ಗೋಕುಲ ನಿರ್ಗಮನ 16
ಗೋಕುಲ ನಿರ್ಗಮನ 16
(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)
ಕೃಷ್ಣ
ಎಂದುಮಿಲ್ಲದೀ ಸಂದೆಗವೇಕೆ
ಪ್ರಿಯೆ ಬಾ ಬಾ ನೆಡು ಪ್ರೇಮಪತಾಕೆ ಮನದೊಳೆನ್ನ ಹೆಣ್ಣೆ - ಚೆನ್ನೆ
ಶಂಕೆ ಸೋತಿತೆನ್ನೆ
ಕಂಪುಗೂಡಿದೀ ತಂಪಿನ ಇರುಳು
ತರಮಾಗಿದೆ ಒಲವೊಳು ಕರಗಿರಲು
ನಂಬಿ ಬಾರೆದೆಯ ಕಣ್ಣೆ - ಚೆನ್ನೆ
ಶಂಕೆ ಸೋತಿತೆನ್ನೆ
ಮುಗಿಲು-ಮಿಂಚಂತೆ ಶಿವ-ಶಿವೆಯಂತೆ
ಕೂಡುವ ಬಾರೌ ದಿಟ – ಚೆಲುವಂತೆ
ಲೋಕ ಚೆನ್ನು ಎನ್ನೆ - ಚೆನ್ನೆ
ಶಂಕೆ ಸೋತಿತೆನ್ನೆ
ನಾಳೆಗೆಂತಂದು ಇಂದನು ತೊರೆಯೆ
ಸೂಸಿ ಬಂದ ಸೊಗವಾರಲು ಸರಿಯೆ
ಇಂದೆ ಎಂದೆಂದು ಎನ್ನೆ - ಚೆನ್ನೆ
ಶಂಕೆ ಸೋತಿತೆನ್ನೆ
ರಾಧೆ
[ಕೃಷ್ಣವಶಳಾಗಿ]
ಹಾಡು : ರಾಗ - ನಾಟಕುರಂಜಿ
ಆಡು ಬಾ ಮುದುವೂಡು ಬಾ ಭಯದೂಡು ಬಾ ಒಲವೇ
ಕಾರಮುಗಿಲ ಚೆಲುವಾ ವನಮಾಲೀ
ಜಗನ್ಮೋಹನಾ ನುತಗುಣಶಾಲೀ
ಒಡನಾಡು ಬಾ ಭಯದೂಡು ಬಾ ಮುದನೀಡು ಬಾ ಒಲವೇ
ಇರುಳು ಜೊನ್ನದೊಲು ನಾವೊಲಿದಿರುವ ಪ್ರಾಣದೇಹದಂತಗಲದೆ ಇರುವ
ಜಗದೊಡಲು ನುಡಿಯಿಡಲು
ನಾನೆ ನಲ್ಲೆ ನೀನೆ ನಲ್ಲನೆನೆ ಆಡು ಬಾ -
ಚಿಮ್ಮಲಿ ಸೊಗವೆಮ್ಮಿಂ ಜಗಕೆಲ್ಲ
ಬೆಳಗಲಿ ನಮ್ಮೊಲವಿಂ ಮನವೆಲ್ಲ
ನಲಿದು ತಿರೆ ಉಲಿಯುತಿರೆ
ನಾನೇ ಚೆನ್ನಿ ನೀನೆ ನನ್ನಿ ಎನುತಾಡು ಬಾ -
ಶಂಕೆಯಳಿದೆ ಬಾ ಮೇಘಸುಂದರ
ಬಿಂಕವಳಿದೆ ಬಾ ಹೃದಯಮಂದಿರ
ಅಂಕೆ ಆತಂಕ ತುಸುವು ಇಲ್ಲದೊಲು
ಕೊಂಕನುಳಿದು ನೀ ಶಂಕರನೆಂಬೆನೊ - ಆಡು ಬಾ
ನೀಲಮೇಘಸುಂದರ ವನಮಾಲಿ ಜಗನ್ಮೋಹನ ಶುಭಗುಣಶಾಲೀ – ಒಡನಾಡು ಬಾ
ಕೃಷ್ಣ
ರಾಗ: ಕೇದಾರಗೌಳ
ಕರಣ ಮನವನು ಮನವು ಬುದ್ದಿಯ
ಬುದ್ಧಿ ಹೃದಯನ ಹೃದಯ ಮಮತೆಯನು
ಮಮತೆ ಪ್ರಾಣದ ಮುಂಚೆ ಹರಿದುವೊ ಎನ್ನಲೇಪರಿಯಾಯ್ತು ಸೊಗಮೆನಗೆ!
