿ 15ರಂದು, ಭಾರತ ಸರ್ಕಾರವು ರಾಣಿ ಅಬ್ಬಕ್ಕನ ಹೆಸರಿನಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ನಿರ್ಮಿಸಲಾದ ಐದು ಕಡಲಗಡಿ ಕಾಯುವ ಗಸ್ತು ಹಡಗುಗಳ ಸರಣಿಯಲ್ಲಿ ಮೊದಲನೇ ಭಾರತೀಯ ಕೋಸ್ಟ್ ಗಾರ್ಡ್ ಹಡಗು ಐಸಿಜಿಎಸ್ಸಿಗೆ ರಾಣಿ ಅಬ್ಬಕ್ಕ ಮಹಾದೇವಿ ಎಂದು ಹೆಸರಿಡಲಾಯಿತು.
ಯಕ್ಷಗಾನ ಮತ್ತು ದೈವ ಕೋಲ ಜಾನಪದೀಯ ನೃತ್ಯ ಪ್ರಕಾರಗಳಲ್ಲಿ ರಾಣಿ ಅಬ್ಬಕ್ಕರ ಸಾಧನೆ ಮುಂದೆ ಬಂದ ಜನಾಂಗಗಳಿಗೆ ಗೌರವ ಪ್ರೇರಣೆಗಳ ರೂಪದಲ್ಲಿ ಹರಿದುಬಂದಿದೆ.
ಚಿತ್ರಕೃಪೆ: ಪ್ರೋ. ತುಕಾರಾಮ್ ಪೂಜಾರಿ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ
ನಾಳೆ ಸ್ವಾತಂತ್ರ್ಯ ನೋಟವನ್ನು ಮುಂದುವರೆಸೋಣ....
(
ಕಾಮೆಂಟ್‌ಗಳು