ಸ್ವಾತಂತ್ರ್ಯ ನೋಟ - 1
ಸ್ವಾತಂತ್ರ್ಯ ಎಂದರೆ?
ಸ್ವಾತಂತ್ರ್ಯ ನೋಟ - 1
ಎರಡು ವರ್ಷ ಹಿಂದೆ ಆಗಸ್ಟ್ ಪ್ರಾರಂಭದಲ್ಲಿ ಹಿರಿಯ ಆತ್ಮೀಯರೂ, ಸುದ್ಧಿ ಮಾಧ್ಯಮದ ಪ್ರಖ್ಯಾತರೂ ಆದ, ಪೂಜ್ಯ ಶೇಷಚಂದ್ರಿಕ Sesha Chandrika ಅವರು ಮುಂದಿನ ಕೆಲವು ದಿನ ಭಾರತ ಸ್ವಾತಂತ್ರ್ಯ ಹೋರಾಟದ ಬಗ್ಗೆ ನಿರೂಪಿಸು ಎಂದು ಪ್ರೇರಣೆ ನೀಡಿದ್ದರು. ಆ ನಿಟ್ಟಿನಲ್ಲಿ ಆಗ ಒಂದಷ್ಟು ಕೆಲಸ ಮಾಡಿದಾಗ ಈ ವಿಚಾರದಲ್ಲಿ ಇನ್ನೂ ಹಿಂದೆ ಹಿಂದೆ ಹೋಗಿ ಇನ್ನಷ್ಟು ಅರಿಯುವುದಿದೆ ಅನಿಸಿತು.
ಸಾಮಾನ್ಯವಾಗಿ ದೇಶದ ಬಗ್ಗೆ, ಹೋರಾಟದ ಬಗ್ಗೆ ನಾವು ಓದಿರುವ ವಿಚಾರಗಳು ನಮ್ಮ ಪಠ್ಯಗಳಲ್ಲಿನ ನೀರಸ ನಿರೂಪಣೆಗಳಲ್ಲೊ, ಕಾದಂಬರಿಗಳ ಕಥಾನಕ ನಿರೂಪಣೆಗಳಲ್ಲೋ, ದೇಶಪ್ರೇಮವೆಂಬ ಅತಿಭಾವುಕತೆಗಳಲ್ಲೋ, ಚರಿತ್ರೆ ಎಂಬುದು ಪಕ್ಷಪಾತಗಳ ಸೃಷ್ಟಿ ಎಂಬ ಅಪನಂಬಿಕೆಯಲ್ಲೋ ನಮ್ಮನ್ನು ಕಳೆದುಹೋಗುವಂತೆ ಮಾಡುತ್ತವೆ. ಹೀಗಾಗಿ ಈ ಸ್ವಾತಂತ್ರ್ಯ ಹೋರಾಟ ನಡೆಯನ್ನು ಇವೆಲ್ಲವುಗಳ ಆಚೆಯ ಒಂದು ಸಾಕ್ಷೀ ಪ್ರಜ್ಞೆಯಲ್ಲಿ ಕಾಣುವುದು ಮುಖ್ಯವೇನೊ!
ಹೀಗೆಯೇ ಚಿಂತಿಸುವಾಗ ಇನ್ನಷ್ಟು ಪ್ರಶ್ನೆಗಳು ಕಾಡಿತು. ದೇಶ ಅಂದರೇನು? ಟಿವಿಯಲ್ಲಿ ಹವಾಮಾನ ವರದಿ ತೋರಿಸುವಾಗ ಪುಟ್ಟ ಪುಟ್ಟ ಮೋಡಗಳ ತುಂಡುಗಳನ್ನಂಟಿಸಿರುವ ಹಿಂಬದಿಯ ಭೌಗೋಳಿಕ ನಕ್ಷೆಯೆ?, ಶಾಲೆಯಲ್ಲಿ ನೋಡಿದ ಶಾರದಾ ಅಟ್ಲಾಸ್ನಲ್ಲಿದ್ದ ಭಾರತ ಎಂಬ ಪುಟದಲ್ಲಿದ್ದ ಗೆರಗಳ ಚಿತ್ರವೇ? ಎಲ್ಲಿ ವಿಮಾನದಲ್ಲಿ ಹಾರಲಿಕ್ಕೆ ಪಾಸ್ಪೋರ್ಟ್ - ವೀಸಾ ಅಗತ್ಯವಿಲ್ಲವೋ ಅದೇ ನಮ್ಮ ದೇಶವೇ?
ಹೀಗೆ ಯೋಚಿಸುತ್ತಾ ಹೋದರೆ ವಿಚಿತ್ರವೆನಿಸುತ್ತೆ. ಅಮೆರಿಕದಂತಹ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಮಾಡಿಕೊಂಡು ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವವರು ಆ ದೇಶದ ಮೂಲಕ್ಕೆ ಸೇರಿದವರೆ?
ನಾವು ನಮ್ಮ ದೇಶ ಅಂತ ಹೇಳುವವರೆಲ್ಲ ನಮ್ಮ ದೇಶದಲ್ಲೆ ಎಷ್ಟರ ಮಟ್ಟಿಗೆ ಉಪಸ್ಥಿತಿಯಲ್ಲಿದ್ದೇವೆ?