ಹಾಡು : ರಾಗ - ಕಲ್ಯಾಣಿ
ಎದೆಗೆ ಬರುತಿದೆ ಜಗದ ಮುದ
ಕುಣಿದಲ್ಲದೆ ನಾ ತಾಳೆನಿದ ||ಪ|
ಹಾಡಿಯಾಡಿ ಕುಣಿದಾಡಿಯಲ್ಲದೆ
ತಾಳಬಲ್ಲೆನೇ ಇಂಥ ಮುದ ||ಅ.ಪ||
ಬಾಳು ಬಂದಿತೆನೆ ಹರಕೆ ಸಂದಿತೆನೆ
ಬಯಕೆಯ ಮರ ಫಲ ಬಿಟ್ಟಿತೆನ
ಆತ್ಮರಸಕೆ ರುಚಿಯೂರಿತು ಇಂತೆನೆ
ರಾಧೆ ನೀನಿಂತು ಬಾಳಿಗೆ ಬಂದಿರೆ – ಎದೆಗೆ ಬರುತಿದೆ
ಹರುಷದೊಳುಬ್ಬುತ ಹಬ್ಬಿರುವೆನ್ನಯ
ಜಟೆಯೆನೆ ಮರದೊಳು ಚಂದ್ರಮ ತಂಗಿರೆ
ಗಿರಿಜೆಯಂತೆ ನೀ ಬಳಿಯೊಳೆ ನಿಂದಿರೆ
ಶಿವನ ಸುಮ್ಮಾನವಾಗಿದೆ ನನಗೆ – ಎದೆಗೆ ಬರುತಿದೆ
ತೆಂಗು ತೂಗುವೊಲು ಕೌಂಗು ಬಾಗುವೊಲು
ಅಂಗವಾಡಿಸುವ ಸನ್ನೆಗೈವ ದಾ
ತುಂಬಿ ಬರುತಿಹಾನಂದ ಮುಂದಾಗಿ
ತಿರೆಯ ನೆರೆಯಲಿದೆ ಇದೆ ಇದೆ ಬಳಿಯೆನೆ
ನೆರೆದು ಬರುತಿದೆ ಜಗದ ಮುದ
ಕುಣಿದಲ್ಲದೆ ನಾ ತಾಳೆನಿದ
**********
ಶಂಕೆಯನ್ನು ಬಿಟ್ಟು ನನ್ನವಳಾಗು ಎನ್ನುವನು ಕೃಷ್ಣ. ನನ್ನೆದೆಯಲ್ಲಿ ಪ್ರೇಮದ ಧ್ವಜವನ್ನು ನೆಡು. ಈಇರುಳು ಒಲವಿನಲ್ಲಿ ಕರಗಿ ತಂಪಾಗಲಿ. ನನ್ನನ್ನು ನಂಬು ಎನ್ನುವನು.
ಮುಗಿಲು ಮಿಂಚುಗಳಂತೆ, ಶಿವ ಶಿವೆಯರಂತೆ ನಾವು ಕೂಡೋಣ. ನಾಳೆಯ ಚಿಂತೆಯಲ್ಲಿ ಇಂದಿನಸುಖವನ್ನು ತೊರೆಯುವುದು ಬೇಡ. ಇಂದು ಎನ್ನುವುದು ಎಂದೆಂದೂ ಆಗಲಿ. ಸಂದೇಹಗಳನ್ನುಬಿಟ್ಟು ಬಾ ಎನ್ನುವನು.
ರಾಧೆಯು ಕೃಷ್ಣನ ವಶಳಾಗುವಳು.
ಆಡಲು ಬಾ. ಮುದವನ್ನು ನೀಡಲು ಬಾ. ಭಯವನ್ನು ದೂಡು ಬಾ ಚೆಲುವ. ವನಮಾಲಿ, ಜಗನ್ಮೋಹನ, ಗುಣಶಾಲಿ, ಒಡನಾಡು ಬಾ.
ಈ ಇರುಳಿನ ಬೆಳದಿಂಗಳಲ್ಲಿ ಪ್ರಾಣ ದೇಹಗಳಂತೆ ನಾನು ನಲ್ಲೆ, ನೀನು ನಲ್ಲ ಎಂದು ಆಡೋಣ ಬಾ. ನಮ್ಮಿಂದ ಜಗಕೆಲ್ಲ ಸೊಗಸು ಚಿಮ್ಮಲಿ. ನಮ್ಮ ಒಲವಿನಿಂದ ಮನ ಬೆಳಗಲಿ. ಭೂಮಿ ನಲಿಯಲಿ. ನಾನು ಚೆನ್ಬಿ, ನೀನು ಚೆನ್ನ. ಆಡೋಣ ಬಾ
ನನ್ನ ಮನದ ಶಂಕೆಯನ್ನು ತೊರೆದೆ. ಬಿಂಕವನ್ನು ಅಳಿದೆ. ಆತಂಕವಿಲ್ಲ. ಕೊಂಕನ್ನು ಬಿಟ್ಟೆ. ನೀನುವನಮಾಲಿ.
ನೀಲಮೇಘಸುಂದರ, ಶುಭಗುಣಶಾಲಿ. ಒಡನಾಡು ಬಾ ಎನ್ನುವಳು.
ಕೃಷ್ಣನಿಗೆ ಸಂತಸವಾಗುವುದು.
ಕರಣವು ಮನವನ್ನು, ಮನವು ಬುದ್ಧಿಯನ್ನು, ಬುದ್ಧಿಯು ಹೃದಯವನ್ನು, ಹೃದಯ ಮಮತೆಯನ್ನು, ಮಮತೆಯು ಪ್ರಾಣವನ್ನು ಮುಂಚೆಯೇ ಸೇರಿ ಹೊರಟವೋ ಎಂಬಂತೆ ಆಗಿದೆ ಈ ಸೊಗಸುನಮಗೆ ಎನ್ನುವನು.
ಜಗದ ಸಂತಸವು ಎದೆಗೆ ಬರುತ್ತಿದೆ. ಕುಣಿದಲ್ಲದೆ ಇದನ್ನು ನಾನು ತಾಳಲಾರೆ. ಹಾಡಿ, ಆಡಿಕುಣಿದರೇ ಈ ಮುದ ಚಂದ.
ಬಯಕೆಯ ಮರ ಫಲ ಬಿಟ್ಟಂತೆ, ಹರಕೆ ಸಂದಂತೆ, ಆತ್ಮರಸಕ್ಕೆ ರುಚಿಯು ಬಂದಂತೆ ನೀನು ನನ್ನಬಾಳಿನಲ್ಲಿ ಬಂದೆ. ಹರ್ಷದಲ್ಲಿ ನನ್ನ ಕೂದಲು ಉಬ್ಬುತ್ತಿದೆ. ಅದರಂತೆ ಮರದಲ್ಲಿ ಚಂದ್ರಕಾಣುತ್ತಿದ್ದಾನೆ. ಗಿರಿಜೆಯಂತೆ ನೀನು ಬಳಿ ಬಂದರೆ ಶಿವ ನಾನಾಗುವೆ. ಬಾ.
ತೆಂಗು ತೂಗುವಂತೆ, ಅಡಕೆ ಬಾಗುವಂತೆ ನಾವೂ ಆಟವಾಡುವ. ಆನಂದ ತುಂಬಿ ಬರುತ್ತಿದೆ. ಜಗತ್ತಿನ ಮುದ ಹರಿದು ಬರುತ್ತಿದೆ. ಕುಣಿದಲ್ಲದೆ ಇದನ್ನು ನಾನು ತಾಳಲಾರೆ. ಕುಣಿಯೋಣ ಬಾ.
ಭಾವಾರ್ಥ: ಸುಬ್ಬುಲಕ್ಷ್ಮಿ
ಕಾಮೆಂಟ್‌ಗಳು