ನಾವು ನಮ್ಮ ಮಕ್ಕಳನ್ನು ಈ ದೇಶದಲ್ಲಿ ಇರಿಸಿಕೊಳ್ಳದ ಚಿಂತನೆಯಲ್ಲೇಕೆ ಹಲವು ತಲೆಮಾರುಗಳಿಂದ ಪ್ರಯತ್ನಶೀಲರಾಗಿದ್ದೇವೆ?
ನಮ್ಮ ಭಾರತೀಯತೆಯಲ್ಲಿನ ವ್ಯವಸ್ಥೆ ಎಂಬುದೇ ದೇಶ ಎಂಬುದಾದರೆ, ಅದು ನಮಗೆ ಪ್ರಾಮಾಣಿಕವಾಗಿ ಹಿತವೆನಿಸಿದೆಯೆ? ಹೀಗೆ ಹಲವು ವಿಚಾರಗಳು ತಲೆಯಲ್ಲಿ ಸುತ್ತುತ್ತವೆ.
ಕೆಲವು ದಿನಗಳ ಹಿಂದೆ ಪ್ರಥಮ ವಿಶ್ವಮಹಾಯುದ್ಧದ ವಿಚಾರ ಓದುವಾಗ, ಅದಕ್ಕೆ ಇದ್ದ ಕಾರಣಗಳಲ್ಲಿ ಒಂದು ನನಗೆ ಅಚ್ಚರಿ ಹುಟ್ಟಿಸಿತು. ಹೆಚ್ಚು ಜನ, ಹೆಚ್ಚು ವಿದ್ಯಾಭ್ಯಾಸ ಪಡೆಯ ತೊಡಗಿ, ಆ
ವಿದ್ಯಾಭ್ಯಾಸ ಪಡೆದ ಜನಾಂಗದಲ್ಲಿ ಮೂಡಿದ ದೇಶಪ್ರೇಮ ಎನ್ನುವುದು ಹೇಗೆ ಮತ್ತೊಂದು ಪ್ರಾಂತ್ಯ ಹಾಗೂ ದೇಶದ ಕುರಿತಾಗಿ ಅಸಹನೆಯಾಗಿ ತಿರುಗಿ, ಯುದ್ಧಗಳಿಗೆ ಮೂಲಪ್ರವಹಿನಿಯಾಗಿ ರೂಪುಗೊಳ್ಳುತ್ತದೆ ಎಂಬ ಬಗ್ಗೆ ನನ್ನ ಮನ ಅಷ್ಟೊಂದು ದೀರ್ಘವಾಗಿ ಎಂದೂ ಚಿಂತಿಸಿರಲಿಲ್ಲ.
ನಾವು ದೇಶಪ್ರೇಮ ಎಂದು ಕಾಣುವ ಪೂಜ್ಯಭಾವಕ್ಕೆ ಇನ್ನೊಂದೇ ವ್ಯಾಪ್ತಿ ಇರಲು ಹೀಗೆ ಸಾಧ್ಯ. ನಮ್ಮಲ್ಲಿ ಹೀಗೆ ನಾವು ಕಂಡುಕೊಂಡಿರುವ ಅನೇಕ ಪವಿತ್ರತೆಗಳಿಗೂ ವಿಭಿನ್ನ ಮುಖಗಳಿವೆ ಎಂಬುದು ಒಂದಷ್ಟು ಪ್ರಯತ್ನಿಸಿದರೆ ಹೆಚ್ಚು ಹೆಚ್ಚು ಮನದಟ್ಟಾಗುತ್ತದೆ.
ಅದೆಲ್ಲಾ ಇರಲಿ ನಾವು ಹಲವು ನೂರು ವರ್ಷದ ನಮ್ಮದು ಎಂದುಕೊಂಡಿರುವ, ಒಂದಿನಿತು ರೇಖೆಯ ನಡುವಣ ವ್ಯಾಪ್ತಿಯ ಚರಿತ್ರೆಯನ್ನು ನಮ್ಮದು ಎಂದುಕೊಳ್ಳಲು ಆಗ ನಾವಿದ್ದೆವೆ? ಅಕಸ್ಮಾತ್ ಆಗಿನ ದಿನದಲ್ಲಿ ಹಿಂದಿನ ಜನ್ಮದ ಜೀವಿಗಳಾಗಿದ್ದೆವು ಎಂಬ ನಂಬಿಕೆ ನಮಗಿದ್ದ ಪಕ್ಷದಲ್ಲಿ, ನಾವು ಇಂದು ಸಹಾನುಭೂತಿ ಹೊಂದಿಲ್ಲದ ಎದುರು ಪಕ್ಷದ ಭಾಗವೂ ಆಗಿದ್ದಿರಬಹುದಲ್ಲವೆ?.
ಅಂದ ಮೇಲೆ ನಮ್ಮ ಚರಿತ್ರೆಯ ಓದು ಭಾವುಕತೆಯ ಮೀರಿ ಸತ್ಯನಿಷ್ಠೆಯ ಸಾಕ್ಷಿಪ್ರಜ್ಞೆಯಾಗಿರುವುದೇ ಸರಿ.
ಸರಿ ನಾಳೆ ಒಂದಷ್ಟು ಚರಿತ್ರೆಯ ಕದ ತೆರೆಯುವೆ.
A look towards Independence
ಕಾಮೆಂಟ್‌ಗಳು